22.8 C
Udupi
Monday, December 1, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 57

ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೫೨ ಮಹಾಭಾರತ

ಅಯ್ಯೋ ವಿಧಿಯೇ, ನನ್ನಂತಹ ಮಾನವನಿಗೆ ಕರುಣೆದೋರಿದ್ದೇ ಅಪರಾಧವಾಗಿ ಶಿಕ್ಷಾರ್ಹವಾಯಿತೇ? ಎಂದು ಗೋಗರೆದ ಶಿಖಂಡಿ. ಆದರೆ ಯಕ್ಷ ಸ್ಥೂಲಕರ್ಣ ಕುಪಿತನಾಗದೆ, ಶಿಖಂಡಿಯನ್ನು ಸಂತೈಸತೊಡಗಿದ. ಈ ಪ್ರಕರಣದಲ್ಲಿ ನಿನಗೆ ಒಳಿತಾಗಿದೆ. ಇಲ್ಲಿ ಆರೋಪಿಸಲು ತಪ್ಪುಗಳಿಗೆ ಹೊಣೆಗಾರ ನೀನಲ್ಲ. ಪರಿತಪಿಸದೆ ನಿನಗೆ ಪ್ರಾಪ್ತವಾದ ಪುರುಷತ್ವದಿಂದ ಸಕಲ ಸುಖಭೋಗಗಳನ್ನು ಅನುಭವಿಸಿ, ಸತ್ಕರ್ಮಗಳನ್ನು ಆಚರಿಸಿ, ರಾಜಕುಮಾರನಾಗಿ ಬಾಳು ಎಂದು ಅನುಗ್ರಹಿಸಿ ಕಳುಹಿಸಿದ. ಶಿಖಂಡಿಯೂ ಇದು ಶಿವಾನುಗ್ರಹದ ಮಹಾತ್ಮೆಯ ಫಲವೇ ಆಗಿದೆ ಎಂದು ಅರಿತು ಮರಳಿ ಅರಮನೆ ಸೇರಿದ. ಈ ನಡುವೆ ಪುತ್ರಾಕಾಂಕ್ಷಿಯಾಗಿದ್ದ ದ್ರುಪದ ಕೌಸವಿ ದಂಪತಿಯರಿಗೆ ಸುಮಿತ್ರ, ಪ್ರಿಯದರ್ಶನ, ವೀರಕೇತು, ಸುರತ, ಶತ್ರುಂಜಯ, ಧ್ವಜಕೇತು ಎಂಬ ಆರು ಮಂದಿ ಮಕ್ಕಳು ಶಿವಪ್ರಸಾದವಾಗಿಯೋ ಎಂಬಂತೆ ಹುಟ್ಟಿದರು. ಕಾಲಾಂತರದಲ್ಲಿ ಶಿಖಂಡಿಗೂ ಕ್ಷತ್ರದೇವ ಮತ್ತು ಯಕ್ಷದೇವ ಎಂಬ ಇಂಬಿಬ್ಬರು ಮಕ್ಕಳು ಜನಿಸಿದರು.

ಪಾಂಚಾಲ ದೇಶದಲ್ಲಾದ ವಿದ್ಯಮಾನಗಳ ವಿಚಾರ ತಿಳಿದ ಭೀಷ್ಮಾಚಾರ್ಯರು ನೆಂಟರಾದ ಹಿರಣ್ಯವರ್ಮ – ದ್ರುಪದರಿಗೆ ವೈರತ್ವವೇಕಾಯಿತು? ಪರಿಹಾರ ಹೇಗಾಯಿತು? ಶಿಖಂಡಿ ಗಂಡೇ? ಹೆಣ್ಣೇ? ಎಂಬಿತ್ಯಾದಿ ವಿಚಾರ ಸಂಗ್ರಹಿಸಿದರು. ಪ್ರಾಜ್ಞನಾಗಿ ತರ್ಕಿಸಿ ಅಂಬೆಯ ವೃತ್ತಾಂತವನ್ನೂ ಜ್ಞಾಪಿಸಿ, ವಿಮರ್ಷಿಸಿ ತರ್ಕಿಸತೊಡಗಿದರು. ಈ ಜಗತ್ತಿನಲ್ಲಿ ಶಾಶ್ವತ ಅಥವಾ ಸ್ಥಿರ ಎಂಬ ಏಕೈಕ ವಿಚಾರವಿದ್ದರೆ ಅದು ಬದಲಾವಣೆ ಮಾತ್ರ. ಸನಾತನ ಧರ್ಮ ಒಂದನ್ನು ಬಿಟ್ಟು ಸ್ಥಿರವಾಗಿ ಯಾವುದೂ ನಿಲ್ಲದು. ಅದೂ ಕಾಲದ ವೈಪರೀತ್ಯದಿಂದ ಒರೆಗೆ ಹಚ್ಚಿ, ಪರೀಕ್ಷಿಸಲ್ಪಟ್ಟರೂ ಮತ್ತೆ ಅಪರಂಜಿಯಾಗಿ ಉಳಿದು ಬೆಳೆಯಬಲ್ಲುದು. ಸತ್ವ -ಸತ್ಯ ಹೀಗಿರುವಾಗ, ಒಂದಲ್ಲ ಒಂದು ದಿನ ಇಚ್ಚಾಮರಣಿಯಾದ ನಾನೂ ಇಚ್ಚೆ ಇದ್ದೋ, ಇಲ್ಲದೆಯೋ ಮರಣಿ ಎಂಬ ವ್ಯಾಪ್ತಿಯೊಳಗೆ ಬರಲೇ ಬೇಕು. ಹಾಗಾಗಿ ಈ ವಿಚಾರದಲ್ಲಿ ಯೋಚಿಸಿದರೂ.. ಯೋಚಿಸದೇ ಇದ್ದರೂ ಫಲಿತಾಂಶ ಬದಲಾಗದು ಎಂದು ತೀರ್ಮಾನಿಸಿ ಮರೆತುಬಿಟ್ಟರು. ಜೀವಿತಾವಧಿಯು ಇರುವವರೆಗೆ ಬಾಳ್ವೆ ಇದೆ ಎಂದು ತನ್ನ ಜವಾಬ್ದಾರಿಯಲ್ಲಿ ನಿರತರಾದರು.

ಹೀಗಿರಲು ಶತಶೃಂಗಾದ್ರಿಯಲ್ಲಿ ಚಕ್ರವರ್ತಿಯಾಗಿದ್ದು, ಆಕಸ್ಮಿಕವಾಗಿ ಅರಮನೆ ತೊರೆದರೂ, ಪ್ರಾಕೃತಿಕ ಸ್ವರ್ಗದಲ್ಲಿ ಪುತ್ರ ಸಂತಾನ ಪ್ರಾಪ್ತಿಸಿಕೊಂಡು ಪತ್ನಿ ಪುತ್ರರೊಡನೆ ನೆಮ್ಮದಿಯ ಸಂಸಾರಿಯಾಗಿದ್ದನು ಪಾಂಡು.

ಎತ್ತರದ ಶತಶೃಂಗದಲ್ಲಿ ಮಂದ ಮಾರುತನ ಸ್ಪರ್ಶ ಹೊಸತೇನು? ಪರಿಶುದ್ಧತೆಯಿಂದ ಹಿತವಾಗಿ ಬೀಸುತ್ತಿರುವುದು ನಿತ್ಯ ಸತ್ಯವಾದರೂ ಆ ದಿನ ಏಕೋ ನವ ಚೈತನ್ಯವಿತ್ತು, ಉಲ್ಲಾಸ ಹೊತ್ತು ತಂದಿತ್ತು. ಮರ- ಗಿಡ, ತರು – ಲತೆಗಳು ಹೂ ಬಿಟ್ಟಿದ್ದವು. ಶುಕ – ಪಿಕಗಳ ಇಂಚರ, ಮಯೂರಿಯ ನಾಟ್ಯ, ಹಂಸಗಳ ಆಂಗಿಕ ಅಭಿನಯ! ಸೂಕ್ಷ್ಮವಾಗಿ ಹೇಳುವುದಾದರೆ ಪ್ರಕೃತಿಯ ಒಡಲಿಗೆ ಮಾರನ ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಫಲಗಳು ಗುರಿಯಾದವೇ? ಎಂಬಂತೆ ಶೃಂಗರಿಸಲ್ಪಟ್ಟು ಭಾವ ಪ್ರಕಟಗೊಳಿಸುವಂತೆ ಭಾಸವಾಗುತ್ತಿತ್ತು

ಈ ಸೌಂದರ್ಯದ ಮೇಲಾಟದೊಳಗೆ ಮಾದ್ರಿಯೂ ಪರಿಣಾಮಕ್ಕೆ ಒಳಗಾದವಳಂತೆ ವಿಧ ವಿಧ ಗಂಧ, ವರ್ಣದ ಪುಷ್ಪಮಾಲಿಕೆ ಧರಿಸಿ, ಮನಸಾರೆ ಕುಣಿಯುತ್ತಾ, ತೇಲಿ ಬರುತ್ತಿದ್ದ ಮಾರುತನ ಜೊತೆ ತನ್ನ ಇನಿಧನಿಯ ಸುಮಧುರ ಗಾನ ಮಾಧುರ್ಯದ ಸುಶ್ರಾವ್ಯತೆಯನ್ನು ತೇಲಿ ಬಿಡುತ್ತಿದ್ದಳು. ಈ ಸುಶ್ರಾವ್ಯತೆ, ಸೌಗಂಧ ಮಾರುತನ ಜೊತೆ ಸೇರಿ ಸಮ್ಮಿಳನಗೊಂಡು ಪಾಂಡುವಿನ ತೊಳ ತೆಕ್ಕೆಯಡಿ, ಕತ್ತಿನ ಸುತ್ತ, ಕೆನ್ನೆ – ಬಾಹುಗಳನ್ನು ಸವರುತ್ತಾ ಆಹ್ಲಾದಕರವಾಗಿ ಜಾರುತ್ತಿತ್ತು. ಸುಖದಲ್ಲಿ ಆನಂದಿಸುತ್ತಾ ಮೈಮರೆತ ಪಾಂಡುವನ್ನು ತಟ್ಟನೆ ಬಡಿದೆಬ್ಬಿಸಿದಂತೆ ಭಾಸವಾಯಿತು. ವಾಯುದೇವನು ಸೌಗಂಧಿ – ಶ್ರಾವ್ಯರ ಜೊತೆ ರಾಸಲೀಲೆ ನಿರತನಾಗಿ, ಭುವನ ಸುಂದರಿಯರಾದ ಕುಂತಿ -ಮಾದ್ರಿ ಇಬ್ಬರು ಸತಿಯರಿದ್ದರೂ ಬಳಸದೇ ಬಿಟ್ಟೆಯಲ್ಲಾ ಎಂದು ಕೇಳಿ ಅಣಕಿಸಿದಂತೆ ಭ್ರಮೆಗೊಳಪಡಿಸಿತು. ಸೆಳೆಯಿತು ಮನಸ್ಸು… ಓಡಿದ ಪಾಂಡು…. ವೇಗ ಹೆಚ್ಚಿತು…. ಆವೇಗ ತುಂಬಿತು… ಅರೆಕ್ಷಣ ನಿಂತು ಸುತ್ತ ಕಣ್ಣಾಡಿಸಿದ… ಗಾಯನವೆಲ್ಲಿಂದ? ಕೇಳುತಿದೆ… ಕಾಣುವುದೋ ಎಂಬಂತೆ! ಆದರೆ ಅಲ್ಲಿ ಕಂಡದ್ದೇನು? ಹರಿಯುವ ತೊರೆಯ ನೀರು ಬಳುಕುತ್ತಾ ಬಂಡೆಯನ್ನು ಬಳಸಿ ಬಿಗಿದಪ್ಪುತ್ತಿದೆ. ಚಿಮ್ಮಿ ಮುತ್ತಿಕ್ಕುತ್ತಿದೆ. ಬಿಳಿ ನೊರೆ ತೇಲಾಡುತ್ತಿದೆ. ತುಸು ಮೇಲೆ ದಡದಲ್ಲಿ ಬಳ್ಳಿಯೂ ನಾಚಿ ಮರವನ್ನು ಅಪ್ಪಿ ಗಾಳಿಯಲ್ಲಿ ಓಲಾಡಿ ಬಳಿ ಸಾರಿ, ತುಸು ದೂರ ಜಾರಿ ಮತ್ತೆ ಸೇರಿ ಸರಸ ನಿರತವಾಗಿದೆ. ಇತ್ತ ಮರಬಳ್ಳಿಗಳಲ್ಲಿ ಅರಳಿದ ಸುಮಗಳ ಓಲೈಸಿ ಗಾನ ವೈಯ್ಯಾರದಿಂದ ಮಾನಿಸಿ ದುಂಬಿ ರಸ ಹೀರುತ್ತಿದೆ. ಅದಕ್ಕಿಂತಲೂ ಮೇಲೆ ನೋಡಿದರೆ ಗಿರಿ ಶೃಂಗಗಳೇನು ಸುಮ್ಮನೆ ನಿಂತಿವೆಯೇ? ತಾನೇ ಗಿರೀಶನೋ ಎಂಬಂತೆ ಎದೆಯುಬ್ಬಿಸಿ ನಿಂತಂತೆ ಕಾಣುತ್ತಿದೆ. ತೇಲಿ ಬರುವ ಶ್ವೇತ ಮೋಡಗಳನ್ನು ಬಾಹು ಬಂಧನದಲ್ಲಿ ಬಂಧಿಸಿ ಆಲಿಂಗಿಸಿದಂತೆ ಬೆಳ್ಮೋಡಗಳು ಪಸರಿಕೊಂಡಿವೆ. ಇನ್ನೂ ಮೇಲಿನ ಗಗನದತ್ತ ನೋಡಿದರೆ… ಹೊಳೆಯುತ್ತಿರುವ ಸೂರಜನ ಮೊಗದೆಡೆಗೆ ಕರಿ ಮೇಘನಳು ಓಡಿ… ಮುತ್ತಿಕ್ಕುವ ಭರದಲ್ಲಿ ಬೆರೆತು, ಜಗಚಕ್ಷುವಿನ ಮುಖವೂ ಮರೆ ಮಾಚಿ, ಶಾಖವೂ ತಂಪಾಗಿ ಇಳೆಗೆ ಪರಿಣಮಿಸಿದಂತೆ ಹಿತವಾಗುತ್ತಿತ್ತು. ಒಟ್ಟಂದದಲ್ಲಿ ಪ್ರಕೃತಿ ಪ್ರಾಕೃತ ಭಾಷೆಯಲ್ಲಿ ಸಂಭಾಷಣಾ ನಿರತವಾಗಿ, ಏನೋಬಒಂದು ಸೂಕ್ಷ್ಮ ಸಂದೇಶ ಸಾರುತ್ತಿದೆಯೋ, ಪ್ರೇರೇಪಿಸುತ್ತಿದೆಯೋ ಎಂಬಂತಿತ್ತು.
ಮನದಣಿಯೆ ನೋಡಿದ ಪಾಂಡು, ಭ್ರಮಾಲೋಕದಲ್ಲಿ ವಿಹರಿಸಿದ. ಏನೋ ಬೇಕು… ಬೇಕೇ ಬೇಕು… ಎಂಬ ತುಡಿತಕ್ಕೊಳಗಾದ.

ಪಾಂಡುವಿನ ಸತಿಯರೋ ಬಲು ಜಾಗೃತರು. ಕಿಂದಮರ ಶಾಪ ಊರ್ಜಿತಕ್ಕೆ ಬರಲನುವು ನೀಡದಂತೆ ಕುಂತಿ ಮಾದ್ರಿಯರು ಜತೆಯಾಗಿಯೇ ಇದ್ದು, ಅರೆಕ್ಷಣದ ಏಕಾಂತಕ್ಕೂ, ಭಾವ ವ್ಯತ್ಯಾಸಕ್ಕೂ ಅವಕಾಶ ನೀಡದೆ ತಮ್ಮ ಪತಿಯನ್ನು ಚಿರಂಜೀವಿಯಾಗಿಸುವ ಪಣ ತೊಟ್ಟಂತೆ ಬದುಕುತ್ತಿದ್ದರು. ಮಕ್ಕಳಾದ ಬಳಿಕವಂತೂ ಸದಾ ಜೊತೆಗಿರುವ ಮಕ್ಕಳೂ ಸೇರಿ ಏಳು ಜೀವಗಳ ಜೊತೆಗಿನ ಜೀವನ ಪಾಂಡುವಿಗೆ ಏಕಾಂತ ಸ್ಥಿತಿ ಸುಲಲಿತವಾಗಿ ಒದಗಲಾಗದಂತೆ ಕಾರಣವೂ ಆಗಿ ಕಾಮನೆಗಳನ್ನು ಕಮರಿಸಿ ಬದುಕುತ್ತಿದ್ದ ಮಡದಿಯರಿಗೆ ತುಸು ನೆಮ್ಮದಿಯಾಗಿತ್ತು.

ಕಾಲನ ಕ್ರಮಣ ಕ್ರಮಿಸದಂತೆ ಆಕ್ರಮಿಸಿ ತಡೆಹಿಡಿಯಲಾದೀತೆ? ಜಂಟಿಯಾಗಿ ಕುಂತಿಗೆ ಅಂಟಿಕೊಂಡೇ ಇರುತ್ತಿದ್ದ ಮಾದ್ರಿ ಇಂದು ಪತಿ ಪಾಂಡು ಮಕ್ಕಳ ಜೊತೆ ಅಧ್ಯಾಪನಾ ನಿರತನಾಗಿ ವ್ಯಸ್ತನಾಗಿರುವುದನ್ನು ಕಂಡು ತನಗೆ ಸ್ವತಂತ್ರ ಅವಕಾಶ ಸಿಕ್ಕಿತ್ತು. ಬಹುದಿನದ ಆಸೆ, ಪ್ರಕೃತಿಯ ಸೌಂದರ್ಯ ಸವಿಯಲು ಒಬ್ಬಳೇ ಹೊರ ಬಂದಿದ್ದಳು. ಇತ್ತ ಕುಂತಿಯೂ ಪಾಕವೋ, ನೈಮಿತ್ತಿಕ ಕಾರ್ಯದಲ್ಲೋ ಮಗ್ನಳಾಗಿ ಬೇರ್ಪಟ್ಟಿದ್ದಳು. ಪಾಠವಾದ ಬಳಿಕ ಮಕ್ಕಳಿಗೆ ಆಟ ಬೇಕಲ್ಲವೇ? ಮಕ್ಕಳೂ ಓಡಾಟದಲ್ಲಿ ಅವಿತು – ಹುಡುಕುತ್ತಾ, ಕೇಕೆಯಾಡುತ್ತಾ ತುಸು ದೂರ ಸರಿದಿದ್ದರು. ಇತ್ತ ಏಕಾಂಗಿಯಾದ ಪಾಂಡು ತನಗಾಗುತ್ತಿರುವ ಅನುಭವದ ಬೆಂಬತ್ತಿ ಓಡಿ ನೋಡಿ ಮೋಡಿಗೊಳಗಾಗಿಬಿಟ್ಟಿದ್ದ. ಅರಸುತ್ತಿದ್ದ ಅರಸನ ಕಣ್ಣಿಗೆ ಮನದರಸಿ ಮಾದ್ರಿ ಕಂಡಳು.

ತನಗೆ ತನ್ನಂಗವಿಲ್ಲದೆ ಆ ಮಹಾರಾಜನಂಗನೆಯ ಅಂತರಂಗವನ್ನೇ ಹೊಕ್ಕಿದ್ದ ಅನಂಗನು, ಅಂಗನಾ ಜನ ಸಹಿತ ನಿಸ್ಸಂಗನಾಗಿದ್ದ ಪಾಂಡು ನೃಪತುಂಗನೆಡೆ ಸರ್ವಾಂಗವೂ ತೋರಿ ಸೂರೆಗೊಳ್ಳುವಂತೆ ಮಸೆ ಮಸೆದು ಇಂಗೋಳ್ಗಳನ್ನು ಎಸೆದನೋ ಮದನಾಂಗನು? ಎಂಬಂತಾಗಿತ್ತು. ರಣರಂಗದಲಿ ದೇಹದ ಅಂಗಾಂಗ ಕತ್ತರಿಸಿ ಇಬ್ಭಾಗಿಸುವ ಅಂಬುಗಳಾದರೆ, ಇಲ್ಲಿ ದೇಹಗಳೆರಡನ್ನು ಜೋಡಿಸುವ ಶರಸೇತುಗಳಾಗಿ ಯೋಗಿಯಾಗ ಹೊರಟವಗೆ ಪ್ರಯೋಗಿಸಲ್ಪಟ್ಟಿದೆಯೋ ಎನ್ನುವ ರೀತಿ ಪರಿಣಮಿಸಿದೆ.

ಪಾಂಡು ಅನಿಯಂತ್ರಿತನಾಗಿ, ಯಾಂತ್ರಿಕವಾಗಿ ಮಾದ್ರಿಯ ಕರವನ್ನು ಹಿಡಿದೆಳೆದನು. ಆಗ ಅವಳು ಹೆದರಿ ಕೈ ತಿರುವಿ ಜಾರಿಸಿ “ಅಕ್ಕಾ….” ಎಂದು ಕೂಗಿದಳು. ಪಕ್ಕನೆ ಆತನ ಕೈಗೆ ಸಿಕ್ಕಿದ್ದು ಅವಳ ಸೆರಗು. ಅತಿಯಾಯಿತೋ ಆಚಾರ? ನಿಯತಿಯ ನಿಯಮವೋ? ಒಂದೆಡೆ ಪಾಂಡುವಿನಿಂದ ಸೆರಗಿನ ಸೆಳೆತ, ಅದು ಜಾರದಂತೆ ಮಾದ್ರಿಯ ಹಿಡಿತ, ಪರಿಣಾಮವಾಗಿ ಚರಣ ಜಾರಿತು, ಕಟಿ ತಿರುಗಿತು! ಅಂಗಾತ ಬಿದ್ದಳು ಮಾದ್ರಿ. ಹಿಡಿದ ಸೆರಗಿಗಿಂದ ಎಳೆಯಲ್ಪಟ್ಟು ಆಕೆಯ ಎದೆಯ ಮೇಲೆ ಒರಗಿದನು ಪಾಂಡು….

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page