
ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟದ ಮೂಲಕ ತನ್ನ ಕಣ್ಣಿನ ವಿಶೇಷತೆಗಳಿಂದ ವೈರಲ್ ಆಗಿದ್ದ ಮೊನಾಲಿಸಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿರುವುದರಿಂದ ಈ ಸಂಬಂಧ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
ಈ ವಿವಾಹವನ್ನು ‘ಲವ್ ಜಿಹಾದ್’ ಎಂದು ಆರೋಪಿಸುವವರೂ ಇದ್ದರೂ, ಮೊನಾಲಿಸಾ ಇದನ್ನು ತಳ್ಳಿ ಹಾಕಿದ್ದಾರೆ. ತಾನೇ ಪ್ರೀತಿಸಿ ಮದುವೆಯಾಗಿದ್ದಾಗಿ, ಇದರಲ್ಲಿ ಪತಿಯ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫರ್ಮಾನ್ ಖಾನ್ ಕೂಡ ಮತಾಂತರದ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಇದೀಗ ಮದುವೆಯಾದ ವಾರದಲ್ಲಿಯೇ ಜೋಡಿ ಲೈವ್ಗೆ ಬಂದಿದ್ದು ಮೊನಾಲಿಸಾ ಜೀವ ರಕ್ಷಣೆ ಕೋರಿದ್ದಾರೆ. ನಮ್ಮನ್ನು ಕಾಪಾಡಿ. ಸಾರ್ವಜನಿಕರಿಂದ ನಮಗೆ ಜೀವ ಭಯ ಉಂಟಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ, ಮೊಬೈಲ್ ಮೂಲಕ ನಮ್ಮನ್ನು ಸಾಯಿಸುವುದಾಗಿ, ಕತ್ತರಿಸುವುದಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪೊಲೀಸರು, ಮಾಧ್ಯದವರ ಗಮನಕ್ಕೆ ತಂದಿದ್ದೇವೆ. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಕೋರಿಕೊಂಡಿದ್ದಾರೆ.
ಇದರ ಮಧ್ಯೆ, ಮೊನಾಲಿಸಾ ಅವರ ತಂದೆ ಜೈ ಸಿಂಗ್ ಭೋಸ್ಲೆ ತಮ್ಮ ಮಗಳಿಗೆ ಬ್ರೈನ್ವಾಷ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲ ತಿಂಗಳ ಹಿಂದೆ ಸರಿಯಾಗಿದ್ದಳು, ಈಗ ಏಕಾಏಕಿ ಈ ನಿರ್ಧಾರ ಅನುಮಾನಾಸ್ಪದವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.






















































