
ಬೆಂಗಳೂರು: ರಾಜ್ಯದಲ್ಲಿ ವ್ಯಕ್ತಿ, ಸಂಸ್ಥೆ, ಧಾರ್ಮಿಕ ಕೇಂದ್ರಗಳು, ರಾಜ್ಯ ಸರ್ಕಾರ ಸೇರಿದಂತೆ ಕೆಲವರ ವಿರುದ್ಧ ಯೂಟೂಬರ್ಸ್‌ಗಳು ಸಾಕ್ಷಿಗಳಿಲ್ಲದೇ ಅಪಪ್ರಚಾರದ ವಿಡಿಯೋ ಮಾಡುತ್ತಿದ್ದಾರೆ ಎಂಬ ದೂರುಗಳು ವಿಪಕ್ಷ ನಾಯಕರಿಂದ ಕೇಳಿಬಂದ ಬೆನ್ನಲ್ಲಿಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿ ‘ಯೂಟೂಬರ್ಸ್‌ಗಳು ಇಲ್ಲಿಗೆ ಎಲ್ಲಾ ಬಂದ್ ಮಾಡಿ. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ವ್ಯಕ್ತಿ, ಸಂಸ್ಥೆ ಮತ್ತು ಸರ್ಕಾರದ ಬಗ್ಗೆ ಅನಿಯಂತ್ರಿತವಾಗಿ ವರದಿಗಳನ್ನು ಮಾಡುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಇಲ್ಲವಾದರೆ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು. ಯೂಟ್ಯೂಬರ್‌ಗಳು ಇದನ್ನು ಇಲ್ಲಿಗೆ ನಿಲ್ಲಿಸಬೇಕು, ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದರು.
ಇದಕ್ಕೆ ಸಿಟ್ಟಿನಿಂದ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಯೂಟ್ಯೂಬರ್‌ಗಳ ಮೇಲೆ ಇಲ್ಲಿ ತನಕ ಕ್ರಮ ಆಗಿದೆಯಾ? ನೀವು ಕ್ರಮ ಮಾಡುವುದು ಬಿಟ್ಟು ವಿನಂತಿ ಮಾಡುತ್ತೀರಿ. ಯಾರನ್ನು ಬಂಧಿಸಿದ್ದೀರಿ? ನಿಮ್ಮ ವಿನಂತಿ ಯಾರು ಕೇಳುತ್ತಾರೆ? ರಾಜ್ಯ ಸರ್ಕಾರದ ಗೃಹ ಸಚಿವರಾಗಿ ನೀವು ಖಡಕ್ ಸಂದೇಶ ನೀಡೋದು ಬಿಟ್ಟು ವಿನಂತಿ ಮಾಡುತ್ತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.