
ಉಡುಪಿ: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್ ಎರಡರಲ್ಲೂ ಅಪಾರ ಜನಪ್ರಿಯತೆ ಗಳಿಸಿರುವ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಇದೀಗ ದಾಂಪತ್ಯ ಜೀವನ ಆರಂಭಿಸಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ವೈಭವದಿಂದ ನಡೆದ ಅವರ ವಿವಾಹದ ನಂತರ, ವಿಜಯ್ ತಮ್ಮ ಪತ್ನಿಯ ಕುರಿತು ಹಂಚಿಕೊಂಡಿರುವ ಮನದಾಳದ ಬರಹ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. “ಅವಳು ನನ್ನ ಬದುಕಿನ ಅವಿಭಾಜ್ಯ ಅಂಗ… ಕೊನೆಗೂ ನನ್ನ ಬೆಸ್ಟ್ ಫ್ರೆಂಡ್ ಅನ್ನೇ ಮಡದಿಯನ್ನಾಗಿಸಿಕೊಂಡೆ” ಎಂಬ ಅವರ ಮಾತು ಅಭಿಮಾನಿಗಳ ಗಮನ ಸೆಳೆದಿದೆ.
ಮದುವೆಯ ಬಳಿಕ ವಿಜಯ್ ಮೊದಲ ಪ್ರತಿಕ್ರಿಯೆ
ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾನ್ಯವಾಗಿ ಗೌಪ್ಯವಾಗಿಟ್ಟುಕೊಳ್ಳುವ ವಿಜಯ್, ಈ ಬಾರಿ ರಶ್ಮಿಕಾ ತಮ್ಮ ಜೀವನದಲ್ಲಿ ಎಷ್ಟು ಮಹತ್ವದವರು ಎಂಬುದನ್ನು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ.
“ಒಂದು ದಿನ ನನಗೆ ಅವಳ ನೆನಪು ತೀವ್ರವಾಗಿ ಕಾಡಿತು. ಅವಳು ನನ್ನ ಜೊತೆ ಇದ್ದರೆ ಪ್ರತಿಯೊಂದು ಕ್ಷಣವೂ ವಿಶೇಷವಾಗುತ್ತಿತ್ತು ಎಂಬುದು ಆಗ ನನಗೆ ಸ್ಪಷ್ಟವಾಯಿತು. ಅವಳು ಎದುರು ಕುಳಿತು ಊಟ ಮಾಡಿದರೆ ಸಾಮಾನ್ಯ ಊಟವೂ ಸಿಹಿಯಾಗಿಬಿಡುತ್ತಿತ್ತು. ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಕಷ್ಟವೆನಿಸುತಿತ್ತು, ಆದರೆ ಅವಳ ಜೊತೆಗಿದ್ದರೆ ಅದೇ ಕೆಲಸ ಉತ್ಸಾಹಭರಿತವಾಗುತ್ತಿತ್ತು. ನಾನು ಎಲ್ಲಿದ್ದರೂ ಮನಶಾಂತಿ ಸಿಗುವುದು ಅವಳ ಸಮೀಪದಲ್ಲೇ. ಅದಕ್ಕಾಗಿ ನನ್ನ ಬೆಸ್ಟ್ ಫ್ರೆಂಡ್ ಅನ್ನೇ ನನ್ನ ಪತ್ನಿಯಾಗಿ ಸ್ವೀಕರಿಸಿದೆ,” ಎಂದು ವಿಜಯ್ ಹೇಳಿದ್ದಾರೆ.
ಸುಮಾರು ಏಳು ವರ್ಷಗಳ ಕಾಲ ಪ್ರೀತಿಯಲ್ಲಿ ಇದ್ದ ಈ ಜೋಡಿ ತಮ್ಮ ಸಂಬಂಧವನ್ನು ಬಹಿರಂಗಪಡಿಸದೆ ಉಳಿಸಿಕೊಂಡಿತ್ತು. ಫೆಬ್ರವರಿ 26ರಂದು ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ವಿವಾಹವಾದ ಅವರು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ “ವಿರೋಷ್” ಎಂದು ಕರೆಯುವ ಈ ಜೋಡಿ, ಅದೇ ಹೆಸರಿನ ಮೂಲಕ ತಮ್ಮ ಮದುವೆಯನ್ನು ವಿಶಿಷ್ಟವಾಗಿ ಗುರುತಿಸಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.






