28 C
Udupi
Friday, April 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 476

ಭರತೇಶ ಶೆಟ್ಟಿ ಎಕ್ಕಾರು

“ಮಗಾ ಧರ್ಮರಾಯಾ! ಪೂರ್ವದಲ್ಲಿ ಅಯೋಧ್ಯಾನಗರಿಯಲ್ಲಿ ಸಗರನೆಂಬ ಚಕ್ರವರ್ತಿ ಇದ್ದನು. ಅವನಿಗೆ ಇಬ್ಬರು ಹೆಂಡತಿಯರು. ಹಿರಿಯಳಾದ ಕೇಶಿನಿ ಧರ್ಮಿಷ್ಠೆ. ಕಿರಿಯವಳಾದ ಸುಮತಿಗೆ ಆಸೆ ಹೆಚ್ಚು. ಸಗರ ತನ್ನ ಪತ್ನಿಯರೊಂದಿಗೆ ತಪಸ್ಸು ಮಾಡಿದ್ದನು. ಭಗುಮುನಿಗಳು ತೃಪ್ತರಾಗಿ ವರ ನೀಡಿದರು. ರಾಜಾ ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶವನ್ನು ನಡೆಸುವ ಒಬ್ಬ ಮಗನಾಗುತ್ತಾನೆ, ಇನ್ನೊಬ್ಬಳಿಗೆ ಅರವತ್ತು ಸಾವಿರ ಪುತ್ರರು ಹುಟ್ಟುತ್ತಾರೆ ಎಂದರು.

ಕೇಶಿನಿ ಒಬ್ಬ ಮಗ ಸಾಕು ಎಂದಳು, ಸುಮತಿ ಅರವತ್ತು ಸಾವಿರ ಮಕ್ಕಳನ್ನು ಬೇಡಿದಳು. ಕೇಶಿನಿಯ ಮಗ ಅಸಮಂಜ ವಿಕ್ಷಿಪ್ತ ಸ್ವಭಾವದವನು, ದುಃಖಪ್ರೇಮಿ, ಬೇರೆಯವರ ತೊಂದರೆಗಳಿಗೆ ಸಂತೋಷಪಡುವವನು. ಅಸಮಂಜಸ ಎಲ್ಲಿಯವರೆಗೆ ದುಷ್ಟನಾಗಿ ಮೆರೆದನೆಂದರೆ ಪ್ರಜೆಗಳನ್ನು ಹಿಂಸಿಸುವುದು – ಅವರ ಯಾತನೆಯನ್ನು ಕಂಡು ವಿಕೃತ ಆನಂದ ಪಡುವುದು, ಮಕ್ಕಳನ್ನು ಎತ್ತಿ ನದಿಗೆಸೆದು ಅವರು ಮುಳುಗುವಾಗ ಏಳುವ ಶ್ವಾಸದ ಗುಳ್ಳೆಗಳನ್ನು ಕಂಡು ವಿಕಟ ನಗೆ ಬೀರುತ್ತಾ ಸಂಭ್ರಮಿಸುವುದು ಇತ್ಯಾದಿ ವಿಪರೀತ ಎನ್ನುವ ರೀತಿಯ ತೊಂದರೆ ನೀಡುತ್ತಿದ್ದನು. ಮಹಾರಾಜ ಸಗರನಿಗೆ ಮಗನ ವರ್ತನೆಯಿಂದ ಅಸಹನೀಯ ವೇದನೆ ಆಗತೊಡಗಿತು. ಏನೇನು ಪ್ರಯತ್ನ ಮಾಡಿದರೂ ಮಗನನ್ನು ನಿಯಂತ್ರಿಸುವ ದಾರಿ ತೋರದಾಯಿತು. ಪ್ರಜೆಗಳೆಲ್ಲ ಒಟ್ಟಾಗಿ ಸೇರಿ ರಾಜನ ಬಳಿ ಬಂದು ಮಹಾರಾಜರೇ ಒಂದೊ ನಿಮ್ಮ ಮಗ ಸಾಮ್ರಾಜ್ಯದಲ್ಲಿರಲಿ ನಾವೆಲ್ಲರೂ ಪುರ ತೊರೆದು ಹೋಗುತ್ತೇವೆ. ಅದು ಬೇಡವೆಂದಾದರೆ ನೀವು ನಿಮ್ಮ ಮಗನನ್ನು ತೊರೆಯಬೇಕು. ನಾವು ಅಥವಾ ನಿಮ್ಮ ಮಗ ಯಾರು ಬೇಕೆಂದು ನೀವು ನಿರ್ಧಾರ ಕೈಗೊಳ್ಳಬೇಕು ಎಂದು ಬೇಡಿಕೊಂಡರು. ಆಗ ರಾಜದಂಢದರನಾಗಿ ತನ್ನ ಮಗ ಅಸಮಂಜಸ ಮತ್ತು ಮಹಾರಾಣಿಗೆ ಬೇಕು ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಮಾಡಿಸಿ ವಾಸಕ್ಕೂ, ಸೇವೆಗೂ ಆಳು, ಪರಿಚಾರಕರನ್ನೂ ನೇಮಿಸಿ ಕಾಡಿಗೆ ಕಳುಹಿಸಿದನು. ಇನ್ನು ಅಲ್ಲಿಯೆ ಬದುಕಬೇಕು” ಎಂದು ಕಟ್ಟಪ್ಪಣೆ ಮಾಡಿ ಪ್ರಜೆಗಳ ಹಿತರಕ್ಷಕನಾಗಿ ರಾಜದಂಡಧರನಾಗಿ ಮಗ ಮತ್ತು ಪತ್ನಿಯನ್ನು ತೊರೆದು ನ್ಯಾಯ ನೀಡಿದನು.

“ಮಗನೇ, ರಾಜನಾದವನು ಸಪ್ತವ್ಯಸನಗಳನ್ನು ಅನುಭವಿಸಬಹುದಾದ ಅಧಿಕಾರ ಹೊಂದಿದ್ದರೂ ತನ್ನ ಸ್ವಾತಂತ್ರ್ಯ ಹರಣ ಮಾಡಿ, ದಾಸನನ್ನಾಗಿಸಬಲ್ಲ ಕುಡಿತ, ಜೂಜು, ಸ್ತ್ರೀ ಮುಂತಾದ ವ್ಯಸನಗಳಿಂದ ದೂರವಿರಬೇಕು. ಓರ್ವಳು ಗರ್ಭಿಣಿ ಸ್ತ್ರೀ ತನ್ನ ಎಲ್ಲಾ ಸುಖಗಳನ್ನು ತೊರೆದು ತನ್ನ ಗರ್ಭಸ್ಥವಾಗಿರುವ ಮಗುವಿನ ಯೋಗಕ್ಷೇಮವನ್ನು ಚಿಂತಿಸುವಂತೆ ಸದಾಕಾಲ ರಾಜ್ಯ ಮತ್ತು ಪ್ರಜಾಹಿತವನ್ನು ಕಾಯುವಲ್ಲಿ ಮಗ್ನನಾಗಿರಬೇಕು. ರಾಜನಾದವನು ಪ್ರಜಾಸಂರಕ್ಷಣೆಯನ್ನು ರಾಜಧರ್ಮದ ಪ್ರಧಾನ ಗುರಿಯಾಗಿಸಿ ಅದಕ್ಕೆ ಬೇಕಾದ ಸಕಲ ವ್ಯವಸ್ಥೆ ಮಾಡಿಸುತ್ತಾ ರಾಜ್ಯಭಾರ ಮಾಡಬೇಕು. ಈ ವ್ಯವಸ್ಥೆ ಮಾಡಿಸುವಲ್ಲಿ ಸೂಕ್ಷ್ಮಮತಿಯಾಗಿ ತನ್ನ ಸುತ್ತಲಿರುವ ಸ್ವಾರ್ಥಿಗಳು, ಚಾಡಿಕೋರರು, ಸಮಯಸಾಧಕರು, ವಿದ್ರೋಗಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಉತ್ತಮ ಚಾರರನ್ನು, ಪ್ರಾಮಾಣಿಕ ಸೇವಕರನ್ನು, ನಿಷ್ಠಾವಂತ ಮಂತ್ರಿಯನ್ನು, ಪ್ರಾಜ್ಞ ಗುರುವನ್ನು ಹೊಂದಿರಬೇಕು. ಸತ್ಕರ್ಮ ನಿರತನಾಗಿದ್ದು ಸರಿಯಾದ ಸಮಯದಲ್ಲಿ ದಾನ ಧರ್ಮ ಮಾಡುತ್ತಾ ಪ್ರಜೆಗಳ ವಿಶ್ವಾಸವನ್ನು, ಯಾಗ ಯಜ್ಞ ಮಾಡುತ್ತಾ ದೈವ ಬಲವನ್ನು ಸಂಪಾದಿಸುತ್ತಿರಬೇಕು. ಅಷ್ಟು ಮಾತ್ರವಲ್ಲದೆ ಅನಸೂಯನಾಗಿ (ಅಸೂಯೆ ಇಲ್ಲದವನಾಗಿ), ಅಸಹಾಯ ಶೂರನಾಗಿ ಶೌರ್ಯ, ದಕ್ಷತೆ, ಸಜ್ಜನ ಸಂಗ, ಧನಧಾನ್ಯ ಸಂಗ್ರಹ, ಸೈನ್ಯ, ಪರಿತೃಪ್ತಿ ಮುಂತಾದವುಗಳಿಂದ ಸಮೃದ್ಧನಾಗಿರಬೇಕು.”

ಮಹರ್ಷಿ ಅಂಗೀರಸರು ರಾಜಧರ್ಮವನ್ನು ಸರಳವಾಗಿ ವ್ಯಾಖ್ಯಾನಿಸಿದ್ದಾರೆ. “ರಾಜನಾದವನು ಪ್ರಜೆಗಳನ್ನು ಚೆನ್ನಾಗಿ ಪಾಲಿಸಿದರೆ ಎಲ್ಲಾ ಧರ್ಮವನ್ನು ಪಾಲಿಸಿದಂತಾಗುತ್ತದೆ. ರಾಜನಿಗೆ ಪ್ರಜಾ ಪರಿಪಾಲನೆಯೆ ಸಮೃದ್ಧಿ, ಯಶೋಕಾರಕ ತಪಸ್ಸು, ಯಾಗ ಮತ್ತು ಯಜ್ಞ ಎಲ್ಲವೂ ಆಗಿದೆ. ಪ್ರಜೆಗಳು ಸಂತುಷ್ಟರಾಗಿದ್ದರೆ ಅವರು ರಾಜನಿಗೆ ಇಚ್ಚಾಪೂರ್ತಿಯ ವರ ನೀಡುವ ದೇವತೆಗಳು” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಯಾವ ರಾಜನ ರಾಜ್ಯದಲ್ಲಿ ಪ್ರಜೆಗಳು ಸಂತೃಪ್ತರಾಗಿಲ್ಲವೋ ಅಲ್ಲಿ ಬಂಡಾಯ, ದ್ರೋಹ, ಮೋಸಗಳಿಗೆ ಅವಕಾಶ ಉತ್ಪನ್ನವಾಗುತ್ತದೆ. ಹಾಗಾದಾಗ ಶತ್ರುಗಳನ್ನಾದರು ಗೆಲ್ಲಬಲ್ಲ ರಾಜ ಹಿತ ಶತ್ರುಗಳಿಂದ ಸುಲಭವಾಗಿ ಸೋಲುತ್ತಾನೆ. ರಾಜನಾದವನು ಯಾರನ್ನೂ ಪೂರ್ಣವಾಗಿ ನಂಬಬಾರದು. ಹಾಗೆಂದು ಸದಾ ಸಂದೇಹ ದೃಷ್ಟಿಯಿಂದಲೂ ನೋಡಬಾರದು. ಕಾರ್ಯಶೀಲನಾಗಿದ್ದು ಏನಾಗುತ್ತಿದೆ ಯಾಕಾಗುತ್ತಿದೆ ಎಂಬ ಸತ್ಯಾಸತ್ಯತೆಯನ್ನು ಸ್ವಯಂ ತಿಳಿದುಕೊಳ್ಳುವಷ್ಟು ದಕ್ಷತೆ ಹೊಂದಿರಬೇಕು. ಯಾಕೆಂದರೆ ತನ್ನ ಸಹಚರಿಯಾಗಿರುವಾತ ಎಷ್ಟು ನಿಷ್ಠೆ ಹೊಂದಿದ್ದರೂ ಮನುಷ್ಯನಾದವ ಸಂದರ್ಭಕ್ಕನುಸಾರ ಸ್ವಾರ್ಥಿಯಾಗಿ ಯೋಚಿಸುವುದು, ಸ್ವಜನ ಪಕ್ಷಪಾತಿಯಾಗಿ ವ್ಯವಹರಿಸುವುದು ಸಹಜ ಗುಣ. ನಿನ್ನೆ ಒಳ್ಳೆಯವನಾಗಿದ್ದರೂ ಇಂದಿನ ಸಮಯ ಆತನನ್ನು ಕೈಗೊಂಬೆಯಾಗಿಸಿ ದುಷ್ಪ್ರೇರಣೆ ನೀಡುವ ಸಾಧ್ಯತೆ ಪ್ರತಿಕ್ಷಣದಲ್ಲೂ ಇರುತ್ತದೆ. ಹಾಗಾಗಿ ರಾಜನಾದವ ತನ್ನವರು ಎಂಬ ವರ್ಗದ ಮೇಲೂ ಗಮನವಿಟ್ಟು ವ್ಯವಹರಿಸಬೇಕು. ಇಲ್ಲವಾದರೆ ಮಿಂಚಿಹೋದ ಕಾಲದಲ್ಲಿ ಮತ್ತೆ ಚಿಂತೆ ಮಾಡಿ ಫಲವಿರುವುದಿಲ್ಲ”

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page