ಶಾಲಾ ಸಂಸ್ಥಾಪಕ ಅಧ್ಯಕ್ಷರ ಸ್ಮರಣೆ, ಎಸ್ ಎಸ್ ಎಲ್ ಸಿ ವಿಶಿಷ್ಟ ಶ್ರೇಣಿ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ನಿವೃತ್ತ ಮುಖ್ಯ ಶಿಕ್ಷಕರಿಗೆ ಅಭಿನಂದನೆ

ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ 2025- 26 ರ ಶಾಲಾ ಪ್ರಾರಂಭೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.ಹುದ್ದೆಗಿಂತಲೂ, ವೃತ್ತಿಯಲ್ಲಿ ಗಳಿಸಿದ ಮನ್ನಣೆಯೇ ಗೌರವಕ್ಕೆ ಕಾರಣ. ನಿಸ್ವಾರ್ಥ ಸೇವೆಯಿಂದ ಕೈಗೊಂಡ ಕೆಲಸಗಳೆಲ್ಲವು ಪರಮಾತ್ಮನ ಸೇವೆಯೇ. ಯಾವ ವೃತ್ತಿಯಲ್ಲೂ ಮೇಲು ಕೀಳಿಲ್ಲ. ಆದರೂ ಶಿಕ್ಷಕ ವೃತ್ತಿಯು ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಹೊಂದಿದೆ. ಪ್ರತಿಯೊಬ್ಬರು ನೆನಪಿಟ್ಟುಕೊಳ್ಳುವುದು ಅವರ ಶಿಕ್ಷಕರನ್ನು . 27 ವರ್ಷಗಳ ಶಿಕ್ಷಕ ವೃತ್ತಿ ಬದುಕಿನಲ್ಲಿ ಅಸಂಖ್ಯಾತ ಸಾಧಕರ ಸೃಷ್ಟಿಗೆ ಕಾರಣೀಭೂತರಾದ ಶ್ರೀಮತಿ ಇಂದಿರಾ ಬಾಯರಿಯವರ ಸೇವೆ ಸಂಸ್ಥೆಗೆ ಅವಿಸ್ಮರಣೀಯವಾದುದು ಎಂದು ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ.) ನ ಅಧ್ಯಕ್ಷರಾದ ಶ್ರೀ ದಿವಾಕರ ಎನ್. ಶೆಟ್ಟಿ ಹೇಳಿದರು. ಅವರು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿಯವರ ವಯೋನಿವೃತ್ತಿಯ ಅಭಿವಂದನೆ ಸಲ್ಲಿಸಿ ಮಾತನಾಡಿದರು. ಅವರು
ಮುದ್ರಾಡಿಯ ಅನುದಾನಿತ ಪ್ರೌಢಶಾಲೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಶ್ರೀ ಕೃಷ್ಣ ಡಿ. ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ದೂರದರ್ಶಿತ್ವವನ್ನು ಸಂಸ್ಮರಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಶ್ರೇಣಿ ಪಡೆದ ಹರ್ಷಿತ್, ವಿನೀತಾ, ಸುಗಂಧಿ ಮತ್ತು ರಂಜಿತ್ ಇವರುಗಳಿಗೆ ತರಂಗ ವಾರಪತ್ರಿಕೆಯ ಸಂಧ್ಯಾ ಪೈ ಯವರು ಕೊಡ ಮಾಡಿದ ದತ್ತಿನಿಧಿ, ಮುದ್ರಾಡಿಯ ಜಗದಂಬಾ ಆರ್. ಶೆಟ್ಟಿಯವರು ಅವರ ಗುರುಗಳಾದ ಮರಿಯಪ್ಪ ಕಲ್ಕೂರರ ನೆನಪಿನಲ್ಲಿ ನೀಡಿದ ದತ್ತಿನಿಧಿ, ಹೆಬ್ರಿಯ ಕನ್ನಡ ಸೇನಾನಿ ಗಂಗಾಧರ ರಾವ್ ಮತ್ತು ವರಂಗದ ಕಮಲ ಪೂಜಾರಿಯವರ ಹೆಸರಿನಲ್ಲಿ ವಿಠಲ ಪೂಜಾರಿಯವರ ಮಗ ಸುರೇಶ ಪೂಜಾರಿಯವರು ನೀಡಿದ ಬಹುಮಾನಗಳನ್ನು ವಿತರಿಸಲಾಯಿತು.
ಸರಕಾರ ನೀಡುತ್ತಿರುವ ಉಚಿತ ಪಠ್ಯಪುಸ್ತಕಗಳ ವಿತರಣೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ವಸಂತಿ ಪೂಜಾರಿ ವಿತರಿಸಿದರು. ಕೋಟ ಗೀತಾನಂದ ಫೌಂಡೇಶನ್ ನ ಆನಂದ ಕುಂದರ್ ನೀಡಿದ ಉಚಿತ ನೋಟ್ ಬುಕ್ ಗಳ ವಿತರಣೆ ಯನ್ನು ಪಂಚಾಯತ್ ಉಪಾಧ್ಯಕ್ಷೆ ರಮ್ಯಕಾಂತಿ ಹಾಗೂ ಪಂಚಾಯತ್ ನ ಹಿರಿಯ ಸದಸ್ಯರಾದ ಗಣಪತಿ ಎಂ. ವಿತರಿಸಿದರು.
ಅಭಿನಂದನೆಯನ್ನು ಸ್ವೀಕರಿಸಿ, ಸೇವೆ ಸಲ್ಲಿಸುವಾಗ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ನಿಮ್ಮ ಪ್ರೀತಿ – ಗೌರವ – ಅಭಿಮಾನಕ್ಕೆ ಬೆಲೆಕಟ್ಟಲು ಅಸಾಧ್ಯ.. ನಿಮ್ಮ ಸಹಕಾರವೇ ಪ್ರತಿಯೊಂದಕ್ಕೂ ಪ್ರೇರಣೆ, ನೀವು ನೀಡಿದ ಪ್ರೀತಿಯ ಅಭಿಮಾನದ ಅಭಿನಂದನೆಗೆ ಅಭಿವಂದನೆಗಳು ಎಂದು ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಬಾಯರಿ ಹೇಳಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ನ ಹಿರಿಯ ಸದಸ್ಯರಾದ ಗಣಪತಿ ಎಂ.
ಮುಂಬೈ ಉದ್ಯಮಿ ಭರತ್ ಸೂರ್ತಿ,. ಶಿಕ್ಷಣ ಇಲಾಖೆಯ ಸಿ. ಆರ್. ಪಿ. ರಾಘವೇಂದ್ರ ಆಚಾರ್ಯ,, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಗುರು ರಕ್ಷಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ, ಸಂಸ್ಥೆಯ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷೆ ಶಶಿಕಲಾ ಡಿ.ಪೂಜಾರಿ,ಇಂದಿರಾ ಬಾಯರಿಯವರ ಕುಟುಂಬ ಸ್ಥರು, ಶಾಲಾ ಹಿತೈಷಿಗಳು ಉಪಸ್ಥಿತರಿದ್ದರು.ಶಿಕ್ಷಕಿ ಶ್ಯಾಮಲಾ ಕೊಠಾರಿ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ಮಹೇಶ್ ನಾಯ್ಕ್ ಅಭಿನಂದನಾ ಪತ್ರ ವಾಚಿಸಿದರು. ಹಿರಿಯ ಶಿಕ್ಷಕ
ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಪಿ. ವಿ.ಆನಂದ ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ,ಶಿಕ್ಷಕೇತರ ಸಿಬ್ಬಂದಿ ಮಹೇಶ್ ಕಾನ್ಗುಂಡಿ ಸಹಕರಿಸಿದರು.



















































