
ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕೆಲ ಯುವಕರು ನಡು ರಸ್ತೆಯಲ್ಲೇ ನಮಾಜ್ ಮಾಡಲು ಕುಳಿತು ಇದರಿಂದ ಸಂಚಾರಕ್ಕೆ ತೊಂದರೆಯಾದ ಘಟನೆ ಭಾರಿ ವೈರಲ್ ಆಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಕೆಲವು ಕಡೆ ರಸ್ತೆ ಮತ್ತು ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದು ಜಿಲ್ಲೆಯಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸುತ್ತಿದ್ದಾರೆ. ತಕ್ಷಣ ಜಿಲ್ಲಾಡಳಿತ ಇವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದರೆ ಅದೇ ಸ್ಥಳದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದರ ಮೂಲಕ ತಡೆಯುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಹೃದಯಭಾಗದಲ್ಲಿ ಹಾಡುಹಗಲೇ ರಸ್ತೆಯನ್ನು ಬ್ಲಾಕ್ ಮಾಡಿ, ನಮಾಜು ಮಾಡುತ್ತಾ, ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಅಡ್ಡಿಪಡಿಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿರುವುದು ರಾಜ್ಯದ ಕಾಂಗ್ರೆಸ್ ಸರಕಾರದ ಸ್ವೇಚ್ಚಾಚಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ನಾವು ಕಾನೂನು, ನೀತಿ, ನಿಯಮ ಯಾವುದನ್ನು ಕ್ಯಾರ್ ಮಾಡುವುದಿಲ್ಲ ಎನ್ನುವ ಧೋರಣೆ ಕೆಲವರಲ್ಲಿ ಸೃಷ್ಟಿಯಾಗಲು ಕಾಂಗ್ರೆಸ್ ಸರಕಾರ ಅಂತವರ ಮೇಲೆ ತೋರಿಸುತ್ತಿರುವ ವಿಶೇಷ ‘ಪ್ರೀತಿ’ ಯೇ ಕಾರಣ ಎಂದಿದ್ದಾರೆ.