
ಕೊಪ್ಪಳ: ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮದ ಬಳಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಿಂದ ರೈತರ ಮಕ್ಕಳು, ಬೀದಿ ವ್ಯಾಪಾರಸ್ಥರ ಮಕ್ಕಳು ಮತ್ತು ಆಟೋ ಚಾಲಕರು ಸೇರಿದಂತೆ ಕಡುಬಡವರ ಹೆಣ್ಣು ಮಕ್ಕಳಿಗಾಗಿ ಉಚಿತ ವಸತಿ ಸಹಿತ ಹೈಟೆಕ್ ಪಿಯು ಕಾಲೇಜು 48 ಎಕರೆ ವಿಶಾಲ ಪ್ರದೇಶದಲ್ಲಿ ₹60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ.
ಈಗಾಗಲೇ ಕಟ್ಟಡ ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷ ಜಾತ್ರೆಯಲ್ಲಿ ಇದರ ಉದ್ಘಾಟನೆ ನಡೆಯಲಿದ್ದು, ಬರುವ ಜೂನ್ ತಿಂಗಳಿಂದಲೇ ಪ್ರವೇಶ ಪ್ರಾರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಮಠಕ್ಕೆ ಬಂದಿರುವ ಭಕ್ತರೊಂದಿಗೆ ಸಹಜವಾಗಿ ಮಾತನಾಡಿದ್ದು ಈ ವೇಳೆ ಈಗಾಗಲೇ ಐದು ಸಾವಿರ ಮಕ್ಕಳಿಗೆ ಹಾಸ್ಟೆಲ್ ಮಾಡಿದ್ದೇವೆ, ಅದರಂತೆಯೇ ಹಳ್ಳಿ ಮಕ್ಕಳು, ಬೀದಿ ಬದಿ ವ್ಯಾಪಾರಸ್ಥರು, ಆಟೋದವರ ಮಕ್ಕಳು, ಕಾಯಿಪಲ್ಯೆ ಮಾರುವವರ ಮಕ್ಕಳು, ಕಸ ಹೊಡೆಯುವವರ ಮಕ್ಕಳು, ಇಂಥವರ ಮಕ್ಕಳು ಇರ್ತಾರಲ್ಲ ಅವರಿಗೆ ಪಿಯುಸಿಯನ್ನು ₹2-3 ಲಕ್ಷ ಡೊನೇಷನ್ ಕೊಟ್ಟು ಓದಲು ಆಗುವುದಿಲ್ಲ. ಅಂಥವರ 1500 ಮಕ್ಕಳಿಗೆ (ಹೆಣ್ಣು ಮಕ್ಕಳಿಗೆ) ಸಂಪೂರ್ಣ ಉಚಿತ ಮಾಡಿದ್ದೇನೆ. ಅದು ಬರಿ ಹೆಣ್ಣು ಮಕ್ಕಳಿಗೆ ಮಾತ್ರ. ಅಲ್ಲಿ ಅವರಿಗೆ ನೀಟ್, ಸಿಇಟಿ, ಐಎಎಸ್, ಐಪಿಎಸ್ ಕೋಚಿಂಗ್ ಸೇರಿದಂತೆ ಎಲ್ಲವನ್ನು ಉಚಿತವಾಗಿಯೇ ಕೊಡುತ್ತೇವೆ.
ಸುಮಾರು ₹60 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದ್ದು, ಫುಲ್ ಹೈಟೆಕ್ ಇದೆ. 48 ಎಕರೆ ಕ್ಯಾಂಪಸ್ ಇದೆ. ಕಾಲೇಜು ನಿರ್ಮಾಣ ಆಗಿದೆ. ಹಾಸ್ಟೆಲ್ ಕೆಲಸ ಮುಗಿದಿದೆ. ಡೈನಿಂಗ್ ಹಾಲ್ ನಿರ್ಮಾಣ ಮಾಡುತ್ತಿದ್ದಾರೆ. 20 ಸಾವಿರ ಗಿಡ ನೆಟ್ಟಿದ್ದೇವೆ. ಮಿಯಾ ವಾಕಿ ಮಾದರಿಯಲ್ಲಿ ಗಿಡ ನೆಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.





