ನವದೆಹಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಗುತ್ತಿಗೆ ಪಡೆಯಲು ಭಾರತದಲ್ಲಿ ಅದಾನಿ 2,200 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಗೌತಮ್ ಅದಾನಿಯನ್ನು ತಕ್ಷಣವೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರವಿದ್ಯುತ್ ಗುತ್ತಿಗೆ ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ (ಅಂದಾಜು 2238 ಕೋಟಿ ರೂ.) ಹೆಚ್ಚು ಲಂಚದ ಭರವಸೆ ನೀಡಿದ್ದರು ಎಂದು ಆರೋಪಿಸಿದ್ದು ನ್ಯೂಯಾರ್ಕ್ ಕೋರ್ಟ್ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರೆಂಟ್ ಹೊರಡಿಸಿದೆ. ಆ ವಾರೆಂಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪ ಬಂದ ತಕ್ಷಣವೇ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿಯನ್ನೇ ಬಂಧಿಸಲಾಗಿತ್ತು. ಆದರೆ, ಪ್ರಧಾನಿ ಮೋದಿಯಿಂದಾಗಿ ಅದಾನಿಗೆ ರಕ್ಷಣೆ ದೊರೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಪ :
ಅಧಿಕಾರಿಗಳಿಗೆ ಲಂಚ ನೀಡಿ ಹೂಡಿಕೆದಾರರನ್ನು ವಂಚಿಸಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳ ಮೂಲಕ ಯುಎಸ್ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲು ಬಹು ಶತಕೋಟಿ ಡಾಲರ್ ಯೋಜನೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಅದಾನಿ ಗ್ರೀನ್ ಎನರ್ಜಿ ಮತ್ತು ಅಜುರೆ ಪವರ್ ಸಂಸ್ಥೆಗಳು ಭಾರತದಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಗೂ ಅಧಿಕ ಮೊತ್ತದಷ್ಟು ಲಂಚ ನೀಡಿದೆ. ಮುಂದಿನ ಎರಡು ದಶಕಗಳಲ್ಲಿ 2 ಶತಕೋಟಿ ಲಾಭವನ್ನು ಗಳಿಸಲು ಲಂಚ ನೀಡಲಾಗಿದೆ.
ಅದಾನಿ ಗ್ರೀನ್ ಎನರ್ಜಿಗಾಗಿ 3 ಶತಕೋಟಿ ಡಾಲರ್ ಸಾಲ ಮತ್ತು ಬಾಂಡ್‌ಗಳನ್ನು ಪಡೆಯಲು ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಕಾರ್ಯನಿರ್ವಾಹಕ ವಿನೀತ್ ಜೈನ್ ಹೂಡಿಕೆದಾರರರಿಗೆ ಹಲವಾರು ವಿಷಯಗಳನ್ನು ಮರೆಮಾಡಿ ವಂಚಿಸಿದ್ದಾರೆ.
ಸೌರಶಕ್ತಿ ಯೋಜನೆಗಾಗಿ 2021ರ ಜುಲೈ ಮತ್ತು 2022ರ ಫೆಬ್ರವರಿ ಸಮಯದಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಿಗಳಿಗೆ 1,750 ಕೋಟಿ ರೂ. (228 ಮಿಲಿಯನ್ ಡಾಲರ್) ನೀಡಿದೆ. ಛತ್ತೀಸ್‌ಗಢ, ಒಡಿಶಾ, ತಮಿಳುನಾಡು ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯ ವಿದ್ಯುತ್ ಕಂಪನಿಗಳಿಗೆ ಲಂಚವನ್ನು ನೀಡಿದೆ ಎಂದು ಆರೋಪಿಸಿದೆ.