
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಮನೆ ಮನೆ ಸರ್ವೇ ಮಾಡುತ್ತೇವೆ ಎಂದು ಹೊರಟಿದ್ದ ಬಿಬಿಎಂಪಿ, ಇದೀಗ ಇದರ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ನಿರ್ಧಾರ ಕೈಗೊಂಡಿದೆ. ರೀಲ್ಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು ಅದೇನೆಂದರೆ ಡೆಂಗ್ಯೂ ಕುರಿತು ರೀಲ್ಸ್ ಮಾಡಿ ಒಂದು ಲಕ್ಷಾ ಗೆಲ್ಲಿ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಭರ್ಜರಿ ಅವಕಾಶ ನೀಡಿದೆ.
ಪಾಲಿಕೆಯು ಸೋಷಿಯಲ್ ಮೀಡಿಯಾದಲ್ಲಿ ಡೆಂಘೀ ಕುರಿತ ರೀಲ್ಸ್ ಗಳನ್ನು ಆಹ್ವಾನಿಸಿ ಮೊದಲ ಐದು ಉತ್ತಮ ರೀಲ್ಸ್‌ಗಳಿಗೆ ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ದ್ವೀತಿಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಮಾಡಿದೆ. ವಿಶೇಷವಾಗಿ ಶಾಲಾ ಮಕ್ಕಳಿಗೂ ಬಿಬಿಎಂಪಿ ಬಂಪರ್ ಆಫರ್ ಕೊಟ್ಟಿದ್ದು, ಯಾವ ಶಾಲೆ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ 35 ಸಾವಿರ ರೂಪಾಯಿ ಬಹುಮಾನದ ಆಫರ್ ಕೊಟ್ಟಿದೆ.
ಡೆಂಘೀ ಜಾಗೃತಿ ಸಂಬಂಧ ರೀಲ್ಸ್ ಮಾಡಿದ ನಂತರ ಅದನ್ನು ಬಿಬಿಎಂಪಿ ಆರೋಗ್ಯ ಇಲಾಖೆ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬೇಕು. ಯಾವ ರೀಲ್ಸ್ ಹೆಚ್ಚು ವೀಕ್ಷಣೆ ಪಡೆದು ಹೆಚ್ಚು ಮಾಹಿತಿಗಳನ್ನು ಒಳಗೊಂಡಿದೆಯೋ ಅದನ್ನು ಆಧರಿಸಿ ಬಹುಮಾನ ಬಿಬಿಎಂಪಿ ಬಹುಮಾನ ನೀಡಲಿದೆ ಎಂಬ ಮಾಹಿತಿ ಇದೆ.








