24.5 C
Udupi
Monday, February 9, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 432

ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೪೩೨ ಮಹಾಭಾರತ

ಕೃಷ್ಣನ ರಣತಂತ್ರ ರಣರಂಗದ ಗೂಢಾಚಾರರಿಂದ ದುರ್ಯೋಧನನಿಗೆ ತಿಳಿಯಿತು. ಮೊದಲಿನಿಂದಲೂ ಶಲ್ಯನ ಬಗ್ಗೆ ಹೊಂದಿದ್ದ ಸಂಶಯ ಬುಗಿಲೆದ್ದು ಕೌರವನಿಗೆ ಇಂದೇಕೊ ಮತಿ ಹೀನನಂತೆ ಮಾಡತೊಡಗಿತು. ನಕುಲ ಸಹದೇವರೀರ್ವರೂ ಅಂಗರಕ್ಷಕರಾಗಿ ಧರ್ಮರಾಯನ ಜೊತೆ ಶಲ್ಯನಿಗೆದುರಾಗಿ ಬರುತ್ತಿದ್ದಾರೆ, ಅದೂ ಕೃಷ್ಣನ ಸಲಹೆಯ ಮೇರೆಗೆ ಎಂದು ತಿಳಿದಾಗ ಹುಚ್ಚನಂತಾದನು ಕೌರವ. ಶಲ್ಯನ ಅಳಿಯಂದಿರಾದ ನಕುಲ ಮತ್ತು ಸಹದೇವರೀರ್ವರೂ ಧರ್ಮಜನ ಎಡಬಲದಲ್ಲಿದ್ದು ಬಂದರೆ ಬಾಂಧವ್ಯದ ಸೆಳೆತಕ್ಕೊಳಗಾಗುತ್ತಾನೆ. ಆ ಸಮಯ ಧರ್ಮರಾಯ ಶಲ್ಯನನ್ನು ಸುಲಭದಲ್ಲಿ ಕಂಗೆಡಿಸಿ ಗೆದ್ದುಕೊಳ್ಳಬಹುದು ಎಂಬ ಯೋಜನೆಯಿರಬಹುದೆ? ಎಂಬಂತೆ ತರ್ಕಿಸಿ, ಶಲ್ಯನಿಗೆ ಕೇಳಿಸುವಂತೆ ಎಚ್ಚರಿಸುತ್ತಾ ನಿಂದಿಸತೊಡಗಿದನು. “ರಣರಂಗದಲ್ಲಿ ಸಂಬಂಧಗಳಿಗೆ ಬೆಲೆ ನೀಡಿದರೆ ಪ್ರಾಣವನ್ನು ತೆರಬೇಕಾದೀತು. ಈ ತನಕ ಅಂತಹ ಸಂಬಂಧಗಳಿಗೆ ಕುರುಕ್ಷೇತ್ರದಲ್ಲಿ ಯಾವ ಮಾನ್ಯತೆಯೂ ಇಲ್ಲ. ತುತ್ತನ್ನ ಉಣಿಸಿದ, ಮುದ್ದಿಸಿ ಬೆಳೆಸಿದ ಅಜ್ಜ ಭೀಷ್ಮಾಚಾರ್ಯರಿಗಾಗಲಿ, ವಿದ್ಯೆಯಿತ್ತು ಸಲಹಿದ ಗುರು ದ್ರೋಣಾಚಾರ್ಯರಿಗಾಗಲಿ ಕರುಣೆ ತೋರದ ಪಾಂಡವರ ಬಗ್ಗೆ ಅಳಿಯಂದಿರು ಎಂಬ ಭಾವ ಪ್ರಕಟಿಸಿದರೆ ನೀನು ಅಳಿದು ಹೋಗುವೆ. ನೀನು ತಳೆಯಬಹುದಾದ ಬಾಂಧವ್ಯದ ಮಮಕಾರ ಆ ಪಾಂಡುಪುತ್ರರಿಗಿಲ್ಲ. ನೀನು ಮಾವ ಎಂಬ ಪ್ರೀತಿಯಿಂದ ನಿನ್ನ ಶಿರಚ್ಚೇದನ ಗೈಯದೆ ಅವರು ಬಿಡಲಾರರು ಎಂಬ ಕನಿಷ್ಠ ಕಲ್ಪನೆಯಾದರೂ ನಿನಗಿರಲಿ. ಮೂರ್ಖ – ಮೂಢನಂತೆ ವ್ಯವಹರಿಸಿದರೆ ನೀನು ಬಲಿಪಶುವಾಗುವೆ. ನಿನ್ನ ಬಗ್ಗೆ ನನಗೆ ವಿಶ್ವಾಸವಿಲ್ಲ. ಘಾತಕತನ ತೋರಿ ಹಿತಶತ್ರುವಾಗುವೆಯಾ ಎಂಬ ಹಾಗೆ ಸಂದೇಹ ಮೂಡುತ್ತಿದೆ.” ಎಂದು ದುಡುಕಿ ದುರ್ಯೋಧನ ಅಬ್ಬರಿಸಿ ನುಡಿಯತೊಡಗಿದನು.

ಅರಸ ದುರ್ಯೋಧನ ಈ ರೀತಿ ತನ್ನ ಕುರಿತಾಗಿ ಮಾತನಾಡುವುದನ್ನು ಕೇಳಿ ಶಲ್ಯ ಕೆರಳಿ ಹೋದನು. ಮನಸ್ಸಿನಲ್ಲಿ ಬಹಳಷ್ಟು ನೊಂದು ಕೊಂಡನು. ಹೀಗಾಗುತ್ತಿರುವಾಗಲೆ ಧರ್ಮರಾಯನ ರಥರಕ್ಷಕರಾಗಿ ನಕುಲ – ಸಹದೇವ ಮಾದ್ರೇಶನಿಗೆದುರಾದರು. ಆ ಇಬ್ಬರು ಕೋಮಲ ಕುವರರು ರೋಷಾವೇಶದಿಂದ ತನಗೆದುರಾಗಿ ಬರುತ್ತಿದ್ದಾಗ ಶಲ್ಯನಿಗೆ ಅವರು ಘಾತಿಸಿದ್ದಕ್ಕಿಂತಲೂ ಹೆಚ್ಚಿನ ಮಾನಸಿಕ ನೋವು ಆಗತೊಡಗಿತು. ಎಷ್ಟಾದರೂ ಸೋದರ ಮಾವನಲ್ಲವೆ?. ಶಲ್ಯನ ಮನದಲ್ಲಿದ್ದ ಕ್ಷತ್ರಿಯ ಗುಣದ ಕ್ರೋಧ ಅಳಿದು ಹೋಗ ತೊಡಗಿತು. ಅವರ ಜೊತೆ ಹೋರಾಡುವ ಮನಸ್ಸು ಆತನಿಗಾಗಲಿಲ್ಲ. ಪರ್ಯಾಯ ತಂತ್ರ ಪ್ರಯೋಗಿಸಿ ತನ್ನ ರಥವನ್ನು ತಿರುಗಿಸಿ ಬೇರೆಡೆಗೊಯ್ಯಲು ಸಿದ್ದತೆ ಮಾಡಿದನು. ಆಗ ದುರ್ಯೋಧನ ಶಲ್ಯನನ್ನು ನೋಡಿ ಮತ್ತೊಮ್ಮೆ ಹೀನಾಯವಾಗಿ ನಿಂದಿಸತೊಡಗಿದನು. ಅಡಿಗಡಿಗೆ ತನ್ನನ್ನು ನಿಂದಿಸುತ್ತಿರುವ ಕೌರವನ ಮಾತುಗಳನ್ನು ಕೇಳಿ ನಖಶಿಖಾಂತ ವ್ಯಗ್ರನಾದ ಭೂಪತಿ ರಥ ಬೇರೆಡೆ ತಿರುಗಿಸಿ ಪಾಂಡವ ಸೇನೆಯನ್ನು ಇನ್ನಿಲ್ಲದಂತೆ ನಾಶಗೊಳಿಸತೊಡಗಿದನು. ತನಗೆದುರಾದ ವೀರಾಧಿವೀರರ ಶಿರ ಚೆಂಡಾಡುತ್ತಾ ನಿರಂಕುಶನಾಗಿ ಸರ್ವನಾಶಗೈಯ ತೊಡಗಿದನು.

ಆಗ ಶ್ರೀಕೃಷ್ಣ ಮತ್ತೊಮ್ಮೆ ಧರ್ಮಜನನ್ನು ಕರೆದು “ಹೇ ಯುಧಿಷ್ಟಿರಾ! ಏನು ಮಾಡುತ್ತಿರುವೆ? ಶಲ್ಯನಿಗೆ ನೀನು ಅವಧಿ ಕೊಟ್ಟಷ್ಟೂ ನಮ್ಮ ಸೇನೆಯನ್ನು ವಧಿಸುತ್ತಾ ಸಾಗುತ್ತಾನೆ. ಈ ಕೂಡಲೆ ನೀನು ಅವನಿಗೆದುರಾಗಿ ಹೋರಾಡುತ್ತಾ ವ್ಯಸ್ಥಗೊಳಿಸು” ಎಂದು ಸೂಚಿಸಿದನು. ಕೌರವ ಧರ್ಮರಾಯನು ಮುಕ್ತನಾಗಿ ಶಲ್ಯನಿಗೆ ಎದುರಾಗುವುದನ್ಮು ತಡೆಹಿಡಿಯಲು ಕುರು ಯೋಧರನ್ನು ನಿರಂತರ ಆಕ್ರಮಣಕ್ಕೆ ಆವರ್ತನವಾಗಿ ನಿರ್ದೇಶಿಸುತ್ತಿದ್ದನು. ಇದನ್ನು ಗಮನಿಸಿದ ಅರ್ಜುನ ಅಣ್ಣನಿಗೆ ಪಂಥಾಹ್ವಾನ ನೀಡುತ್ತಿರುವ ಕುರುವೀರರನ್ನು ಆಕ್ರಮಿಸಿದನು. ಹೀಗೆ ಮುಕ್ತನಾದ ಧರ್ಮರಾಯ ಆ ಕೂಡಲೆ ಕೃಷ್ಣನ ಆದೇಶವನ್ನು ಶಿರಸಾವಹಿಸಿ, ತನ್ನ ರಥವನ್ನು ಶಲ್ಯನತ್ತ ಓಡಿಸಿ ಆತನಿಗೆದುರಾದನು. ನಕುಲ ಸಹದೇವರೀರ್ವರ ಸಹಿತ ತನ್ನೆದುರು ತಡೆಗೋಡೆಯಾಗಿ ನಿಂತ ಧರ್ಮರಾಯನನ್ನು ಕಂಡಾಗ ಶಲ್ಯನಿಗೆ ಕಡುದುಃಖವಾಯಿತು. ತನ್ನ ಸೋದರ ಅಳಿಯಂದಿರು, ಪ್ರೀತಿಯ ತಂಗಿ ಮಾದ್ರಿಯ ಮಕ್ಕಳಾದ ನಕುಲ ಸಹದೇವರನ್ನು ಎದುರಿಸಿ ಹೋರಾಡುವ ಮನಸ್ಸಾದರೂ ಹೇಗೆ ಬಂದೀತು? ಲಲ್ಲೆಗರೆಯುತ್ತಾ, ಮುದ್ದಿಸಿ ಆಡಿಸಿದ್ದ ಮಕ್ಕಳು ಆಯುಧಧಾರಿಗಳಾಗಿ ನನ್ನ ಮೇಲೆ ಪ್ರಹರಿಸಲು ನಿಂತಿದ್ದಾರೆ. ಕ್ಷತ್ರಿಯನಲ್ಲವೆ ನಾನು? ಸಮರಕ್ಕೆ ಅಂಜುವವನೆ? ಎದುರಾಗಿ ಆಯುಧ ಧರಿಸಿ ಯಾರು ನಿಂತರೂ ಅವರು ವೈರಿಗಳಾಗುತ್ತಾರೆ. ವೈರಿಗಳನ್ನು ಎದುರಿಸುವುದು ಕ್ಷಾತ್ರ ಧರ್ಮ – ಯುದ್ಧ ಧರ್ಮ. ರಣಕ್ಷೇತ್ರದಲ್ಲಿ ವೈರಿಯನ್ನು ಕೊಲ್ಲಬೇಕು, ಇಲ್ಲಾ ಆ ಶತ್ರು ತನ್ನನ್ನು ಕೊಲ್ಲುತ್ತಾನೆ. ಹೀಗೆಂದು ತರ್ಕಿಸುತ್ತಾ ಉಗ್ರ ಯುದ್ದವನ್ನು ಮುಂದುವರಿಸಿದನು. ಅತುಲ ವಿಕ್ರಮಿ ಶಲ್ಯ ಭೂಪತಿಯ ಚಾಣಾಕ್ಷ ಯುದ್ದ ನೈಪುಣ್ಯತೆಯ ಎದುರು ನಕುಲನೂ ಸಹದೇವನೂ ಮಂಕಾಗಿ ಜರ್ಜರಿತರಾದರು. ಧರ್ಮರಾಯ ಮುಂದೊತ್ತಿ ಬಂದು ಸೆಣಸಿದರೂ ಪರಿಣಾಮ ಬದಲಾಗಲಿಲ್ಲ. ಮಾರಣಾಂತಿಕವಾಗಿ ಗಾಯಗೊಂಡು ಧರೆಗುರುಳಿದನು. ಪಾಂಡು ಚಕ್ರವರ್ತಿ ಮಾದ್ರಾದೇಶದ ಹಿತೈಷಿಯಾಗಿದ್ದವರು. ತಮ್ಮ ಮೇಲೆ ಆಕ್ರಮಣವಾದಾಗ ಪಾಂಡು ಚಕ್ರವರ್ತಿ ಸ್ವತಃ ಸೇನಾಸಹಿತನಾಗಿ ಬಂದು ನಮಗಾಗಿ ಹೋರಾಡಿದ್ದ ಮಹಾನುಭಾವ. ಅಂತಹ ಮಹಾತ್ಮನ ಮಕ್ಕಳು ಇಂದು ನನ್ನಿಂದಾಗಿ ಹೀನಾಯ ಸ್ಥಿತಿಗೆ ಜಾರಿದ್ದಾರೆ. ಮರಣ ಭೀತಿಗೆ ಒಳಗಾಗುವಷ್ಟು ಗಾಯಗೊಂಡಿದ್ದಾರೆ. ನನ್ನ ಮುದ್ದಿನ ತಂಗಿಯ ಮಕ್ಕಳನ್ನು ಈ ರೀತಿ ಕೈಯಾರೆ ಹಿಂಸೆಗೊಳಗಾಗುವುದನ್ನು ಸಹಿಸಲಾಗಲಿಲ್ಲ. ಸಮರ ಅಂದರೆ ಮರಣ ಸಹಿತ ಎಂದು ಅರ್ಥ. ರಣ ಕ್ಷೇತ್ರದಲ್ಲಿ ಈಗ ನಾನು ಮೇಲುಗೈ ಸಾಧಿಸಿದ್ದರೂ, ಅದು ಕ್ಷಣಿಕ ಎಂದು ಯೋಚಿಸತೊಡಗಿದನು. ಸ್ವಯಂ ತಾವು ಗಾಯಾಳುಗಳಾಗಿದ್ದರೂ ಅಣ್ಣ ಧರ್ಮಜನ ಸೇವೆ ಶುಶ್ರೂಷೆ ಮಾಡುತ್ತಿರುವ ನಕುಲ ಸಹದೇವರಿಬ್ಬರನ್ನೂ ಕಂಡಾಗ ಶಲ್ಯನಿಗೆ ಸಹಿಸಲಾಗಲಿಲ್ಲ. “ನಾನು ಎಂದಾದರೊಂದು ದಿನ ಸಾಯಲೆ ಬೇಕು. ಅದು ಸತ್ಯ ಎಂದಾದ ಮೇಲೆ ಮರಣಕ್ಕೆ ನಾನು ಹೆದರಬೇಕಾದುದಿಲ್ಲ. ಹೇಗೊ ಸಾಯುವ ಬದಲು ಧರ್ಮಮೂರ್ತಿಯಾದ ಯುಧಿಷ್ಟಿರನಿಂದ, ಅಥವಾ ನನ್ನ ಅಳಿಯಂದಿರ ಕೈಯಿಂದ ಮರಣ ಪ್ರಾಪ್ತವಾದರೆ ನನಗದು ಕ್ಷೇಮಕರ ಎಂದು ನಿರ್ಣಯಿಸಿದನು.

ಹಾಗೆ ಯೋಚಿಸುತ್ತಿರುವಾ ಧರ್ಮರಾಯ ಚೇತರಿಸಿಕೊಂಡನು. ಎದ್ದು ನಿಂತ ಆತನನ್ನು ಶಲ್ಯ ಮತ್ತೆ ಕೆಣಕಿದನು. ಧರ್ಮಜನ ಮೇಲೆ ಶರವರ್ಷಗೈದನು. ಹೀನಾಯವಾಗಿ ನಕುಲ ಸಹದೇವ ಸಹಿತ ಯುಧಿಷ್ಟಿರ ಗಾಯಾಳುಗಳಾಗಿ ಬಿದ್ದು ಬಿಟ್ಟರು. ಶಲ್ಯನ ಪರಾಕ್ರಮ ಇಂದು ಅಜೇಯವಾಗಿದ್ದು ಪ್ರಾಬಲ್ಯ ಮೆರೆಯುತ್ತಿದೆ. ಬಾಣಗಳಿಂದ ಚುಚ್ಚಿಸಿಕೊಂಡು ಬಿದ್ದ ಮೂವರನ್ನು ನೋಡಿದಾಗ ಶಲ್ಯನ ಮನ ಕರಗಿತು. ತನ್ನ ಆಯುಧಗಳನ್ನು ಕೆಳಗಿಟ್ಟು ರಥದಿಂದ ಇಳಿದು ಶಲ್ಯ ಅವರತ್ತ ಓಡಿ ಬರತೊಡಗಿದನು. ನಕುಲ ಸಹದೇವರಿಬ್ಬರೂ ಶಲ್ಯ ಅಣ್ಣನನ್ನು ವಧಿಸಲು, ಇಲ್ಲ ಬಂಧಿಸಲು ಹತ್ತಿರ ಬರುತ್ತಿದ್ದಾನೆ ಎಂಬಂತೆ ಭಾವಿಸಿ ಶರಪ್ರಯೋಗಿಸತೊಡಗಿದರು. ಇಬ್ಬರ ಶರಗಳೂ ತನ್ನ ಕವಚ ಸೀಳಿ ಹೊಕ್ಕು ಚುಚ್ಚುತ್ತಿದ್ದರೂ ಲೆಕ್ಕಿಸದೆ ಶಲ್ಯ ತನ್ನ ಪ್ರೀತಿ ಪಾತ್ರನಾದ ಧರ್ಮರಾಯನ್ನು ನೋಡಲು ಧಾವಿಸಿ ಬಂದನು. ಬರುವಾಗ ತನಗೆ ಮರಣ ಬರುವುದಿದ್ದರೆ ಮಹಾತ್ಮ, ಪುಣ್ಯಾತ್ಮ, ಧರ್ಮಾತ್ಮನೂ ಆದ ಧರ್ಮರಾಯನಿಂದ ಬರಲಿ. ನನಗದು ಶ್ರೇಯಸ್ಕರ ಎಂದು ಬಯಸತೊಡಗಿದನು. ಧರ್ಮಜನ ಬಳಿ ಬಂದವನು ನೆಲದ ಮೇಲೆ ಬಿದ್ದಿದ್ದ ಧರ್ಮರಾಯನ ಎದೆಗೆ ಎಡಗಾಲಿನಿಂದ ಒದ್ದು ಬಿಟ್ಟನು‌. ಎದೆಗೆ ಒದ್ದಾಗ ಕೋಪಗೊಂಡ ಧರ್ಮರಾಯ ತೀಕ್ಷ್ಣ ದೃಷ್ಟಿಯಿಂದ ಶಲ್ಯನನ್ನು ನೋಡಿ, ತನ್ನ ಹತ್ತಿರ ಬಿದ್ದಿದ್ದ ಶೂಲವನ್ನೆತ್ತಿ ಶಲ್ಯನತ್ತ ಬೀಸಿ ಎಸೆದನು. ಧರ್ಮರಾಜನ ನೋಟ ಶೂಲದ ಹತಿ ಎರಡರ ಗಿರಿ ಒಂದೇ ಆಗಿ ಶಲ್ಯನ ಹೊಟ್ಟೆ ಸೀಳುತ್ತಾ ಹೊರ ಬಂತು. ಒಮ್ಮೆಗೆ ನಡು ಮುರಿದ ಮರದಂತೆ ಬಗ್ಗಿದ ಶಲ್ಯ ಶೂಲದ ಆಘಾತವನ್ನು ತಾಳಿಕೊಳ್ಳಲಾಗದೆ ವಾಲುತ್ತಾ ಒಂದೆರಡು ಹೆಜ್ಜೆಯಲ್ಲಿ ಮುಗ್ಗರಿಸಿ ಬಿದ್ದು ಪ್ರಾಣ ಬಿಟ್ಟನು. ಸೇನಾಪತಿ ಶಲ್ಯನು ವಧಿಸಲ್ಪಟ್ಟದ್ದನ್ನು ನೋಡಿದ ಕುರುಸೇನೆಯ ಮಿತ ಸೈನ್ಯ ಕಂಗೆಟ್ಟು ಓಡತೊಡಗಿದರು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page