
ಮಂಗಳೂರು: ಕೆಲ ದಿನಗಳ ಹಿಂದೆ ಜನಿವಾರ ಧರಿಸಿ ಸಿಇಟಿ ಬರೆಯಲು ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಇದೀಗ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ನಡೆಸುವ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಲಾಗಿದೆ.
ಮಂಗಳವಾರ ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದೊಳಗೆ ಪಾಲಿಸಬೇಕಾದ ಸೂಚನೆಗಳನ್ನು ಪ್ರವೇಶ ಪತ್ರದಲ್ಲಿ ನಮೂದಿಸಲಾಗಿದೆ. ಪ್ರವೇಶ ಪತ್ರದ ಏಳನೇ ಕ್ರಮಾಂಕದ ಸೂಚನೆಯಲ್ಲಿ ಮಂಗಳಸೂತ್ರ ಧರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಧರ್ಮದ ಸಂಕೇತ (ರಿಲಿಜಿಯಸ್ ಸಿಂಬಲ್ಸ್)ಗಳನ್ನು ಧರಿಸದಂತೆ ತಿಳಿಸಿದ್ದು, ಅವು ಯಾವು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಬ್ರಾಹ್ಮಣ ಹಾಗೂ ಇತರ ಸಮುದಾಯದವರು ಧರಿಸುವ ಜನಿವಾರ, ವೀರಶೈವರು ಧರಿಸುವ ಕರಡಿಗೆಗೂ ಅವಕಾಶವಿಲ್ಲವೆ ಎಂಬ ಚಿಂತೆ ಕಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಏ.29ರಂದು ಬೋಂದೆಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಜನಿವಾರ ತೆಗೆಯಲು ಹೇಳಿದರೆ ಸರಿ ಹೋಗುವುದಿಲ್ಲ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ. ಜಿಲ್ಲಾಧಿಕಾರಿ, ಸಂಸದರು ಈ ಬಗ್ಗೆ ಗಮನ ಹರಿಸಿ, ಈ ಅಂಶವನ್ನು ಕೈಬಿಡಬೇಕು. ಪರೀಕ್ಷೆಯಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬಾರದ ರೀತಿ ಪರೀಕ್ಷಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.





