ಭಾಗ 441
ಭರತೇಶ್ ಶೆಟ್ಟಿ , ಎಕ್ಕಾರ್

ಶಂಖನಾದದ ಭಯಂಕರ ನಿನಾದಕ್ಕೂ ಅಳುಕದೆ ನೀರೊಳಗೆ ದುರ್ಯೋಧನ ಅಡಗಿ ಕುಳಿತಿದ್ದಾನೆ. ಆಗ ಧರ್ಮರಾಯ “ಹೇ ದುರ್ಯೋಧನಾ! ಏನಿದು ನಿನ್ನ ಅವಸ್ಥೆ? ಯುದ್ಧಾಹ್ವಾನವನ್ನು ಕೇಳಿ ಕ್ಷತ್ರಿಯನಾದ ಯಾವನಾದರೂ ಒಂದೋ ಸ್ವೀಕರಿಸಿ ಕಾಳಗಕ್ಕೆ ಸನ್ನದ್ಧನಾಗುತ್ತಾನೆ. ಅದು ಅಸಾಧ್ಯವಾಗಿದ್ದರೆ ಸಂಧಾನಕ್ಕಾದರೂ ಮುಂದೆ ಬರುತ್ತಾನೆ. ಆದರೆ ಕ್ಷತ್ರಿಯೋಚಿತ ಧರ್ಮವನ್ನು ಮರೆತು ಹೇಡಿಯಾಗಿ ನೀರೊಳಗೆ ಅಡಗಿ ಕುಳಿತು ನೀನು ಜನಿಸಿದ ಚಂದ್ರವಂಶಕ್ಕೆ ಅಪಮಾನ ಮಾಡುತ್ತಾ, ಕಳಂಕ ಹಚ್ಚುತ್ತಿರುವೆಯಲ್ಲಾ? ಹಾಗೆ ಮಾಡದಿರು, ಬಾ ಮೇಲೆ ಬಂದು ಯುದ್ದ ಮಾಡು ಇಲ್ಲವಾದರೆ ಶರಣಾಗತಿಗಾದರೂ ಸಿದ್ಧನಾಗು. ಈ ತನಕ ನೀನು ಮೈಗೂಡಿಸಿಕೊಂಡು ಬೆಳೆಸಿರುವ ನಿನ್ನ ಕ್ರೋಧ, ಹಠ, ಅಭಿಮಾನ, ಛಲ ಈಗ ಎಲ್ಲಿ ನಾಶವಾಗಿ ಹೋಯಿತು? ಇದೋ ಧರ್ಮರಾಯನಾದ ನಾನು ನಿನಗೆ ಸವಾಲೊಡ್ಡುತ್ತಿದ್ದೇನೆ, ನೀನು ವೀರ ಪುರುಷ ಹೌದಾದರೆ, ಪುರುಷತ್ವ – ಪೌರುಷದ ಲವಲೇಷವಾದರು ನಿನ್ನಲ್ಲಿ ಉಳಿದಿದ್ದರೆ ಹೊರಬಂದು ಯುದ್ದ ಮಾಡು. ಹೇಡಿಯಾಗಿ ಅವಿತು ಕೊಳ್ಳುವುದು ನಿನಗೆ ಶೋಭೆಯಲ್ಲ” ಎಂದು ಪ್ರಚೋದನಾತ್ಮಕವಾಗಿ ಕರೆದನು. ಆದರೆ ಕೌರವ ಸ್ಪಂದಿಸಲಿಲ್ಲ.
ಆಗ ಶ್ರೀಕೃಷ್ಣ ಮುಂದೆ ಬಂದು “ಹೇ ದುರ್ಯೋಧನಾ! ನೀನು ಛಲದಂಕಮಲ್ಲನೆಂದು ಹೇಳಿಸಿಕೊಂಡವನು. ಪಾಂಡವರಿಗೆ ಗೋವಿನ ಪಾದ ಊರುವಷ್ಟೂ ಭೂಮಿ ನೀಡಲಾರೆ ಎಂದು ಘೋಷಿಸಿದವನಲ್ಲವೆ? ಹಸ್ತಿನೆಯ ಸಾಮ್ರಾಜ್ಯವನ್ನು ಪಾಂಡವರಿಗೆ ಕೊಡದೆ ನೀರೊಳಗೆ ನಿನ್ನೊಡನೆ ಒಯ್ದಿರುವೆಯಾ? ಛೇ! ನಿನಗೆಂತಹ ದುಸ್ಥಿತಿ ಬಂತು! ಗಂಡುಗಲಿಯಾಗಿ ಮೆರೆಯುತ್ತಿದ್ದ ನಿನ್ನ ಗಂಡಸುತನವನ್ನು ನೀರಿನಲ್ಲಿ ಅದ್ದಿ ತೊಳೆದು ಬಿಟ್ಟೆಯಾ? ಅಂತಹ ಸ್ವಾಭಿಮಾನ ನಿನ್ನಲ್ಲಿ ಇರುತ್ತಿದ್ದರೆ ಈ ರೀತಿ ನಾಚಿಗೇಡಿತನ ತೋರುತ್ತಾ ಅಂಜುಬುರುಕನಾಗಿ ತಲೆಮರೆಸುವ ಮನ ಮಾಡುತ್ತಿರಲಿಲ್ಲ. ಬಾ ಮೇಲೆ ಬಂದು ನಿನ್ನ ಪೌರುಷ ತೋರಿಸು” ಎಂದು ಮೂದಲಿಸಿ ಕರೆದರೂ, ಕೌರವ ಮಿಸುಗಾಡಲಿಲ್ಲ.
ಆಗ ಅರ್ಜುನ “ಹೇ ದುರ್ಯೋಧನಾ! ಅತಿ ಕನಿಷ್ಟ ಅಪಮಾನವನ್ನೂ ಸಹಿಸಲಾಗದೆ ಚಡಪಡಿಸುತ್ತಿದ್ದವ ನೀನು. ನಿನ್ನ ಬುದ್ದಿಗಿಂತ ಮೊದಲು ಕ್ರೋಧ ಮುಂದೊತ್ತಿ ಬರುತ್ತಿತ್ತು. ಈಗ ಅಂತಹ ನಿನ್ನ ಕೋಪಾಗ್ನಿ ಸರೋವರದ ನೀರಲ್ಲಿ ನಂದಿ ಹೋಯಿತೆ? ಕ್ಷತ್ರಿಯನಾದವ ಹೋರಾಡಿ ಗೆದ್ದರೂ ಅಥವಾ ರಣಕ್ಷೇತ್ರದಲ್ಲಿ ವೀರಾವೇಶದಿಂದ ಕಾದಿ ಮಡಿದರೂ ಆ ಎರಡು ಸ್ಥಿತಿಯೂ ಕೀರ್ತಿಪ್ರದ ಆಗಬಲ್ಲುದು. ಆದರೆ ನೀನು ರಣ ಹೇಡಿಯಾಗಿ, ಅಂಜುಬುರಕತನ ತೋರುತ್ತಿರುವುದು ನಿನಗೆ ಮಾತ್ರವಲ್ಲ ಈ ವಂಶದ ಹಿರಿಯ ಚೇತನಗಳಿಗೂ ಅಪಕೀರ್ತಿಯ ಕಳಂಕ ಮೆತ್ತುತ್ತಿದೆ. ನಿನ್ನಲ್ಲಿ ಕಿಂಚಿತ್ತಾದರೂ ಕ್ಷಾತ್ರ ಗುಣವಿದ್ದರೆ ಈ ಅಪಮಾನವನ್ನು ನೀನು ಸಹಿಸಲಾರೆ. ಈಗಲೆ ಎದ್ದು ಹೊರಬಂದು ಹೋರಾಟಕ್ಕೆ ಮನ ಮಾಡಿ ನಿನ್ನ ಖ್ಯಾತಿಯನ್ನಾದರೂ ಉಳಿಸಿಕೋ. ಹಾಗೆ ಮಾಡದೆ ಹೋದರೆ ನಿನ್ನ ಯೋಗ್ಯತೆಗೆ ಮಹಾ ಅಪಮಾನವಾದೀತು. ಅಡಗಿದ್ದರೂ ನಿನ್ನನ್ನು ಹೊರಗೆಳೆಯಬಲ್ಲ ಸಾಮರ್ಥ್ಯ ನನಗಿದೆ, ಹಾಗಾಗಲು ಅವಕಾಶ ನೀಡದಿರು” ಎಂದು ಭಂಗಿಸಿ ನಿಂದಿಸಿದರೂ, ದುರ್ಯೋಧನ ಸುಮ್ಮನೆ ಉಳಿದುಬಿಟ್ಟನು.
ನಕುಲ – ಸಹದೇವರೂ “ಹೇ ಕೌರವಾ! ಅಹಂಕಾರದ ಪರಮಾವಧಿ ಎಂಬಷ್ಟರ ಮಟ್ಟಿನ ದರ್ಪ ತೋರುತ್ತಿದ್ದ ನೀನು ಇಂದೇಕೆ ನಿನ್ನತನವನ್ನು ಬಲಿಕೊಟ್ಟು ಹೇಡಿಯಾದೆ. ಬದುಕಬೇಕು ಎಂಬ ಆಸೆಯಿದ್ದರೆ, ಧೈರ್ಯದಿಂದ ಮೇಲೆ ಬಾ. ನಿನಗೆ ನಾವೇನೂ ಮಾಡುವುದಿಲ್ಲ, ಅಣ್ಣ ಧರ್ಮರಾಯ ಖಂಡಿತಾ ನಿನಗೆ ಪ್ರಾಣ ಭಿಕ್ಷೆ ನೀಡುತ್ತಾನೆ. ಎಲ್ಲಾದರು ಹೋಗಿ ಅಣ್ಣ ಧರ್ಮಜನ ಹೆಸರು ಹೇಳುತ್ತಾ ಬದುಕಿಕೋ” ಎಂದು ನಿಕೃಷ್ಟವಾಗಿ ಅಪಮಾನಿಸಿದರು. ಆದರೂ ದುರ್ಯೋಧನ ಸಹಿಸಿಕೊಂಡು ಕುಳಿತು ಕೊಂಡನು ಹೊರತು ಉತ್ತರವನ್ನು ನೀಡಲಿಲ್ಲ. ಏಕಾಗ್ರತೆಯಿಂದ ಜಲಸ್ಥಂಭನ ಮಂತ್ರವನ್ನುಚ್ಚರಿಸುತ್ತಾ ಮುಳುಗಿ ಅಡಗಿ ಕುಳಿತಿದ್ದಾನೆ.
ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದ ಧರ್ಮರಾಯ ಭೀಮನತ್ತ ತಿರುಗಿದನು. ಭೀಮ ಪ್ರಾರಂಭದಿಂದಲೆ ಅಬ್ಬರಿಸುತ್ತಾ ಬಂದಾಗ ಧರ್ಮಜ ತಡೆದು ನಿಲ್ಲಿಸಿದ ಕಾರಣದಿಂದ ತುಸು ಉತ್ಸಾಹಹೀನನಾಗಿ ಹಿಂದೆ ನಿಂತಿದ್ದನು. ಈಗ ಅಣ್ಣನೇ ಕರೆದಾಗ ಮುಂದೆ ಬಂದನು. ಯುಧಿಷ್ಟಿರ ಹೇಳತೊಡಗಿದ “ಸೋದರ ಭೀಮಸೇನಾ! ಈ ಕೌರವ ಮಾನ ಮರ್ಯಾದೆಯನ್ನೂ ನೀರಿನಲ್ಲಿ ಹರಿಯಬಿಟ್ಟಿದ್ದಾನೆ. ನಾವು ಆತನನ್ನು ಯುದ್ದಕ್ಕೆ ಆಹ್ವಾನಿಸಿದರೂ, ಆತನ ರೋಷ ಕೆರಳುತ್ತಿಲ್ಲ. ಪುಕ್ಕಲನಂತೆ ಅವಿತು ಕುಳಿತಿರುವ ಆತ, ನೀನು ಕರೆದರೆ ಸಹಿಸಿಕೊಳ್ಳಲಾರನು. ಆತನ ಮನ ಮುಟ್ಟುವ ರೀತಿ ನಿನ್ನ ಕ್ರಮದಲ್ಲಿ ಆತನನ್ನು ಎಬ್ಬಿಸುವ ಯತ್ನ ಮಾಡು. ಹಾಗೂ ಬರದಿದ್ದರೆ ಮತ್ತೆ ಅನ್ಯ ಮಾರ್ಗ ಯೋಚಿಸೋಣ” ಎಂದನು.
ಭೀಮನಿಗೆ ಈಗ ಅದುಮಿಟ್ಟ ಚಿಲುಮೆಯನ್ನು ಒಮ್ಮೆಲೆ ತೆರೆದು ಬಿಟ್ಟಂತಾಯಿತು. ಚಿಮ್ಮಿ ನೆಗೆದು ಹಾರಿ ಮುಂದೆ ಬಂದನು. ಸರ ಸರನೆ ಹರಿತವಾದ ಅಲಗುಗಳುಲ್ಲ ದಿವ್ಯ ರುಧಿರಮುಖಿ ಗದೆಯನ್ನು ತಿರುವುತ್ತಾ ತನ್ನೊಳಗೆ ಅದುಮಿಟ್ಟ ಆಕ್ರೋಶ ಪ್ರಕಟಿಸತೊಡಗಿದನು. “ಎಲವೋ ಕುರುಕುಲ ಕುನ್ನಿ, ಜೀವಗಳ್ಳ! ನಾಚಿಗೆ ಬಿಟ್ಟವನೆ, ಮಾನ ಮರ್ಯಾದೆ ಇಲ್ಲದವನೆ ಮೇಲೆ ಬಾರೋ ಹೇಡಿ. ಗುರು, ಹಿರಿಯರನ್ನೆಲ್ಲ ಬಲಿಗೊಟ್ಟು ಈಗ ನಿನ್ನ ನೀಚ ಪ್ರಾಣದ ಮೇಲೆ ಆಸೆ ಹುಟ್ಟಿದೆಯಾ ನಿನಗೆ? ಹೇ ಕಪಟಿ, ಇದೋ ಇಲ್ಲಿ ಕೇಳು, ಮರ್ಯಾದೆಯಿಂದ ಮೇಲೆ ಬಾ, ಮತ್ತೆ ಬೇಕಿದ್ದರೆ ದ್ಯೂತ ಆಡೋಣ. ಆದರೆ ಈಗ ನಿನ್ನ ಪರವಾಗಿ ಆಡಲು ಶಕುನಿ ಮಾಮ ಇಲ್ಲ, ಆ ಕುತಂತ್ರಿ ಹೆಣವಾಗಿ ಮಲಗಿಯಾಗಿದೆ. ದ್ರೌಪದಿಯ ಸೀರೆಯ ಸೆರಗಿಗೆ ಕೈಯಿಕ್ಕಲು ಮತಿಗೆಟ್ಟ ನಿನ್ನ ತಮ್ಮ ದುಶ್ಯಾಸನನೂ ಉಳಿದಿಲ್ಲ. ಆ ಮಹಾದುರುಳನ ಕರುಳು ಬಗೆದು, ಎದೆ ಸೀಳಿ ನಾನು ಬೊಗಸೆ ರಕ್ತ ಹೀರಿದ್ದೇನೆ. ಚಪ್ಪಾಳೆ ತಟ್ಟಿ, ದುರ್ವಚನವಾಡಿದ್ದ ನಿನ್ನ ಪಾಪಿ ಮಿತ್ರ ಕರ್ಣನೂ ರುಂಡ ಮುಂಡ ಛೇದಿಸಲ್ಪಟ್ಟು ಬಿದ್ದಿದ್ದಾನೆ. ನಿನ್ನ ತೊಂಬತ್ತೆಂಟು ತಮ್ಮಂದಿರನ್ನೂ ಹೊಡೆದು ಹೊಸಕಿ ಕೊಂದೆಸೆದಿದ್ದೇನೆ. ನೀನೊಬ್ಬ ಮಾತ್ರ ಈಗ ಬಾಕಿ ಉಳಿದಿರುವುದು. ಬಾ ಪಾತಕಿ ಮೇಲೆ ಬಾ! ಬಂದು ಏನಾದರು ಕುತಂತ್ರ ಮಾಡಿ ಮತ್ತೆ ಪಾಂಡವರನ್ನು ಕಾಡಿಗೆ ಅಟ್ಟಿಬಿಡು. ಅಥವಾ ಅರಗಿನ ಮನೆಯಲ್ಲಾದರೂ ಸುಟ್ಟು ಹಾಕುವ ಪ್ರಯತ್ನ ಮಾಡು. ಹಸಿವಾಗಿದೆ ನನಗೆ ಎಲ್ಲಿದೆ ನಿನ್ನ ವಿಷದ ಲಡ್ಡುಗೆ ಕೊಡು ಬೇಗ. ಯಾಕೆಂದರೆ ವೀರನಂತೆ ಹೋರಾಡಿ ಗೆಲ್ಲುವ ಯೋಗ್ಯತೆ ನಿನ್ನ ಜೀವಮಾನದಲ್ಲಿ ಇರಲಿಲ್ಲ, ಈಗ ಬರಲು ಹೇಗೆ ಸಾಧ್ಯ? ಬಾರೋ ನಿನ್ನಲ್ಲೇನೂ ಕ್ರೋಧ, ರೋಷ, ಹಠ ಈಗ ಉಳಿದಿಲ್ಲವೊ? ಏ ದುಷ್ಟನೇ! ನೀನು ಪುರುಷ ಜಾತಿಗೆ ಕಳಂಕ. ಎದ್ದು ನಿಲ್ಲಲಾಗದ ಒಬ್ಬ ಸೈನಿಕನಾದರೂ, ಈ ರೀತಿ ಅಪಮಾನ ಸಹಿಸಲಾಗದೆ, ಬಿದ್ದಲ್ಲಿಂದಲೆ ಕೈಗೆ ಸಿಕ್ಕಿದ್ದನ್ನು ಎಸೆಯುವ ಯತ್ನವಾದರೂ ಮಾಡುತ್ತಿದ್ದನು. ನೀನು ಅದಕ್ಕಿಂತಲೂ ಹೀನನಾಗಿ ಹೋಗಿರುವೆ. ಇಂತಹ ನಿಂದನೆಯನ್ನೂ ಸಹಿಸಿ ಅಡಗಿ ಕುಳಿತಿರುವೆಯಲ್ಲಾ!? ಛೀ.. ತೂ.. ನಿನ್ನ ಹೊತ್ತ ವೀರಮಾತೆಯ ಪುಣ್ಯಗರ್ಭಕ್ಕೂ ಕಳಂಕ ತಂದು ಬಿಟ್ಟೆ. ಇದೋ ನೋಡು, ನನ್ನ ಉತ್ತರೀಯವನ್ನು ನೀರಿಗೆಸೆಯುತ್ತೇನೆ. ನಿನ್ನ ನೀಚ ಕೃತ್ಯಗಳನ್ನು ನೆನೆದು ಈಗ ಮುಖ ತೋರಿಸಲು ನಾಚಿಕೆಯಾಗುತ್ತಿದೆಯಾದರೆ, ಅದನ್ನು ಸೆರಗಿನಂತೆ ಮುಚ್ಚಿಕೊಂಡು ಮೇಲೆ ಬಂದು, ಆಚೆ ದಡದಿಂದ ಓಡಿ ಹೋಗು.”
“ನಿನಗೆ ಕ್ಷಾತ್ರ ಧರ್ಮ ಅನ್ವಯವಾಗದಿದ್ದರೂ ನಮಗೆ ಅದರ ಪಾಲನೆ ಯುಕ್ತಧರ್ಮವಾಗಿ ಉಳಿದಿದೆ. ನೀರನ್ನು ಹೊಕ್ಕವನನ್ನು, ಬಿದ್ದು ಮಣ್ಣು, ಹುಲ್ಲು ಕಚ್ಚಿದವನನ್ನು, ಹುತ್ತವನ್ನಡರಿ ಕುಳಿತವವನನ್ನು, ಎರಡೂ ಕೈಗಳನ್ನೆತ್ತಿ ಶರಣಾದವನನ್ನು ಕೊಲ್ಲ ಬಾರದು ಎಂಬ ಶಾಸ್ತ್ರವಿದೆ. ಇದೆಲ್ಲವನ್ನು ತಿಳಿದ ನಾನು ಹೇಳುತ್ತಿದ್ದೇನೆ ಕೇಳಿಸಿಕೋ, ನಿನ್ನಂತಹ ನೀಚ, ಅಧಮ, ಪಾಪಿ, ಪಾತಕಿಯನ್ನು ವಧಿಸಲು ಯಾವ ರಣ ನಿಯಮವಾಗಲಿ, ನಯನೀತಿಯಾಗಲಿ, ಶಾಸ್ತ್ರವಾಗಲಿ, ಧರ್ಮವಾಗಲಿ ನನಗೆ ಅಡ್ಡಿಯಾಗದು. ನಿನ್ನಂತಹ ದುಷ್ಟನ ಸಂಹಾರ ಲೋಕಕ್ಕೆ ಶ್ರೇಯಸ್ಕರವಾದುದು ಎಂದು ತಿಳಿದಿದ್ದೇನೆ. ಒಳ್ಳೆಯ ಮಾತಿನಲ್ಲಿ ಕರೆಯುತ್ತಿದ್ದೇನೆ ಮೇಲೆ ಬಾ. ಈಗಲೆ ನನ್ನ ಕ್ರೋಧಾಗ್ನಿ ಮಿತಿ ಮೀರಿ ಸುಡುತ್ತಿದೆ. ಆ ರೋಷಾಗ್ನಿಯಿಂದ ಈ ಸರೋವರದ ಜಲರಾಶಿಯನ್ನು ಬತ್ತಿಸಿ ನಿನ್ನನ್ನು ಅನಾವರಣಗೊಳಿಸಿ ನನ್ನ ರುಧಿರಮುಖಿ ಗದೆಗೆ ಆಹುತಿ ನೀಡುತ್ತೇನೆ. ಅಷ್ಟೂ ತಾಳ್ಮೆ ನನಗಿಲ್ಲ, ನಾನೇ ನೀರಿಗೆ ಹಾರಿ ನಿನ್ನನ್ನು ಹುಡುಕಿ ನಿನ್ನ ಜುಟ್ಟನ್ನು ಹಿಡಿದು, ಅಲ್ಲೇ ತಳದ ಕೆಸರಿಗೊತ್ತಿ ಉಸಿರುಗಟ್ಟಿಸಿ ಸಾಯಿಸಿ ಬಿಡುತ್ತೇನೆ. ನಿನ್ನಲ್ಲೇನಾದರೂ ಕಿಂಚಿತ್ ರೋಷವಿದ್ದರೂ ಈಗಲೆ ಹೊರಗೆ ಬಾ, ನಿನ್ನ ಸೊಂಟ ಮುರಿದು ಕೆಡಹಾಕಿ ಎಡಗಾಲಿನಿಂದ ಒದ್ದು ಕೊಂದು ಹಾಕಲು ಕಾಯುತ್ತಿದ್ದೇನೆ… ಬಾ… ಬಾ….. ಹೇ ಅಂಜುಬುರುಕ ಬಾರೋ ಮೇಲೆ…..” ಎಂದು ಘರ್ಜಿಸುತ್ತಾ ಕರೆದನು.
ಮುಂದುವರಿಯುವುದು…



