31.8 C
Udupi
Thursday, April 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 475

ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೪೭೫ ಮಹಾಭಾರತ

ಧರ್ಮರಾಯನಿಗೆ ಧರ್ಮೋಪದೇಶ ಮಾಡಲು ಭೀಷ್ಮರು ಸನ್ನದ್ಧರಾಗುತ್ತಿದ್ದಂತೆಯೆ ಅವರ ಸುತ್ತ ಸಮಸ್ತ ವೇದಗಳನ್ನು ಸಂಪೂರ್ಣವಾಗಿ ತಿಳಿದಿದ್ದ ವೇದವ್ಯಾಸರು, ದೇವರ್ಷಿ ನಾರದರು, ವಾತ್ಸ್ಯರು, ಆಶ್ಮಕರು, ಸುಮಂತುಗಳು, ಜೈಮಿನಿ ಮಹರ್ಷಿ, ಮಹಾತ್ಮರಾದ ಪೈಲರು, ಶಾಂಡಿಲ್ಯರು, ದೇವಲರು, ಬುದ್ಧಿವಂತರಾದ ಮೈತ್ರೇಯ ಮಹರ್ಷಿ, ಅಸಿತ, ವಸಿಷ್ಠ, ವಿಶ್ವಾಮಿತ್ರ, ಬ್ರಹಸ್ಪತಿ, ಶುಕ್ರಾಚಾರ್ಯರು, ಮಹಾಮುನಿಗಳಾದ ಚ್ಯವನರು, ಸನತ್ಕುಮಾರರು, ಕಪಿಲರು, ವಾಲ್ಮೀಕಿ, ತುಂಬುರ, ಕುರು, ಮೌದ್ಗಲರು, ಪರಶುರಾಮರು, ತೃಣಬಿಂದು, ಪಿಪ್ಪಲಾದರು, ವಾಯು, ದಕ್ಷರು, ಪರಾಶರರು, ಮರೀಚಿ, ಕಚರು, ಕಶ್ಯಪರು, ಪುಲಸ್ತ್ಯರು, ಕ್ರತುಗಳು, ಅಂಗೀರಸರು, ಕಾಶ್ಯರು, ಗೌತಮರು, ಗಾಲವಮುನಿಗಳು, ಧೌಮ್ಯರು, ವಿಭಾಂಡರು, ಮಾಂಡವ್ಯರು, ಧೌಮ್ರರು, ಮಾರ್ಕಂಡೇಯರು, ಭಾಸ್ಕರಿಗಳು, ಕೃಷ್ಣಾನುಭೌತಿಕರು, ಪೂರಣರು ಹೀಗೆ ತಪೋನಿಧಿಗಳೂ, ಮಹಾತ್ಮರೂ ಆದ ಋಷಿ ಸಮೂಹಗಳೆಲ್ಲ ಸುತ್ತುವರಿದು ಸೂರ್ಯನನ್ನು ಸುತ್ತುವರಿದ ಗ್ರಹಗಳಂತೆ ನಿಂತರು. ಭೀಷ್ಮಾಚಾರ್ಯರು ಬದ್ಧಾಂಜಲಿಯಾಗಿ ಶ್ರೀಕೃಷ್ಣನನ್ನು ಧ್ಯಾನಿಸುತ್ತಿದ್ದಾರೆ. ಬಹುವಿಧವಾಗಿ ಶ್ರೀಹರಿಯನ್ನು ಸ್ತುತಿಸಿ ಮಹಿಮಾತಿಶಯಗಳನ್ನು ಹೇಳುತ್ತಾ ವರ್ಣಿಸಿ ಸ್ತೋತ್ರ ಮಾಡತೊಡಗಿದರು. ಸ್ತುತಿ ಮಾಡುತ್ತಾ ಕೃಷ್ಣನ ಮಹಿಮೆಯನ್ನು ಹೇಳತೊಡಗಿದರು “ಶ್ರೀಕೃಷ್ಣನನ್ನು ಅನನ್ಯ ಭಕ್ತಿಯಿಂದ ಯಾರು ನಿತ್ಯ ನಮಸ್ಕರಿಸುತ್ತಾರೊ ಅವರಿಗೆ ಹತ್ತು ಅಶ್ವಮೇಧ ಯಾಗಗಳನ್ನು ಮಾಡಿ ಅವಭೃತ ಕಲಶ ಸ್ನಾನಗೈದ ಪುಣ್ಯ ಫಲಕ್ಕೆ ಸಮನಾದ ಸತ್ಫಲ ಪ್ರಾಪ್ತವಾಗುತ್ತದೆ. ವ್ಯತ್ಯಾಸವೇನೆಂದರೆ ಹತ್ತು ಅಶ್ವಮೇಧ ಯಾಗ ಮಾಡಿದವನಿಗೆ ಪುನರ್ಜನ್ಮವು ತಪ್ಪಿದ್ದಲ್ಲ. ಅವನು ಪುಣ್ಯ ಫಲ ತೀರಿದ ಮೇಲೆ ಮತ್ತೆ ಹುಟ್ಟು ಪಡೆಯಬೇಕು. ಆದರೆ ಧರ್ಮಾತ್ಮನಾಗಿದ್ದು, ಶ್ರೀಕೃಷ್ಣನಿಗೆ ಶ್ರದ್ಧಾ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತಾ ಬದುಕಿ ಇಹಯಾತ್ರೆ ಪೂರೈಸಿದವನಿಗೆ ಮೋಕ್ಷ ಪ್ರಾಪ್ತವಾಗುತ್ತದೆ. ಯಾರು ಶ್ರೀಕೃಷ್ಣನ ಭಜನೆಯನ್ನು ನಿತ್ಯವ್ರತವನ್ನಾಗಿ ಆಚರಿಸುತ್ತಾ, ಸರ್ವಕಾಲದಲ್ಲಿಯೂ ಸ್ಮರಿಸುತ್ತಾ, ರಾತ್ರಿಯೂ ಶ್ರೀದೇವರನ್ನು ನೆನೆದು ಮಲಗುತ್ತಾರೊ, ಬೆಳಗೆದ್ದು ಮತ್ತೆ ಈ ದಿನವನ್ನು ಬದುಕಲು ಅವಕಾಶವಿತ್ತ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಾರೊ ಅಂತಹ ಭಕ್ತರು ಹೋಮದಲ್ಲಿ ಅರ್ಪಿಸಲ್ಪಟ್ಟ ಆಜ್ಯ ಯಜ್ಞೇಶ್ವರನಲ್ಲಿ ಲೀನವಾಗುಂತೆ ತಮ್ಮ ಆರಾಧ್ಯ ದೇವರಲ್ಲಿ ಲೀನರಾಗುತ್ತಾರೆ. ಹರಿ ಎಂಬ ಎರಡಕ್ಷರವು ಪ್ರಾಣ ಪ್ರಯಾಣ ಸಮಯದಲ್ಲಿ ನಡುಗಾಡಿನ ಬುತ್ತಿಯಂತೆ ಜೊತೆಗಿರುತ್ತದೆ. ಸಂಸಾರವೆಂಬ ರೋಗದ ನಿವಾರಣೆಗೆ ಔಷಧಪ್ರಾಯವೂ ಆಗುತ್ತದೆ. ಸಕಲವಿಧವಾದ ದುಃಖ ಶೋಕಗಳನ್ನು ಪರಿಹರಿಸಿ ರಕ್ಷಣೆ ನೀಡುತ್ತದೆ.” ಹೀಗೆ ಭಕ್ತ ಮತ್ತು ಭಕ್ತಿಯ ಶಕ್ತಿ ಸಾಧಕವನ್ನು ವಿವರಿಸಿ ಹೇಳಿದರು. ನಂತರ ಧರ್ಮರಾಯನನ್ನು ಕರೆದು “ವತ್ಸಾ! ನಿನ್ನ ಮನದಲ್ಲಿ ಇನ್ನೂ ಏನೋ ದುಗುಡ ತುಮುಲಗಳಿವೆ. ಈಗಾಗಲೆ ಹೇಳಿರುವಂತೆ ನೀನು ಕೇಳಿದೆಯಾದರೆ ನನಗೆ ತಿಳಿದಿರುವ ಸತ್ಯವನ್ನು ನಿನಗೆ ತಿಳಿಸುತ್ತೇನೆ” ಎಂದರು.

ಆಗ ಧರ್ಮರಾಯನು “ಅಜ್ಜಾ! ಧರ್ಮ ಬಲ್ಲವರು ರಾಜ ಧರ್ಮ ಮಹತ್ತರವಾದದ್ದು ಎನ್ನುತ್ತಾರೆ. ಆದರೆ ಈಗ ರಾಜನಾಗಿ ಅಭಿಷಿಕ್ತನಾದ ನನಗೆ ರಾಜ್ಯ ಆಳುವುದು ಹೇಗೆ ಎಂಬ ಆತಂಕ ಮತ್ತು ಭಯ ಆವರಿಸುತ್ತಿದೆ. ಇದಕ್ಕೆ ಪರಿಹಾರವೇನು?”

ಭೀಷ್ಮಾಚಾರ್ಯರು ಶ್ರೀಕೃಷ್ಣನಿಗೂ, ನೆರೆದಿರುವ ಋಷಿ ಸಮೂಹಕ್ಕೂ ಮನಸಾ ವಂದಿಸಿ ಧರ್ಮರಾಯನಿಗೆ ಉತ್ತರಿಸತೊಡಗಿದರು. “ಕುಮಾರಾ! ನಾನು ಗುರು ಹಿರಿಯರ ಸೇವೆಯಿಂದ, ಶಾಸ್ತ್ರಾದಿಗಳ ಅಭ್ಯಾಸದಿಂದ, ಸಜ್ಜನರ ಸೇವೆಯಿಂದ ಅರಿತುಕೊಂಡು ನನ್ನ ದೀರ್ಘಕಾಲದ ಆಯುಷ್ಯದಲ್ಲಿ ಏನು ಲೋಕಾನುಭವ ಹೊಂದಿದ್ದೇನೊ ಅದೆಲ್ಲದರ ಸಾರವನ್ನು ತಿಳಿಸುತ್ತೇನೆ ಕೇಳು‌. ನನ್ನಿಂದ ಪ್ರಾಪ್ತವಾಗಲಿರುವ ಸುಜ್ಞಾನವನ್ನು ಪರಿಗ್ರಹಿಸಿಕೊಳ್ಳಲು ನೀನು ಪೂರ್ಣಾಧಿಕಾರಿ ಆಗಿರುವೆ. ಸಿಂಹಾಸನದ ಪವಿತ್ರ ಸೇವೆಗಾಗಿ ಈ ತನಕ ಏನೆಲ್ಲವನ್ನು ಸಹಿಸಿಕೊಂಡು ಬದುಕಿದ್ದೆನೊ, ಆ ಪುಣ್ಯತಮವಾದ ಸಿಂಹಾಸನದಲ್ಲಿ ವಿಧ್ಯುಕ್ತ ಅಭಿಷಿಕ್ತನಾದ ಮಹಾರಾಜ ನೀನಾಗಿರುವೆ. ನನ್ನ ಮೊಮ್ಮಗನೂ ಹಸ್ತಿನೆಯ ಸಾಮ್ರಾಜ್ಯದ ಸಾಮ್ರಾಟನೂ ಆಗಿರುವ ನೀನು ಸರಿಯಾಗಿ ಕೇಳಿಸಿಕೋ – ವತ್ಸಾ! ರಾಜನಾದವನು ಮೊದಲು ದೇವರು, ಗುರು ಮತ್ತು ಸುಜನರಲ್ಲಿ ಭಕ್ತಿಯುಳ್ಳವನಾಗಿರಬೇಕು. ಹಾಗೆ ಇರುವುದರಿಂದ ಧರ್ಮದ ಋಣ ಹರಿದು ರಾಜ ರಾಜ್ಯದ ಪ್ರೀತಿಗೆ ಪಾತ್ರನಾಗುತ್ತಾನೆ. ಕಾರ್ಯ ಶೀಲತೆ ಅಂದರೆ ಸಮಯೋಚಿತವಾಗಿ ಯಾವುದನ್ನು ಮಾಡಬೇಕೋ, ಮಾಡಿಸಬೇಕೋ ಅದನ್ನು ಸಮರ್ಥನಾಗಿ ಮಾಡಿಸುವ ಸಾಮರ್ಥ್ಯ ಹೊಂದಿರಬೇಕು. ಸತ್ಯವಂತನಾಗಿದ್ದು, ಅಧ್ಯಯನಶೀಲನಾಗಿದ್ದು ತನ್ನ ಗುಣ ಮತ್ತು ಜ್ಞಾನವನ್ನು ಸಮೃದ್ಧಗೊಳಿಸುತ್ತಿರಬೇಕು. ಇವು ಮೂರು ರಾಜನಾದವನಿಗೆ ಇರಬೇಕಾದ ಮೂರು ಪ್ರಮುಖ ಗುಣಗಳು. ಹಾಗೆಯೆ ರಾಜನು ನ್ಯಾಯಪರನಾಗಿದ್ದು ರಾಜನ ದಯೆಯಲ್ಲಿ ಸರ್ವಥಾ ವರ್ಣಭೇದವಿರಕೂಡದು‌. ರಾಜನು ತನ್ನ ಪ್ರಜಾಪರಿವಾರಕ್ಕೆ ಸಾಕ್ಷಾತ್ ದೇವತಾ ಸ್ವರೂಪಿಯಾಗಿ ಬದುಕಬೇಕು. ರಾಜನಾದವನು ಬಲಿಷ್ಠನಾಗಿದ್ದು ಬಲಶಾಲಿಯಾಗಿರಬೇಕು. ಪ್ರಜೆಗಳನ್ನು ಪ್ರೀತಿಸುವಲ್ಲಿ ಮಾತೆಯಂತಿರಬೇಕು. ಹಾಗೆಂದು ತುಂಬಾ ಮೃದುವಾಗಿರಬಾರದು – ತಪ್ಪು ಮಾಡಿದ ತನ್ನ ಮಕ್ಕಳಂತಹ ಪ್ರಜೆಗಳಿಗೆ ನಿಷ್ಪಕ್ಷಪಾತಿಯಾಗಿ ಶಿಕ್ಷೆ ನೀಡಬೇಕು. ಇಲ್ಲದೆ ಹೋದರೆ ರಾಜ ಆನೆಯಂತೆ ಬಲಾಢ್ಯ ಆಗಿದ್ದರೂ ಅದನ್ನು ಮೆಟ್ಟಿ ಮೇಲೇರಿ ಕುಳಿತುಕೊಳ್ಳಲು ಅವಕಾಶವಿತ್ತಂತಾಗುತ್ತದೆ. ಹಾಗಾಗಿ ದಾಕ್ಷಿಣ್ಯಪರನಾಗಿರದೆ ದಂಡನೀತಿಯ ಪಾಲನೆ ಮಾಡಬೇಕು. ಇಲ್ಲದೆ ಹೋದರೆ ವಿರೋಧ ಕಟ್ಟಿಕೊಳ್ಳಲು ಹೆದರುವ ರಾಜನಾಗಿ ಬಿಲದೊಳಗೆ ಅಡಗಿದ ಇಲಿಯಂತೆ ಕುಳಿತರೂ ವೈರಿಯೆಂಬ ಹಾವು ಬಂದು ನುಂಗಲು ಅವಕಾಶ ಒದಗಿ ಬರುತ್ತದೆ. ರಾಜನ ಸ್ನೇಹವಾಗಲಿ, ವಿರೋಧವಾಗಲಿ ಉಚಿತಾನುಚಿತ ವಿವೇಚಿಸಿ ಬೆಳೆಸಿದ ಸಂಬಂಧವಾಗಿರಬೇಕು. ಪ್ರಜೆಗಳ ಹಿತ ವಿಚಾರದಲ್ಲಿ ಕರುಣೆ ತೋರಬೇಕು. ಅವರು ಅಹಿತಕರವಾಗಿ ನಡೆದುಕೊಂಡರೆ ತಪ್ಪಿತಸ್ಥರಾದವರನ್ನು ಸಂಬಂಧಿ, ಪ್ರಮುಖ, ಪ್ರಭಾವಿ, ಆತ್ಮೀಯ ಹೀಗೆ ಯಾವ ತಾರತಮ್ಯವನ್ನೂ ತೋರದೆ ನ್ಯಾಯ ಅನ್ಯಾಯ ತೀರ್ಮಾನಿಸಿ ಶಿಕ್ಷಿಸಬೇಕು. ಇದಕ್ಕೆ ಪೂರಕವಾದ ಒಂದು ಕಥೆಯನ್ನು ಹೇಳುತ್ತೇನೆ ಕೇಳು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page