
ಮುದ್ರಾಡಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಹೆಬ್ರಿ :ಶಿಕ್ಷಕರಿಗೆ ಮಕ್ಕಳೇ ನಿಜವಾದ ಆಸ್ತಿ. ಮಕ್ಕಳು ಪ್ರಾಮಾಣಿಕವಾಗಿ ಕಲಿತು ಉತ್ತಮ ಉದ್ಯೋಗವನ್ನು ಪಡೆದು ಸಂಸ್ಕಾರಯುತ ಜೀವನವನ್ನು ನಡೆಸುತ್ತಾ ದೇಶಸೇವೆಯಲ್ಲಿ ತೊಡಗಿಸಿಕೊಂಡರೆ ಅದೇ ಮಕ್ಕಳು ಶಿಕ್ಷಕರಿಗೆ ನೀಡುವ ದೊಡ್ಡ ಗೌರವವಾಗಿರುತ್ತದೆ. ವ್ಯಕ್ತಿಯ ಸಾಧನೆಯ ಹಿಂದೆ ಗುರುವಿನ ಪಾತ್ರ ಮಹತ್ತರವಾದುದು. ಶಿಕ್ಷಕರಿಗೆ ಮನರಂಜನೆ ಆಟಗಳನ್ನು ನಡೆಸಿ ಬಹುಮಾನ ವಿತರಿಸುವ ಮೂಲಕ ಶಿಕ್ಷಕರ ಸಂಭ್ರಮವನ್ನು ಕಂಡು ಖುಷಿ ಪಡುವ ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ತಮ್ಮ ಮಕ್ಕಳು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ಮಕ್ಕಳು ಪ್ರತಿಯೊಬ್ಬ ಶಿಕ್ಷಕರಿಂದಲೂ ಹಣತೆ ದೀಪ ವನ್ನು ಹಚ್ಚಿಸಿ ಉದ್ಘಾಟಿಸಿದರು.ವೈವಿಧ್ಯಮಯ ಮನರಂಜನೆ ಆಟಗಳನ್ನು ನಡೆಸಿ ಬಹುಮಾನ ವಿತರಿಸಿದರು. ಶುಭಾಶಯ ಪತ್ರ, ಪೆನ್ನು ಮತ್ತು ಗುಲಾಬಿ ಹೂವು ನೀಡಿ ಶಿಕ್ಷಕರನ್ನು ಗೌರವಿಸಿ, ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್ ಸ್ವಾಗತಿಸಿದರು.ಅಂಜಲಿ, ಆಯುಷಾ, ರೇಷ್ಮಾ, ತನಿಯಾ, ಸಿಂಚನಾ ಹಾಡುವುದರ ಮೂಲಕ ಶಿಕ್ಷಕರ ಗುಣಗಾನ ಮಾಡಿದರು.
ವಿದ್ಯಾರ್ಥಿನಿ ಸ್ನೇಹಾ ಕಾರ್ಯಕ್ರಮ ನಿರೂಪಿಸಿ, ಪ್ರತೀಕ್ಷಾ ಕುಲಾಲ್ ವಂದಿಸಿದರು.