28.5 C
Udupi
Friday, April 10, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 484

ಭರತೇಶ್ ಶೆಟ್ಟಿ ,ಎಕ್ಕಾರು

ಅತ್ತ ಗೂಡಿನಲ್ಲಿ ತಂದೆ ಪಾರಿವಾಳ ತನ್ನ ಮರಿಹಕ್ಕಿಗಳ ಜೊತೆಗಿದ್ದು, ತನ್ನ ಪತ್ನಿ ಪಾರಿವಾಳಕ್ಕೆ ಎಲ್ಲಿ ಏನು ಅಪಾಯವಾಗಿದೆಯೊ ಎಂಬಂತೆ ಕಣ್ಣೀರು ಸುರಿಸುತ್ತಾ, ಮರಿಗಳೊಂದಿಗೆ “ಕಂದಮ್ಮಗಳಿರಾ! ನಿಮ್ಮ ತಾಯಿ, ನನ್ನ ಪ್ರಿಯ ಪತ್ನಿ ಎಲ್ಲಿ ಏನು ಅಪಾಯಕ್ಕೆ ತುತ್ತಾಗಿದ್ದಾಳೋ! ದೇವರು ಕರುಣೆದೋರಿ ಒದಗಿರಬಹುದಾದ ಅಪಾಯದಿಂದ ಪಾರು ಮಾಡು” ಎಂದು ರೋದಿಸುತ್ತಾ ಅಳತೊಡಗಿತು.

ಚೀಲದೊಳಗೆ ಬಂಧಿಯಾಗಿದ್ದ ತಾಯಿ ಪಾರಿವಾಳಕ್ಕೆ ಆ ಪ್ರಶಾಂತ ರಾತ್ರಿಯಲ್ಲಿ ತನ್ನ ಗಂಡ ಅಳುತ್ತಿರುವ ಆರ್ತ ಸ್ವರ ಕೇಳಿಸಿತು. ಆಗ ತಾನೆಲ್ಲಿದ್ದೇನೆ ಎಂದು ಅರಿತ ತಾಯಿ ಪಾರಿವಾಳ ಗಮನವಿಟ್ಟು ಹೊರಗಿನ ವಾತಾವರಣದ ಸ್ಥಿತಿಗತಿಗಳನ್ನು ಅವಲೋಕಿಸತೊಡಗಿತು. ಏಕಾಗ್ರತೆಯಿಂದ ಆಲಿಸುವಾಗ ಬೇಟೆಗಾರ ಚಳಿಯಿಂದ ನಡುಗುತ್ತಾ ಕಂಪಿಸುತ್ತಿರುವ ಉಸಿರು ಮತ್ತು ಸ್ವರ ಕೇಳತೊಡಗಿತು. ಅಷ್ಟರಿಂದಲೆ ಆ ತಾಯಿ ಪಾರಿವಾಳಕ್ಕೆ ಆತನ ಪರಿಸ್ಥಿತಿ ಅರ್ಥವಾಯಿತು. ತನ್ನ ಗಂಡನನ್ನು ಚೀಲದೊಳಗೆ ತಾನು ಬಂಧಿಯಾಗಿರುವ ಸ್ಥಿತಿಯಲ್ಲಿ ಕೂಗಿ ಕರೆಯಿತು “ಪುರುಷನಾಗಿ ನೀನು ಅಳುತ್ತಿರುವೆ. ನಿನ್ನ ಪತ್ನಿ, ಎಳೆ ಮಕ್ಕಳ ತಾಯಿಯೂ ಆದ, ಹೆಣ್ಣಾಗಿರುವ ನಾನು ಆಪತ್ಕಾಲದಲ್ಲಿ ಎದೆಗುಂದದೆ ಧೈರ್ಯದಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಧೈರ್ಯವನ್ನು ಒಗ್ಗೂಡಿಸುತ್ತಿದ್ದೇನೆ. ನೀನು ಈ ಸಮಯದಲ್ಲಿ ಧೃತಿಗೆಡಬೇಡ, ಪಾಲಿಸಬೇಕಾದ ಧರ್ಮವನ್ನು ಮರೆಯಬೇಡ. ಧರ್ಮವನ್ನು ರಕ್ಷಿಸಿದರೆ ಮಹತ್ತರವಾದ ಧರ್ಮ ನಮ್ಮನ್ನು ಯಾವ ವಿಧಾನದಿಂದಾದರು ಕಾಪಾಡುತ್ತದೆ ಎಂಬ ಸತ್ಯವನ್ನು ಸ್ಮರಿಸಿಕೋ. ಈಗ ನಮ್ಮ ಮನೆ ಬಾಗಿಲಿನಲ್ಲಿ ಅಸಹಾಯಕನಾಗಿ ಓರ್ವ ಬೇಡ ಚಳಿಯಿಂದ ನಡುಗುತ್ತಿದ್ದಾನೆ. ಆತನಿಗೆ ಈಗ ಸಹಾಯ ಮಾಡದೆ ಹೋದರೆ ರಾತ್ರಿ ಬೆಳಗಾಗುವ ಹೊತ್ತಿಗೆ ಆತ ಸತ್ತರೂ ಸಾಯಬಹುದು. ಬೇಟೆಯಾಡುವುದು, ನಮ್ಮಂತಹ ಪಕ್ಷಿಗಳನ್ನು ತಿನ್ನುವುದು ಆತನ ವೃತ್ತಿ ಮತ್ತು ಪ್ರವೃತ್ತಿ ಆಗಿರಬಹುದು. ಆದರೆ ಪ್ರಾಣ ಸಂಕಟದಲ್ಲಿರುವಾತ ನಮ್ಮ ಶತ್ರುವೆ ಆಗಿದ್ದರೂ ಆತನನ್ನು ರಕ್ಷಿಸುವುದು ನಮಗೆ ಧರ್ಮವಾಗುತ್ತದೆ. ಧೈರ್ಯದಿಂದ ನೀನು ನಮ್ಮ ಗೂಡಿನಿಂದ ಹೊರಗೆ ಬಂದು ಕಡ್ಡಿ ಕೋಲುಗಳನ್ನು ಹೆಕ್ಕಿ ತಂದು ರಾಶಿ ಹಾಕಿ ಹೇಗಾದರು ಬೆಂಕಿಯ ವ್ಯವಸ್ಥೆ ಮಾಡಿ ಆತನಿಗೆ ಪ್ರಾಣಭಯ ತಂದಿತ್ತು ಬಾಧಿಸುತ್ತಿರುವ ಚಳಿಯಿಂದ ರಕ್ಷಣೆ ಒದಗಿಸು” ಎಂದು ಧರ್ಮ ಬೋಧನೆ ಮಾಡಿತು.

ಗಂಡು ಪಾರಿವಾಳವು ಧರ್ಮಾಧರ್ಮವನ್ನು ವಿವೇಚಿಸಿ, ಸ್ವತಃ ನಮಗೆ ಆಪತ್ತು ಒದಗಿದ್ದರೂ ಪ್ರಾಣ ಸಂಕಟದಲ್ಲಿರುವವರ ರಕ್ಷಣೆಗಾಗಿ ಶ್ರಮಿಸುವುದು ಶ್ರೇಷ್ಠ ಧರ್ಮ. ನನ್ನ ಪತ್ನಿಯ ಸ್ಮರಣೆಗೆ ಬಂದ ಈ ಧರ್ಮ ನನಗೆ ಹೊಳೆಯದೆ ಹೋಯಿತಲ್ಲಾ! ಎಂದು ಮರುಗಿ ಕೂಡಲೆ ಗೂಡಿನಿಂದ ಹೊರಗೆ ಹಾರಿತು. ಅವಿರತ ಶ್ರಮದಿಂದ ಕೋಲು ಕಡ್ಡಿಗಳನ್ನು, ಒಣ ತರಗೆಲೆಗಳನ್ನು ನಿರಂತರ ಕೆಲಸದಿಂದ ರಾಶಿ ಮಾಡಿತು. ಬೆಂಕಿಯ ವ್ಯವಸ್ಥೆಗಾಗಿ ಕಾಡಿನಿಂದ ಹೊರ ಹಾರಿ ಹೋಗಿ ಕಾಡಿನ ಸಂಧಿನಲ್ಲಿರುವ ಮನೆಯೊಂದರ ಹೊರಗೆ ಕೃಷಿಕನೋರ್ವ ಗದ್ದೆಕೆಲಸಕ್ಕಾಗಿ ಸುಡು ಹಾಕಿದ್ದ ಕಳೆಗಿಡಗಳ ರಾಶಿಯಿಂದ ಹೊತ್ತಿ ಕೆಂಡವಾಗಿ ಉರಿಯುತ್ತಿದ್ದ ಕೋಲಿನ ತುಂಡೊಂದನ್ನು ಜೋಪಾನವಾಗಿ ಕೊಕ್ಕಿನಲ್ಲಿ ಹಿಡಿದುಕೊಂಡು ಹಾರಿ ಬಂದು ಬೇಟೆಗಾರನ ಮುಂದೆ ತಾನು ಹಾಕಿದ್ದ ರಾಶಿಯ ಮೇಲೆ ಹಾಕಿತು. ನಂತರ ಅದರ ಮೇಲೆ ಹಾರತ್ತಾ ರೆಕ್ಕೆಗಳನ್ನು ಪಟಪಟ ಹೊಡೆಯುತ್ತಾ ಗಾಳಿ ಹಾಕಿ ಕಿಡಿ ಪ್ರಜ್ವಲಿಸಿ, ಕೆಂಡವಾಗಿ ಜ್ವಾಲೆಯಾಗಿ ಉರಿಯುವಂತೆ ಮಾಡಿತು. ಪಾರಿವಾಳದ ಈ ಎಲ್ಲಾ ಪರಿಶ್ರಮವನ್ನು ನಿಸ್ತೇಜನಾಗಿ ಮಲಗಿದ್ದಲ್ಲಿಂದಲೆ ನೋಡುತ್ತಿದ್ದ ವ್ಯಾಧನಿಗೆ ಬೆಂಕಿ ಹತ್ತಿ ಉರಿಯತೊಡಗಿದಾಗ ಹಿತವೆನಿಸಿತು. ಚಳಿಯಿಂದ ತುಸು ಸುಧಾರಿಸಿಕೊಂಡಾಗ ಆತನೂ ಅಲ್ಲಿ ಅಕ್ಕಪಕ್ಕದಲ್ಲಿ ಬಿದ್ದಿದ್ದ ಒಣ ಮರದ ಗೆಲ್ಲು, ಉರುವಲುಗಳನ್ನು ಎಳೆದು ಹಾಕಿ ಚಳಿ ನಿವಾರಿಸಿಕೊಂಡನು. ಈಗ ಶರೀರಕ್ಕೆ ಬಾಹ್ಯ ವಾತಾವರಣದಿಂದ ಉತ್ಪನ್ನವಾಗಿದ್ದ ಕೊರೆಯುವ ಚಳಿ ನಿವಾರಣೆಯಾಯಿತು. ಗಂಡು ಪಾರಿವಾಳ ಬೇಡನಿಗೆ ವಂದಿಸಿ “ಓ ಅತಿಥಿಯೆ! ನಮ್ಮ ಮನೆ ಬಾಗಿಲಿಗೆ ಬಂದ ನಿನ್ನನ್ನು ಉಪಚರಿಸುವುದು ನಮಗೆ ಧರ್ಮವಾಗಿದೆ. ಆದರೆ ನೀನು ಚಳಿಯಿಂದಾಗಿ ವಿಪರೀತ ಬಾಧಿತನಾಗಿ ಒದ್ದಾಡುತ್ತಿದ್ದೆ. ಹಾಗಾಗಿ ನಿನ್ನ ಹಿತಕ್ಕಾಗಿ ಚಳಿ ನಿವಾರಣೆಯ ವ್ಯವಸ್ಥೆ ಮಾಡಬೇಕಾಯಿತು. ಈಗ ನಿನ್ನ ಕ್ಷೇಮ ವಿಚಾರಿಸುತ್ತಿದ್ದೇನೆ, ಈಗ ತಮಗೆ ಸುಖವಾಗಿದೆಯೇ? ನಮ್ಮಿಂದ ನಿಮಗೇನಾದರು ಉಪಕಾರ್ಯವಾಗಬೇಕಿದ್ದರೆ ತಿಳಿಸಿ” ಎಂದು ವಿನಮ್ರ ವಿನಂತಿ ಮಾಡಿತು.

ಇದನ್ನು ಕೇಳಿಸಿಕೊಳ್ಳುತ್ತಿದ್ದ ಹೆಣ್ಣು ಪಾರಿವಾಳ ಬೇಡನ ಚೀಲದೊಳಗಿಂದ ಆತಿಥ್ಯ ಧರ್ಮ ಪಾಲಿಸಿದ, ಮರಣ ಭಯಕ್ಕೊಳಗಾಗಿದ್ದ ಆರ್ತನ ರಕ್ಷಣೆ ಮಾಡಿ ಧರ್ಮಾತ್ಮನಾದ ತನ್ನ ಪತಿಯನ್ನು ಅಭಿನಂದಿಸಿತು.

ಬೇಡನು ಗಂಡು ಪಾರಿವಾಳದ ವಿನಂತಿಯನ್ನು ಮನ್ನಿಸಿ “ಓ ಪಾರಿವಾಳವೇ! ನಾನೀಗ ಚಳಿಯಿಂದ ಮುಕ್ತನಾಗಿ ಹಿತವಾಗುತ್ತಿದೆ. ಆದರೆ ನನಗಾಗುತ್ತಿರುವ ಹಸಿವು ತಾಳಲಾರದ ಸ್ಥಿತಿಯಲ್ಲಿದ್ದೇನೆ. ಇಂದು ಮುಂಜಾನೆಯಿಂದ ದಿನವಿಡಿ ಕಾಡಿನಲ್ಲೆಲ್ಲಾ ಸುತ್ತಾಡಿ ಬಸವಳಿದಿದ್ದೇನೆ. ನನಗೇನು ತಿನ್ನಲು ಸಿಗದೆ ಸೋತು ಹೋಗಿದ್ದೇನೆ. ಈ ಸಮಯ ಏನಾದರು ಆಹಾರ ಸಿಕ್ಕಿದರೆ ಮಹದುಪಕಾರವಾಗುತ್ತಿತ್ತು.” ಎಂದನು.

ಆಗ ಗಂಡು ಪಾರಿವಾಳ ತನ್ನ ಪತ್ನಿಯನ್ನು ಕರೆದು ” ನಾನು ತಿರುಗಾಡಿ ತಂದಿದ್ದ ತುಸು ಆಹಾರವನ್ನು ಈಗಾಗಲೆ ಮರಿಗಳಿಗೆ ತಿನ್ನಿಸಿರುವೆ. ಅದು ಇದ್ದರೂ ಅತಿಥಿಗೆ ಏನೇನೂ ಸಾಲದಾಗುತ್ತಿತ್ತು. ಹಾಗೆಂದು ಮನುಷ್ಯರಾದ ಅವರ ಆಹಾರ ಕ್ರಮವೆ ಬೇರೆ. ಪಕ್ಷಿಗಳಾದ ನಮ್ಮನ್ನು ಹಿಡಿದು ಬೇಯಿಸಿ ಆಹಾರವಾಗಿ ತಿನ್ನುವವರು ಅವರು. ಆತನ ಸೇವೆಗಾಗಿ ನಾನು ಉರಿಯುತ್ತಿರುವ ಬೆಂಕಿಗೆ ಹಾರುತ್ತೇನೆ. ಬೆಂದ ನನ್ನ ಶರೀರವನ್ನು ತಿಂದು ಬೇಡನು ಉದರಾಗ್ನಿಯನ್ನು ತಣಿಸಿಕೊಳ್ಳಲಿ. ನೀನಗೇನಾದರು ಬದುಕುಳಿಯುವ ಭಾಗ್ಯ ಭಗವಂತ ಕರುಣಿಸಿದರೆ ಮರಿಗಳನ್ನು ಪ್ರೀತಿಯಿಂದ ಸಾಕುವ ಜವಾಬ್ದಾರಿ ವಹಿಸಬೇಕು.” ಎಂದು ಹೇಳಿತು.

ಇದನ್ನು ಕೇಳಿಸಿಕೊಂಡ ಹೆಣ್ಣು ಪಾರಿವಾಳ ಗಂಡನ ತ್ಯಾಗ ಮನೋಭಾವ ಮತ್ತು ಧರ್ಮ ಮಾರ್ಗವನ್ನು ಮೆಚ್ಚಿಕೊಂಡು “ಅದೇನಾಗುತ್ತದೋ ಆಗಲಿ. ಭಗವಂತನ ಇಚ್ಚೆಯಂತೆಯೆ ಆಗಲಿದೆ. ನೀನು ನಿಶ್ಚಿಂತೆಯಿಂದ ಧರ್ಮ ಮಾರ್ಗದಲ್ಲಿ ಮುಂದುವರಿದು ಹಸಿವೆಯಿಂದ ಸಾಯಲಿರುವ ಈ ಬೇಡನ ಪ್ರಾಣ ರಕ್ಷೆ ಮಾಡುವ ಧರ್ಮಕಾರ್ಯ ನಿರತನಾಗು. ಈ ಸತ್ಕಾರ್ಯಕ್ಕಾಗಿ ಪ್ರಾಣ ತೆತ್ತರೆ ನಮ್ಮ ಮರಿಗಳಿಗಾದರೂ ಒಳಿತಾದೀತು” ಎಂದು ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಇಳಿಸುತ್ತಾ ಬೇಡನ ಚೀಲದೊಳಗಿಂದ ಹೇಳಿತು.

ಗಂಡು ಪಾರಿವಾಳ ಪುರ್ರನೆ ಮರದ ಮೇಲೊಮ್ಮೆ ಹಾರಿ ಮಲಗಿ ನಿದ್ರಿಸುತ್ತಿದ್ದ ಎಳೆ ಮರಿಗಳನ್ನು ಕಣ್ತುಂಬ ನೋಡಿ, “ಭಗವಂತಾ, ನನ್ನ ಮರಿಗಳನ್ನೂ ಪತ್ನಿಯನ್ನೂ ನೀನೇ ಕಾಪಾಡಬೇಕು” ಎಂದು ಪ್ರಾರ್ಥಿಸಿ ಮರದಿಂದ ಕೆಳಗೆ ಹಾರಿ ಬಂತು.

“ಪ್ರಿಯ ಅತಿಥಿಯೇ! ಇದೋ ನಾನೀಗ ಬೆಂಕಿಗೆ ಹಾರುತ್ತೇನೆ. ಬೆಂದ ಶರೀರವನ್ನು ಕೂಡಲೆ ತೆಗೆದು ನೀನು ತಿಂದು ಬಿಡು. ಇಲ್ಲವಾದರೆ ಸುಟ್ಟು ಬೂದಿಯಾದರೆ ವ್ಯರ್ಥವಾದೀತು. ನೀನು ಊಟಕ್ಕೆ ಸಿದ್ಧನಾದರೆ ನಾನು ಉರಿಯುತ್ತಿರುವ ಬೆಂಕಿಗೆ ಹಾರುತ್ತೇನೆ” ಎಂದು ಅನುಮತಿ ಕೇಳಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page