
ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಭದ್ರತೆಗೆ ಜಂಟಿ ಪಡೆ ರಚಿಸುವಂತೆ ಮಾಡಿದ ಮನವಿಗೆ ಮಿತ್ರ ರಾಷ್ಟ್ರಗಳು ಸ್ಪಂದಿಸದ ಹಿನ್ನೆಲೆ, ಈ ವಿಚಾರದಲ್ಲಿ ಯಾವುದೇ ದೇಶದ ಸಹಾಯ ನಮಗೆ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ದಾಳಿಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿದ ಉದ್ವಿಗ್ನ ಪರಿಸ್ಥಿತಿಯಿಂದ ಇರಾನ್ ತೈಲ ಸಾಗಣೆಯಲ್ಲಿ ಅಡಚಣೆ ಉಂಟಾಗಿ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಅಮೆರಿಕವೇ ವಿಶ್ವದಲ್ಲೇ ಬಲಿಷ್ಠ ದೇಶವಾಗಿದ್ದು, ಅತ್ಯಂತ ಶಕ್ತಿಶಾಲಿ ಸೇನೆಯನ್ನು ಹೊಂದಿದೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಹಾರ್ಮುಜ್ ಜಲಸಂಧಿ ಭದ್ರತೆಗೆ ಜಂಟಿ ಪಡೆ ರಚನೆಗೆ ಸಹಕಾರ ನೀಡದ ನ್ಯಾಟೋ ರಾಷ್ಟ್ರಗಳ ನಡೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಸ್ಪೇನ್ ಮತ್ತು ಇಟಲಿ ದೇಶಗಳು ತಮ್ಮ ಯುದ್ಧ ನೌಕೆಗಳನ್ನು ನಿಯೋಜಿಸುವ ಮನವಿಯನ್ನು ತಿರಸ್ಕರಿಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ಕೆಲವೊಮ್ಮೆ ಮಿತ್ರ ರಾಷ್ಟ್ರಗಳ ಪ್ರತಿಕ್ರಿಯೆ ಪರೀಕ್ಷಿಸಲು ಇಂತಹ ಪ್ರಸ್ತಾಪಗಳನ್ನು ಮಾಡುತ್ತೇನೆ ಎಂದು ಹೇಳಿದ್ದು, ಭವಿಷ್ಯದಲ್ಲಿ ಅವುಗಳ ನಿಲುವು ಹೇಗಿರಬಹುದು ಎಂಬುದು ಈಗ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.






