ಅಗತ್ಯ ಬಿದ್ದರೆ ಮೊಟ್ಟೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಸಾಮಾನ್ಯವಾಗಿ ಪೌಷ್ಟಿಕ ಆಹಾರವೆಂದು ಪರಿಗಣಿಸಲ್ಪಡುವ ಮೊಟ್ಟೆಗಳ ಬಗ್ಗೆ ಇತ್ತೀಚೆಗೆ ಕೆಲವು ವರದಿಗಳು ಮತ್ತು ಸುದ್ದಿಗಳು ಹರಡುತ್ತಿದ್ದು, ಅವು ಜನರಲ್ಲಿ ಆತಂಕವನ್ನು ಮೂಡಿಸುತ್ತಿವೆ. ಹೌದು, ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ ಎಂದು ಜಾಲತಾಣಗಳಲ್ಲಿ ವದಂತಿ ಹಬ್ಬುತ್ತಿದ್ದು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಮೊಟ್ಟೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಿರ್ದಿಷ್ಟ ಸಂಸ್ಥೆಯೊಂದಕ್ಕೆ ಸೇರಿದ ಕೋಳಿ ಮೊಟ್ಟೆ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಕಂಡು ಬಂದಿವೆ ಎಂದು ಯುಟ್ಯೂಬ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದೆ. ಆದರೆ, ಆ ಪರೀಕ್ಷೆ ವರದಿಯ ನೈಜತೆಯನ್ನು ಕೂಡ ಪರಿಶೀಲನೆ ಮಾಡಬೇಕು. ಅದರ ಬಗ್ಗೆ ಪರಿಶೀಲಿಸುವಂತೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡುತ್ತೇನೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಯಾನ್ಸರ್‌ಕಾರಕ ಅಂಶ ಇದ್ದರೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆದರೆ, ಜನ ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದು ಬೇಡ. ಪರೀಕ್ಷೆಗೆ ಒಳಪಡಿಸುವ ಕುರಿತು 2-3 ದಿನಗಳಲ್ಲಿ ಸೂಕ್ತ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸಚಿವರು ತಿಳಿಸಿದರು.





