ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಆಸ್ಪತ್ರೆಯೊಂದರ ಟಾಯ್ಲೆಟ್‌ನಲ್ಲಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ್ದು, ಈ ಮಗುವನ್ನು ನಾಯಿಯೊಂದು ಕಚ್ಚಿ ಹೊತ್ತುಕೊಂಡು ಹೋದಂತಹ ಭಯಾನಕ ಘಟನೆ ನಡೆದಿದೆ.
ನಾಯಿ ಮಗುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದ ಆಘಾತಗೊಂಡ ಜನತೆ, ರಾಜ್ಯದಲ್ಲಿ ಹದಗೆಟ್ಟ ಆರೋಗ್ಯ ವ್ಯವಸ್ಥೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿ ಅವಧಿಪೂರ್ವ ಜನಿಸಿದ ಮಗುವನ್ನು ಎತ್ತಿಕೊಂಡು ಹೋಗಿದೆ ಎಂದು ಗರ್ಭಿಣಿ ಮಹಿಳೆಯ ಸಂಬಂಧಿಯೊಬ್ಬರು ದೂರಿದ್ದಾರೆ. ಈ ಘಟನೆ ರಾಜ್ಯ ಸರ್ಕಾರ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಭದ್ರತೆಯ ಬಗ್ಗೆ ಪ್ರಶ್ನೆ ಮಾಡಿದೆ.
ಘಟನೆ ಬಗ್ಗೆ ಕೇಂದ್ರದ ಮಾಜಿ ಸಚಿವೆ ಬಿಜೆಪಿ ನಾಯಕಿ ಪ್ರತಿಮಾ ಬೌಮಿಕ್ ಅವರು ಪ್ರತಿಕ್ರಿಯಿಸಿ ಇದು ಮಮತಾ ಬ್ಯಾನರ್ಜಿ ಅವರ ಜಾಗತಿಕ ಮಟ್ಟದ ಆರೋಗ್ಯ ನಾಯಕತ್ವದ ಕರಾಳ ವಾಸ್ತವನ್ನು ಎತ್ತಿ ತೋರಿಸುತ್ತಿದೆ. ಗರ್ಭಿಣಿಯೊಬ್ಬರು ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಯಾವುದೇ ವೈದ್ಯಕೀಯ ಸಹಾಯವಿಲ್ಲದೇ ಮಗುವಿಗೆ ಜನ್ಮ ನೀಡಿದ್ದು, ಬೀದಿನಾಯಿ ಮಗುವನ್ನು ಎತ್ತಿಕೊಂಡು ಹೋಗಿದೆ ಎಂದು ಬರೆದುಕೊಂಡಿರುವ ಅವರು ಜೊತೆಗೆ ನಾಯಿ ಮಗುವನ್ನು ಕಚ್ಚಿಕೊಂಡು ಹೋಗುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ನವಂಬರ್ 18ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದು, ಆರು ತಿಂಗಳಷ್ಟೇ ತುಂಬಿದ್ದ ಅವಧಿ ಪೂರ್ಣಗೊಳ್ಳದ ಮಗುವಿಗೆ ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಜನ್ಮ ನೀಡಿದ್ದರು. ಈ ವೇಳೆ ಆಸ್ಪತ್ರೆಯ ಮೈದಾನದಲ್ಲೇ ಓಡಾಡುತ್ತಿದ್ದ ನಾಯಿಯೊಂದು ಮಗುವನ್ನು ಎತ್ತಿಕೊಂಡು ಹೋಗಿದೆ. ಆದರೆ ಸಹಾಯಕ್ಕಾಗಿ ಹಲವು ಬಾರಿ ಕರೆದರೂ ಯಾವುದೇ ಆಸ್ಪತ್ರೆಯ ಸಿಬ್ಬಂದಿ ಸಹಾಯಕ್ಕೆ ಧಾವಿಸಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ ಗರ್ಭಿಣಿ ಮಹಳೆಯನ್ನು ಬಿಷ್ಣುಪುರದ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.