
ನವದೆಹಲಿ: ಇಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಪ್ರಯುಕ್ತ ದೇಶಾದ್ಯಂತ `ಸದೈವ ಅಟಲ್’ ಕಾರ್ಯಕ್ರಮದಡಿ ಗೌರವ ಸಲ್ಲಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ದೆಹಲಿಯ `ಸದೈವ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ಮುರ್ಮು ಅವರು ವಾಜಪೇಯಿ ಅವರ ದೂರದೃಷ್ಟಿಯ ಆಡಳಿತ ಮತ್ತು ರಾಷ್ಟ್ರೀಯತೆಗೆ ಮಾಡಿದ ಕೊಡುಗೆಗಳನ್ನು ಸ್ಮರಿಸಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ದೆಹಲಿ ಸಿಎಂ ರೇಖಾ ಗುಪ್ತಾ ಮತ್ತು ಇತರ ಹಿರಿಯ ನಾಯಕರು, ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಕೂಡ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಪೊಸ್ಟ್ ಮಾಡಿದ್ದು, ವಾಜಪೇಯಿ ಅವರ ಆದರ್ಶಗಳು ಭಾರತದ ಪ್ರಗತಿಯ ದಾರಿದೀಪವಾಗಿವೆ. ಅವರ ನಾಯಕತ್ವದಲ್ಲಿ ದೇಶ ಆರ್ಥಿಕ, ರಕ್ಷಣೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟಿತು ಎಂದು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ವಾಜಪೇಯಿ ಅವರ ಆಡಳಿತದಲ್ಲಿ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿದ ಮೈಲಿಗಲ್ಲುಗಳನ್ನು, ವಿಶೇಷವಾಗಿ ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ವಾಜಪೇಯಿ ಅವರ ಜೀವನ ಮತ್ತು ಸಾಧನೆಗಳನ್ನು ಒಳಗೊಂಡ ಡಾಕ್ಯುಮೆಂಟರಿಗಳು ಮತ್ತು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.