32.6 C
Udupi
Sunday, March 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 472

ಭರತೇಶ್ ಶೆಟ್ಟಿ,ಎಕ್ಕಾರು

ಧೃತರಾಷ್ಟ್ರ ಗಾಂಧಾರಿಯರನ್ನು ಪಲ್ಲಕ್ಕಿಯೇರಿಸಿ ವಿದುರನು ಅವರ ಜೊತೆಯಾಗಿ ಹೊರಟನು. ಪಟ್ಟಾಭಿಷೀಕ್ತನಾಗಲಿರುವ ಭಾವಿ ಸಾಮ್ರಾಟನ ಪುರ ಆಗಮನ ಮೆರವಣಿಗೆಯ ರೂಪ ಪಡೆದಿದೆ. ಅಲಂಕೃತವಾದ ಆನೆ ಕುದುರೆಗಳು, ರಥಗಳು, ಚತುರಂಗ ಸೇನೆ, ವಂದಿ ಮಾಗಧರು, ವಾದ್ಯ ವಾದಕರು, ಪರಿ ಚಾರಕರು, ದಾಸ ದಾಸಿಯರು ಸೇರಿ ವೈಭವೋಪೇತವಾಗಿ ಹೊರಟಿದೆ. ದಾರಿಯುದ್ದಕ್ಕೂ ಗಂಗಾತೀರದಿಂದ ಹಸ್ತಿನಾವತಿಯವರೆಗೂ ತಳಿರು ತೋರಣ, ದ್ವಾರ ಗೋಪುರಗಳಿಂದ ಸಿಂಗರಿಸಲ್ಪಟ್ಟಿದೆ‌. ಸುಗಂಧಪೂರಿತ ಪನ್ನೀರ ಸಿಂಚನವಾಗುತ್ತಿದೆ. ಸಲ್ಲಕ್ಷಣವಾದ ಪೂರ್ಣಕುಂಭ ಸ್ವಾಗತ ವ್ಯವಸ್ಥೆಯೊಂದಿಗೆ ಹೂ ಮಳೆಯಾಗುತ್ತಿದೆ. ಮಂಗಳ ಸೂಚಕ ಸುವಸ್ತುಗಳಾದ ಬಿಳಿಯ ಹೂವು, ಗೋವು, ಸುಮಂಗಲೆಯರು, ಭೇರಿಗಳು, ಶಂಖಗಳೆಲ್ಲವೂ ಸಾಗಿ ಬರುತ್ತಿದೆ. ಪ್ರಜಾಪರಿವಾರ ರಾಜಮಾರ್ಗದ ಇಕ್ಕೆಲಗಳಲ್ಲಿ ನೆರೆದು ಜಯಘೋಷಗಳಾಗುತ್ತಿದೆ. ಹೀಗೆ ಸಕಲ ಸಿದ್ಧತೆಗಳ ವಿಜ್ರಂಬಣೆಯೊಂದಿಗೆ ಸುಮುಹೂರ್ತದಲ್ಲಿ ಪಾಂಡವರು ಶ್ರೀಕೃಷ್ಣ ಸಹಿತರಾಗಿ ಹಸ್ತಿನಾವತಿಯ ಅರಮನೆಯನ್ನು ತಲುಪಿದರು.

ಸಾಮ್ರಾಜ್ಞಿ ದ್ರೌಪದಿ ಸಹಿತನಾಗಿ ಅಜಾತ ಶತ್ರು ಧರ್ಮರಾಯ ಹಸ್ತಿನಾವತಿಯ ಸಿಂಹಾಸನಕ್ಕೆ ಪ್ರಣಾಮಗಳನ್ನು ಸಲ್ಲಿಸಿ ಪಟ್ಟಾಭಿಷಿಕ್ತನಾದನು. ಧರ್ಮರಾಯನಿಗೆ ಈ ಮೊದಲು ಹಸ್ತಿನೆಯ ಯುವರಾಜ ಪಟ್ಟಾಭಿಷೇಕವಾಗಿತ್ತು. ದ್ರೌಪದಿ ಸಹಿತನಾಗಿ ರಾಜಸೂಯಾಧ್ವರದ ಅವಭೃತ ಕಲಶಾಭಿಷೇಕವೂ ಆಗಿದೆ. ಈಗ ಸಾಮ್ರಾಟನಾಗಿ ಹಸ್ತಿನಾವತಿಯ ಮಹಾರಾಜನಾಗಿ ವಿಶೇಷ ಕ್ರಿಯಾ ವಿಧಿವತ್ತಾಗಿ, ಸ್ವಸ್ತ್ಯಯನದೊಂದಿಗೆ, ಪುಣ್ಯಾಹ ಶಾಂತಿ ಸಹಿತವಾಗಿ ಅಭಿಷೇಕವಾಗಿದೆ. ಧರ್ಮರಾಯ ಈಗ ಅಖಂಡ ಹಸ್ತಿನಾವತಿಯ ರಾಜದಂಢದರನಾಗಿದ್ದಾನೆ. ಸತ್ಪಾತ್ರರಿಗೆ ದಾನ, ಪೂಜನೀಯರಿಗೆ ಧರ್ಮ, ಸಾಧಕರಿಗೆ ಪಾರಿತೋಪಕಗಳನ್ನು ಇತ್ತು ಅದ್ದೂರಿಯಿಂದ ರಾಜಮರ್ಯಾದೆಯ ಮನೋರಂಜನ ಕಾರ್ಯಕ್ರಮ, ಸತ್ಕಾರಕೂಟಗಳೂ ನಡೆದು ಎಲ್ಲರೂ ಸಂತೋಷಗೊಂಡರು. ಶ್ರೀಕೃಷ್ಣಾನುಗ್ರಹದೊಂದಿಗೆ ಧರ್ಮಜನೂ ದ್ರೌಪದಿಯೂ ಸಿಂಹವಿಷ್ಟಿರದಲ್ಲಿ ವಿರಾಜಮಾನರಾಗಿದ್ದಾರೆ.

ನೂತನ ಮಹಾರಾಜನ ಸಚಿವ ಸಂಪುಟ ರಚನೆಗಾಗಿ ಮೊದಲ ರಾಜ ಸಭೆ ಆರಂಭಗೊಂಡಿದೆ. ಸಾರ್ವಭೌಮನಾಗಿ ಧರ್ಮರಾಯ ಸಭೆಯ ಕೇಂದ್ರಬಿಂದುವಾಗಿದ್ದಾನೆ. ಸಮಾಲೋಚನೆಗಳು ನಡೆದು ಭೀಮಸೇನ ಯುವರಾಜನಾಗಿ, ನಕುಲ ಸೇನಾಧ್ಯಕ್ಷನಾಗಿ, ಅರ್ಜುನ ಮಹಾರಾಜ ಮತ್ತು ಸಾಮ್ರಾಜ್ಯದ ಸಂರಕ್ಷಕನಾಗಿ, ಸಹದೇವ ಸೇನಾ ಸಹನಾಯಕನಾಗಿ ವಿದುರ ಮತ್ತು ಸಂಜಯ ಮಂತ್ರಿಗಳಾಗಿ, ಯುಯುತ್ಸು ಆಸ್ಥಾನ ಪ್ರಮುಖನಾಗಿ ನಿಯುಕ್ತಿಗೊಂಡರು. ಧೌಮ್ಯರು ಆಸ್ಥಾನ ಗುರುವಾಗಿ, ಕುಂತಿ ರಾಜ ಮಾತೆಯಾಗಿ ಗೌರವ ಪಡೆದರು. ಆಡಳಿತ ವ್ಯವಸ್ಥೆಯಾದ ಬಳಿಕ ಎಲ್ಲರೂ ಹಿರಿಯರ ಆಶೀರ್ವಾದ ಪಡೆದು ಪ್ರಜಾ ಪರಿಪಾಲನೆ ಮತ್ತು ಸಾಮ್ರಾಜ್ಯ ರಕ್ಷಣೆಯ ಪ್ರತಿಜ್ಞಾಬದ್ದರಾಗಿ ತೊಡಗಿಕೊಂಡರು.

ಶ್ರೀಕೃಷ್ಣನು ತನ್ನ ಅತ್ತೆ ಕುಂತಿಯನ್ನು ಸಂಧಿಸಿ “ಮಹಾಮಾತೆ! ನೀನು ಪಾಂಡು ಚಕ್ರವರ್ತಿಯ ಕರಗ್ರಹಣ ಮಾಡಿ ಸಾಮ್ರಾಜ್ಞಿಯಾಗಿ ಬದುಕಬೇಕಾದ ಸಕಲ ಅಧಿಕಾರ ಹೊಂದಿದ್ದರೂ, ಬಹಳಷ್ಟು ಕ್ಲೇಶಗಳನ್ನು ಅನುಭವಿಸಬೇಕಾಗಿ ಬಂತು. ಏನೇ ಕಷ್ಟ ಬಂದರೂ ಸಹಿಸಿ ಧರ್ಮಮಾರ್ಗದಲ್ಲಿ ಸಾಗಿದ ನಿನ್ನ ಮಕ್ಕಳು ಧರ್ಮಾತ್ಮರಾಗಿ ಇಂದು ಗೆದ್ದು ತಮಗೆ ಸಲ್ಲಬೇಕಾಗಿದ್ದುದನ್ನು ಅಧಿಕಾರಯುತವಾಗಿ ಸಂಪಾದಿಸಿ ಕೊಂಡಿದ್ದಾರೆ. ಸತ್ಪುತ್ರರನ್ನು ಪಡೆದು ಧನ್ಯಳಾದೆ ತಾಯಿ ನೀನು. ಕಷ್ಟಗಳೆಷ್ಟು ಬಂದಿದ್ದರೂ ಅದು ಮಹತ್ವವನ್ನು ಪಡೆಯದು. ಪರಿಣಾಮ ಎದುರಿಸುವಲ್ಲಿ ತೋರಿದ ಸಹನೆ ಮತ್ತು ಪಾಲಿಸಿದ ಧರ್ಮ ಇಂದು ಲೋಕಕ್ಕೆ ಮಾದರಿಯಾಗಿ ಪಾಠವಾಗಿದೆ. ಎಲ್ಲರಿಗೂ ಶುಭವಾಗಲಿ” ಎಂದು ಹರಸಿದನು.

ಕೃಷ್ಣನ ಅಂತರ್ಯದ ನುಡಿಗಳನ್ನಾಲಿಸಿದ ಕುಂತಿದೇವಿ “ಕೃಷ್ಣಾ! ನನ್ನ ಮಕ್ಕಳು, ವೀರರು, ಶೂರರು ಆಗಿ ಗೆದ್ದಿದ್ದಾರೆ ನಿಜ. ಪೌರುಷದಿಂದ ವಿಜಯ ಸಾಮ್ರಾಜ್ಯ ಪಡೆದಿರಬಹುದು. ಆದರೆ ಅದಕ್ಕಿಂತಲೂ ಮಿಗಿಲಾಗಿ ಈ ಸಾಧನೆ ಅವರಿಂದ ಆಗುವಲ್ಲಿ ದೈವಾನುಗ್ರಹವೇ ಮಹತ್ತರವಾದುದು. ನಾನು ನಿನ್ನಲ್ಲಿ ಈ ಮೊದಲು ಬೇಡಿದ್ದೂ ಇಷ್ಟೇ ನನ್ನ ಮಕ್ಕಳನ್ನು ಸಂರಕ್ಷಿಸು ಎಂದು. ಈಗಲೂ ಕೇಳುತ್ತಿರುವುದು ಅದನ್ನೇ, ನನ್ನ ಮಕ್ಕಳ ಪೂರ್ಣ ಭಾರ ನಿನ್ನ ಮೇಲಿದೆ. ಅವರು ಸಾಧಿಸಿದ ಸಾಮ್ರಾಜ್ಯಕ್ಕಿಂತಲೂ ನಿನ್ನ ಒಲುಮೆಗೆ ಪಾತ್ರರಾದರಲ್ಲ ಅದೇ ಮಹೋನ್ನತ ಸಾಧನೆಗೆ ಕಾರಣ. ಕೃಷ್ಣಾ ನಿನ್ನ ಅನುಗ್ರಹದ ಕೃಪಾ ಕಟಾಕ್ಷದಲ್ಲಿರುವ ಮಕ್ಕಳನ್ನು ಕೈಬಿಡದೆ ಕಾಪಾಡು. ನಿನಗೆ ಹೇಗೆ ಬೇಕೋ ಹಾಗೆ ನಡೆಸಿಕೋ. ಹೆತ್ತ ತಾಯಿ ನಾನು ಹೌದಾದರೂ, ಪಾಲಿಸುತ್ತಿರುವ ಕೃಪಾಳು ನೀನೊಬ್ಬನೇ ಎನ್ನುವುದು ನನ್ನಲ್ಲಿರುವ ಧೈರ್ಯಕ್ಕೆ ಧಾತು. ನೀನು ನನ್ನ ಮಕ್ಕಳನ್ನು ಕಣ್ಣಾಗಿ ಕಾಯಬೇಕು ಪೊರೆಯಬೇಕು” ಎಂದು ಬೇಡಿಕೊಂಡಳು. ಕೃಷ್ಣನೂ “ಹಾಗೆಯೇ ಆಗಲಿ” ಎಂಬಂತೆ ಅನುಮೋದಿಸಿ ಮುಗುಳ್ನಕ್ಕನು.

ಧರ್ಮರಾಯನನ್ನು ಕರೆದು ಶ್ರೀ ಕೃಷ್ಣ ಕುರುಕ್ಷೇತ್ರದ ಓಘವತಿ ನದಿ ತೀರದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಪಿತಾಮಹ ಭೀಷ್ಮಾಚಾರ್ಯರ ಬಗ್ಗೆ ಮಾತನಾಡತೊಡಗಿದನು. “ನಾವು ಆ ಮಹಾತ್ಮನನ್ನು ಕಂಡು ಬರಬೇಕು” ಎಂದು ಸಾಮ್ರಾಟ ಯುಧಿಷ್ಠಿರನಿಗೆ ನಿರ್ದೇಶಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page