ಭಾಗ – 440
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೪೦ ಮಹಾಭಾರತ
“ಯುದ್ದ ಮಾಡಲಿಕ್ಕಿದೆ. ಇನ್ನೂ ಪೂರ್ಣವಾಗಿಲ್ಲ. ಜಯಾಪಜಯ ನಿರ್ಣಯವಾಗಿಲ್ಲ. ಈ ತನಕ ನಾನು ನಮ್ಮವರಾದ ಭೀಷ್ಮ, ದ್ರೋಣ, ಕರ್ಣ, ಶಲ್ಯರ ಮೇಲೆ ವಿಶ್ವಾಸವಿರಿಸಿ ಏನೂ ಸಾಧಿಸಲಾಗಲಿಲ್ಲ. ಸ್ವಯಂ ನಾನು ಈಗ ಯೋಚಿಸಿ ಕಾರ್ಯ ಪ್ರವೃತ್ತನಾಗಬೇಕಾಗಿದೆ. ನಾಳೆಯ ಸೂರ್ಯೋದಯಕ್ಕೆ ಯುದ್ದ ಸನ್ನದ್ಧನಾಗಿ ಬರುವೆ. ಈಗ ನೀವೇನು ಹೇಳಿದರೂ ಹೊರ ಬರಲಾರೆ. ” ಎಂದನು.
ಅಶ್ವತ್ಥಾಮನಿಗೆ ಕೌರವನ ಮಾತು ಸಹ್ಯವಾಗಲಿಲ್ಲ. “ಹೇ ಸುಯೋಧನಾ! ಲೋಕದಲ್ಲಿ ಕೆಲವರಿಗೆ ಅವರ ದೋಷವನ್ನು ನೇರವಾಗಿ ಅವರಲ್ಲಿ ಹೇಳಿದರೆ ಒಪ್ಪಿ, ತಿದ್ದಿಕೊಳ್ಳುವ ಬುದ್ದಿ ಇರುವುದಿಲ್ಲ. ಬದಲಾಗಿ ಹೇಳಿದವರು ಅಪರಾಧಿಗಳಾಗುತ್ತಾರೆ ಈಗ ನೀನು ಅದೇ ಸಾಲಿನಲ್ಲಿ ನಿಲ್ಲುತ್ತಿರುವೆ. ಪಿತಾಮಹ ಭೀಷ್ಮರು, ನನ್ನ ಪಿತಾಶ್ರೀ ದ್ರೋಣಾಚಾರ್ಯರು ಯೋಗ್ಯವಾದುದನ್ನು ನಿನಗೆ ಹೇಳಿದ್ದರು. ಅವರು ನಿನಗೆ ಇಷ್ಟವಾಗದ್ದನ್ನು ಹೇಳಿದ ಮಾತ್ರಕ್ಕೆ ದ್ರೋಹ ಎಸಗಿದವರಲ್ಲ. ನಿನಗಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ. ಮತ್ತೆ ಕರ್ಣ ಹಾಗು ಶಲ್ಯ ಭೂಪತಿಯೂ ರಣಕ್ಷೇತ್ರದಲ್ಲಿ ನಿನ್ನ ಪರವಾಗಿ ನಿಂತು ಮರಣವನ್ನಪ್ಪಿದ್ದಾರೆ. ನಿನಗೆ ಸತ್ಯವಾದುದನ್ನು ಮತ್ತು ನ್ಯಾಯವಾದುದನ್ನು ಹೇಳಿದರೆ, ಅಂತಹವರು ದೋಷಿಗಳಾಗಿ ಕಾಣುತ್ತಾರೆ. ಈಗ ವಿವಾದ ಮಾಡುವ ಸಮಯವಲ್ಲ. ನಿನಗಾಗಿ ನಾವಿನ್ನೂ ಜೊತೆಯಾಗಿ ಇದ್ದೇವೆ. ವೀರೋಚಿತವಾಗಿ ಯುದ್ದ ಮಾಡೋಣ. ಛಲದಂಕಮಲ್ಲನೆಂದು ಖ್ಯಾತನಾಮನಾದ ನೀನು ಅದೇ ನಿಲುಮೆಗೆ ಬದ್ಧನಾಗಿರು. ಜಯಾಪಜಯಗಳನ್ನು ಕಾಲ ನಿರ್ಣಯಿಸಲಿ” ಎಂದು ತೀಕ್ಷ್ಣವಾಗಿ ಉತ್ತರಿಸಿದನು.
ಆಗ ದುರ್ಯೋಧನನು “ಅಯ್ಯಾ ಗುರುಪುತ್ರನೇ! ನೀವು ನನ್ನ ನಿಷ್ಟಾವಂತ ಶ್ರೇಯೋಭಿಲಾಷಿಗಳು ಎಂದು ನನಗೆ ತಿಳಿದಿದೆ. ಈ ಸ್ಥಿತಿಯಲ್ಲೂ ನನ್ನ ಜೊತೆಗಾರರಾಗಿ ಇದ್ದೀರಿ ಎಂಬುವುದು ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ನನಗಾಗಿ ಸುದೀರ್ಘ ಯುದ್ಧದಲ್ಲಿ ತೊಡಗಿ ನೀವು ಕೂಡ ಬಳಲಿದವರಾಗಿರುವಿರಿ. ನಿಮಗೂ ವಿಶ್ರಾಂತಿಯ ಅಗತ್ಯವಿದೆ. ಎಲ್ಲಾದರೂ ಹೋಗಿ ವಿಶ್ರಾಂತರಾಗಿರಿ. ನನಗೂ ಈಗ ವಿರಾಮ ಬೇಕಾಗಿದೆ. ನಾಳೆಯ ಸೂರ್ಯೋದಯದವರೆಗೆ ವಿರಮಿಸಿ ಬೇಕಾದ ಸನ್ನದ್ದತೆಯೊಂದಿಗೆ ಮತ್ತೆ ನಾನೂ ಯುದ್ದದಲ್ಲಿ ತೊಡಗಿಕೊಳ್ಳುವೆ. ನಾನು ವಿಮುಖನಾಗಿ, ಅಥವಾ ಹೆದರಿ ಹೀಗೆ ಕುಳಿತಿಲ್ಲ. ನೀವು ನನಗೆ ಸಹಕರಿಸುವವರು ಹೌದಾದರೆ ಈಗಲೆ ಇಲ್ಲಿಂದ ಹೊರಟು ಹೋಗಿ. ನಾಳಿನ ಸೂರ್ಯೋದಯಕ್ಕೆ ರಣಕ್ಷೇತ್ರದಲ್ಲಿ ಪೂರ್ಣಬಲರಾಗಿ ಜೊತೆಯಾಗೋಣ, ಅಷ್ಟರೊಳಗೆ ಬೇಕಾದ ಸಿದ್ದತೆ ಮಾಡಿಕೊಳ್ಳಬೇಕಾಗಿದೆ” ಎಂದನು.
ಹೀಗೆ ದುರ್ಯೋಧನನೊಡನೆ ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮಾದಿಗಳು ಸಮಾಲೋಚನೆ ಮಾಡುವುದನ್ನು ಕೆಲವು ಕಿರಾತರು ನೋಡುತ್ತಿದ್ದಾರೆ. ಸರೋವರದ ಜೊತೆ ಇವರು ಮಾತನಾಡಲು ಸಾಧ್ಯವೇ? ಇವರಿಗೆ ಪ್ರತ್ಯುತ್ತರ ನೀಡುತ್ತಿರುವುದಾದರು ಯಾರು? ಎಂಬಂತೆ ಗೊಂದಲಕ್ಕೊಳಗಾಗಿ ತದೇಕ ಚಿತ್ತದಿಂದ ಗಮನಿಸುತ್ತಿದ್ದಾರೆ.
ದುರ್ಯೋಧನ ಆದೇಶ ರೂಪದಲ್ಲಿ ನೀವು ಹೋಗಿ ಎಂದು ಹೇಳಿದಾಕ್ಷಣ ಮತ್ತೇನೂ ಮಾಡಲಾಗದೆ ಅಶ್ವತ್ಥಾಮ, ಕೃಪ, ಕೃತವರ್ಮರು ಅಲ್ಲಿಂದ ಹೊರಟು ಹೋದರು.
ಇತ್ತ ಕುರುಕ್ಷೇತ್ರದಲ್ಲಿ ಧರ್ಮಯುದ್ಧ ಎಂಬ ಮಹಾಯಜ್ಞ ದೀಕ್ಷಿತರಂತೆ ಪಾಂಡವರು ಯಾಗ ಸಮಾಪ್ತಿಗಾಗಿ ಪೂರ್ಣಾಹುತಿ ಸಮರ್ಪಿಸಬೇಕಾದರೆ ದುರ್ಯೋಧನನ ವಧೆಯಾಗಬೇಕು. ಅಂತಹ ಕೌರವನು ಕಾಣದಾದುದನ್ನು ಗಮನಿಸಿ ಹುಡುಕತೊಡಗಿದರು. ತಾನೊರೆದಿರುವ ಪ್ರತಿಜ್ಞೆಯ ಪೂರಣೆಗಾಗಿ ಕೌರವನ ಉರುಭಂಗಗೊಳಿಸಿ, ಕೆಡಹಾಕಿ ಸಂಹರಿಸಬೇಕಾದ ಬಾಧ್ಯತೆ ಭೀಮನಿಗಿದೆ. ಘರ್ಜಿಸುತ್ತಾ ಸಿಂಹನಾದ ಗೈಯುತ್ತಾ “ಎಲ್ಲಿ ಆ ದುರ್ಯೋಧನಾ? ” ಎಂದು ಅಬ್ಬರಿಸಿತ್ತಾ ಹುಡುಕಾಡುತ್ತಿದ್ದಾನೆ. ತನ್ನವರಾದ ಗುಪ್ತಚರರನ್ನು, ದೂತರನ್ನು ಭೀಮ ಎಲ್ಲೆಡೆ ಅಟ್ಟಿ ಕೌರವನ ಇರವನ್ನು ತಿಳಿದು ಬರುವಂತೆ ಆಜ್ಞಾಪಿಸಿ ಕಳುಹಿಸಿದ್ದಾನೆ. ಧರ್ಮರಾಯ ಶ್ರೀಕೃಷ್ಣನನ್ನು ಸಂಧಿಸಿ “ಹೇ ಮಾಧವಾ! ಏನಿದು ಕೊನೆ ಕ್ಷಣದ ಕೌತುಕ? ಯುದ್ದರಂಗದಿಂದ ಕೌರವ ಮಾಯವಾಗಿದ್ದಾನೆ! ಮುಂದೇನು? ಯುದ್ಧ ಸಮಾಪ್ತಿಯ ಬಗೆ ಹೇಗೆ?” ಎಂದು ಸಮಾಲೋಚನೆ ನಿರತರಾಗಿದ್ದಾರೆ.
ಭೀಮಸೇನ ಮಾತ್ರ ಅಸಹನೆಯ ಮಿತಿ ಮೀರಿ, ಕೈ ಕೈ ಹೊಸಕಿಕೊಳ್ಳುತ್ತಾ, ಗದೆಯನ್ನು ಬೀಸಿ ಹೆಗಲೇರಿಸುತ್ತಾ, ಮದವೇರಿದ ಸಲಗದಂತೆ ಎಲ್ಲೆಂದರಲ್ಲಿ ಓಡಾಡುತ್ತಾ ತನ್ನ ಹತಾಶೆಯನ್ನು ಉಪಶಮನಗೊಳಿಸಲು ಒದ್ದಾಡುತ್ತಿದ್ದಾನೆ.
ಅದೇ ಹೊತ್ತಿಗೆ ಭೀಮನಿಂದ ಕಳುಹಲ್ಪಟ್ಟ ಬೇಹಿನಚರರು ಕಿರಾತರೊಡನೆ ರಣಕ್ಷೇತ್ರಕ್ಕೆ ಓಡಿ ಬಂದರು. ಮಾರುತನಿಗೆ ನಮಿಸಿ ನಿಂದು “ಜೀಯಾ! ಇವರು ನಮ್ಮವರಾದ ಶಬರರು. ಕುರುಕ್ಷೇತ್ರದ ಸಂಧಿನಲ್ಲಿರುವ ದ್ವೈಪಾಯನ ಸರೋವರದ ಬಳಿ ತಮ್ಮ ಕೆಲಸನಿಮಿತ್ತ ಹೋಗುತ್ತಿರಬೇಕಾದರೆ ಒಂದು ಕೌತುಕಪ್ರದ ಸನ್ನಿವೇಶ ನೋಡಿದ್ದಾರಂತೆ. ಕೌರವಪಕ್ಷದ ಕೆಲವರು ಸರೋವರದ ಬದಿಯಲ್ಲಿ ನಿಂತು ನೀರನ್ನು ನೋಡಿ ಮಾತನಾಡುವಾಗ, ನೀರೊಳಗಿನಿಂದ ಯಾರೋ ಅವರಿಗೆ ಉತ್ತರಿಸುವುದನ್ನು ಕೇಳಿದರಂತೆ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿದ್ದವರು ಹೊರಟು ಹೋದರಂತೆ. ಪ್ರಕರಣ ಹೀಗಿರಲು ನಾವು ಹುಡುಕುವ ಪ್ರಭು ಕೌರವೇಶ್ವರ ನೀರೊಳಗೆ ಅಡಗಿ ಕುಳಿತಿರಬಹುದೇ?” ಎಂದು ಸಂದೇಹ ವ್ಯಕ್ತಪಡಿಸಿದರು.
ಇವರ ಈ ಮಾತನ್ನು ಕೂಲಂಕುಷವಾಗಿ ಕೇಳುತ್ತಾ ಗಮನಿಸುತ್ತಿದ್ದ ಶ್ರೀ ಕೃಷ್ಣ, “ಬನ್ನಿ ನಾವೆಲ್ಲರೂ ದ್ವೈಪಾಯನ ಸರೋವರದ ಬಳಿಗೆ ಹೋಗೋಣ. ಕೌರವ ಅಲ್ಲಿ ಅಡಗಿರಬಹುದು, ಪರಿಶೀಲಿಸಿ ನೋಡೋಣ” ಎಂದು ನಿರ್ದೇಶನವಿತ್ತು ಸೂಚಿಸಿದನು.
ಹಾಗೆ ಬಂದಾಗ ಭೀಮಸೇನ ಮುಂದೊತ್ತಿ ಬಂದು, “ನಾನೀಗಲೆ ನೀರೊಳಗೆ ಹಾರಿ, ಮೊಸಳೆಯನ್ನು ಎಳೆದು ದಡಕ್ಕೆಸೆಯುವಂತೆ ಆ ಹೇಡಿ ದುರ್ಯೋಧನನ್ನು ಹೊರಗೆಳೆದು ಎಸೆಯುತ್ತೇನೆ” ಎಂದು ಅಬ್ಬರಿಸಿದನು.
ಧರ್ಮರಾಯ ಭೀಮನನ್ನು ಸಂತೈಸಿ ತಡೆದನು. ಕೃಷ್ಣನು ತನ್ನ ಪಾಂಚಜನ್ಯವನ್ನೆತ್ತಿದಾಗ, ಅನುಸರಿಸಿ ಪಾಂಡವರೂ ತಮ್ಮ ತಮ್ಮ ದಿವ್ಯ ಶಂಖಗಳಾದ ವಿಜಯ, ಪೌಂಡ್ರಕ, ದೇವದತ್ತ, ಸುಘೋಷ, ಮಣಿಪುಷ್ಪಕಗಳನ್ನೆತ್ತಿ ಶಂಖನಾದ ಮೊಳಗಿಸಿದರು. ಆ ಮಹಾನಿನಾದ ಭೂಮ್ಯಾಕಾಶ ಪರ್ಯಂತರ ವ್ಯಾಪಿಸಿ, ದಶ ದಿಕ್ಕುಗಳಿಗೂ ಹಬ್ಬತೊಡಗಿತು.
ಮುಂದುವರಿಯುವುದು…



