ಭಾಗ 48
ಭರತೇಶ್ ಶೆಟ್ಟಿ ಎಕ್ಕಾರ್

ಋಷಿಗಳು ಇಂದ್ರದ್ಯುಮ್ನನ ಕಥೆಯನ್ನು ಹೇಳಲಾರಂಭಿಸಿದರು.
ಪಾಂಡ್ಯದೇಶದ ರಾಜ ಇಂದ್ರದ್ಯುಮ್ನ ಪ್ರಬಲ ಧರ್ಮಿಷ್ಟನಾಗಿದ್ದ. ಆತನ ಧರ್ಮಪತ್ನಿ ಮಹಾರಾಣಿ ಶಶಿಸೇನೆ.
ಇಂದ್ರದ್ಯುಮ್ನನು ದಿಗ್ವಿಜಯಕ್ಕೆ ಹೊರಟು ಕಳಿಂಗ, ವಂಗ, ಹೂಣವ, ಮಾಳವ, ಘೂರ್ಜರ, ಯವನ ದೇಶಗಳನ್ನು ಗೆದ್ದು ಸಂಭ್ರಮದಿಂದ ಮರಳಿ ಹೇರಳ ಕಪ್ಪ ಕಾಣಿಕೆ ಸಂಗ್ರಹದೊಂದಿಗೆ ವಿಜಯೋತ್ಸಾಹದಿಂದ ಮರಳಿ ಬಂದ. ಇಂದ್ರದ್ಯುಮ್ನನನ್ನು ಪತ್ನಿ ಶಶಿಸೇನೆ ಸ್ವಾಗತಿಸಿ ಆರತಿ ಬೆಳಗಿದರೂ, ಆಕೆಯ ಮುಖ ಕಳೆಗುಂದಿತ್ತು. ಗಮನಿಸಿದ ರಾಜ ಇಂದ್ರದ್ಯುಮ್ನ ಕಾರಣವೇನೆಂದು ಕೇಳಿದಾಗ, ಸಂಪತ್ತು ಸಮೃದ್ಧಿ ಎಷ್ಟಿದ್ದರೂ ನಮಗೇಕೆ? ಮಕ್ಕಳಿಲ್ಲವಲ್ಲ ಎಂಬ ವೇದನೆ ವ್ಯಕ್ತಪಡಿಸಿದಳು. ಮಡದಿಯನ್ನು ಸಂತೈಸಿದ ರಾಜೇಂದ್ರ ಲೋಕ ಪರಿಪಾಲಕ ಶ್ರೀ ಹರಿಯ ತಪಗೈದು ಮೆಚ್ಚಿಸಿ ವರಪ್ರಸಾದ ರೂಪದಲ್ಲಿ ಮಕ್ಕಳನ್ನು ಬೇಡಿ ಪಡೆವೆನೆಂದು ಪತ್ನಿಯನ್ನು ಸಮಾಧಾನ ಪಡಿಸಿದನು. ರಾಜ್ಯಭಾರದ ಜವಾಬ್ದಾರಿ ಮಂತ್ರಿಗಳಿಗೊಪ್ಪಿಸಿ ಪರ್ಣಶಾಲೆ ನಿರ್ಮಿಸಿ ಶ್ರೀಮನ್ನಾರಾಯಣ ನ ತಪೋನಿರತನಾದನು.
ಹೀಗೆ ತಪೋಮುಖನಾಗಿದ್ದ ಇಂದ್ರದ್ಯುಮ್ನನ ಪರ್ಣಶಾಲೆಗೆ ಮಹರ್ಷಿ ಅಗಸ್ತ್ಯರ ಆಗಮನವಾಯಿತು. ಬಂದವರು ಇಂದ್ರದ್ಯುಮ್ನನನ್ನು ಧ್ವನಿಯೇರಿಸಿ ಕರೆದರೂ ಧ್ಯಾನ ನಿರತನಾಗಿದ್ದ ಕಾರಣ ಪ್ರತಿಕ್ರಿಯೆ ತೋರಲಿಲ್ಲ. ಅಗಸ್ತ್ಯರ ಕಣ್ಣಿಗೆ ಈತನ ವರ್ತನೆ ಮಲಗಿದ ಆನೆಯಂತೆ ಗೋಚರಿಸಿ ಶಪಿಸಿಯೇ ಬಿಟ್ಟರು – “ನಿನ್ನನ್ನು ಕೂಗಿ ಕರೆದರೂ ಜಡಗಜದಂತೆ ವರ್ತಿಸುತ್ತಿರುವೆಯಾ? ನೀನು ಮತ್ತು ನಿನ್ನ ಸಪರಿವಾರ ಸಹಿತ ಎಲ್ಲರೂ ಆನೆಗಳಾಗಿ ಹೋಗಿ” ಮುನಿವರ್ಯ ಮುನಿದು ಒರೆದ ಶಾಪಾಗ್ನಿಯ ಜ್ವಾಲೆಗೆ ಎಚ್ಚೆತ್ತ ಇಂದ್ರದ್ಯುಮ್ನ ದುಃಖಿಸಿ ಪರಿಮಾರ್ಜನೆ ಬೇಡಿದ. ಮನಕರಗಿದ ಅಗಸ್ತ್ಯರು ನಾನಾಡಿದ ಮಾತನ್ನು ಹಿಂಪಡೆಯಲಾಗದು, ಆದರೆ ಸುದರ್ಶನಧಾರಿ ಶ್ರೀ ವಿಷ್ಣು ನಿನ್ನ ಆಪತ್ಕಾಲದಲ್ಲಿ ಮೈದೋರಿ ನಿನಗೆ ವಿಮೋಚನೆ ಒದಗುವುದೆಂದು ಹೇಳಿ ಹೊರಟರು. ಶಾಪಗ್ರಸ್ಥ ಇಂದ್ರದ್ಯುಮ್ನ ಮದ ಗಜೇಂದ್ರ ನಾದ, ಪರಿವಾರದವರು ಆನೆಗಳಾದರು. ಮಲಯ ಪರ್ವತ ತ್ರಿಕೂಟಾಚಲವೆಂಬ ಕಾನನದಲ್ಲಿ ಅವರು ಆಶ್ರಿತರಾದರು.
ಅದೇ ಸಮಕಾಲದಲ್ಲಿ ಇತ್ತ ‘ಹೂಹೂ’ ನಾಮಕ ಗಂಧರ್ವರಾಜ ತನ್ನ ಸತಿಯರ ಒತ್ತಾಯಕ್ಕೆ ಮಣಿದು ಭೂಲೋಕದ ಕಮಲ ಸರೋವರಕ್ಕೆ ಜಲಕ್ರೀಡೆಗಾಗಿ ಸತಿಯರ ಜೊತೆ ಬಂದನು. ಕಮಲಕಾಸಾರದಲ್ಲಿ ಜಲಕ್ರೀಡೆ ಆಡುತ್ತಿರಬೇಕಾದರೆ ಅದೇ ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ “ದೇವಲ ಮುನಿ” ತಪಸ್ಸಿನಿಂದ ಬಹಿರ್ಮುಖನಾಗಿ ಎದ್ದು ಸರೋವರದ ಬಳಿ ಬಂದಾಗ ಆಶ್ಚರ್ಯಕ್ಕೊಳಗಾದ. ಕಾರಣ ಯಾರೋ ಮಧ್ಯರಾತ್ರಿ ಸರೋವರದಲ್ಲಿ ನೀರಾಟ ಆಡುತ್ತಿದ್ದಾರೆ! ಯಾರೆಂದು ನೋಡಲು ಸರೋವರದ ಬಳಿ ಸಾರಿದರು. ಗಂಧರ್ವ ರಾಣಿಯರು ಮುನಿಯನ್ನು ನೋಡಿ ಜಲಕೇಳಿ ನಿಲ್ಲಿಸಿ ಕತ್ತಿನವರೆಗೆ ನೀರೊಳಗೆ ಮುಳುಗಿ ನಿಂತರು. ಇದೇನು ಈ ರೀತಿ ಸತಿಯರ ವರ್ತನೆ ಎಂದು ಗಂಧರ್ವ ರಾಜ ಕೇಳಿದರೆ ಮುನಿಯೋರ್ವ ನೋಡುತ್ತಿದ್ದಾನೆ ಎಂದು ಹೇಳಿದಾಗ ಕ್ರುದ್ಧನಾದ ಹೂಹೂ, ಮೇಲೆದ್ದು ಬಂದವನೇ ದೇವಲ ಮುನಿಯ ಗಡ್ಡಕ್ಕೆ ಕೈಯಿಕ್ಕಿ ಎಳೆದು ಬಡಿದು ದೂಡಿ ಬೀಳಿಸಿದ. ಎದ್ದ ಮುನಿವರ್ಯ ಕ್ರೋಧಾವಿಷ್ಟರಾದರು. “ಕ್ರೂರಿಯಾಗಿ ವರ್ತಿಸಿದ ನೀನು ಈ ಸರೋವರದಲ್ಲಿ ಕ್ರೂರ ಮೊಸಳೆಯಾಗಿ ಹೋಗು” ಎಂದು ಶಪಿಸಿಯೇ ಬಿಟ್ಟರು. ಶಾಪ ಪರಿಣಮಿಸಿಯೇ ಬಿಟ್ಟಿತು.
ಹೀಗೆ ಬಹುಕಾಲ ಸಾಗುತ್ತಿರಲು ಬೇಸಗೆಯ ಬಿಸಿಲ ಝಳ ತಡೆಯಲಾಗದೆ ಆನೆಗಳ ಹಿಂಡೊಂದು ತೃಷೆಯ ಶಮನಕ್ಕಾಗಿ ಕಮಲಸರೋವರಕ್ಕೆ ಬಂದಿಳಿದು ನೀರು ಕುಡಿದು, ಬಳಿಕ ಇಳಿದು ಈಜಿ ನೀರೆರಚ್ಚುತ್ತಿರಬೇಕಾದರೆ, ಗಜಗಳ ಹಿಂಡಿನ ನಾಯಕ ಗಂಡಾನೆ ಗಜೇಂದ್ರನನ್ನು ಶಾಪರೂಪದಿಂದ ಮಕರ ನಾಗಿದ್ದ ಗಂಧರ್ವ ಕಚ್ಚಿ ಎಳೆಯತೊಡಗಿದ. ಸಂಘರ್ಷವೇರ್ಪಟ್ಟರೂ ಸ್ವಕ್ಷೇತ್ರದಲ್ಲಿ ಪ್ರಾಬಲ್ಯ ಹೆಚ್ಚಲ್ಲವೇ? ನೀರಿನೊಳಗೆ ಮಕರನದೇ ಮೇಲುಗೈಯಾಗಿ ಸೆಣಸಾಡಿ ದಣಿಯುತ್ತಿದ್ದ ಗಜೇಂದ್ರನಿಗೆ ತನ್ನ ಪೂರ್ವ ಸ್ಮರಣೆಯಾಯಿತು. ಹರಿಭಕ್ತನಾಗಿ ವಿಷ್ಣುವನ್ನು ಧ್ಯಾನಿಸಿ ರಕ್ಷಣೆಗಾಗಿ ಮೊರೆಯಿಡತೊಡಗಿದ. ಆಸರೆಗಾಗಿ ಕಮಲಕಾಸಾರದ ತಾವರೆಗಳ ದಂಟುಗಳನ್ನು ತನ್ನ ಸೊಂಡಿಲನ್ನು ಬಳಸಿ ಹಿಡಿದುಕೊಂಡಿದ್ದ. ಲಕ್ಷ್ಮೀ ರಮಣ ಮೈದೋರಲಿಲ್ಲ, ಇತ್ತ ಮೊಸಳೆ ಕಾಲನ್ನು ಕಚ್ಚಿ ಸೆಳೆಯುವ ನೋವು ಭೀಕರವಾಗತೊಡಗಿತು. ಕಮಲಗಳ ದಂಟುಗಳನ್ನೂ ಬಿಟ್ಟು ಸೊಂಡಿಲನ್ನೆತ್ತಿ “ತ್ರಾಹಿ ತ್ರಾಹಿ” ಎಂದು ಭಜಿಸಿದಾಗ ಲಕ್ಷ್ಮೀ ಸಮೇತನಾಗಿ ಗರುಡಗಮನ ಶ್ರೀಹರಿ ಪ್ರತ್ಯಕ್ಷನಾದನು. ಇಲ್ಲೊಂದು ಧರ್ಮ ಸೂಕ್ಷ್ಮವನ್ನು ಗಮನಿಸಬೇಕು, ಎಲ್ಲಿಯವರೆಗೆ ಗಜೇಂದ್ರ ದಂಟಿನಾಶ್ರಯ ತೊರೆಯಲಿಲ್ಲವೋ ಅಲ್ಲಿಯವರೆಗೆ ದೇವರು ಬರಲಿಲ್ಲ. ಅಂದರೆ ಸಂಪೂರ್ಣ ಸಮರ್ಪಿತನಾಗದೆ ಸಾಕ್ಷಾತ್ಕಾರವಾಗದು. ಭಕ್ತವತ್ಸಲ ಭವಭಯನಾಶಕ ಶ್ರೀಹರಿ ಸುದರ್ಶನ ಪ್ರಯೋಗಿಸಿದ, ಪರಿಣಾಮ ಮೊಸಳೆ ಸೀಳಲ್ಪಟ್ಟಿತು. ಹೂಹೂ ಗಂಧರ್ವ ಶಾಪಮುಕ್ತನಾಗಿ ವಂದಿಸಿ ಗಂಧರ್ವ ಲೋಕ ಸೇರಿದ. ಗಜೇಂದ್ರ ಇಂದ್ರದ್ಯುಮ್ನನಾದ, ಆತನ ಇಷ್ಟಾರ್ಥ ಅನುಗ್ರಹಿತವಾಯಿತು.
ನಿಯತಿಯ ನಿಯಮ ಮೀರಲಾದೀತೆ. ಅಗಸ್ತ್ಯರಿತ್ತದ್ದು ಶಾಪವೇ ಆದರೂ ದೇವನೊಲುಮೆಗೆ ಅದೇ ಸಾಧನಾ ಪಥವಾಯಿತು. ಹೀಗೆ ಇಂದ್ರದ್ಯುಮ್ನ ತನ್ನ ಕಾಮಿತಾರ್ಥ ಈಡೇರಿಸಿ ರಾಜನಾಗಿ ಸುಖಸಂಸಾರಿಯಾಗಿ ಬಾಳಿ, ಮೆರೆದು ಕಾಲಾಂತರದಲ್ಲಿ ಮೋಕ್ಷ ಪಡೆದ.
ಈ ಘಟನೆಯ ಬಳಿಕ ಕಮಲಗಳು ತುಂಬಿ ಕಮಲ ಸರೋವರವೆಂದು ಕರೆಯಲ್ಪಡುತಿದ್ದ ಈ ಪುಷ್ಕರಣಿ ಇಂದ್ರದ್ಯುಮ್ನ ಸರೋವರವೆಂದೇ ಪ್ರಖ್ಯಾತವಾಯಿತು.
ಸಮಸ್ತ ಲೋಕವೂ ಈ ಪ್ರಕರಣದಿಂದ ಶ್ರೀಹರಿಯಿಂದ ಅನುಗ್ರಹಿಸಲ್ಪಟ್ಟಿತು. ಯಾರು ನಿತ್ಯವೂ ಶ್ರೀ ವಿಷ್ಣು, ಲಕ್ಷ್ಮೀ, ಮಲಯ ಪರ್ವತ, ಗಜೇಂದ್ರ, ಮಕರ, ಗರುಡ ಮತ್ತು ಸುದರ್ಶನನ್ನು ಧ್ಯಾನಿಸುತ್ತಾರೋ, ಅವರಿಗೆ ಅಂತ್ಯ ಕಾಲದಲ್ಲಿ ಸಾಯುಜ್ಯ ಕರುಣಿಸುವೆನೆಂದು ಶ್ರೀಮನ್ನಾರಾಯಣ ವಾಗ್ದಾನವಿತ್ತು ಅಂತರ್ಧಾನನಾದನು.
ಈ ಮಹಿಮಾ ಕಥನವನ್ನು ಕೇಳಿದ ಪಾಂಡು, ಸತಿಯರೊಡನೆ ಋಷಿ ಮುನಿಗಳ ಆಶ್ರಮದಲ್ಲಿ ಕೆಲ ದಿನ ಕಳೆದು, ಅವರ ಆಶೀರ್ವಾದ ಪಡೆದು ಹೊರಟರು. ಅವರು ಹಂಸಕೂಟವನ್ನು ದಾಟಿ ಶತಶೃಂಗ ಪರ್ವತ ಪ್ರದೇಶವನ್ನು ಬಂದು ಸೇರಿದರು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್