
ಕೋಟ: ಬ್ರಹ್ಮಾವರ ತಾಲೂಕು ಸಾಸ್ತಾನದ ಕುಂಬಾರಬೆಟ್ಟು ನಿವಾಸಿ ದಿನೇಶ್ ಮೊಗವೀರ್ ಅವರ ಪುತ್ರಿ ದಿಶಾ(16) ಎಂಬ ವಿದ್ಯಾರ್ಥಿನಿಯು ಮೊಬೈಲ್ ವಿಚಾರಕ್ಕಾಗಿ ತಾಯಿ ಬೈದರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದಿಶಾ ಮೊಬೈಲ್ ನೋಡಿಕೊಂಡು ಕುಳಿತಿದ್ದಾಗ ತಾಯಿ ಗದರಿಸಿ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ದಿಶಾ ಕೋಣೆಯ ಬಾಗಿಲು ಹಾಕಿಕೊಂಡಿದ್ದು ತಾಯಿ ಬಾಗಿಲು ತೆರೆಯಲು ಹೇಳಿದರೂ ತೆರೆಯದೆ ಇದ್ದಾಗ ಪರಿಶೀಲನೆ ನಡೆಸಿದ ವೇಳೆ ಮನೆಯ ಕಿಟಕಿಯ ಕಂಬಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಸ್ಥಳೀಯರ ಸಹಾಯದಿಂದ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.



















