
ಹೆಬ್ರಿ : ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಮೊಬೈಲ್ ಗೀಳಿನಿಂದ ಹಾದಿ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಪರಿಚಿತರು, ಸಂಶಯಾಸ್ಪದ ವ್ಯಕ್ತಿಗಳು ತೊಂದರೆ ಕೊಟ್ಟಲ್ಲಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜಾಣ್ಮೆಯನ್ನುಮಕ್ಕಳು ಬಾಲ್ಯದಲ್ಲಿಯೇ ಅರಿತುಕೊಳ್ಳಬೇಕು.ದೇಶದ ಕಾನೂನುಗಳನ್ನು ಸದಾ ಪಾಲಿಸಬೇಕು. ಸುರಕ್ಷತೆಯ ನಿಯಮಗಳನ್ನು ಅನುಸರಿಸಬೇಕು ಪೋಕ್ಸೋ ಕಾಯಿದೆ, ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಂಡು ನಿಮ್ಮ ರಕ್ಷಣೆಯ ಜೊತೆಗೆ ಒಳ್ಳೆಯ ವಿದ್ಯಾಭ್ಯಾಸ ಪಡೆದು,ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಸದಾ ಪಾಲಿಸಿಕೊಂಡು, ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವ ಮೂಲಕ ದೇಶದ ಪ್ರಜ್ಞಾವಂತ ನಾಗರಿಕರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವರಂಗದ ನ್ಯಾಯವಾದಿ ವಿ. ಸುರೇಶ್ ಪೂಜಾರಿ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ಹಾಗೂ ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ ಇದರ ಆಶ್ರಯದಲ್ಲಿ ನಡೆದ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ವಕೀಲೆ ಸುಪ್ರೀತಾ, ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಪಿ. ವಿ. ಆನಂದ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ರಘುಪತಿ ಹೆಬ್ಬಾರ್ ವಂದಿಸಿದರು. ಶಿಕ್ಷಕರಾದ ಶ್ಯಾಮಲಾ, ಚಂದ್ರಕಾಂತಿ ಹೆಗ್ಡೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






