ಭಾಗ – 477
ಭರತೇಶ ಶೆಟ್ಟಿ, ಎಕ್ಕಾರು

ಭೀಷ್ಮಾಚಾರ್ಯರು ರಾಜನು ಪಾಲಿಸಬೇಕಾದ ರಾಜಧರ್ಮ ಮತ್ತು ರಾಜನೀತಿಯನ್ನು ವಿವರಿಸುತ್ತಾ “ಮಗೂ! ದೇವಗುರು ಬೃಹಸ್ಪತಿ ಆಚಾರ್ಯರು ಸೂಚ್ಯವಾಗಿ ‘ಕಾರ್ಯಶೀಲತೆಯೆ ರಾಜಧರ್ಮಕ್ಕೆ ಮೂಲವಾಗಿದೆ. ಕಾರ್ಯಧೀರನು ಮಾತಿನ ಧೀರನಿಗಿಂತ ಮೇಲು. ಮಾತಿನ ವೀರರು ಕಾರ್ಯವೀರರನ್ನು ಸಂತೋಷಗೊಳಿಸುತ್ತಾ ಸೇವಿಸುತ್ತಿರುತ್ತಾರೆ’ ಎಂದಿದ್ದಾರೆ.
ರಾಜನು ಶ್ರೇಷ್ಟನಾಗಿದ್ದು ಪುರದ ಹಿತ ಬಯಸುವ
ಪುರೋಹಿತನನ್ನು ಜೊತೆಗೆ ಇರಿಸಿಕೊಂಡಿರಬೇಕು. ರಾಜನು ರಾಷ್ಟ್ರದ ಹಿತ ಚಿಂತಕನಾದರೆ, ಪುರೋಹಿತನಾದವ ರಾಜನಿಗೆ ಜ್ಞಾನದ, ಯೋಜನೆಯ, ದೈವಬಲದ ಶಕ್ತಿ ತುಂಬುತ್ತಿರಬೇಕು. ಇವರಿಬ್ಬರ ಹೊಂದಾಣಿಕೆ ಸಮಗ್ರ ಸಾಮ್ರಾಜ್ಯಕ್ಕೆ ಅತ್ಯಗತ್ಯ.”
“ಇನ್ನು ರಾಜನಾದವ ದೇಶದ ಜೊತೆಗೆ ಕೋಶದ ಸುವ್ಯವಸ್ಥೆಯನ್ನು ಕಾಪಾಡಿಕೊಂಡಿರಬೇಕು. ರಾಜ್ಯದ ಭಂಡಾರವನ್ನು ನಿಸ್ವಾರ್ಥಿಯೂ ಸಂತೃಪ್ತನೂ ಆದ ನಿಷ್ಟಾವಂತನಿಗೆ ವಹಿಸಿಕೊಡಬೇಕು. ಯಾವ ಕಾಲಕ್ಕೂ ಕೋಶ ಬರಿದಾಗದಂತೆಯೂ, ಸದಾ ತುಂಬಿ ಸಮೃದ್ಧವಾಗಿರುವಂತೆಯೂ ನೋಡಿಕೊಳ್ಳಬೇಕು.
ರಾಜನಾದವ ಸ್ವಯಂ ತಾನು ಎಲ್ಲಾ ಪ್ರಗತಿ ಕಾರ್ಯಗಳನ್ನೂ ಮೇಲ್ವಿಚಾರಣೆ ಮಾಡುತ್ತಾ ತನ್ನ ಸೇವಕರ ಕ್ಷಮತೆ ಗಮನಿಸುತ್ತಿರಬೇಕು. ಕುಲ, ಶೀಲ ಸಂಪನ್ನರೂ, ಆತ್ಮಸ್ತುತಿ ವಿಮುಖರೂ, ಕ್ಷಮಾವಂತರೂ, ಬುದ್ಧಿವಂತರೂ, ಸಂವೇದನಾಶೀಲರೂ ಆದವರನ್ನು ಅಮಾತ್ಯರನ್ನಾಗಿ ನೇಮಿಸಬೇಕು. ಶತ್ರು, ಮಿತ್ರ, ಮಧ್ಯಸ್ಥರನ್ನು ಯೋಗ್ಯತೆ ಮತ್ತು ಔಚಿತ್ಯವರಿತು ಸನ್ನಿವೇಶಕ್ಕೆ ಸಮನಾಗಿ ನಡೆಸಿಕೊಳ್ಳಬೇಕು.
ಅರಸನಾದವ ಸರ್ವನಾಶಕಾರಿಯಾದ ಯುದ್ಧಾಕಾಂಕ್ಷಿ ಆಗಿರಬಾರದು. ಹಾಗೆಂದು ರಾಜನಾದವ ಯುದ್ದಕ್ಕೆ ಸಮರ್ಥನಾಗಿಯೂ ಇರಬೇಕು. ಪ್ರಜಾರಕ್ಷಣೆಗಾಗಿ ದುಷ್ಟನಿಗ್ರಹ, ಶಿಷ್ಟಪರಿಪಾಲನೆ ಆತನಿಗೆ ಕರ್ತವ್ಯವಾಗಿರುತ್ತದೆ. ರಾಜನಾದವನಿಗೆ ಹಾಸುಗೆಯ ಮರಣ ಭೂಷಣವಲ್ಲ. ಅಂದರೆ ರೋಗಿಯಾಗಿ ಸಾಯಬಾರದು. ಕಾರ್ಯವೆಸಗುತ್ತಾ ರಣಾಂಗಣದಲ್ಲಿ ವೀರಮರಣವಾದರೂ ಅದೂ ಶ್ರೇಯಸ್ಕರವಾಗುತ್ತದೆ. ಅನಾವಶ್ಯಕವಾಗಿ ರಾಜ ಕಾಲ್ಕೆರೆದು, ಅಕಾರಣವಾಗಿ ಯುದ್ದವನ್ನು ಆಹ್ವಾನಿಸಬಾರದು. ವಿನಾಕಾರಣ ದುರ್ಬಲ ರಾಜ್ಯ ಅಥವಾ ರಾಜನ ಮೇಲೆ ದಂಡೆತ್ತಿ ಹೋಗಕೂಡದು. ಸಾಮ್ರಾಜ್ಯ ವಿಸ್ತರಣೆ ಮಾಡುವ ಏಕಮಾತ್ರ ಉದ್ದೇಶದಿಂದ, ಪರರ ಸಂಪತ್ತನ್ನು ತನ್ನದಾಗಿಸುವ ಉದ್ದೇಶ ಹೊಂದಿರಕೂಡದು. ಧರ್ಮಾತ್ಮ ರಾಜರ ರಕ್ಷಣೆಯ ಬಗ್ಗೆಯೂ ಗಮನ ನೀಡಬೇಕು. ಮಾತ್ರವಲ್ಲ ಚತುರೋಪಾಯ ಬಲ್ಲವನಾಗಿ ಶತ್ರುಗಳನ್ನು ಸಾಮ, ದಾನ, ಭೇದಗಳಿಂದ ನಿಯಂತ್ರಿಸುವ ಕಲೆ ಕರಗತ ಮಾಡಿಕೊಂಡಿರಬೇಕು. ಹಾಗೆಂದು ತೀರ ಉದ್ದಟತನ ತೋರಿದವರ ಜೊತೆ ಸಂಧಾನಕ್ಕೆ ಮುಂದಾಗದೆ ಸಂಗ್ರಾಮಕ್ಕೂ ಸಿದ್ಧನಾಗಿರಬೇಕು. ಉದ್ದಟತನ ತೋರುವವರಿಗೆ ದಂಡ ಪ್ರಯೋಗ ಸೂಕ್ತ ದಾರಿ. ಯುದ್ದ ನಿರ್ಣಯ ಮಾಡುವಲ್ಲೂ ಗೆಲುವು ಅಸಾಧ್ಯವೆಂಬ ಸ್ಪಷ್ಟತೆಯಿದ್ದರೆ ಯುದ್ದಕ್ಕೆ ಮುಂದಾಗದೆ ಅನ್ಯಮಾರ್ಗವನ್ನು ಅನುಸರಿಸಿ ಪ್ರಜೆಗಳನ್ನು ರಕ್ಷಿಸಿಕೊಳ್ಳಬೇಕು. ಇಲ್ಲೂ ಸ್ವಾಭಿಮಾನವನ್ನು ಬಲಿಗೊಡಬೇಕಾದ ಸ್ಥಿತಿ ನಿರ್ಮಾಣವಾದರೆ ಯುದ್ಧ ಮಾಡಿ ಮಡಿದರೂ ಅದು ಶ್ರೇಷ್ಠ ಗತಿಯೆಂದು ತಿಳಿಯಬೇಕು. ಸ್ನೇಹಕ್ಕೂ ಬದ್ಧನಾಗಿ, ಸಮರಕ್ಕೂ ಸಿದ್ಧನಾಗಿ ಹೆದರದೆ ರಾಜನಾದವ ಚಾಣಾಕ್ಷನಾಗಿಯೂ, ಸಮರ್ಥನಾಗಿಯೂ ಇರಬೇಕು. ಇದಕ್ಕೆ ಮೊದಲಾಗಿ ರಾಜ ತನ್ನ ಸಾಮರ್ಥ್ಯ ಅರಿತುಕೊಂಡಿದ್ದು ಸದಾ ವೃದ್ಧಿಸುವ ಕಾರ್ಯತಂತ್ರ ರೂಪಿಸುತ್ತಿರಬೇಕು. ರಾಜ್ಯದ ಅಭಿವೃದ್ಧಿಯಷ್ಟಲ್ಲದೆ ಬಲ ವೃದ್ಧಿಗೂ ಗಮನ ನೀಡಬೇಕು. ಆಪತ್ಕಾಲ ಒದಗಿದರೆ ಪ್ರವಾಹ ಬಂದಾಗ ಬಗ್ಗಿಯೊ ಬಾಗಿಯೊ ಜೋಂಡಿನಂತೆ ವ್ಯವಹರಿಸುವುದೂ ನೀತಿಯಾಗುತ್ತದೆ. ಒಂದು ವಿಚಾರ ಸದಾ ಗಮನದಲ್ಲಿರಬೇಕು, ಏನೆಂದರೆ ಜಯಾಪಜಯಕ್ಕೆ ರಾಜನ ಬುದ್ದಿಯೇ ಪ್ರಧಾನ ಕಾರಣಗಳಲ್ಲಿ ಒಂದಾಗಿರುತ್ತದೆ.”
ಮುಂದುವರಿಯುವುದು…









