
ಪರಿಸರವು ಒಂದಕ್ಕೊಂದು ಪೂರಕ. ಇಲ್ಲಿ ಯಾವುದೇ ಒಂದರ ಒಂದಂಶದ ಕೊಂಡಿ ಕಳಚಿದರೂ ಜಗತ್ತಿಗೆ ಮಾರಕ. ಮಾನವ ಇತರ ಪ್ರಾಣಿ ಪಕ್ಷಿಗಳೊಂದಿಗೆ ಪ್ರಾಕೃತಿಕ ಪರಿಸರದಲ್ಲಿ ಸಹಬಾಳ್ವೆ ನಡೆಸಿಕೊಂಡು ಹೋಗಬೇಕು. ಪರಿಸರದಲ್ಲಿನ ಎಲ್ಲಾ ಮಾಲಿನ್ಯಗಳಲ್ಲಿ ಮಣ್ಣಿನ ಮಾಲಿನ್ಯ, ಅದರಲ್ಲೂ ಪ್ಲಾಸ್ಟಿಕ್ ಗಳ ವಿಶೇಷ ಬಳಕೆ ಮಣ್ಣಿನ ಅಂತಃಸತ್ವವನ್ನೇ ಕಲುಷಿತಗೊಳಿಸುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಗಳನ್ನು ಆದಷ್ಟು ಕಡಿಮೆ ಬಳಸುವ ಮೂಲಕ ನಮ್ಮಿಂದಾದ ಪರಿಸರ ಸೇವೆ ಮಾಡುವ ಪ್ರತಿಜ್ಞೆ ಮಾಡುವ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುವುದು ಖಂಡಿತ ಎಂದು ಮುದ್ರಾಡಿ ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ ರಿ. ನ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಹೇಳಿದರು.
ಅವರು ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಕಲ್ಪನಾ ಪರಿಸರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಪರಿಸರ ದಿನದ ಅಂಗವಾಗಿ ನಡೆಸಿದ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಸಂಘದ ಅಧ್ಯಕ್ಷ ಮಣಿಕಂಠ ಉಪಸ್ಥಿತರಿದ್ದರು. ಹಿಂದಿ ಶಿಕ್ಷಕ ಮಹೇಶ ನಾಯ್ಕ ಕೆ. ಸ್ವಾಗತಿಸಿದರು. ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕಿ ಶ್ಯಾಮಲಾ ನಿರೂಪಿಸಿದರು. ಶಿಕ್ಷಕಿ ಚಂದ್ರಕಾಂತಿ ಹೆಗ್ಡೆ ಕಡ್ತಲ ವಂದಿಸಿದರು.ಆನಂದ ಪಿ. ವಿ., ರಘುಪತಿ ಹೆಬ್ಬಾರ್ , ಮಹೇಶ್ ಕಾನ್ಗುಂಡಿ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.





