ಬಜೆಟ್ ನಲ್ಲೂ ಮುಂದುವರಿದ ರಾಜ್ಯ ಸರಕಾರದ ಹಿಂದೂ ವಿರೋಧಿ ನಡೆ,: ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ತಮ್ಮ ಬಜೆಟ್ ನಲ್ಲಿ ವಿವಿಧ ಕ್ಷೇತ್ರಗಳಿಗೆ ಅನುದಾನಗಳ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಕಳ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್, ಕರಾವಳಿ ಭಾಗದ ಜಿಲ್ಲೆಗಳಿಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಕವಿವಾಣಿಯ ಉಲ್ಲೇಖದಲ್ಲೇ ಬಜೆಟ್ ಪುಸ್ತಕ ತುಂಬಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಡುಬು ತಿನ್ನುವುದು ಕಹಿ ನೀರು ಕುಡಿಯುವುದು….. ಎನ್ನುವ ಮೂಲಕ ರಾಜ್ಯವನ್ನು 1,16000 ಕೋಟಿ ರೂ. ಸಾಲದ ಶೂಲಕ್ಕೆ ದೂಡಿರವ ಸಿದ್ದರಾಮಯ್ಯ ನವರ ಹದಿನಾರನೇ ಬಜೆಟ್ ನಿಂದಾಗಿ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸಲಿದೆ. ಪ್ರತಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಸಿದ್ದರಾಮಯ್ಯ ನವರ ಬಜೆಟ್ ನಲ್ಲಿ 67,877 ಕೋಟಿ ರೂ. ಕೇಂದ್ರದ ಸ್ವೀಕೃತಿಯನ್ನು ತೋರಿಸಿರುವುದು ಗಮನಾರ್ಹ ಅಂಶ ಎಂದಿದ್ದಾರೆ
ಈ ಬಾರಿಯ ಬಜೆಟ್ ನಲ್ಲಿ ರಾಜ್ಯಕ್ಕೆ ಅನುಕೂಲಕರವಾಗುವ ಯಾವುದೇ ದೂರಗಾಮಿ ಯೋಜನೆಗಳಿಲ್ಲ. ಬಜೆಟ್ ಎನ್ನುವುದು ನನ್ನ ದೃಷ್ಟಿಯಲ್ಲಿ ಕೇವಲ ಬಿಳಿಹಾಳೆಯಲ್ಲ ಎಂದು ವ್ಯಾಖ್ಯಾನಿಸಿರುವ ಸಿದ್ದರಾಮಯ್ಯನವರು ಶಾಶ್ವತ ಯೋಜನೆಗಳತ್ತ ಗಮನ ಹರಿಸಿಲ್ಲ.
ಕರಾವಳಿ ಭಾಗದ ಜಿಲ್ಲೆಗಳಿಗಂತೂ ಯಾವುದೇ ಕೊಡುಗೆ ಇಲ್ಲ. ಮಂಗಳೂರಿನಿಂದ ಕಾರವಾರದವರೆಗಿನ ಕೊಂಕಣ ರೈಲ್ವೆ ಯೋಜನೆಗೆ ಸರ್ಕಾರ ನೆರವಿನ ಹಸ್ತ ಚಾಚಿಲ್ಲ.ಶಿಕ್ಷಣ, ಆರೋಗ್ಯ, ಜಲಸಂನ್ಮೂಲ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಆಮೂಲಾಗ್ರ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ.
ಇಷ್ಟು ದಿನ ತೆರೆಮರೆಯಲ್ಲಿ ಮುಸ್ಲಿಮರಿಗೆ ವಿಶೇಷ ಆದ್ಯತೆ ನೀಡುತ್ತಿದ್ದ ಸಿಎಂ ಈಗ ಬಜೆಟ್ ನಲ್ಲೂ ಅದನ್ನು ಮುಂದುವರಿಸಿದ್ದಾರೆ. ಸರಕಾರಿ ಕಾಮಗಾರಿಗಳಲ್ಲಿ ಎರಡು ಕೋಟಿ ರೂಪಾಯಿವರೆಗಿನ ಗುತ್ತಿಗೆ ಮತ್ತು ಒಂದು ಕೋಟಿ ರೂಪಾಯಿವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ..? ಎಂದು ಪ್ರಶ್ನಿಸಿದ್ದಾರೆ. ಸಿಎಂ ಅವರ ಹದಿನಾರನೇ ಬಜೆಟ್ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ದೂಡಲಿದೆ ಎಂದು ಕಿಡಿ ಕಾರಿದ್ದಾರೆ.



















