ಭಾಗ 474
ಭರತೇಶ್ ಶೆಟ್ಟಿ ,ಎಕ್ಕಾರು

ತನ್ನ ಪೂರ್ವಾಪರ ಸತ್ಯವನ್ನು ಮುಂದೆ ಆಗಲಿರುವುದನ್ನು ಸ್ವಗತ ಅಂದರೆ ಅಂತರಂಗದಲ್ಲಿ ವಿವೇಚಿಸಿದ ಆಚಾರ್ಯ ಭೀಷ್ಮರು ಶ್ರೀ ಕೃಷ್ಣನನ್ನು ಪ್ರಶ್ನಿಸತೊಡಗಿದರು “ಹೇ ವಾಸುದೇವಾ! ಮಹಾಯುದ್ದ ಸಮಾಪ್ತವಾಗಿ ಧರ್ಮಾತ್ಮರೂ, ನಿನ್ನಿಂದ ರಕ್ಷಿತರೂ ಆದ ಪಾಂಡವರಿಗೆ ಜಯವಾಗಿದೆಯಲ್ಲವೆ? ಆ ಬಳಿಕ ಧರ್ಮರಾಯನ ಪಟ್ಟಾಭಿಷೇಕ ನಡೆಯಿತೆ? ನನಗೊಂದು ಉಪಾಂಶು ವ್ರತವಿತ್ತು. ಏನೆಂದರೆ ಯಾವ ಕಾಲದಲ್ಲಿ ಹಸ್ತಿನೆಯ ಸಿಂಹಾಸನವನ್ನು ಸರ್ವ ಸಮರ್ಥನೂ, ಧರ್ಮಾತ್ಮನೂ, ನ್ಯಾಯಪರನೂ, ಪ್ರಜಾಪರಿಪಾಲಕನೂ ಆದ ಮಹಾರಾಜ ಏರಿ ರಾಜದಂಡಧರನಾಗುತ್ತಾನೋ ಆ ತನಕ ನಾನು ಈ ಸಾಮ್ರಾಜ್ಯದ ರಕ್ಷಕನಾಗಿದ್ದು, ಆ ಸಮಯದ ಬಳಿಕ ಮುಕ್ತನಾಗಿ ನನ್ನ ಮರಣದ ಇಚ್ಚೆಯ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಬಯಸಿದ್ದೆನು. ಧರ್ಮರಾಯ ಚಂದ್ರವಂಶದ ಮಹಾರಾಜನಾದರೆ ನನ್ನ ಅಪೇಕ್ಷೆ ಕೈಗೂಡಿದಂತೆ ಆಗಲಿದೆ. ಯುಧಿಷ್ಟಿರನ ಜೊತೆ ಭೀಮಾರ್ಜುನರು ಮತ್ತು ನಕುಲ ಸಹದೇವಾದಿಗಳು ಆಡಳಿತ ಯಂತ್ರದ ಭಾಗವಾದರೆ ಎಲ್ಲವೂ ಸುಸೂತ್ರವಾಗಿ ಸಾಗುವುದರಲ್ಲಿ ಯಾವುದೆ ಅನುಮಾನವಿಲ್ಲ. ಹಾಗಾಗಿ ನಿನ್ನಲ್ಲಿ ಕೇಳುತ್ತಿದ್ದೇನೆ. ಹಸ್ತಿನಾವತಿಯ ಸಿಂಹಾಸನದಲ್ಲಿ ಧರ್ಮರಾಯ ಮಹಾರಾಜನಾಗಿ ಅಭಿಷಿಕ್ತನಾದನೆ?
ಆಗ ಶ್ರೀಕೃಷ್ಣ ” ಆಚಾರ್ಯರೇ! ಎಲ್ಲವೂ ನಿಮ್ಮ ಅಪೇಕ್ಷೆಯಂತೆ ನಡೆದಿದೆ. ಧರ್ಮರಾಯ ಈಗ ಗಜಪುರದ ಸಾಮ್ರಾಟನಾಗಿದ್ದಾನೆ. ಆದರೆ, ಧರ್ಮರಾಯನನ್ನು ಒಂದು ಚಿಂತೆ ಕಾಡುತ್ತಿದೆ. ಏನೆಂದರೆ ಸ್ವಜನರೂ, ಬಂಧುಗಳೂ ಆದವರನ್ನು ಹತ್ಯೆಗೈದು ತಾನು ಮಹಾರಾಜನಾಗುತ್ತಿದ್ದೇನಲ್ಲಾ? ಹಾಗೆಂದು ಬಂಧುಹತ್ಯೆಯಾಗಲಿ, ಪ್ರಾಪ್ತ ಅಧಿಕಾರವಾಗಲಿ ಆತನ ಗುರಿಯಾಗಿರಲಿಲ್ಲ. ಅನಪೇಕ್ಷಿತವು ಅನಿವಾರ್ಯವಾದ ಬೆಳವಣಿಗೆಗಳಿಂದ ಹೀಗೆಲ್ಲಾ ನಡೆದು ಹೋಯಿತು. ಧರ್ಮಜ ಸಾಧ್ಯವಾದುದಕ್ಕಿಂತಲೂ ಅಧಿಕ ಪುರುಷ ಪ್ರಯತ್ನದಿಂದ ಈ ಮಹಾನಾಶಕಾರಕ ಸಂಗ್ರಾಮವನ್ನು ತಡೆಯುವ ಎಲ್ಲಾ ಪ್ರಯತ್ನ ಮಾಡಿದ್ದನು. ಧರ್ಮರಾಯ ಏನೇ ಮಾಡಿದ್ದರೂ, ಮಾಡುವುದಿದ್ದರೂ ಹಿರಿಯರ, ಪ್ರಾಜ್ಞರ ಸಹಮತ ಮತ್ತು ಅಭಿಪ್ರಾಯದಂತೆ ಹೆಜ್ಜೆ ಇಟ್ಟು ಸಾಗಿದವನು ಮತ್ತು ಸಾಗುತ್ತಿರುವವನು. ಹಾಗಾಗಿ ನೀವು ಆತನ ಮನದ ದುಗುಡಕ್ಕೆ ಪರಿಹಾರ ಸೂಚಿಸಬೇಕು” ಎಂದು ನುಡಿದನು.
ಪಿತಾಮಹ ಭೀಷ್ಮಾಚಾರ್ಯರು ಧರ್ಮಜನನ್ನು ಕಣ್ಣ ರೆಪ್ಪೆ ಅರಳಿಸಿ ಎತ್ತರಿಸಿ ನೋಡಿದಾಗ ಕಡುದುಃಖದಿಂದ ಅವರ ಬಳಿ ಬಂದು ಕಣ್ಣೀರಿಳಿಸುತ್ತಾ ನಿಂತನು. “ಅಜ್ಜಾ! ನಾವು ಜನಿಸಿದ್ದು ವನದಲ್ಲಿ, ಬೆಳೆದದ್ದೂ ಅಲ್ಲಿಯೆ. ನಮ್ಮ ಪಿತಾಶ್ರಿಯವರು ಗತಿಸಿದ ಕಾಲದಲ್ಲಿ ಮರಳಿ ಅರಮನೆಗೆ ಬರಮಾಡಿಕೊಂಡವರು ನೀವು. ಆಡಿಸಿ, ಕೈತುತ್ತು ಉಣಿಸಿ ಬೆಳೆಸಿದ ನಿಮ್ಮೆದುರು ಆಯುಧವೆತ್ತಿ ಹೋರಾಡುವ ದುರಾದೃಷ್ಟ ನಮ್ಮದಾಯಿತು. ನನಗೆ ನನ್ನ ನಡೆಯ ಬಗ್ಗೆ ಅಸಹನೀಯ ನೋವು, ವೇದನೆ ಆಗುತ್ತಿದೆ. ಯುದ್ದ ಗೆದ್ದೆನಾದರೂ ಒಂದರ್ಥದಲ್ಲಿ ನಾನು ಸೋತು ಹೋಗಿದ್ದೇನೆ. ದುರ್ಯೋಧನ ರಾಜ್ಯಭಾರ ಮಾಡುವ ಸಮಯ ನೀವು ಇದ್ದು ಉಚಿತಾನುಚಿತಗಳ ಮಾರ್ಗದರ್ಶಕರಾಗಿದ್ದಿರಿ. ಗುರು ದ್ರೋಣಾಚಾರ್ಯರು ಆಸ್ಥಾನ ಪ್ರಮುಖರಾಗಿದ್ದು ಗುರಿ ತೋರುವ ಗುರುವಾಗಿದ್ದರು. ಆದರೆ ನಾನೀಗ ನಿಮ್ಮಂತಹ ಮಹಾತ್ಮರ ಆ ಮಹಾನ್ ಕೊಡುಗೆಯಿಂದ ವಂಚಿತನಾಗಿ ರಾಜನಾಗಿ ಹೇಗೆ ಮುಂದುವರಿಯಲಿ? ನೀವು ಬುದ್ದಿ ಹೇಳುತ್ತಾ, ಧರ್ಮ ಸೂಕ್ಷ್ಮಗಳನ್ನು ವಿವೇಚಿಸುತ್ತಾ ಒಂದರ್ಥದಲ್ಲಿ ನಮಗೆ ಗುರುವಾಗಿ ಮುನ್ನಡೆಸಿದವರು. ಗುರು ತನ್ನ ಜ್ಞಾನವನ್ನು ಪ್ರಿಯ ಶಿಷ್ಯನಲ್ಲಿ ನಿಕ್ಷೇಪಗೊಳಿಸಿ ವಿರಮಿಸುವುದು ಭವಿಷ್ಯದಲ್ಲಿ ಅದರ ಸದ್ವಿನಿಯೋಗಕ್ಕಾಗಿ. ಆದರೆ ನಿಮ್ಮ ಸುದೀರ್ಘ ಆಡಳಿತದ ಸುಜ್ಞಾನ ನಿಮ್ಮ ಜೊತೆಯೆ ಉಳಿದು ಹೋಗುವಂತಾಗಲಿದೆಯೆ? ನಿಮ್ಮ ಸಕಾಲದ ಬೋಧನೆ ಇಲ್ಲದೆ ರಾಜ್ಯವಾಳಲು ನಾನು ಸಮರ್ಥನಾಗಲು ಸಾಧ್ಯವಿದೆಯೆ? ಎಂಬ ವ್ಯಥೆ ನನ್ನನ್ನು ಆವರಿಸಿದೆ” ಎಂದು ಕಣ್ಣೀರ್ಗರೆದನು.
ಭೀಷ್ಮಾಚಾರ್ಯರಿಗೆ ಧರ್ಮರಾಯನ ಸದ್ಗುಣಶೀಲತೆ, ಪ್ರಬುದ್ಧತೆಯಿಂದ ಮನತುಂಬಿ ಬಂದು ತಲೆ ನೇವರಿಸಿ ಮುದ್ದಾಡಬೇಕೆಂಬ ಮನಸ್ಸಾದರೂ, ಶರೀರಾದ್ಯಂತ ಚುಚ್ಚಿ ಮುಚ್ಚಿರುವ ಶರ ಪಂಜರದಲ್ಲಿ ಬಂಧಿತನಾಗಿದ್ದು ಅಸಹಾಯಕರಾದರು. ಆದರೂ ಮೊಮ್ಮಗನನ್ನು ಕರೆದು “ಮಗೂ! ಯಾಕಪ್ಪಾ ನಿನಗೆ ಸಂಕೋಚ? ವ್ಯಥೆ? ಇತ್ತ ಬಾ, ನನಗೇನೇನು ತಿಳಿದಿದೆಯೊ ಅವೆಲ್ಲವನ್ನೂ ನಿನಗಲ್ಲದೆ ಮತ್ಯಾರಿಗೆ ನಾನು ಹೇಳಲಿ? ಸರ್ವ ಸಮರ್ಥನೂ, ಅರ್ಹನೂ ಆದ ನೀನು ನನಗೆ ಗುರುವಿನ ಪ್ರಿಯ ಶಿಷ್ಯನಿಗಿಂತಲೂ ಅಧಿಕನಾಗಿರುವೆ. ವತ್ಸಾ! ಮೊದಲಾಗಿ ಖಿನ್ನತೆಯನ್ನು ತೊರೆದು ಬಿಡು. ಧರ್ಮ ಏನೆಂದು ಚೆನ್ನಾಗಿ ತಿಳಿದು ಹಾಗೆಯೆ ಪಾಲಿಸಿ ಬದುಕುತ್ತಿರುವ ನಿನ್ನಿಂದ ಯಾವ ಅಪರಾಧವೂ ಆಗಿಲ್ಲ. ಓರ್ವ ಬ್ರಾಹ್ಮಣನಿಗೆ ಅಧ್ಯಯನ, ಆರಾಧನೆ, ತಪಸ್ಸು, ದಾನ, ಪ್ರಾರ್ಥನೆ ಹೇಗೆ ಆಚಾರ ಧರ್ಮವೋ ಹಾಗೆಯೆ ನಿನ್ನಂತಹ ಕ್ಷತ್ರಿಯನಿಗೆ ಯುದ್ಧವು ಯುದ್ಧಕ್ಕೆ ಕರೆದಾಗ ಆಹ್ವಾನ ಪುರಸ್ಕರಿಸಿ ಹಾಗೆ ಮಾಡಲೇಬೇಕಾದದ್ದು ಪರಮ ಧರ್ಮ. ನೀನು ಅದನ್ನು ಮಾಡಿರುವೆ ಯಾವ ಅಪರಾಧವೂ ನಿನ್ನಿಂದ ಆಗಿಲ್ಲ. ಮೇಲಾಗಿ ಓರ್ವ ಕ್ಷತ್ರಿಯನಾದವ ತಪ್ಪು ದಾರಿಯಲ್ಲಿ ಹೋಗುತ್ತಿರುವವನ್ನು, ಅಧರ್ಮ ಮಾರ್ಗ ಅನುಸರಿಸುವವರನ್ನು, ಅಧರ್ಮಿಯ ಜೊತೆಗಿದ್ದು ಸಹಕರಿಸುವವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷಿಸುವ ಹೊಣೆಗಾರಿಕೆ ಇದೆ. ಆಗ ಅಪರಾಧಿ ಸ್ಥಾನದಲ್ಲಿರುವವರನ್ನು ತನ್ನ ತಂದೆ, ಅಜ್ಜ, ಗುರು, ಸಹೋದರ, ಬಂಧು, ಅಥವಾ ಮಿತ್ರ ಎಂಬ ದೃಷ್ಟಿಯಲ್ಲಿ ಕಂಡು ನ್ಯಾಯ ಸಮ್ಮತ ಶಿಕ್ಷೆ ವಿಧಿಸುವಲ್ಲಿ ಹಿಂದುಳಿದರೆ ಅದು ಕ್ಷಾತ್ರ ಧರ್ಮಕ್ಕೆ ಅಪಚಾರವಾಗುತ್ತದೆ. ದುರಾಸೆಯಿಂದ ಧರ್ಮವನ್ನು ಮೀರಿ ಅತಿಕ್ರಮಿಸಿದಾತ ಅತಿ ಆತ್ಮೀಯನಾದರೂ, ಹಿತ ಮಾತಿಗೆ ತಿದ್ದಿಕೊಳ್ಳದೆ ಹಠ ತೋರಿದರೆ ಯುದ್ದ ಮಾಡಿ ಹೊಡೆದು ಕೊಂದಾದರೂ ಧರ್ಮದ ರಕ್ಷಣೆ ಮಾಡಬೇಕು. ಹಾಗೆ ಮಾಡುವುದರಿಂದ ಧರ್ಮ ಪಾಲನೆ ಮಾಡಿ ಕೀರ್ತಿ ಪ್ರಾಪ್ತವಾಗುತ್ತದೆ ಹೊರತು ಯಾವುದೆ ಅಪರಾಧ ಆಗಲಾರದು. ನೀನು ಮಾಡಿರುವುದು ಸರ್ವಥಾ ಧರ್ಮ ಪರವಾಗಿದ್ದು, ಧರ್ಮವನ್ನು ಮೀರಿ ನಡೆದವರಿಗೆ ನಿಷ್ಪಕ್ಷಪಾತ ಶಿಕ್ಷೆಯಿತ್ತು ನ್ಯಾಯ ಮಾರ್ಗ ಅನುಸರಿಸಿರುವೆ. ಹಾಗಾಗಿ ಸತ್ತವರು ಯಾರು ಎನ್ನುವ ಪ್ರಶ್ನೆ ಉದ್ಭವಿಸದು. ಅಧರ್ಮಿಗಳನ್ನಷ್ಟೆ ನೀನು ಸಂಹರಿಸಿ ಧರ್ಮದ ಸಂರಕ್ಷಕನಾಗಿ ಸತ್ಕೀರ್ತಿ ಸಂಪಾದಿಸಿರುವೆ. ಆ ಕುರಿತಾದ ಯಾವ ಚಿಂತೆ ಇದ್ದರೂ ಈ ಕ್ಷಣವೆ ತೊರೆದು ಬಿಡು. ನಿಷ್ಕಲ್ಮಶ ಮನಸ್ಕನಾಗಿ, ಯಾವುದೆ ಸಂಕೋಚವನ್ನೂ ಹೊಂದದೆ ನನ್ನಿಂದ ಏನನ್ನು ಕೇಳಿ ತಿಳಿಯಬೇಕೆಂದು ಬಯಸಿರುವೆಯೊ ಅದೆಲ್ಲವನ್ನೂ ಕೇಳು. ನನಗೆ ಏನು ತಿಳಿದಿದೆಯೊ ಆ ಸರ್ವ ಸತ್ಯವನ್ನೂ ನಿನಗೆ ಬೋಧಿಸುತ್ತೇನೆ. ಹಾಗೆ ಮಾಡುವುದರಿಂದ ನನಗೂ ಪರಮ ಸಂತೋಷ ಪ್ರಾಪ್ತವಾಗಲಿದೆ.” ಎಂದರು.
ಅಜ್ಜ ಭೀಷ್ಮಾಚಾರ್ಯರ ಅಭಿಮತ ಕೇಳಿದ ಧರ್ಮರಾಯನ ಮನಸ್ಸು ಹಗುರವಾಯಿತು. ತನ್ನ ಮನದಲ್ಲಿ ಏನೇನು ಗೊಂದಲಗಳಿವೆಯೊ ಅದೆಲ್ಲವನ್ನೂ ಪರಿಹರಿಸುವ ದಿಕ್ಕಿನಲ್ಲಿ ಒಂದೊಂದೆ ಪ್ರಶ್ನೆಗಳನ್ನು ಕೇಳಲು ಆರಂಭಿಸಿದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರು






















































