
ಶಬರಿಮಲೆ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಂಪಾ ನದಿ ತೀರದಲ್ಲಿ ತಿರುವಾಂಕೂರು ದೇವಸ್ಥಾನ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ವಿಶ್ವ ಅಯ್ಯಪ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತಾಧಿಗಳಿಗೆ ಸಮಗ್ರವಾದ ಸೌಲಭ್ಯ ನೀಡುವ ಉದ್ದೇಶದಿಂದ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಪರಿಸರಕ್ಕೆ ಧಕ್ಕೆ ಆಗದ ರೀತಿಯಲ್ಲಿ ಮುಂದಿನ 25 ವರ್ಷಗಳನ್ನು ಗುರಿಯಾಟ್ಟುಕೊಂಡು ಶಬರಿಮಲೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.
ಶಬರಿಮಲೆಯ ಸಮಗ್ರ ಅಭಿವೃದ್ಧಿಗೆ 2011-12ರಲ್ಲೇ ಮಾಸ್ಟರ್ ಪ್ಲಾನ್ ರಚಿಸಲಾಗಿತ್ತು. ಆದರೆ ಉನ್ನತಾಧಿಕಾರ ಸಮಿತಿ ಅನುದಾನ ಬಳಸಿಕೊಳ್ಳುವಲ್ಲಿ ವಿಳಂಬ ಮಾಡಿತ್ತು. ಈಗ ಸರ್ಕಾರ ಮಧ್ಯಪ್ರವೇಶ ಮಾಡಿದ ಪರಿಣಾಮ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ.
ಸನ್ನಿದಾನ, ಪಂಪಾ ಹಾಗೂ ನಿಲಕ್ಕಲ್ ಪ್ರದೇಶಗಳನ್ನು ಹಂತ ಹಂತವಾಗಿ ಅಭಿವೃದ್ದಿ ಮಾಡಲಾಗುವುದು. ಸನ್ನಿಧಾನಕ್ಕೆ ಸಂಬಂಧಪಟ್ಟಂತೆ 2022-27ರ ಅವಧಿಯಲ್ಲಿ ಮೊದಲ ಹಂತದಲ್ಲಿ 600.47 ಕೋಟಿ ರು. 2ನೇ ಹಂತದಲ್ಲಿ (2028-33) 100.02 ಕೋಟಿ ರು. ಹಾಗೂ ಮೂರನೇ ಹಂತದಲ್ಲಿ(2034-39) 77.66 ಕೋಟಿ ರು. ವೆಚ್ಚ ಮಾಡಲಾಗುವುದು. ಅದೇ ರೀತಿ ಪಂಪಾ ಸಂಬಂಧ 207.48 ಕೋಟಿ ರು. ಮತ್ತು ಕಾಲು ಹಾದಿ ಅಭಿವೃದ್ಧಿಗೆ 47.97 ಕೋಟಿ ರು. ವೆಚ್ಚ ಮಾಡಲಾಗುವುದು ಎಂದು ಅವರು ವಿವರಿಸಿದರು. ಇದರ ಜತೆ 2025-2030 ಅವಧಿಯಲ್ಲಿ ಹೆಚ್ಚುವರಿಯಾಗಿ 314.96 ಕೋಟಿ ರು. ವೆಚ್ಚ ಮಾಡಿ ಭಕ್ತಾಧಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.









