33 C
Udupi
Saturday, March 28, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 471

ಭರತೇಶ ಶೆಟ್ಟಿ ,ಎಕ್ಕಾರ್

“ಧರ್ಮರಾಜಾ! ಮೊದಲಾಗಿ ನಿನ್ನ ಮನಸ್ಸಿಗೆ ಆವರಿಸಿರುವ ದುಗುಡ ಎಂಬ ಪೊರೆಯನ್ನು ಸರಿಸಿ ಧರ್ಮ ಏನು ಎಂದು ನೋಡುವ ಪ್ರಯತ್ನ ಮಾಡು. ಧರ್ಮಮೂರ್ತಿಯಾದ ನೀನು ಈ ರೀತಿ ಅಸಂತುಷ್ಟನಾದರೆ ಅನ್ಯರ ಗತಿಯೇನು? ಕೇವಲ ಯುದ್ಧ ಮಾಡುವುದು ನಿಮ್ಮ ಜೀವನದ ಉದ್ದೇಶವಂತೂ ಆಗಿರಲಿಲ್ಲ. ಸಾಮ್ರಾಜ್ಯ, ಅಧಿಕಾರದ ಆಸೆಯೂ ಇರಲಿಲ್ಲ ತಾನೆ? ಹಾಗಿದ್ದರೆ ನೀನು ಸಂಘರ್ಷಕ್ಕೆ ಸಿದ್ಧನಾಗಲು ಕಾರಣವಾದದ್ದು ಕ್ಷಾತ್ರ ಧರ್ಮ ಪಾಲನೆಯಲ್ಲವೆ? ಸಂಧಾನ, ಹೊಂದಾಣಿಕೆಯ ಎಲ್ಲಾ ಪುರುಷ ಪ್ರಯತ್ನಗಳೂ ವಿನಾಶವನ್ನು ತಡೆಯುವುದಕ್ಕಾಗಿಯೆ ಮಾಡಿರುವೆ. ಆದರೂ ದೌಷ್ಟ್ಯದಿಂದ ಮೆರೆಯುತ್ತಿದ್ದ ಕೌರವನಿಗೆ ಇದ್ಯಾವುದರ ಪರಿವೆಯೂ ಇರಲಿಲ್ಲ. ಹಠಮಾರಿಯಾಗಿ, ಅಹಂಕಾರದಿಂದ ಉನ್ಮತ್ತನಾಗಿ ವಿಧ್ವಂಸಕಾರಿ ಯುದ್ಧವೆ ಆಗಬೇಕೆಂದು ಪ್ರತಿಪಾದಿಸುತ್ತಾ ಬಂದನು, ಹಾಗೆಯೆ ನಡೆದು ಹೋಯಿತು. ದುಷ್ಟರಾದ ಅವರೆಲ್ಲರನ್ನು ಸಂಹರಿಸಿದ ಬಳಿಕ ಬಂಧು ಹತ್ಯೆಯಾಯಿತು ಎಂದು ಪರಿತಪಿಸದಿರು. ಸಜ್ಜನರ ಮೌನ, ಅನುಪಸ್ಥಿತಿ ದುರ್ಜನರಿಗೆ ಅವಕಾಶವಿತ್ತಂತೆ ನೀನು ವಿಮುಖನಾಗದೆ ನಿನಗಿರುವ ಬಾಧ್ಯತೆಗಳ ಬಗ್ಗೆ ಒಮ್ಮೆ ವಿವೇಚಿಸಿ ನೋಡು. ಈ ತನಕ ನಿಮ್ಮಿಂದಾದದ್ದು ದುಷ್ಟರ ಸಂಹಾರ ಮತ್ತು ಧರ್ಮದ ರಕ್ಷಣೆ. ಈಗ ಪ್ರಜಕೋಟಿಯ ಪರಿಪಾಲನೆ ಮಾಡಬೇಕಾದ, ದಂಡಧರತ್ವ ಬಾಧ್ಯತೆ ಹೊಂದಿರುವ ನೀನು ಕಾಡು ಸೇರುವ ಮಾತಾಡುತ್ತಿರುವೆ. ಅರಾಜಕತೆ ಸೃಷ್ಟಿಯಾಗಿ ಪ್ರಜೆಗಳ ಮಧ್ಯೆ ಅಭದ್ರತೆ, ದೌಷ್ಟ್ಯತೆಯ ಪ್ರಭಾವ, ಸುಜನರಿಗೆ ಹಿಂಸೆ, ವೈರಿಗಳ ಆಕ್ರಮಣ ಇತ್ಯಾದಿ ಆದರೆ ಯಾರು ಹೊಣೆಗಾರರು. ಮಾತ್ರವಲ್ಲ ಸಾಮ್ರಾಜ್ಯದ ರಕ್ಷಣೆಯ ಹೊಣೆಹೊತ್ತ ಚಂದ್ರವಂಶೀಯನಾದ ನೀನು ಪ್ರಜಾವರ್ಗದ ಮಧ್ಯೆ ಸಂಭವನೀಯ ಬಡತನ, ಬರಗಾಲ, ರೋಗ ರುಜಿನ, ಚೋರ ಭಯ ಇತ್ಯಾದಿಯನ್ನು ನಿವಾರಿಸುವ ಜವಾಬ್ದಾರಿ ಇದೆ. ಮಾತ್ರವಲ್ಲ ಅಭಿವೃದ್ಧಿ, ಧರ್ಮ ಕಾರ್ಯ, ದೇವತಾ ಸಂಪ್ರೀತಿ, ಮೂಲಭೂತ ಸೌಕರ್ಯ, ಶಿಕ್ಷಣ ಇತ್ಯಾದಿ ನಿರ್ವಹಿಸುವುದು ರಾಜನಾದ ನಿನಗೆ ಕರ್ತವ್ಯವೂ ಆಗಿದೆ. ಸಮಗ್ರವಾಗಿ ಇದೆಲ್ಲವೂ ನಿನಗೆ ರಾಜಧರ್ಮ ಆಗಿದೆ. ದುಷ್ಟ ಸಂಹಾರವನ್ನು ಮಾಡಿದ ಧರ್ಮಕುಮಾರಾ! ಇನ್ನು ನಿನ್ನ ಸಹೋದರರೊಡನೆ ಸೇರಿ ಪ್ರಜಾಪರಿಪಾಲನೆಯಲ್ಲಿ ತೊಡಗಬೇಕು. ನಿಮ್ಮ ಹಿರಿಯ ಅರಸರಂತೆ ಸದ್ಧರ್ಮದಿಂದ ರಾಜ್ಯವನ್ನಾಳಿ ಸತ್ಕೀರ್ತಿ ಸಂಪಾದಿಸಿ ವಂಶಕ್ಕೆ ಭೂಷಣಪ್ರಾಯನಾಗಬೇಕು. ಆದುದರಿಂದ ಪಟ್ಟಾಭಿಷಿಕ್ತನಾಗಿ ರಾಜ್ಯಭಾರವನ್ನು ಮಾಡು. ಗರ್ಭಿಣಿಯಾದ ಸ್ತ್ರೀ ಅಸಹನೀಯ ನೋವನ್ನು ಸಹಿಸಿ ಮಗುವಿಗೆ ಜನ್ಮವೀಯುತ್ತಾಳೆ. ಆ ಬಳಿಕ ಮಾತೆಯಾಗಿ ಆ ಮಗುವನ್ನು ಪರಿಪಾಲಿಸಿ ಯೋಗ್ಯನನ್ನಾಗಿಸುವ ಪ್ರಯತ್ನ ನಿರತಳಾಗುತ್ತಾಳೆ. ಈಗ ನೀನೂ ಪ್ರಸವ ವೇದನೆಗೆ ಸಮಾನದ ದುಃಖವನ್ನು ಅನುಭವಿಸಿರುವೆ. ಮಾತೃ ಸ್ಥಾನದಲ್ಲಿ ಸ್ಥಿತನಾಗಿ ಪ್ರಜೆಗಳನ್ನು ಮಕ್ಕಳಂತೆ ಪೋಷಿಸಲು ಸಿದ್ಧನಾಗು. ಮತ್ತೆ ಕಾಲಚಕ್ರ ತಿರುಗಿ ಸಮಯ ಬಂದೀತು, ಆಗ ವಾನಪ್ರಸ್ಥಕ್ಕೆ ಹೋಗುವ ಚಿಂತನೆ ಮಾಡಿದರಾಯಿತು.” ಎಂದು ಸವಿವರವಾಗಿ ಉಚಿತಾನುಚಿತ ವಿಚಾರಗಳನ್ನು ಧರ್ಮಸಮ್ಮತವಾಗಿ ವಿವರಿಸಿ ಹೇಳಿ ಸಂತೈಸಿದನು.

ಶ್ರೀಕೃಷ್ಣನ ಹಿತೋಪದೇಶ ಕೇಳಿದ ಮೇಲೆ ಧರ್ಮರಾಯನು ಅಂತೆಯೆ ಕಾರ್ಯೋನ್ಮುಖನಾಗಲು ಸಮ್ಮತಿಸಿದನು. ಅಲ್ಲಿದ್ದ ಎಲ್ಲರಿಗೂ ಧರ್ಮರಾಯನ ಒಪ್ಪಿಗೆ ಬಹಳ ಸಂತೋಷವನ್ನು ಉಂಟು ಮಾಡಿತು. ಇಷ್ಟಾಗುವಾಗ ದ್ವಾರಕೆಗೆ ತೆರಳಿದ್ದ ಬಲರಾಮ ಮತ್ತು ಸಾತ್ಯಕಿಯೂ ಮರಳಿ ಗಂಗಾತೀರದತ್ತ ಬಂದು ಇವರೆಲ್ಲರನ್ನು ಸೇರಿಕೊಂಡರು. ಧರ್ಮರಾಯನ ಪಟ್ಟಾಭಿಷೇಕಕ್ಕೆ ಸುದಿನ, ಮುಹೂರ್ತಗಳು ನಿರ್ಣಯವಾದವು. ಸಂಜಯ ಮತ್ತು ಸಾತ್ಯಕಿಗೆ ಪಟ್ಟಾಭಿಷೇಕಕ್ಕೆ ಬೇಕು ಬೇಕಾಗುವ ಸಕಲ ಸಿದ್ಧತೆಗಳನ್ನು ಮಾಡಿಸುವ ಜವಾಬ್ದಾರಿ ವಹಿಸಲಾಯಿತು.

ಹಸ್ತಿನಾವತಿಯ ಸಿಂಹವಿಷ್ಟಿರವನ್ನೇರಲು ಸಮರ್ಥ ಮಹಾರಾಜ ಧರ್ಮರಾಯ ಸಿದ್ಧನಾಗಿದ್ದಾನೆ. ಭೀಷ್ಮಾಚಾರ್ಯರಿಗೆ ಇದ್ದ ಒಂದು ಸಂಕಲ್ಪವೂ ಇದೇ ಆಗಿತ್ತು. ಸರ್ವ ಸಮರ್ಥನಾದ ರಾಜ ಯಾವಾಗ ಹಸ್ತಿನೆಯ ಸಿಂಹಾಸನ ಏರುತ್ತಾನೊ ಆ ತನಕ ಸಿಂಹಾಸನದ ರಕ್ಷಕನಾಗಿ ನಾನು ಇರಬೇಕು ಎಂಬ ಅನಿವಾರ್ಯ ಸಂಕಲ್ಪ ಹೊಂದಿದ್ದರು. ಈಗಲೂ ಕುರುಕ್ಷೇತ್ರದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದು ಮರಣವನ್ನಪ್ಪಲು ಸಕಾಲದ ಪ್ರತೀಕ್ಷೆಯಲ್ಲಿದ್ದಾರೆ.

ಇತ್ತ ಪಟ್ಟಾಭಿಷೇಕಕ್ಜೆ ಸುಮುಹೂರ್ತದ ದಿನ ಬಂದು ಬಿಟ್ಟಿತು. ಧರ್ಮರಾಯನು ಬಿಳಿ ಬಣ್ಣದ ಹದಿನಾರು ಕುದುರೆಗಳನ್ನು ಕಟ್ಟಿದ ಭವ್ಯ ರಥವನ್ನೇರಿದನು. ಸ್ವಯಂ ಭೀಮ ಸೇನನು ಸಾರಥಿಯಾದರೆ, ಅರ್ಜುನ ಚಕ್ರವರ್ತಿಗೆ ಶ್ವೇತ ಛತ್ರವನ್ನು ಹಿಡಿದನು. ನಕುಲ ಸಹದೇವರು ಚಾಮರಗಳನ್ನು ಬೀಸುತ್ತಿದ್ದಾರೆ. ಪಾಂಡವ ಪಕ್ಷದ ಪ್ರಮುಖರಾದ ಶ್ರೀಕೃಷ್ಣ, ಬಲರಾಮ, ಸಾತ್ಯಕಿ, ಯುಯುತ್ಸು ಪ್ರತ್ಯೇಕ ರಥಗಳಲ್ಲಿ ಹಿಂಬಾಲಿಸಿದರು. ಧೃತರಾಷ್ಟ್ರ, ಗಾಂಧಾರಿ, ವಿದುರ, ಕುಂತಿ, ದ್ರೌಪದಿ, ಸುಭದ್ರೆಯಾದಿ ಪರಿವಾರ ಜನರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಎಲ್ಲರೂ ಹಸ್ತಿನಾವತಿಯತ್ತ ಮುಖ ಮಾಡಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page