24.3 C
Udupi
Friday, February 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 66

ಭರತೇಶ್ ಶೆಟ್ಟಿ, ಎಕ್ಕಾರ್

ವಸುದೇವನ ಸಮ್ಮತಿಯಂತೆ ದೇವಕಿಯ ವಿವಾಹವನ್ನೂ ಆತನ ಜೊತೆ ಮಾಡುವುದೆಂದು ಕಂಸ ನಿರ್ಣಯಿಸಿದ. ಶುಭ ಮುಹೂರ್ತದಲ್ಲಿ ವಸುದೇವ -ದೇವಕಿಯರ ವಿವಾಹ ವಿಜೃಂಭಣೆಯಿಂದ ನೆರವೇರಿತು. ರಾಜ ವೈಭವಯುತವಾಗಿ ಮದುವೆಯ ಮೆರವಣಿಗೆಯ ಸಿದ್ಧತೆಗೆ ಮಹಾರಾಜ ಕಂಸ ಆಜ್ಞಾಪಿಸಿದ. ಉತ್ತಮ ಕುದುರೆಗಳನ್ನು ಬಿಗಿದ ಸುಂದರ ರಥ, ವೇಷ ಭೂಷಣಗಳಿಂದ ಹಾಸ್ಯಗಾರರು, ವಾದ್ಯ ಮೇಳಗಳು, ವಿವಿಧ ವಾದಕರು, ನೃತ್ಯಪಟುಗಳು, ಗಾಯಕರು, ಅರಮನೆ ಬೀದಿಯುದ್ದಕ್ಕೂ ಪುಷ್ಪ ವೃಷ್ಟಿಯ ವ್ಯವಸ್ಥೆ, ನಗರಾಲಂಕಾರ ಹೀಗೆ ಏನೇನು ಕಂಸನ ಯೋಚನೆಗೆ ಬಂತೋ ಎಲ್ಲವೂ ಕೃತಿಯಲ್ಲಿ ಮಾಡಿಸಿ ದೇವಕಿಯ ಮೇಲೆ ತನಗಿದ್ದ ಸಹೋದರ ಭಾವ ಪ್ರಕಟಿಸಿದ. ಇನ್ನೇನು ನೂತನ ವಧುವರರ ಮೆರವಣಿಗೆ ಹೊರಡಬೇಕೆನ್ನುವಷ್ಟರಲ್ಲಿ ಮಹೋಲ್ಲಾಸದಿಂದ ಕಂಸನೇ ರಥದ ಸಾರಥ್ಯವಹಿಸಿ ರಥ ಓಡಿಸ ತೊಡಗಿದ. ಬಂಧು ಬಾಂಧವರು, ಪ್ರಜೆಗಳು, ಹಿತೈಷಿಗಳು, ಆಮಂತ್ರಿತ ಗಣ್ಯರು ಸೊಬಗನ್ನು ಸವಿಯುತ್ತಾ ಆನಂದಿಸುತ್ತಿದ್ದರು. ಮೆರವಣಿಗೆ ನಗರ ಮಧ್ಯ ಸಾಗುತ್ತಿರಬೇಕಾದರೆ ಅಶರೀರವಾಣಿ ಯೊಂದು ಮೊಳಗಿತು. ವಾದ್ಯ – ವಾದಕಗಳ ಧ್ವನಿಯನ್ನೂ ಮೀರಿ ಸುಸ್ಪಷ್ಟವಾಗಿ “ಕಂಸ ನಿನ್ನ ಪ್ರೀತಿಯ ತಂಗಿ ದೇವಕಿಯ ಅಷ್ಟಮ ಗರ್ಭದಲ್ಲಿ ಶ್ರೀ ಹರಿಯೇ ಹುಟ್ಟಿ ಬಂದು ನಿನ್ನನ್ನು ಕುಟ್ಟಿ ಕೊಲ್ಲುತ್ತಾನೆ”. ಕೇಳಿಸಿಕೊಂಡ ಕಂಸನಿಗೆ ಸಿಡಿಲು ಬಂದಪ್ಪಳಿಸದಂತಾಯಿತು. ಸಾರಥ್ಯ ಪೀಠದಲ್ಲಿ ಕುಳಿತಲ್ಲೇ ಕುಸಿದನು. ಮೃತ್ಯು ಭಯ ಆವರಿಸಿತು. ಭಯ ಕ್ರೋಧಾಗ್ನಿಯಾಗಿ ಬೆಳೆಯಿತು. ಇವರಿಗೆ ಮದುವೆ ಮಾಡಿಸಿ ನನ್ನ ಮರಣಕ್ಕೆ ನಾನೇ ಗುಂಡಿ ತೋಡಿದೆನೇ? ಎಂಬ ಹಾಗೆ ದಿಗ್ಭ್ರಾಂತನಾಗಿ ಕೈಯಲ್ಲಿದ್ದ ಚಾವಟಿಗೆ ಎಸೆದು ರಥದಿಂದ ಹಾರಿದನು. ಕೋಪ ನೆತ್ತಿಗೇರಿ ಕಣ್ಣುಗಳು ಕಿಡಿಕಾರಿದವು. ಸಾಕಿ ಸಲಹಿದ ಜನ್ಮದಾತ ತಂದೆಯನ್ನೇ ಅಧಿಕಾರದಾಹಕ್ಕೆ ಬಲಿಯಾಗಿ ಕತ್ತಲೆ ಕೋಣೆಯ ಸೆರೆಗೆ ನೂಕಿದ ಕಂಸನ ಕ್ರೌರ್ಯ ಮತ್ತೆ ಪ್ರಕಟವಾಯಿತು. ತನ್ನ ಸಾವು ಇವಳ ಮಗನಿಂದ? ಇವಳು ಬದುಕಿದರೆ ತಾನೇ ಹೆರುವುದು! ಎಂದು ತಂಗಿ ಎಂಬ ಮಮಕಾರ ಮರೆತೇ ಹೋಯಿತು. ಒರೆಯಲ್ಲಿದ್ದ ಖಡ್ಗ ಬಲಗೈ ಮುಷ್ಟಿಯಲ್ಲಿ ಬಿಗಿದಿಡಿಯಲ್ಪಟ್ಟಿತು. ದಾಪುಗಾಲಿನ ಎರಡು ಹೆಜ್ಜೆಗೆ, ದೇವಕಿಯ ಮುಂದಲೆಯನ್ನು ದಾಟಿ ಎಡಗೈ ತಲೆಗೂದಲನ್ನು ಮುಷ್ಟಿಯಾಗಿ ಹಿಡಿದೆಳೆದು ರಥದಿಂದ ಕೆಳಕ್ಕೆಸೆಯಿತು. ಬೀಸಿದ ಖಡ್ಗ ದೇವಕಿಯ ರುಂಡ ಮುಂಡ ಛೇಧಿಸೀತು ಎಂಬಷ್ಟರಲ್ಲಿ ವಸುದೇವ ಕಂಸನ ಪಾದದ್ವಯಗಳನ್ನು ಬಿಗಿಯಾಗಿ ಹಿಡಿದು ಬೇಡಿಕೊಂಡನು. ಕಂಸನು “ಎಲಾ ಹೇಡಿಯೇ ನೀನೊಬ್ಬ ಕ್ಷತ್ರಿಯನಾದರೆ ಆಯುಧ ಧರಿಸಿ ಹೋರಾಡು” ಎಂದನು. “ಅಯ್ಯಾ ಹೆಂಡತಿಯ ರಕ್ಷಣೆ ಮಾಡುವುದು ಪತಿಯಾದವನ ಧರ್ಮ. ಆ ಕಾರ್ಯವನ್ನೇ ಮಾಡುತ್ತಿದ್ದೇನೆ. ಪರಮ ಸಾಹಸಿಯಾದ ನಿನ್ನೆದುರು ಆಯುಧ ಧರಿಸಿ ಸೆಣಸಿ ಸಾವೇ ಬಂದರೂ ಕ್ಷತ್ರಿಯನಾದ ನನಗದೂ ಧರ್ಮವೇ. ಆದರೂ ಈಗ ಕಂಕಣ ಧರಿಸಿದ ನಾನು ಯುದ್ದ ಮಾಡುವಂತಿಲ್ಲ. ಗುರು ಪರಶುರಾಮರೇ ಕ್ಷಾತ್ರ ಕುಲ ಸರ್ವ ನಾಶ ಮಾಡಲು ಭೂಮಂಡಲ ಪರ್ಯಟನೆಗೈಯುವಾಗ ಕಂಕಣಧರ ಕ್ಷತ್ರಿಯರನ್ನು ಬಿಟ್ಟು ಬಿಟ್ಟಿದ್ದಾರೆ‌. ನೀನು ಅಂತಹ ಅಧರ್ಮ ಗೈಯುವೆಯಾ? ದೇವಕಿ ನಿನ್ನ ಪ್ರೀತಿಯ ತಂಗಿ ಆಕೆಯನ್ನು ಕೊಂದು ಸ್ತ್ರೀ ಹತ್ಯಾ ದೋಷಕ್ಕೆ ಗುರಿಯಾಗಿ ಅಧರ್ಮಿಯಾಗುವೆಯಾ? ಬೇಡ ಭಾವಯ್ಯಾ, ಅಧರ್ಮ ಸಲ್ಲದು” ಎಂದು ಬೇಡಿಕೊಂಡನು. “ಈ ಮಂಗಳ ಕಾರ್ಯ ಸಮಾಪ್ತಿಯಾಗಲಿ. ಮತ್ತೆ ನಿನ್ನ ಆಜ್ಞಾನುವರ್ತಿಯಾಗಿ ನೀನು ಹೇಳಿದಂತೆ ವ್ಯವಹರಿಸುವೆ” ಎಂದು ವಾಗ್ದಾನ ನೀಡಿ ಗೋಗರೆಯತೊಡಗಿದ.

“ಕಂಸಾಖ್ಯನಿಗೆ ಧರ್ಮ ಪಾಠವೇ? ನನ್ನ ಸಾವಿಗೆ ಕಾರಣರಾಗಬಲ್ಲ ನಿಮ್ಮ ಮೇಲೆ ದಯೆ ಧರ್ಮ ತೋರುವುದೇ? ನನ್ನ ಪ್ರಾಣ ಉಳಿದರಲ್ಲವೇ ಧರ್ಮ ಪಾಲನೆ? ನನ್ನ ಪಾಲಿನ ಮೃತ್ಯು ದೇವತೆ ಈ ದೇವಕಿ. ಬದುಕಲು ಅವಕಾಶ ಕೊಟ್ಟರೆ ನನ್ನ ಸಾವಿಗೆ ನಾನೇ ದಾರಿ ಮಾಡಿ ಕೊಟ್ಟಂತೆ…” ಎಂದು ಮತ್ತೆ ಖಡ್ಗವೆತ್ತಿದ…. ಆಗ ಪರಮ ಸಾತ್ವಿಕನಾದ ವಸುದೇವ “ಭಾವಯ್ಯಾ… ನಿನಗೆ ಮರಣ ಎಂಟನೇ ಮಗುವಿನಿಂದಲ್ಲವೇ? ಈಗಿನ್ನೂ ಮದುವೆಯಾಗಿದೆಯಷ್ಟೇ! ಏಳು ಮಕ್ಕಳು ಹುಟ್ಟಿದ ಮೇಲಲ್ಲವೇ ಎಂಟನೆಯ ಮಗು? ಅಲ್ಲಿಯವರೆಗೆ ಸುದೀರ್ಘ ಸಮಯವಿದೆ. ಆಯುಷ್ಯವೂ ಸುಭದ್ರವಾಗಿದೆ. ಅಶರೀರವಾಣಿಯಂತೆ ಎಂಟನೇ ಮಗು ಹುಟ್ಟುವವರೆಗೆ ನೀನು ಅಜೇಯ. ನಿನ್ನನ್ನು ತಡೆಯುವವರು ಯಾರು ಇಲ್ಲ ಎಂಬಂತಾಯಿತಲ್ಲವೇ? ಪರೋಕ್ಷವಾಗಿ ಅದೂ ವರವೇ ಆಗಿದೆ. ಒಂದೂ ಮಗುವಿಲ್ಲದ ನಮಗೆ ಎಂಟು ಮಕ್ಕಳಾಗುತ್ತದೆ ಎಂದರೆ ಅದೊಂದು ಸೋಜಿಗವೇ ಹೌದು! ಆ ವರೆಗೆ ನಿನ್ನನ್ನು ಜಯಿಸುವವರು, ವಧಿಸುವವರು ಯಾರೂ ಇಲ್ಲವೆಂದೂ ಸ್ಪಷ್ಟವಾಗಿದೆಯಲ್ಲವೇ? ನೀನು ನಮ್ಮ ಮೇಲೆ ದಯೆ ತೋರಿದರೆ, ಈ ಕ್ಷಮಾದಾನಕ್ಕಾಗಿ ಹುಟ್ಟಿದ ಮಗುವನ್ನು ಆ ಕ್ಷಣವೇ ತಂದು ನಿನಗೊಪ್ಪಿಸುವೆ. ನಿನ್ನ ಹಗೆಯನ್ನು ಏನು ಬೇಕಾದರೂ ಮಾಡಿಕೋ… ನಾನು ಪ್ರಶ್ನಿಸಲಾರೆ” ಎಂದು ಹೇಳಿದ. ಕಂಸನಿಗೂ ವಸುದೇವನ ಮಾತಿನ ಮರ್ಮ ಹೌದೆಣಿಸಿತು. ವಾಸ್ತವ ಸತ್ಯವೂ ಹೌದು. ಮಕ್ಕಳು ಹುಟ್ಟಿದರೆ ಆಗ ತೀರ್ಮಾನಿಸೋಣ ಎಂದು ಬಗೆದು ಸತ್ಯಸಂಧ ವಸುದೇವನಲ್ಲಿ ವಾಗ್ದಾನ ಪಡೆದ ಹುಟ್ಟಿದ ಮಕ್ಕಳನ್ನು ಆ ಕೂಡಲೆ ತಂದು ನನಗೊಪ್ಪಿಸು, ಕೊಟ್ಟ ಮಾತಿಗೆ ತಪ್ಪಬಾರದು” ಎಂದು ಕರಾಗ್ನಿ ಸಾಕ್ಷಿಯಾಗಿ ವಚನ ಪಡೆದ. ಹುಟ್ಟಿದ ಹಸುಳೆ ಮಗುವನ್ನು ಹಿಚುಕಿ ಎಸೆಯಲೇನೂ ಕಷ್ಟವಿರದು ಎಂಬ ಲೆಕ್ಕಾಚಾರ ಮಥುರೇಂದ್ರನದು. ಹೀಗೆ ತರ್ಕಿಸಿ ವಸುದೇವ ದೇವಕಿಯರನ್ನು ಬಿಟ್ಟನು.

ವಿವಾಹ ಕಾಲದಲ್ಲಿ ನಡೆದ ವೃತ್ತಾಂತ ನೆರೆದ ಜನಸ್ತೋಮದ ಮನದಲ್ಲಿ ಭಯ ಹುಟ್ಟಿಸಿತ್ತು. ವಸುದೇವ ದೇವಕಿಯರು ಮಥುರೆ ತೊರೆದು ತಮ್ಮ ಮನೆ ಸೇರಿದರು. ಹೀಗೆ ಕಾಲ ಕಳೆಯಲು ದೇವಕಿ ಗರ್ಭ ಧರಿಸಿದಳು. ಕಂಸನಿಗೆ ಈ ವಿಚಾರ ತಿಳಿಯಿತು.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page