ಭಾಗ – 473
ಭರತೇಶ ಶೆಟ್ಟಿ, ಎಕ್ಕಾರು

ಶ್ರೀಕೃಷ್ಣ ಪರಮಾತ್ಮನ ಜೊತೆಯಲ್ಲಿ ಧರ್ಮರಾಯ ಹಸ್ತಿನೆಯ ಸಾಮ್ರಾಟನಾದರೂ ಮೊಮ್ಮಗನಾಗಿಯೆ ಬಂದು ಅಜ್ಜನ ಪಾದ ಮೂಲಕ್ಕೆ ನಮಸ್ಕರಿಸಿದನು.
ಆಗ ಧ್ಯಾನಸ್ಥರಾಗಿ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹ ಭೀಷ್ಮಾಚಾರ್ಯರು ಕಣ್ಣರಳಿಸಿ ನೋಡಿದರೆ ಕೃಷ್ಣನೂ, ಧರ್ಮರಾಯನೂ ಬಳಿ ನಿಂತಿದ್ದಾರೆ. ನೋಡುತ್ತಿದ್ದಂತೆಯೆ ಎದ್ದು ಕೂರುವ ಮನಸ್ಸಾದರೂ ಅಸಾಧ್ಯ ಸ್ಥಿತಿಯಲ್ಲಿ ಇರುವ ಕಾರಣ “ಬನ್ನಿ ಹತ್ತಿರ ಬನ್ನಿ” ಎಂದು ಕರೆದರು.
ಆಗ ಶ್ರೀ ಕೃಷ್ಣನು “ಓ ಮಹಾತ್ಮನೇ! ನಿನಗೆ ಪ್ರಣಾಮಗಳು. ಈಗ ನಿಮ್ಮ ಸ್ಥಿತಿ ಹೇಗಿದೆ? ಮೈಮನಗಳು ಹೇಗಿವೆ? ಇಂದ್ರಿಯಗಳು ಯಥಾ ಸ್ಥಿತಿಯಲ್ಲಿವೆಯೆ? ಮೊದಲಿನ ಹಾಗೆಯೆ ಕೆಲಸ ಮಾಡುತ್ತಿವೆಯೊ? ಬುದ್ಧಿ ಶಕ್ತಿ, ಸ್ಮರಣಶಕ್ತಿ ಸಮನಾಗಿವೆಯೆ? ನಾನು ಈ ರೀತಿ ನಿಮ್ಮ ಕುಶಲ ಸಮಾಚಾರ ವಿಚಾರಿಸಲು ಕಾರಣ ಶರೀರಕ್ಕೆ ಒಂದು ಮುಳ್ಳು ಚುಚ್ಚಿದ ಮಾತ್ರಕ್ಕೆ ಅಸಹನೀಯ ವೇದನೆಯಾಗುತ್ತದೆ. ಅಂತಹದರಲ್ಲಿ ನಿಮ್ಮ ಮೊಮ್ಮಗನಾದ ಅರ್ಜುನನ ಶರಗಳು ಅಗಣಿತವಾಗಿ ನಿಮ್ಮ ಶರೀರವನ್ನು ಎದುರಿನಿಂದ ಹೊಕ್ಕು ಬೆಂಗಡೆಯಲ್ಲಿ ಸೀಳಿ ಹೊರಬಂದಿವೆ. ಈ ರೀತಿ ಮೈಯಲ್ಲೆಲ್ಲಾ ಬಾಣಗಳನ್ನು ಚುಚ್ಚಿಸಿಕೊಂಡಾಗ ಅನ್ಯರು ಯಾರಾಗಿದ್ದರು ನೋವು ಸಹಿಸಿ ಬದುಕಿರಲು ಸಾಧ್ಯವಿಲ್ಲ. ನಿಮ್ಮ ತಂದೆ ಶಂತನು ಚಕ್ರವರ್ತಿಯಿತ್ತ ವರ ಬಲದ ಕಾರಣದಿಂದ ಮರಣ ನೀವಾಗಿ ಬಯಸಿ ಆಮಂತ್ರಿಸದೆ ಪ್ರಾಪ್ತವಾಗದು. ವರಬಲಾನ್ವಿತರಾದ ನಿಮಗೆ ಮರಣ ಪ್ರಾಪ್ತವಾಗದಿದ್ದರೂ ಚುಚ್ಚಿರುವ ಶರಗಳ ನೋವು ಆಗದಿರಲು ಸಾಧ್ಯವೆ?” ಎಂದು ವಿಮರ್ಷಾತ್ಮಕವಾಗಿ ಆಚಾರ್ಯ ಭೀಷ್ಮರ ದಯನೀಯ ಸ್ಥಿತಿಗೆ ಮರುಗಿ ಕೇಳಿದನು.
ಆಗ ಪಿತಾಮಹ ಭೀಷ್ಮಾಚಾರ್ಯರು “ವಾಸುದೇವಾ! ನಿನಗೆ ತಿಳಿಯದ ವಿಚಾರ ಯಾವುದಾದರೂ ಇದೆಯೆ? ನನಗೊದಗಿರುವ ಈ ಸ್ಥಿತಿ ನಾನಾಗಿ ತಂದುಕೊಂಡಿರುವುದು. ನನ್ನ ಬಗ್ಗೆ ಪೂರ್ಣ ಪೂರ್ವಾಪರಗಳನ್ನು ತಿಳಿದಿರುವ ನಿನಗೆ ಪ್ರತ್ಯೇಕವಾಗಿ ಹೇಳಿ ತಿಳಿಸಬೇಕಾಗಿದೆಯೆ? ಯಾವುದು ಆಗ ಬೇಕಿತ್ತೋ ಅದನ್ನು ಅನುಭವಿಸ ಬೇಕಲ್ಲವೆ?” ಎಂದು ಪರೋಕ್ಷವಾಗಿ ಪ್ರಶ್ನಿಸಿದರು. ಭೀಷ್ಮಾಚಾರ್ಯರು ಅಷ್ಟವಸುಗಳಲ್ಲಿ ಕಿರಿಯನು. ತನ್ನ ಈ ಸ್ಥಿತಿಗೆ ಕಾರಣವಾದ ವೃತ್ತಾಂತ ಸ್ಮರಣೆಗೆ ಬಂತು.
ಬಹಳ ಹಿಂದೆ ಇಕ್ಷ್ವಾಕು ವಂಶದಲ್ಲಿ ಜನಿಸಿದ ರಾಜಾ ಮಹಾಭಿಷ ಸತ್ಯವಂತನಾಗಿ, ಸಾಹಸಿ, ಪರಮ ಧರ್ಮಿಷ್ಟನಾಗಿ ಅಮಿತ ಪುಣ್ಯ ಫಲ ಗಳಿಸಿದ್ದನು. ಪರಿಣಾಮವಾಗಿ ಕಾಲಾಂತರದಲ್ಲಿ ಮಾನವ ಜನ್ಮ ಪೂರೈಸಿದ ಬಳಿಕ ಸ್ವರ್ಗವಾಸಕ್ಕಿಂತಲೂ ಮಹತ್ತರವಾದ ಸತ್ಯಲೋಕದ ಬ್ರಹ್ಮ ಸಭೆಯಲ್ಲಿ ಸದಸ್ಯನಾಗುವ ಮಹಾ ಸೌಭಾಗ್ಯ ಪಡೆದಿದ್ದನು.
ಪರಶಿವನ ತಾಂಡವದಿಂದ ಪ್ರಾಕಾರಗೊಂಡು ಋಷಿ ಮುನಿಗಳಿಂದ ಪೋಷಿಸಲ್ಪಟ್ಟ ನಾಟ್ಯ ನೃತ್ಯ ತದಂಗ ಇನ್ನಿತರ ರೂಪಕಗಳು ಬ್ರಹ್ಮಸಭೆಯಲ್ಲಿ ಅಭಿವ್ಯಕ್ತಗೊಳ್ಳುತ್ತಿದ್ದವು. ಹೀಗಿರಲೊಂದು ದಿನ ಭಗವಾನ್ ವಿಷ್ಣು ವಲ್ಲಭೆ ಮಹಾಲಕ್ಷ್ಮಿಯ ಕಥನ ಪ್ರದರ್ಶನದ ಅಪೇಕ್ಷೆ ಸಭೆಯಿಂದ ಮೂಡಿತು. ಶ್ರೀಲಕ್ಷ್ಮಿ ಮಹಿಮಾನ್ವಿತೆ. ಆಕೆಯ ಪಾತ್ರಾಭಿನಯಕ್ಕೆ ಉಳಿದವರು ಅಂಜಿದರೆ, ಸಭೆಯಲ್ಲಿದ್ದ ಗಂಗಾಮಾತೆಗೆ ಏಕೋ ಏನೋ ಉತ್ಸಾಹ ಉಂಟಾಯಿತು. ಮಹಾಲಕ್ಷ್ಮಿಯ ಹುಟ್ಟಿನ ಕಥನದ ಪಾತ್ರಧಾರಿಯಾಗಲು ಒಪ್ಪಿದಳು. ಪೂರ್ವ ತಯಾರಿ, ಸಿದ್ಧತೆಗೆ ಕಾಲಾವಕಾಶ ಕೇಳಿದಳು. ಕಥೆಯ ನಟನೆ, ನಾಟ್ಯ, ಅಭಿನಯ ತಯಾರಿ ನಡೆಸಿದಳು. ಕ್ಷೀರ ಸಾಗರಕ್ಕೊಪ್ಪುವ ಶ್ವೇತ ವಸನ, ಹೊಳೆಯುವ ಮುತ್ತಿನ ಸರ, ಸರ್ವಾಂಗಗಳಿಗೆ ಕನಕ – ಮಾಣಿಕ್ಯ ಪೋಣಿಸಿದ ದಿವ್ಯಾಭರಣಗಳಿಂದ ಅಲಂಕೃತೆಯಾದಳು. ಬ್ರಹ್ಮ ದೇವರ ಆಶೀರ್ವಾದ, ಲಕ್ಷ್ಮಿಯ ಕೃಪೆ, ಕಲಾಮಾತೆ ಶಾರದೆಯ ಅನುಗ್ರಹ ಬೇಡಿದಳು. ನಿಗದಿತ ದಿನದಂದು ಅದ್ಬುತ ಸಿದ್ಧತೆ ನಟನಾ ತಯಾರಿಯಿಂದ ಸಿದ್ಧಳಾಗಿ, ಬ್ರಹ್ಮ ಸಭೆಯಲ್ಲಿ ಮಹಾಲಕ್ಷ್ಮಿಯ ರೂಪಿನಲ್ಲಿ ಅವಧರಿಸಿ ಬಂದಳು ಸಮುದ್ರದಿಂದ ಎದ್ದು ಬರುವ ಆ ದೃಶ್ಯ ಮನಮೋಹಕವಾಗಿ, ನೈಜತೆಯಿಂದ ಸಾಗುತ್ತಿತ್ತು. ಗಂಗೆ ಸಾಕ್ಷಾತ್ ಲಕ್ಷ್ಮಿಯಂತೆ ಕಂಗೊಳಿಸಿ ಶೋಭಿಸುತ್ತಿದ್ದಳು. ಕಥನದಂತೆ ಮಂದಾರ ಮಾಲೆ ಹಿಡಿದು ವರಿಸುವ ವರನ ಆಯ್ಕೆಗೆ ಉಳಿದವರೆಲ್ಲರನ್ನು ಬಿಟ್ಟು ವಿಷ್ಣು ಪಾತ್ರಧಾರಿ ತನ್ನರಸ ವರುಣನಿಗೆ ಮಾಲಾರ್ಪಣೆಗೈಯಲು ಆಂಗಿಕ ಅಭಿನಯದೊಂದಿಗೆ ಅತ್ತ ಸಾಗುತ್ತಿರಬೇಕಾದರೆ, ಆಕಸ್ಮಿಕವಾಗಿ ಆಕೆಯ ಸೆರಗು ಜಾರಿತು. ಆಗ ಸಭಾಸದರೆಲ್ಲರೂ ತಮ್ಮ ಕೈಗಳಿಂದ ಕಣ್ಣು ಮುಚ್ಚಿಕೊಂಡರು. ಆದರೆ ಮಹಾಭಿಷ ಮೈಮರೆತು ಕುತೂಹಲಿಗನಾಗಿ ಗಂಗೆಯನ್ನು ನೋಡುತ್ತಿದ್ದನು. ಆಕೆಯ ನಗ್ನ ಎದೆಯ ಸುವ್ಯಕ್ತ ಸೌಂದರ್ಯವನ್ನು ಬೇಕೆಂದು ಅರಿತು ಸವಿಯುತ್ತಿದ್ದನು. ಎಲ್ಲರೂ ಕಣ್ಮುಚ್ಚಿದ್ದಾರೆ. ಓರೆಗಣ್ಣಿನಿಂದ ಅವಲೋಕಿಸಿದಳು ಗಂಗೆ, ತನ್ನತ್ತ ನೋಟಕನಾಗಿದ್ದಾನೆ ಮಹಾಭಿಷ. ಜಾರಿದ ಸೆರಗು ಸರಿಪಡಿಸುವಲ್ಲಿ ನಿಧಾನಿಸಿ, ಅವಲೋಕನದಲ್ಲಿ ವ್ಯಸ್ತಳಾಗಿ ಹಿಂದುಳಿದಳು. ತನ್ನ ಸೌಂದರ್ಯಕ್ಕೋ, ಅಭಿನಯಕ್ಕೋ ಮಾರು ಹೋಗಿ ಮಹಾಭಿಷ ಮೈಮರೆತಿದ್ದಾನೆ ಎಂದುಕೊಂಡಳು.
ಇಷ್ಟಾಗುವಾಗ ಬ್ರಹ್ಮ ದೇವರ ಚಿತ್ತಕ್ಕೆ ಈ ಅಪರಾಧ- ಅಪಚಾರ ತಿಳಿಯದೆ ಉಳಿಯಲಿಲ್ಲ. ಪರಿಣಾಮ ಗಂಗೆ – ಮಹಾಭಿಷರು ಶಾಪಕ್ಕೆ ಗುರಿಯಾದರು. ” ಇಬ್ಬರೂ ಭೂಲೋಕದಲ್ಲಿ ಸತಿಪತಿಗಳಾಗಿ ಹುಟ್ಟಿ ಪುತ್ರಶೋಕವನ್ನು ಅನುಭವಿಸಿ”. ಎಂದು ಶಪಿಸಿದರು
ಮಹಾಭಿಷ – ಗಂಗೆಯರು ಕಡು ದುಃಖಕ್ಕೊಳಗಾಗಿ ಬ್ರಹ್ಮದೇವರ ಪಾದಮೂಲದಲ್ಲಿ ಕ್ಷಮಾ ಪ್ರಾರ್ಥಿಗಳಾಗಿ ಗೋಗರೆದರು. ಮರುಗಿದ ಬ್ರಹ್ಮ ದೇವ – ಗಂಗೆಯನ್ನುದ್ದೇಶಿಸಿ :- “ಶಾಪವಾಕ್ಯದಂತೆ ಭೂಮಿಯಲ್ಲಿ ನೀನು ಹುಟ್ಟಿದರೂ ನಿನಗೆ ನಿನ್ನ ಪೂರ್ವ ಸ್ಮರಣೆ ಜಾಗೃತವಾಗಿರಲಿ, ಶಾಪ ಪೂರೈಸಿ ನಿನ್ನ ಇಚ್ಚೆ ಪ್ರಕಾರ ಪುನರಪಿ ನೀನು ಈ ಲೋಕ ಸೇರಬಹುದು” ಎಂದು ಅನುಗ್ರಹಿಸಿದರು. ಮಹಾಭಿಷನಿಗೂ – “ಗಂಗೆ ಹಡೆದು ನೀಡುವ ಕಡೆಯ ಮಗನಿಂದ ನಿನಗೆ ಸಕಲ ಸೌಭಾಗ್ಯ ಪ್ರಾಪ್ತವಾಗಿ, ಸುಪುತ್ರವಂತನಾಗಿ ಶಾಪ ಮುಕ್ತನಾಗು” ಎಂದು ವಿಮೋಚನೆಯ ದಾರಿ ತೋರಿದರು.
ಗಂಗಾ ದೇವಿಗೆ ಪ್ರಾಪ್ತವಾದ ಶಾಪವಿಚಾರ ತಿಳಿದ ಅಷ್ಟ ವಸುಗಳು ಬಂದು ಆಕೆಯ ಮಕ್ಕಳಾಗಿ ಹುಟ್ಟುವ ಅವಕಾಶ ಬೇಡಿದರು. ಹೀಗೆ ಬೇಡುವಲ್ಲಿ ಕಾರಣವಾದ ಕಥೆಯಿದೆ. ಅದರ ವೃತ್ತಾಂತವನ್ನೂ ಭೀಷ್ಮಾಚಾರ್ಯರು ವಿವರಿಸಿದರು. ಅಷ್ಟ ವಸುಗಳು ಅಂದರೆ ಎಂಟು ಮಂದಿ. ಅವರಲ್ಲಿ ಕಿರಿಯವ “ದ್ಯು” ಎಂಬಾತ ತನ್ನ ಮಡದಿ ‘ವರಾಂಗಿ’. ಪತ್ನಿಗೆ ಓರ್ವಳು ಆತ್ಮೀಯ ಮಿತ್ರೆಯಾಗಿರುವ ರಾಣಿಯೋರ್ವಳಿದ್ದಳು. ಅವಳನ್ನು ಮರಣ ಬಾರದಂತೆ ಅಮರಳಾಗಿಸಬೇಕು ಎಂದು ಪತಿಯಲ್ಲಿ ಬೇಡಿಕೆಯಿಟ್ಟಿದ್ದಳು. ಅಮರತ್ವ ಪ್ರಾಪ್ತವಾಗಿಸಲು ಅಮೃತಪಾನ ಮಾಡಬೇಕಲ್ಲವೆ? ದ್ಯು ತನ್ನ ಸತಿಯಲ್ಲಿ ಅದು ಅಸಾಧ್ಯ, ನಿನ್ನ ಗೆಳತಿಗೆ ಅಮರತ್ವ ಒದಗಿಸಲಾಗದು ಎಂದು ಎಷ್ಟು ಸಮಜಾಯಿಷಿ ಹೇಳಿದರೂ ಕೇಳದೆ ಹಠ ಹಿಡಿದಿದ್ದಳು. ಅನ್ಯ ದಾರಿಯಿಲ್ಲದೆ ಬಹಳಷ್ಟು ಯೋಚಿಸಿದ ವಸು ‘ದ್ಯು’. ಕಾಮಧೇನುವಿನ ಹಾಲಿನ ಮೂಲಕ ಅಮೃತ ಪಡೆಯುವ ಯೋಜನೆ ರೂಪಿಸಿದನು. ಒಂದು ದಿನ ಅದಕ್ಕೆ ಪೂರಕ ಸಂದರ್ಭವೂ ಒದಗಿ ಬಂತು. ಯಾಗ ನಿಮಿತ್ತ ಕಾಮಧೇನು ಇಂದ್ರನಿಂದ ವಸಿಷ್ಟರಿಗೆ ನೀಡಲ್ಪಟ್ಟಿತ್ತು. ಈ ಸುದ್ದಿ ತಿಳಿದು ವಸು “ದ್ಯು” ಇನ್ನುಳಿದವರನ್ನೂ ಸೇರಿಸಿ ವಸಿಷ್ಟರಿಲ್ಲದ ಹೊತ್ತು ಧೇನುವನ್ನು ಅಪಹರಿಸಲು ಮುಂದಾದರು. ಹಾಗೆ ಧೇನುವನ್ನು ಎಳೆದು ತರಲು ಯತ್ನಿಸಿ, ಎಳೆದು ಒದ್ದಾಡಿದರೂ ಧೇನು ಬರಲಿಲ್ಲ. ಅಲ್ಲಿಯೆ ಪಕ್ಕದಲ್ಲಿದ್ದ ಮುಳ್ಳಿನ ಬೆತ್ತದಿಂದ ಕಾಮಧೇನುವಿನ ಬೆನ್ನಿಗೆ ದ್ಯು ಹೊಡೆಯಲಾರಂಭಿಸಿದನು. ಬಿತ್ತದ ಮುಳ್ಳು ಚುಚ್ಚಿ ಕಾಮಧೇನುವಿನ ಬೆನ್ನು ಸೀಳಿ ರಕ್ತ ಸುರಿಯುತ್ತಿತ್ತು.
ಅಷ್ಟರಲ್ಲಿ ಅಲ್ಲಿಗೆ ಬಂದ ವಸಿಷ್ಟರು ಅಷ್ಟವಸುಗಳ ಕುಕೃತ್ಯ ಕಂಡು “ನಿಷ್ಕರುಣಿಗಳಾಗಿ ವ್ಯವಹರಿಸಿದ ನೀವು ಮನುಷ್ಯರಾಗಿ ಹುಟ್ಟಿ ದುರ್ಮರಣ ಹೊಂದಿರಿ” ಎಂದು ಶಪಿಸಿದರು. ಅಷ್ಟವಸುಗಳು ಕಣ್ಣೀರುಗರೆದು ಮನ್ನಿಸಿ ರಕ್ಷಿಸಬೇಕೆಂದು ಗೋಗರೆದಾಗ, ಪ್ರಶಾಂತರಾದ ಮುನಿವರ ಘಟಿತ ಘಟನೆಯನ್ನು ಅವಲೋಕಿಸಿದರು. “ಅಷ್ಟ ವಸುಗಳಲ್ಲಿ ಕಿರಿಯವ ‘ದ್ಯು’ ಓರ್ವನನ್ನುಳಿದು ಮಿಕ್ಕವರು ಈ ಪ್ರಕರಣದಲ್ಲಿ ಸಹಭಾಗಿಗಳಾಗಿದ್ದೀರಿ. ಮೇಲಾಗಿ ದ್ಯು ಮುಳ್ಳಿನ ಬೆತ್ತದಿಂದ ಧೇನುವಿನ ಬೆನ್ನು ಚುಚ್ಚಲ್ಪಡುವಂತೆ ಹೊಡೆದಿದ್ದಾನೆ. ಹಾಗಾಗಿ ದ್ಯು ಪೂರ್ಣ ಪ್ರಮಾಣದಲ್ಲಿ ಮನುಷ್ಯ ಜನ್ಮ ಅನುಭವಿಸಲಿ, ಪ್ರಾಪಂಚಿಕ ಸುಖ ಬಾಹಿರನಾಗಲಿ, ಮಾತ್ರವಲ್ಲ ಮರಣ ಕಾಲದಲ್ಲಿ ಧೇನುವಿಗೆ ಚುಚ್ಚಿದ ಮುಳ್ಳುಗಳಂತೆ ಆತನೂ ಚುಚ್ಚಲ್ಪಟ್ಟು, ಯಾತನಾಮಯ ನೋವು ಅನುಭವಿಸಿ ಸಾಯುವಂತಾಗಲಿ. ಆ ಮರಣ ಕಾಲದಲ್ಲಿ ಪೂರ್ವ ಸ್ಮರಣೆಯಾಗಿ ಜನ್ಮ ರಹಸ್ಯ ನೆನಪಾಗಿ ಶಾಪ ಮುಕ್ತನಾಗಲಿ” ಎಂದು ಹೇಳಿದರು. “ನೀವು ಉಳಿದ ಏಳು ಮಂದಿ ವಸುಗಳು ಕ್ಷಣಿಕ ಕಾಲಾವಧಿಗೆ ಮನುಷ್ಯರಾಗಿ ಜನಿಸಿ, ಕಾರಾಣಾಂತರಗಳಿಂದ ಶೀಘ್ರ ಮೃತ್ಯುವಶರಾಗಿ ಶಾಪ ಮುಕ್ತಗೊಳ್ಳಿರಿ” ಎಂದು ದಯೆ ತೋರಿದರು.
ತನ್ನ ತಪ್ಪಿಗೆ ಉಳಿದವರೂ ಶಾಪಗ್ರಸ್ಥರಾದರು, ತಾನೂ ಸುದೀರ್ಘ ಮನುಷ್ಯ ಜನುಮದಲ್ಲಿ ಬಾಳುವಂತಾಯಿತು ಎಂದು ಕೊರಗಿ ಮುನಿವರ್ಯನಲ್ಲಿ ಮನ್ನಿಸಬೇಕೆಂದು ‘ದ್ಯು’ ಪರಿ ಪರಿಯಾಗಿ ಬೇಡಿದಾಗ, ಒಲಿದ ವಸಿಷ್ಟರು… “ನೀನು ಸುದೀರ್ಘ ಮಾನವ ಜನುಮ ಬಾಳಲೇಬೇಕು. ಸದ್ವಿದ್ಯಾ ಪಾರಂಗತನಾಗಿ, ವಿಕ್ರಮಿಯಾಗಿ, ಧರ್ಮಿಷ್ಟನಾಗಿ, ಸತ್ಯ ಸಂಧನಾಗಿ ಲೋಕ ಮಾನ್ಯನಾಗು. ಸತ್ಕೀರ್ತಿವಂತನಾಗು” ಎಂದು ಹರಸಿದರು.
ಹೀಗೆ ನಮಗೆ ಶಾಪವಿರಲು ವಿಮುಕ್ತಿಗೆ ದಾರಿ ಮಾಡಿಕೊಡಬೇಕಮ್ಮಾ ಎಂದು ಗಂಗಾ ಮಾತೆಯಲ್ಲಿ ಅಷ್ಟ ವಸುಗಳು ಬೇಡಿದ್ದರು. ಕಾಲ ಮಹಿಮೆಯ ಪೂರಕ ವ್ಯವಸ್ಥೆಯೋ ಏನೋ ಗಂಗೆಯೂ ಆಕೆಯ ಶಾಪ ಅನುಭವಿಸುವಾಗ ಅವಕಾಶವೀಯಲು ಒಪ್ಪಿ ಸಮ್ಮತಿ ನೀಡಿದಳು.
ಮುಂದೆ ಶಾಪದ ಪರಿಣಾಮ ರಾಜಾ ಮಹಾಭಿಷನು ಶಂತನು ಚಕ್ರವರ್ತಿಯಾಗಿ ಚಂದ್ರವಂಶದಲ್ಲಿ ಜನಿಸಿದನು. ಪ್ರಾಯ ಪ್ರಬುದ್ಧನಾದ ಕಾಲದಲ್ಲಿ ಗಂಗೆಯನ್ನು ಕಂಡು ಮೋಹಪರವಶನಾಗಿ ಪ್ರೇಮ ಭಿಕ್ಷೆ ಯಾಚಿಸಿದಾಗ ಆಕೆ “ನನ್ನನ್ನು ಯಾವ ಕಾರಣಕ್ಕೂ ಆಕ್ಷೇಪಿಸಬಾರದು, ನಾನೇನು ಮಾಡಿದರೂ ಯಾಕೆ? ಏನು? ಎಂದು ಪ್ರಶ್ನಿಸಬಾರದು” ಎಂದು ಶರತ್ತು ಹಾಕಿ ವರಿಸಲು ಒಪ್ಪಿದಳು. ಇವರ ದಾಂಪತ್ಯ ಫಲವಾಗಿ ಜನಿಸಿದ ಏಳು ನವಜಾತ ಶಿಶುಗಳನ್ನು ಗಂಗೆ ತನ್ನ ಒಡಲಿಗೆ ಅಂದರೆ ಗಂಗಾ ನದಿಗೆಸೆದು ಏಳು ವಸುಗಳಿಗೂ ಮುಕ್ತಿ ಒದಗಿಸಿದಳು. ಆದರೆ ಎಂಟನೆಯ ಮಗುವನ್ನು ಹಾಗೆಯೆ ಮಾಡಲು ಗಂಗೆ ಮುಂದುವರಿದಾಗ ಪುತ್ರ ಶೋಕ ಸಹಿಸಲಾಗದ ಶಂತನು ತಡೆದು ಬಿಟ್ಟನು. ಪರಿಣಾಮ ಗಂಗೆ ತನ್ನನ್ನು ಆಕ್ಷೇಪಿಸಿ ಪ್ರಶ್ನಿಸಿದ ಶಂತನುವಿನ ಜೊತೆ ಸಾಂಸಾರಿಕ ಜೀವನದಿಂದ ಮುಕ್ತಳಾದಳು. ಎಂಟನೆಯ ಮಗುವೊಂದು ಮಾತ್ರ ಶಂತನು ಚಕ್ರವರ್ತಿಯ ಪಾಲಿಗೆ ಉಳಿಯಿತು. ಆ ಮಗುವೆ ಇಂದಿನ ಶರಶಯ್ಯೆಯಲ್ಲಿ ಪವಡಿಸಿರುವ ಆಚಾರ್ಯ ಭೀಷ್ಮರು.
ಮುಂದುವರಿಯುವುದು……






















































