ಭಾಗ – 59
ಭರತೇಶ್ ಶೆಟ್ಟಿ , ಎಕ್ಕರ್

ಹೀಗೆ ಕಾಲ ಸಾಗುತ್ತಿರಬೇಕಾದರೆ ದ್ರೋಣರ ಆಶ್ರಮದಿಂದ ಹೊರ ಬಂದಿದ್ದ ಕರ್ಣ ತನ್ನ ಧನುರ್ವೇದ ಪ್ರಾಪ್ತಿಯ ಆಸೆಯ ಪೂರೈಕೆಗಾಗಿ ಅಲೆದಾಡುತ್ತಿದ್ದ. ಗುರು ದ್ರೋಣರ ಗುರುಗಳಾದ ಭಾರ್ಗವರಾಮರೇ ಸೂಕ್ತರೆಂದು ತರ್ಕಿಸಿ ಅವರ ಬಳಿ ಹೋಗಿ ತನ್ನ ಆಕಾಂಕ್ಷೆ ಅರುಹಿದನು. ಬ್ರಾಹ್ಮಣ ರೂಪಿನಲ್ಲಿದ್ದ ಕರ್ಣನ ಹಿನ್ನೆಲೆ ತಿಳಿಯುವ ಪ್ರಯತ್ನ ಮಾಡದೆ ಶಿಷ್ಯನಾಗಿ ಸ್ವೀಕರಿಸಿದರು. ಕ್ರಮೇಣ ಆತನ ಗುರುಭಕ್ತಿ, ಪ್ರಾವಿಣ್ಯತೆಗೆ ವಿವಶರಾಗಿ ವಿದ್ಯಾದಾನ ಮಾಡುತ್ತಾ ರಹಸ್ಯ ವಿದ್ಯೆಗಳೆಲ್ಲವನ್ನೂ ಒಂದೊಂದಾಗಿಯೇ ಉಪದೇಶ ಮಾಡತೊಡಗಿದರು.
ಇತ್ತ ಶತ ಯೋಜನ ವಿಸ್ತಾರಕ್ಕೆ ಹರಡಿ ಹಬ್ಬಿರುವ ಗುರು ದ್ರೋಣರ ಆಶ್ರಮದಲ್ಲಿ ಶತಾಧಿಕ ಶಿಷ್ಯರು ಕೂಡ ಪ್ರವೀಣರಾಗುತ್ತಿದ್ದರು. ಶಿಕ್ಷಣದ ಪರೀಕ್ಷೆಗೆ ಮುಂದಾದ ಗುರು ದ್ರೋಣರು ಶಿಷ್ಯರ ಲಕ್ಷ್ಯ ಭೇದನದ ನಿಖರತೆ ತಿಳಿಯುವ ಪ್ರಯತ್ನದಲ್ಲಿ ಮರದಲ್ಲೊಂದು ಕೃತಕ ಹಕ್ಕಿಯನ್ನು ಗುರಿಯಾಗಿಸಿ ಬಾಣ ಪ್ರಯೋಗಿಸಲು ಒಬ್ಬೊಬ್ಬರನ್ನೇ ಮುಂದೆ ಕರೆದರು. ಗುರಿಯನ್ನು ನಿಗದಿಯಾಗಿಸಿ ಹೊಡೆಯಲು ಹೇಳುವ ಮುನ್ನ ನಿಮಗೇನೇನು ಕಾಣುತ್ತಿದೆ ಎಂದು ಕೇಳಿದಾಗ, ಅವರು ಹಕ್ಕಿ, ಮರದ ಗೆಲ್ಲು, ಎಲೆಗಳು, ಕಾಯಿ ಇತ್ಯಾದಿ ವಿಕೇಂದ್ರಿಕೃತ ದೃಷ್ಟಿಯ ವಿವರ ಹೇಳಿದರು. ಉತ್ತರ ಕೇಳುತ್ತಾ ದ್ರೋಣರು ಅವರನ್ನು ಹಿಂದಕ್ಕೆ ಕರೆಯುತ್ತಿದ್ದರು. ಅರ್ಜುನನ ಸರದಿ ಬಂದಾಗ ಆತ ಮಾತ್ರ ಹಕ್ಕಿಯ ಶಿರ ಕಾಣುತ್ತಿದೆ ಎಂದ. ಮತ್ತೇನು ಕಾಣುತ್ತಿದೆ ಎಂದಾಗ ಹಕ್ಕಿಯ ಕಣ್ಣು ಎಂದ ಅರ್ಜುನನ ನಿಖರ ದೃಷ್ಟಿಗೆ ಮೆಚ್ಚಿ ಬಾಣ ಪ್ರಯೋಗಿಸಲು ಆದೇಶ ನೀಡಿದರು. ಪ್ರಯೋಗವೂ ಅಷ್ಟೇ ನಿಖರವಾಗಿತ್ತು. ಆಗ ಗುರು ದ್ರೋಣರು ಉಳಿದ ಶಿಷ್ಯರನ್ನು ಕರೆದು ಗುರಿ ಭೇದಿಸಲು ಸ್ಪಷ್ಟ ಲಕ್ಷ್ಯದ ಗುರಿ ಹಿಡಿಯುವುದು ದೊಡ್ಡದಲ್ಲ. ಏಕಾಗ್ರತೆಯ ಕೇಂದ್ರೀಕೃತ ಮನಸ್ಸು – ದೃಷ್ಟಿ ಬೇಕು ಎಂದು ಬೋಧಿಸಿದರು.
ಒಂದು ದಿನ ಸ್ನಾನಕ್ಕೆಂದು ಗಂಗಾ ನದಿಗಿಳಿದ ದ್ರೋಣರ ಕಾಲನ್ನು ಮೊಸಳೆ ಕಚ್ಚಿ ಸೆಳೆದಾಗ, “ಮೊಸಳೆ” “ಮೊಸಳೆ” ಎಂದು ದ್ರೋಣರು ಕೂಗಿದರು. ಇತರ ಶಿಷ್ಯರು ಏನು ಮಾಡುವುದೆಂದು ಯೋಚಿಸಿ ತೀರ್ಮಾನಿಸುವುದರೊಳಗೆ ಅರ್ಜುನ ಸರ ಸರನೆ ಐದು ಬಾಣಗಳನ್ನು ಪ್ರಯೋಗಿಸಿ ಜಲಾಂತರ್ಗತ ಮೊಸಳೆಯನ್ನು ತುಂಡು ತುಂಡಾಗಿ ಕತ್ತರಿಸಿ ದ್ರೋಣರ ಕಾಲನ್ನೂ, ಪ್ರಾಣವನ್ನೂ ಏಕಕಾಲದಲ್ಲಿ ಮೊಸಳೆ ಬಿಡುವಂತೆ ಮಾಡಿದ. ದ್ರೋಣರು ಅರ್ಜುನನ ಕೌಶಲ್ಯವನ್ನು ಬಹುವಾಗಿ ಮೆಚ್ಚಿದರೆ ಕೌರವರ ಮತ್ಸರ ಬುದ್ದಿ ಹಿಗ್ಗಿ ಅಸಹನೆ ಹೆಚ್ಚಿತು. ದ್ರೋಣರ ಅತಿ ಸೂಕ್ಷ್ಮ ಪರೀಕ್ಷೆಯಲ್ಲೂ ಅರ್ಜುನ ತೇರ್ಗಡೆಯಾಗಿಬಿಟ್ಟ.
ಹೀಗೆ ವಿಶಿಷ್ಟನಾಗಿ ಬೆಳೆಯುತ್ತಾ ಯೋಗ್ಯತೆ ಪ್ರದರ್ಶಿಸುತ್ತಿದ್ದ ಅರ್ಜುನನ್ನು ಕರೆದು ದ್ರೋಣರು ವಿಶೇಷ ಮಂತ್ರಾಸ್ತ್ರವನ್ನು ಉಪದೇಶಿಸುವುದಾಗಿ ತಿಳಿಸಿದರು. ಹಾಗೆಯೇ ಬ್ರಹ್ಮಾಸ್ತ್ರದ ವಿವರಣೆ ನೀಡುತ್ತಾ ಅತಿಮಾನುಷ ಯಾ ಅಮಾನುಷರಿಂದ ದಾಳಿಯಾದಾಗ ಮಾತ್ರ ಅಂತಹವರನ್ನು ನಿಗ್ರಹಿಸಲು ಈ ಶರ ಪ್ರಯೋಗಿಸಬೇಕು. ಸಾಮಾನ್ಯ ಅಲ್ಪ ಬಲಯುತರ ಮೇಲೆ ಪ್ರಯೋಗವಾದರೆ ಅನಾಹುತವಾಗಿ ಪ್ರಳಯವೇ ಸಂಭವಿಸೀತು ಎಂಬ ಎಚ್ಚರಿಕೆಯನ್ನೂ ನೀಡಿದರು. ವಿವೇಕ ಶೂನ್ಯರಿಗೆ ಈ ಮಂತ್ರಾಸ್ತ್ರ ಉಪದೇಶ ನಿಷಿದ್ಧವಾಗಿದ್ದು ನಿನ್ನಲ್ಲಿ ಅಂತಹ ಪೂರ್ಣ ಯೋಗ್ಯತೆ ಗುರುತಿಸಿದ ಕಾರಣ ಉಪದೇಶಿಸುತ್ತಿದ್ದೇನೆ ಎಂದು ಹೇಳಿ ಹಾಗೇ ಮಾಡಿದರು. ಅರ್ಜುನನೂ ಗುರುವಾಕ್ಯ ಪರಿಪಾಲನೆ ಮಾಡುವ ವಾಗ್ದಾನ ನೀಡಿ ಅವರನ್ನು ವಂದಿಸಿದ.
ಈ ವಿಚಾರ ತಿಳಿದ ಅಶ್ವತ್ಥಾಮ ತನಗೂ ಈ ಮಂತ್ರ ಶರ ಉಪದೇಶಿಸಲ್ಪಡಬೇಕೆಂದು ಹಠ ಮಾಡಿದ. ತನ್ನ ಸ್ವಂತ ಮಗನೇ ಆದರೂ, ಆತನಲ್ಲಿ ಆ ಯೋಗ್ಯತೆ ಕಾಣದ ಕಾರಣ ಮಗನೇ ಅರ್ಜುನನಲ್ಲಿರುವಂತಹ ಪರಿಪೂರ್ಣತೆ ನಿನ್ನಲ್ಲಿ ಕಾಣುತ್ತಿಲ್ಲ. ಹಾಗಾಗಿ ಕಾಲ ಪಕ್ವವಾದಾಗ ನಿನಗೆ ಉಪದೇಶಿಸುತ್ತೇನೆ ಎಂದು ಹೇಳಿ ಮುಂದೂಡಿದರು.
ಇತ್ತ ಪರಶುರಾಮರ ಪ್ರಿಯ ಶಿಷ್ಯನಾಗಿ ಕರ್ಣನೂ ಸಂಪೂರ್ಣ ಶಿಕ್ಷಣ ಪಡೆದು ಶ್ರೇಷ್ಟ ಧನುರ್ಧರನಾಗಿ ರೂಪುಗೊಳ್ಳುತ್ತಿದ್ದ. ಒಂದು ದಿನ ಹೀಗೆಯೇ ಕರ್ಣ ಅಭ್ಯಾಸ ನಿರತನಾಗಿದ್ದಾಗ ನೋಡುತ್ತಾ ಇದ್ದ ಭಾರ್ಗವರಿಗೆ ನಿದ್ರೆಯ ಮಂಪರು ಆವರಿಸಿದಂತಾಯಿತು. ವಿಶ್ರಮಿಸುವ ಮನಸ್ಸಾಗಿ ಕರ್ಣನನ್ನು ಕರೆದು ವಿಶ್ರಾಂತಿ ಪಡೆಯಲು ಬಯಸಿದ ತನಗೆ ತಲೆದಿಂಬು ತರಲು ಹೇಳಿದರು. ಆತ ತನ್ನ ತೊಡೆಯ ಮೇಲೆಯೇ ಮಲಗುವಂತೆ ಪ್ರಾರ್ಥಿಸಿದ. ಗುರುಗಳೂ ಶಿಷ್ಯನ ಪ್ರೀತಿಗೆ ಮಣಿದು ಹಾಗೇ ಮಲಗಿದರು. ಕೆಲವೊಮ್ಮೆ ಅತಿ ಪ್ರೀತಿ, ಗೌರವವೂ ಮಾರಕವಾಗುತ್ತದೆ. ಶಿಷ್ಯನ ಪ್ರೀತಿಯ ಉಪಚಾರದಿಂದ ನಿದ್ರೆಗೆ ಜಾರಿದ ಗುರುಗಳನ್ನು ಕಾಣುತ್ತಾ, ಕರ್ಣ ತನ್ನ ತಪ್ಪಿಗಾಗಿ ಪಶ್ಚಾತ್ತಾಪ ಭಾವ ತಳೆದ. ಗುರುಗಳ ಬಳಿ ತಾನು ಬ್ರಾಹ್ಮಣ ರೂಪ ಧರಿಸಿ ವಿದ್ಯಾರ್ಥಿಯಾಗುವ ಮೋಸ ಮಾಡಬಾರದಿತ್ತು. ಬಳಿಕವಾದರೂ ತಾನು ಸೂತನೆಂಬ ನಿಜ ಹೇಳುತ್ತಿದ್ದರೆ ಶಿಷ್ಯನಾಗಿ ಒಪ್ಪುತ್ತಿದ್ದರೋ ಏನೋ ಎಂದು ಯೋಚಿಸುತ್ತಿದ್ದ. ಆ ಸಂದರ್ಭದಲ್ಲಿ ಅಲರ್ಕ (ದುಂಬಿಯ ಜಾತಿಯ ಕೀಟ) ವೊಂದು ಕರ್ಣನ ತೊಡೆಗೆ ಕಚ್ಚಿ ಕೊರೆಯತೊಡಗಿತು. ಪರಿಣಾಮ ರಕ್ತ ಧಾರೆಯಾಗಿ ಹರಿಯ ತೊಡಗಿತು.
ಮುಂದುವರಿಯುವುದು…




