
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್-ರಷ್ಯಾ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಲಾಸ್ಕದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆಸಿದ ಸಭೆಯು ಯಾವುದೇ ಅಂತಿಮ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿದೆ ಎಂದು ತಿಳಿದು ಬಂದಿದೆ.
ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ. ಪುಟಿನ್ ಜೊತೆ ಉಕ್ರೇನ್ ಕುರಿತ ಮಾತುಕತೆಯಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದೆ. ಆದ್ರೆ ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ ಎಂದು ಟ್ರಂಪ್ ನೇರವಾಗಿ ಹೇಳಿದ್ದಾರೆ.
ಪುಟಿನ್ ಮಾತನಾಡಿ ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೇ ಮಾತುಕತೆಯು ದೀರ್ಘಕಾಲೀನವಾಗಿಸಬೇಕಾದ್ರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕು ಎಂಬುದು ನಮಗೆ ಮನವರಿಕೆಯಾಗಿದೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಪುನರುಚ್ಚರಿಸಿದ್ದಾರೆ.