
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್ ‘ಮುಂದಿನ ಒಂದು ತಿಂಗಳಲ್ಲಿ ಕಾಂಗ್ರೆಸ್‌ನ 100 ಕಚೇರಿಗಳ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಲಿದೆ. ಕಾರ್ಯಕ್ರಮದ ಬಳಿಕ ನಾನು ದೊಡ್ಡ ಜವಾಬ್ದಾರಿಯಿಂದ ಮುಕ್ತನಾಗುತ್ತೇನೆ. ಬಳಿಕ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.
ಈ ಹೇಳಿಕೆ ಗಂಭೀರ ಅರ್ಥ ಪಡೆದುಕೊಂಡು ಇನ್ನೇನು ಒಂದು ತಿಂಗಳಲ್ಲಿ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೇ ತ್ಯಜಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದ್ದು ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೆ ಇಂಥ ಯಾವುದೇ ಚರ್ಚೆಯಿಲ್ಲ. ಅಕ್ಟೋಬರ್ ತಿಂಗಳವರೆಗೆ ಅಧ್ಯಕ್ಷರ ಬದಲಾವಣೆ ಸಾಧ್ಯತೆಯಿಲ್ಲ ಎಂದು ಶಿವಕುಮಾರ್ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.
ಈ ವೇಳೆ ವರಿಷ್ಠರ ಬಳಿ ಶಿವಕುಮಾರ್ ಅವರು ಜಿ.ಪಂ, ತಾ.ಪಂ ಚುನಾವಣೆವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ. ಇದಕ್ಕೆ ವರಿಷ್ಠರೂ ಸಹ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿದುಬಂದಿದೆ.