ಭಾಗ 43
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೪೩ ಮಹಾಭಾರತ
ತಾಯಿಯೂ – ರಾಜಮಾತೆಯೂ ಆಗಿರುವ ಸತ್ಯವತಿದೇವಿಯ ಒತ್ತಾಸೆ ವಂಶವೃಕ್ಷದ ಬೆಳವಣಿಗೆಗಾಗಿ ಎಂಬ ಸತ್ಯ ಅರ್ಥೈಸಿದ ಭೀಷ್ಮರು, ಅಮ್ಮಾ ನಿನ್ನ ಚಿಂತನೆ ಸಾಧುವಾಗಿಯೇ ಇದ್ದು ಪಾಲಿಸಲು ಧರ್ಮಸಮ್ಮತವಾಗಿಯೇ ಇದೆ. ಆದರೂ ಅಖಂಡ ಬ್ರಹ್ಮಚರ್ಯದ ವೃತಧಾರಿಯಾದ ನನಗೆ ಸ್ತ್ರೀ ಸಂಗ ಆಪದ್ಧರ್ಮಕ್ಕಾದರೂ ನಿಷಿದ್ಧವೇ ಎಂದು ಸುಮ್ಮನಾದನು.
ಹಾಗಾದರೆ ಚಂದ್ರವಂಶದ ವೃದ್ಧಿ ಹೇಗೆಂದು ಚಿಂತೆಗೊಳಗಾದ ಸತ್ಯವತಿದೇವಿ ಸುದೀರ್ಘ ಯೋಚನೆಗೆ ತೊಡಗಿ ಶಂತನು ಚಕ್ರವರ್ತಿಯ ಸಹೋದರರಾದ ಈರ್ವರಲ್ಲಿ ಅಗ್ರಜ ‘ದೇವಾಪಿ’ ತಪೋನಿರತರಾಗಿದ್ದಾರೆ. ಮತ್ತೆ ಉಳಿದಿರುವುದು ಅನುಜ ‘ಬಾಹ್ಲೀಕ’. ಭೀಷ್ಮನನ್ನು ಕರೆದು “ಬಾಹ್ಲಿಕ” ನೂ ಚಂದ್ರವಂಶಸ್ಥನೇ ಆತನ ಸಂತತಿಯಲ್ಲಿ ಸಮರ್ಥನನ್ನು ಗುರುತಿಸಿ ಅಭಿಷಿಕ್ತ ರಾಜನಾಗಿ ಘೋಷಿಸಬಹುದೇ ಎಂದು ಕೇಳಿದಳು. ಭೀಷ್ಮ ರೂ ಯೋಚಿಸಿ ಉತ್ತರಿಸಿದರು.. ರಾಜಮಾತೆ, ಹಸ್ತಿನಾಪುರದ ಸಾಮ್ರಾಜ್ಯ ನಿಮ್ಮ ಕರಗ್ರಹಣ ಕಾಲದಲ್ಲಿ ನಿಮ್ಮ ಸಂತತಿಗೆ ಕನ್ಯಾಶುಲ್ಕವಾಗಿ ನೀಡಲ್ಪಟ್ಟಿದೆ. ಹಾಗಾಗಿ ಇಲ್ಲಿ ಮತ್ಯಾರಿಗೂ ಅವಕಾಶ ನೀಡಲಾಗದು. ಭೀಷ್ಮನ ಅಸಮ್ಮತಿ ತಾರ್ಕಿಕ ನ್ಯಾಯವಾಗಿಯೇ ಇದೆ ಎಂದು ಸತ್ಯವತಿಗೂ ಅರ್ಥವಾಯಿತು. ಈಗ ಮತ್ತೆ ಮತ್ತೆ ತಾನೇ ಅಪರಾಧಿ ಎಂಬ ಭಾವ ಸತ್ಯವತಿಗೆ ಕಾಡತೊಡಗಿತು. ಯುವರಾಜ ಪಟ್ಟಾಭಿಷಿಕ್ತ ಸರ್ವ ಸಮರ್ಥ ಭೀಷ್ಮನಿಗೆ ಅನ್ಯಾಯವೆಸಗಿ, ತನ್ನ ಸಂತಾನಕ್ಕೆ ಚಕ್ರವರ್ತಿ ಪೀಠ ಬೇಕೆಂದು ಕಿತ್ತುಕೊಂಡೆ. ಎರಡೆರಡು ಮಕ್ಕಳನ್ನು ಹೆತ್ತರೂ ನನ್ನ ಪ್ರಾರಬ್ಧ! ಇಬ್ಬರೂ ಮೃತ್ಯುಲೋಕ ಸೇರಿದರು. ಈಗ ಚಂದ್ರವಂಶ ವಾರಸುದಾರರಿಲ್ಲದೆ ನನ್ನೆದುರೇ ಕಮರಿ ಹೋಗುವಂತಹ ದುಸ್ಥಿತಿ ನೋಡುವ ಹತಭಾಗ್ಯಳಾದೆ. ಮಾಡಿದ ಪಾಪ ಕರ್ಮಕ್ಕೆ ಫಲ ಅನುಭವಿಸುತ್ತಿರುವೆ. ಎಂಬಿತ್ಯಾದಿ ಪಶ್ಚಾತ್ತಾಪ ಭಾವ ತಳೆದು ಚಿಂತಾಕ್ರಾಂತಳಾದಳು.
ಹೀಗೆ ಪರಿತಪಿಸಿ ಭೀಷ್ಮನಲ್ಲಿ ನಮ್ಮ ಚಂದ್ರವಂಶದ ಅಭ್ಯುದಯ ಹೇಗೆ? ನೀನೇ ದಾರಿ ತೋರಿಸು ಎಂದು ಕೇಳುತ್ತಾಳೆ. ಅಮ್ಮಾ ನಿಯೋಗ ಪದ್ದತಿಯ ಬಗ್ಗೆ ನೀನೇ ಸೂಚಿಸಿದೆ. ಸದ್ಧರ್ಮಿಯೂ, ಗುಣವಂತನೂ, ಜ್ಞಾನಿಯೂ ಆದ ಮಕ್ಕಳೊಂದಿಗನಾದ ಒಬ್ಬ ಉತ್ತಮ ಬ್ರಾಹ್ಮಣನನ್ನು ಕರೆಯಿಸಿ ಅವನಿಗೆ ಹೇರಳ ದ್ರವ್ಯ ದಕ್ಷಿಣೆಯಿತ್ತು, ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಆತನಿಂದ ಸಂತಾನ ಪಡೆಯಬಹುದು ಎಂದು ಸೂಚಿಸಿದನು. ಸತ್ಯವತಿಯೂ ಯೋಚಿಸಿ ನಿಯೋಗ ಪದ್ದತಿಗೆ ರಕ್ತ ಸಂಬಂಧಿಯ ಬಳಕೆಯೇ ಸೂಕ್ತ ಎಂಬುವುದು ಶಾಸ್ತ್ರ. ಅನ್ಯರ ಬಳಕೆ ನನಗೆ ಸರಿ ಕಾಣಿಸುತ್ತಿಲ್ಲ. ಪಿತೃ ಸಂತಾನದಲ್ಲಿ ನೀನೇ ಸರ್ವೋತ್ತಮ. ಆದರೆ ಪ್ರತಿಜ್ಞಾ ಬದ್ದನಾಗಿರುವ ನೀನು ಅಸಾಧ್ಯವೆಂದಿರುವೆ. ಹಾಗಾಗಿ ರಕ್ತ ಸಂಬಂಧ ಎನ್ನುವ ಶಾಸ್ತ್ರ ಸಂಪನ್ನತೆಗೆ ಮಾತೃ ಪಕ್ಷವನ್ನೇ ಪರಿಗಣಿಸಬೇಕು. ನಿನಗೆ ಈ ವಿಭಾಗ ಸಮ್ಮತವೇ? ಎಂದು ಕೇಳಿದಾಗ, ಆಶ್ಚರ್ಯಚಕಿತನಾದ ಭೀಷ್ಮ. ಮಾತೃ ಸಂತತಿಯೇ? … ಅಮ್ಮಾ ನಿಮ್ಮ……?? ಎಂದು ಭೀಷ್ಮ ತಡವರಿಸಿದ. ಸತ್ಯವತಿ ತನ್ನ ನಾಮಧೇಯದಂತೆ ತನ್ನ ಅಂತರ್ಯದಲ್ಲಿದ್ದ ಗುಪ್ತ ಸತ್ಯವನ್ನು ಪ್ರಕಟಿಸಲು ಮುಂದಾಗಿ, ಭೀಷ್ಮನಲ್ಲಿ ಹೇಳತೊಡಗಿದಳು. ಮಗನೇ, ನನ್ನ ಬಗ್ಗೆ ಅನ್ಯಥಾ ಭಾವಿಸಬೇಡ. ಬುದ್ಧಿಪೂರ್ವಕವಾಗಿ ನಾನು ಬಯಸಿ ಮಾಡಿರುವುದಲ್ಲ. ಆಕಸ್ಮಿಕವೋ, ಸುದೈವವೋ, ಯೋಗವೋ! ಏನೋ ಒಂದು ಒದಗಿ ಪರಾಶರ ಮಹರ್ಷಿಗಳ ಅನುಗ್ರಹದಿಂದಾಗಿ ತಾನು ಜನ್ಮ ಕೊಟ್ಟ ಭಗವಾನ್ ವೇದವ್ಯಾಸ ಮಹರ್ಷಿಗಳ ಜನ್ಮ ವೃತ್ತಾಂತವನ್ನು ವಿವರಿಸಿದಳು. ಆಶ್ಚರ್ಯಚಕಿತನಾದ ಭೀಷ್ಮ ಅಮ್ಮಾ ಇದು ದೈವೀ ಸಂಕಲ್ಪಿತ ಘಟನೆ. ಪರಮಪೂಜ್ಯ ವೇದವ್ಯಾಸರೇ? ಅವರ ಅನುಗ್ರಹವಾದರೆ ಅದು ಚಂದ್ರವಂಶಕ್ಕೇ ಮಹಾ ಸೌಭಾಗ್ಯ ಎಂದು ಸಮ್ಮತಿ ಸೂಚಿಸಿದ. ಬಳಿಕ ಮಾತೆಯ ಅಪ್ಪಣೆ ಪಡೆದು ಕಾರ್ಯನಿಮಿತ್ತ ಹೊರಟುಹೋದನು.
ಏಕಾಂತದಲ್ಲಿ ಸತ್ಯವತೀ ದೇವಿ ವೇದವ್ಯಾಸರನ್ನು ಸ್ಮರಿಸಿದಳು. ಜಟಾವಲ್ಕಲಧಾರಿ ವಿಕಾರ ಸ್ವರೂಪಿಯಾದರೂ ದಿವ್ಯ ತೇಜಸ್ಸಿನ ವ್ಯಾಸ ಭಗವಾನರು ಪ್ರತ್ಯಕ್ಷರಾದರು. ತನ್ನ ವಾಗ್ದಾನದಂತೆ “ಅಮ್ಮಾ ಆಪತ್ಕಾಲದಲ್ಲಿ ನನ್ನನ್ನು ಸ್ಮರಿಸಿ, ನಿಮ್ಮ ಸೇವೆಗೆ ಒದಗುವೆ” ಎಂದಿರುವಂತೆ “ಅಪ್ಪಣೆಯಾಗಲಿ.. ನನ್ನಿಂದೇನಾಗಬೇಕು?” ಎಂದು ಕೇಳಿದರು. ತನ್ನ ಮನದ ವಾಂಛೆ, ಚಂದ್ರವಂಶದ ವೃದ್ಧಿಗಾಗಿರುವ ತೊಡಕು, ಅಪೇಕ್ಷೆಗಳೆಲ್ಲವನ್ನೂ ಸವಿವರವಾಗಿ ಹೇಳಿದಳು. ಆಗ ವ್ಯಾಸರು, ಅಮ್ಮಾ ನಿನ್ನ ಅಪೇಕ್ಷೆ ಧರ್ಮ ಸಮ್ಮತವಾಗಿದೆ. ಆದರೆ ಈ ನಿಯೋಗದ ಸತ್ಫಲಕ್ಕಾಗಿ ನಿನ್ನ ಸೊಸೆಯಂದಿರು ಒಂದು ವರ್ಷ ಕಾಲ ವೃತಸ್ಥರಾಗಬೇಕು” ಎಂದಾಗ ಮಗನೇ, ಅಷ್ಟು ವಿಳಂಬಿಸುವುದು ಬೇಡ. ಮುಂದೆ ಅವರ ಮನಸ್ಸು ಹೇಗೆ ಬದಲಾದೀತೋ ಹೇಳಲಾಗದು. ಹಾಗಾಗಿ ಈಗಲೇ ಅನುಗ್ರಹಿಸಬೇಕು ಎಂದಳು. ನಿರುಪಾಯರಾದ ವ್ಯಾಸರು ಸಮ್ಮತಿಸಿದರು. ಸತ್ಯವತಿಯ ನಿರ್ಧಾರ ಅವಸರದ್ದೇ ಆಯಿತು. ಹೀಗೆ ವ್ಯಾಸರ ಸಮ್ಮತಿ ಪಡೆದು ಅಂಬಿಕೆ -ಅಂಬಾಲಿಕೆಯರನ್ನು ಕರೆದು, ಎಲ್ಲಾ ವೇದ್ಯ ವಿಚಾರಗಳನ್ನು ವಿವರಿಸಿ, ಅನುಕೂಲೆಯರಾಗಿ ನಮ್ಮ ವಂಶ ವೃದ್ಧಿಗೆ ಸಹಕರಿಸುವಂತೆ ತಿಳಿ ಹೇಳಿದಳು.
ವ್ಯಾಸರ ಅನುಗ್ರಹವಾಯಿತು. ತನ್ನ ಕಾರ್ಯ ಮುಗಿಸಿ ಮಾತೆ ಸತ್ಯವತಿಯನ್ನು ಕಂಡು”ಅಮ್ಮಾ ಅಂಬಿಕೆಯು ನನ್ನನ್ನು ಕಂಡು ಕಣ್ಣು ಮುಚ್ಚಿಕೊಂಡು ಕತ್ತಲೆಯನ್ನು ಕಂಡದ್ದಿರಿಂದ ಹುಟ್ಟುವ ಮಗು ಕತ್ತಲೆಯನ್ನೇ ಕಾಣುವ ಕುರುಡನಾಗುತ್ತಾನೆ. ಅಂಬಾಲಿಕೆ ನನ್ನ ಸಾಮಿಪ್ಯ ಬರುವಾಗ ಹೆದರಿ ಬಿಳಚಿಕೊಂಡಿದ್ದರಿಂದಾಗಿ ಅವಳಲ್ಲಿ ಬಿಳುಚಿದ ಮಗ ಹುಟ್ಟುತ್ತಾನೆ. ಹುಟ್ಟುವ ಮಕ್ಕಳ ಸ್ಥಿತಿಗೆ ತಾಯಂದಿರೇ ಕಾರಣ. ಎಲ್ಲವೂ ದೈವಚಿತ್ತ ಎಂದು ಹೇಳಿದರು. ಕೇಳಿ ದುಃಖಿತಳಾದ ಸತ್ಯವತಿ ಅವಸರದ ಒತ್ತಾಯ ಅನಾಹುತಕ್ಕೆ ಕಾರಣವಾಯಿತೆಂದು ವ್ಯಥೆಪಟ್ಟಳು. ವ್ಯಾಸರನ್ನು ಕರೆದು ಹಾಗಾಗಬಾರದೆಂದು, ಇನ್ನು ಒಮ್ಮೆ ಸುಖ ಸಂತಾನಕ್ಕಾಗಿ ಅನುಗ್ರಹಿಸಬೇಕೆಂದು ಬೇಡಿದಳು. ವ್ಯಾಸರು ಒಪ್ಪಿದರು. ಅಂಬಿಕೆಯನ್ನು ಕರೆದು ಎಚ್ಚರಿಕೆಯನ್ನು ನೀಡಿ ಸರಿಯಾಗಿ ನಡೆದುಕೊಳ್ಳುವಂತೆ ಕೇಳಿಕೊಂಡಳು. ಅಂಬಿಕೆಗೆ ಮೊದಲೇ ವ್ಯಾಸರ ರೂಪ ಕಂಡು ಭಯವೂ, ಹೇಸಿಗೆಯೂ ಆಗಿತ್ತು. ಮತ್ತೊಮ್ಮೆ ಅವರ ಬಳಿ ಹೋಗಲು ಒಲ್ಲದ ಮನಸ್ಸಿನಿಂದ ಅವಳು ತನ್ನ ದಾಸಿಯನ್ನು ಕರೆದು ಆದೇಶಿಸಿ- ತನ್ನ ವಸ್ತ್ರಾಭರಣಗಳಿಂದ ಅಲಂಕರಿಸಿ, ಮಾಡಬೇಕಾದುದ್ದನ್ನು ಹೇಳಿ, ವೇದವ್ಯಾಸರ ಬಳಿ ಕಳುಹಿಸಿದಳು. ನಿಯತಿಯನ್ನು ಯಾರೂ ತಡೆಯಲಾರರು! ಆ ದಾಸಿಯು ವ್ಯಾಸರ ಸದನುಗ್ರಹಕ್ಕೆ ಪಾತ್ರಳಾದಳು. ವ್ಯಾಸರು ಹೊರಟು ನಿಂತು, ಅಮ್ಮಾ ನಿಮ್ಮಾಪೇಕ್ಷೆಯಂತೆ ನನ್ನ ಕಾರ್ಯವಾಗಿದೆ. ಅಂಬಿಕೆಯು ತಾನೇ ಬರುವ ಬದಲಾಗಿ, ದಾಸಿಯನ್ನು ಕಳುಹಿಸಿದ್ದಾಳೆ. ಆ ದಾಸಿಯಲ್ಲಿ ಸರ್ವೋತ್ತಮನಾದ ಜ್ಞಾನಿ, ಧರ್ಮಿಷ್ಟ ಮಗನು ಜನಿಸುತ್ತಾನೆ. ಆದರೆ ಆ ಮಗು ದಾಸಿಪುತ್ರ ಶೂದ್ರನಾಗುತ್ತಾನೆ. ವಿಧಿಯ ಇಚ್ಚೆ ಮೀರಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿ ಹೊರಟರು. ಸತ್ಯವತಿಯ ಮನಸ್ಸಿಗೆ ದುಃಖವಾದರೂ ಸುಮ್ಮನಾಗಿರಬೇಕಾಯಿತು.
ವೇದವ್ಯಾಸರ ಅನುಗ್ರಹದಂತೆ ಅಂಬಿಕೆಯಲ್ಲಿ ಕುರುಡು ಮಗ “ಧೃತರಾಷ್ಟ್ರ” ನೂ, ಅಂಬಾಲಿಕೆಯಲ್ಲಿ ಪಾಂಡು ರೋಗಗ್ರಸ್ತ ಬಿಳಿಚಿದ ಚರ್ಮದ ” ಪಾಂಡು” ವೂ, ದಾಸಿಯಲ್ಲಿ ಪುತ್ರನಾಗಿ ಹುಟ್ಟಲು ಯಮಧರ್ಮನೇ ಕಾಯುತ್ತಿದ್ದನಲ್ಲವೇ!…ಅವಕಾಶ ಈಗ ಒದಗಿ ಬಂದು ಶೂದ್ರ ವರ್ಣದಲ್ಲಿ “ವಿದುರ” ನಾಗಿ ಹುಟ್ಟಿದನು. ಅರಮನೆಯಲ್ಲಿ ಮಕ್ಕಳಿಲ್ಲದ ದುಃಖ ದೂರವಾಗಿ ಸಂತೋಷ ತುಂಬತೊಡಗಿತು.
ಮುಂದುವರಿಯುವುದು…..