“ಆದರ್ಶ ವಿದ್ಯಾರ್ಥಿಗಳೇ ದೇಶದ ಆಸ್ತಿ ” :ಸ್ನೇಹಲತಾ ಟಿ. ಜಿ.

ಹೆಬ್ರಿ : ಗುರು ಎಂದರೆ ಕೇವಲ ಹೆಸರಿಗೆ ಮಾತ್ರ ಗುರುವಾಗಿರದೆ ಅಥವಾ ಶಿಕ್ಷೆ ನೀಡಲು ಮಾತ್ರ ಸೀಮಿತವಾಗಿರದೆ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಮಾನವೀಯ ಮೌಲ್ಯಗಳು, ಜೀವನವನ್ನು ನಡೆಸಲು ಬೇಕಾದ ಧೈರ್ಯ, ಆತ್ಮವಿಶ್ವಾಸ ಮತ್ತು ಸಾಮರ್ಥ್ಯಗಳನ್ನು ಹೇಳಿಕೊಟ್ಟು ಉತ್ತಮ ವಿದ್ಯಾರ್ಥಿಯಾಗಿ ರೂಪಿಸುವುದೇ ಒಬ್ಬ ಗುರುವಿನ ಶಿಕ್ಷಣದ ರೀತಿಯಾಗಿರಬೇಕು. 33 ವರ್ಷಗಳ ಹಿಂದಿನ ವಿದ್ಯಾರ್ಥಿಗಳಾದ ತಾವು ಶಿಕ್ಷಕರು ಹಾಕಿಕೊಟ್ಟ ಚೌಕಟ್ಟು ಮತ್ತು ಮಾರ್ಗದರ್ಶನದಲ್ಲಿ ಸಾಗಿ ಸತ್ಪ್ರಜೆಗಳಾಗಿ ಜೀವನವನ್ನು ರೂಪಿಸಿಕೊಂಡಿರುವುದನ್ನು ಕಂಡಾಗ ನನಗೆ ಬಹಳಷ್ಟು ಹೆಮ್ಮೆಯೆನಿಸುತ್ತದೆ. ನೀವೆಲ್ಲರೂ ಪಾಠ ಕಲಿಸಿದ ಗುರುಗಳನ್ನು ಗೌರವಿಸುವ ಮೂಲಕ ನಿಮ್ಮ ಗೌರವವನ್ನು ಹೆಚ್ಚಿಸಿಕೊಂಡದ್ದಲ್ಲದೆ ಇಂದಿನ ವಿದ್ಯಾರ್ಥಿಗಳಿಗೆ ತಾವೆಲ್ಲರೂ ಮಾದರಿಯಾಗಿದ್ದೀರಿ. ಕಲಿತ ಶಾಲೆಗೆ ಗೆಳೆಯ ಉಮೇಶ್ ಹೆಗ್ಡೆಯ ಸ್ಮರಣಾರ್ಥ ಸಭಾಂಗಣದ ರಂಗಮಂದಿರಕ್ಕೆ ಉದಾರ ದೇಣಿಗೆಯನ್ನು ನೀಡಿ ಇತರರಿಗೆ ಮೇಲ್ಪ0ಕ್ತಿಯಾಗಿದ್ದೀರಿ.ಆದರ್ಶ ವಿದ್ಯಾರ್ಥಿಗಳಾದ ನೀವೆಲ್ಲರೂ ದೇಶದ ಆಸ್ತಿಯಾಗಿದ್ದೀರಿ.ನಿಮ್ಮ ನಿಮ್ಮ ವೃತ್ತಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ. ಜಿ. ಹೇಳಿದರು.
ಅವರು ಮುನಿಯಾಲು ಸರಕಾರಿ ಪ್ರೌಢಶಾಲೆಯ 1990-91 ನೆ ಸಾಲಿನ ಅವರ ಹಿರಿಯ ವಿದ್ಯಾರ್ಥಿಗಳು ಹೆಬ್ರಿಯ ತಮ್ಮ ಸ್ವಗೃಹದಲ್ಲಿ ನಡೆಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಶೋಕ್ ಪೂಜಾರಿ ಮುದ್ರಾಡಿ, ನಾಗರಾಜ್ ಪೈ ಹೆಬ್ರಿ, ಶ್ಯಾಮಲಾ ಪ್ರಭು ಆತ್ರಾಡಿ, ಶಶಿಕಲಾ ಶೆಟ್ಟಿ ಮಣಿಪಾಲ, ರವಿ ಶೆಟ್ಟಿ ಮುಟ್ಲುಪಾಡಿ, ಸುಶೀಲಾ ಪ್ರಭು ಅಲೆವೂರು, ಸುಕನ್ಯಾ ಶೆಟ್ಟಿ ಮುಟ್ಲುಪಾಡಿ, ರೇವತಿ ನಾಯಕ್ ಕಡ್ತಲ, ದಿನೇಶ್ ಶೆಟ್ಟಿ ಮುಟ್ಲುಪಾಡಿ, ನಾಗೇಶ್ ಜೋಯಿಸ್, ಉದ್ಯಾವರ,ಪಾರ್ಶ್ಶ್ವನಾಥ್ ಜೈನ್ ವರಂಗ, ಪ್ರೇಮ ಶೆಟ್ಟಿ ಮಾತಿಬೆಟ್ಟು, ಸುಗುಣ ದೇವಾಡಿಗ ಕಾರ್ಕಳ, ಲತಾ ಶೆಟ್ಟಿ ಭಕ್ರೆ,,ಹರೀಶ್ ನಾಯ್ಕ್ ಕಾಡುಹೊಳೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ,ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟು ತಮ್ಮ ಭವಿಷ್ಯವನ್ನು ರೂಪಿಸಿದ ಸ್ನೇಹಲತಾ ಟಿ. ಜಿ. ಯವರ ಆದರ್ಶ ಗುಣಗಳನ್ನು ಕೊಂಡಾಡಿದರು. ಸಮಾರಂಭದಲ್ಲಿ ಭಾಗವಹಿಸಿದ ಸ್ನೇಹಲತಾರವರ ಪತಿ ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ. ಜಿ. ಆಚಾರ್ಯ ಮಾತನಾಡಿ ಬೇರೆ ಬೇರೆ ವೃತ್ತಿಯಲ್ಲಿದ್ದರೂ 33 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಒಂದುಗೂಡಿ ಕಲಿತ ಶಾಲೆಯನ್ನು ಎಂದೂ ಮರೆಯದೆ ಕಲಿಸಿದ ಗುರುಗಳನ್ನು ಗೌರವಿಸುವ ಮೂಲಕ ಸರಕಾರಿ ಪ್ರೌಢಶಾಲೆ ಮುನಿಯಾಲಿನ ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು. ರಮ್ಯಾ ಭಟ್ ಬಲ್ಲಾಡಿ, ಸಹನಾ ಪ್ರಭು,ಸ್ನೇಹಲತಾ ಟಿ. ಜಿ. ಆಚಾರ್ಯರ ಪುತ್ರ ಶ್ರೇಯಸ್ ಆಚಾರ್ಯ , ಸೊಸೆ ದೀಕ್ಷಾ ಆಚಾರ್ಯ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ರೂವಾರಿ ದಿಲೀಪ್ ಗೋವೆಕರ್ ಕಾರವಾರ ವಹಿಸಿದ್ದರು.ರೇವತಿ ನಾಯಕ್, ಸುಕನ್ಯಾ
ಶೆಟ್ಟಿ ಮತ್ತು ಲತಾ ಶೆಟ್ಟಿ ಪ್ರಾರ್ಥಿಸಿದರು. ರಾಮದಾಸ್ ನಾಯಕ್ ಕಾಡುಹೊಳೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಸನ್ಮಾನ ಪತ್ರ ವಾಚಿಸಿ ಮಾತನಾಡಿದರು.ಜನಾರ್ಧನ್ ಆಚಾರ್ಯ ಪಡುಕುಡೂರು ಕಾರ್ಯಕ್ರಮ ನಿರೂಪಿಸಿ, ಉದಯ ನಾಯಕ್ ಎಳ್ಳಾರೆ ವಂದಿಸಿದರು.











