
ಬೆಳಗಾವಿ: ಕೋಡಿಮಠ ಸಂಸ್ಥಾನದ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯು ನಗರದಲ್ಲಿ, ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ಕುರಿತು ಅಚ್ಚರಿಯ ಭವಿಷ್ಯ ನುಡಿದಿದ್ದು, ಅದೇನೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಿದೆ ಎಂದಿದ್ದಾರೆ.
ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದಾರೆ. ಕುರುಬ ಸಮಾಜದ ದೇವಿ ಬಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಹಕ್ಕು ಬುಕ್ಕರು ವಿಜಯನಗರವನ್ನು ಉಳಿಸಿದರು. ರಾಯಣ್ಣ ಕಿತ್ತೂರನ್ನು ಉಳಿಸಿದರು. ಹಾಲುಮತ ಸಮಾಜವು ಪ್ರಕೃತಿಯಲ್ಲಿ ಭವಿಷ್ಯವನ್ನು ಕಂಡುಕೊಂಡ ಪುರಾತನ ಮತ್ತು ದೈವಿ ಬಲ ಉಳ್ಳ ಮತ. ಅಂತಹ ಹಾಲುಮತದವರಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಸುಲಭದ ವಿಷಯವಲ್ಲ ಎಂದಿದ್ದಾರೆ.





