31.5 C
Udupi
Sunday, February 8, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 431

ಭರತೇಶ ಶೆಟ್ಟಿ, ಎಕ್ಕಾರ್

ಶಲ್ಯಭೂಪತಿ ಪ್ರಸಕ್ತ ಕೌರವ ಸೇನೆಯ ಸೇನಾಧಿಪತಿ. ಯುದ್ದಕ್ಕೆ ಹೊರಡುವ ಈ ಸಮಯ ಬಹಿರಂಗವಾಗಿ ರಣರಂಗದಲ್ಲಿ ಸಾಗಬೇಕಾದ ಯುದ್ದಕ್ಕಿಂತ ಹೆಚ್ಚಾಗಿ ತನ್ನ ಅಂತರಂಗದಲ್ಲಾಗುತ್ತಿರುವ ಭಾವ ಸಮರದಲ್ಲಿ ಏಕಾಂತವಾಗಿ ಹೋರಾಡಲು ತೊಡಗಿದ್ದಾನೆ. ನಾನು ಸಂಗ್ರಾಮ ನಿರತನಾಗಿ ದುರ್ಯೋಧನನಿಗೆ ಜಯ ತಂದು ಕೊಡಬೇಕೋ? ಖಂಡಿತಾ ಅಂತಹ ಸಾಧ್ಯತೆಯೂ ಇಲ್ಲ, ಇಚ್ಚೆಯೂ ಇಲ್ಲ. ಹಾಗಿದ್ದರೆ ಪರಿಣಾಮ ಏನಾದೀತು? ನಾನು ಯಾವ ರೀತಿ ಹೋರಾಡಿದರೂ ಕೃಷ್ಣಾರ್ಜುನರ ಎದುರು, ಭೀಮನ ಸಾಹಸದೆದುರು ಎಷ್ಟು ಕಾಲ ಕೌರವ ಸೇನೆಯ ರಕ್ಷಣೆ ಮಾಡಲಾದೀತು? ನನ್ನ ಸಾವು ಹೇಗೆ ಆದೀತು? ಎಂಬ ಸಾಲು ಸಾಲು ಪ್ರಶ್ನೆಗಳನ್ನು ತರ್ಕಿಸತೊಡಗಿದನಿ. ಅಂತೂ ಯುದ್ದಕ್ಕೆ ತೊಡಗುವ ಮೊದಲು ಫಲಿತಾಂಶ ನಿರ್ಣಯಿಸಿ, ತನ್ನ ಇಚ್ಚಾಪೂರ್ತಿಗೆ ಮನ ಮಾಡಿದಂತಿದೆ ಮಾದ್ರಾಧೀಶನ ಸ್ಥಿತಿ. ಆದರೂ ಒಂದು ವಿಚಾರದಲ್ಲಿ ಬಹಳ ಹೆಮ್ಮೆ ಅನುಭವಿಸುತ್ತಿದ್ದಾನೆ. ಈ ತನಕ ಮಹಾನ್ ಯೋಧರು ಸೇನಾಪತಿಗಳಾಗಿ ಅಳಿದು ಹೋಗಿಯಾಗಿದೆ. ತಾನೂ ಸಮರ್ಥ ಎಂಬುವುದಕ್ಕೆ ಒಂದು ನಿದರ್ಶನವಾಗಿ ಬದುಕಿ ಉಳಿದಿದ್ದೇನೆ. ಮಾದ್ರಾ ದೇಶದಲ್ಲಿ ಇದ್ದು ಪ್ರಾಯ ಸಂದು ಸಾಯುತ್ತಿದ್ದರೆ ಬದುಕಿಗೆ ಸಾರ್ಥಕ್ಯ, ಕೀರ್ತಿ ಪ್ರಾಪ್ತವಾಗುತ್ತಿರಲಿಲ್ಲ. ನನ್ನ ವಧೆಗೈಯಲು ಇಂದಿನ ದಿನದವರೆಗೆ ಪಾಂಡವ ಪಕ್ಷೀಯರಿಗೆ ಆಗಿಲ್ಲ ಎಂಬ ಸತ್ಯವೂ ತನ್ನ ಶ್ರೇಷ್ಟತೆಗೆ ಮಾನದಂಡವಾಗಿದೆ ಎಂಬ ತೃಪ್ತಿ ಮನಮಾಡಿತ್ತು. ಇನ್ನು ನಾನು ಸೇನಾಪತಿಯಾದ ಮೇಲೆ ಪಾಂಡವ ಪಕ್ಷವನ್ನು ಗೆದ್ದರಷ್ಟೇ ಬದುಕಿ ಉಳಿಯಲು ಅವಕಾಶ. ಹಾಗಾಗದೆ ಒಂದುವೇಳೆ ಸತ್ತರೂ, ಸೇನಾಧ್ಯಕ್ಷ ಪದವಿಯಲ್ಲಿ ನನಗೆ ಸಾವು ಬರಲಿದೆ. ಅಂತಹ ಸಾವು ನನ್ನ ಯೋಗ್ಯತೆಗೆ ಮಾನ್ಯತೆ ನೀಡುವಂತಾಗಲಿದೆ. ಹೀಗೆಲ್ಲಾ ವಿವೇಚಿಸುತ್ತಾ ಶಲ್ಯ ಭೂಪತಿ ಕುರುಕ್ಷೇತ್ರದಲ್ಲಿ ಹದಿನೆಂಟನೆಯ ದಿನದ ಯುದ್ದ ಆರಂಭಿಸಲು ಸನ್ನದ್ಧನಾಗಿದ್ದಾನೆ.

ಅಶ್ವತ್ಥಾಮನು ಶಲ್ಯನಿಗೆ ಜಯಘೋಷವನ್ನು ಕೂಗುತ್ತಾ ದುರ್ಯೋಧನನಲ್ಲಿ ಹೇಳತೊಡಗಿದ “ಹೇ ಕೌರವಾ! ಮದ್ರರಾಜನಾದ ಶಲ್ಯನು ನಮ್ಮ ಸೇನಾಧಿಪತಿ. ಮಾದ್ರೇಶನು ಕುಲ, ರೂಪ, ತೇಜಸ್ಸು, ಯಶಸ್ಸು, ಮತ್ತು ಸಂಪತ್ತು ಇವೇ ಮೊದಲಾದ ಯೋಗ – ಯೋಗ್ಯತೆಗಳಿಂದ ಸಮೃದ್ಧನಾಗಿದ್ದಾನೆ. ಸ್ವಂತ ತಂಗಿಯ ಮಕ್ಕಳಾದ ನಕುಲ ಮತ್ತು ಸಹದೇವ ಆತನಿಗೆ ಅಳಿಯಂದಿರೇ ಆದರೂ ವಚನ ಪರಿಪಾಲನೆ ಮಾಡುತ್ತಾ ನಮ್ಮ ಜೊತೆಯಲ್ಲಿದ್ದಾನೆ. ಇಂತಹ ಉದಾತ್ತ ಗುಣ ವಿಶೇಷ ಹೊಂದಿರುವ ಶಲ್ಯ ಭೂಪತಿ ನಮ್ಮ ಪಕ್ಷದಲ್ಲಿ ಕಾರ್ತಿಕೇಯನಂತೆ ಶೋಭಿಸುತ್ತಿದ್ದಾನೆ. ದೇವತೆಗಳ ಸೇನಾಪತಿಯಾದ ಕಾರ್ತಿಕೇಯ ಯುದ್ದಕ್ಕೆ ಸಿದ್ಧನಾಗಿ ಮುಂಚೂಣಿಯಲ್ಲಿ ನಿಂತರೆ ಹೇಗೆ ದೇವತೆಗಳು ಧೈರ್ಯ ತಳೆದು ಉತ್ಸಾಹ ಹೊಂದುತ್ತಾರೋ, ಹಾಗೆಯೆ ನಮ್ಮ ಸೇನೆಯೂ ಮಹೋತ್ಸಾಹದಿಂದ ತುಂಬಿ ತುಳುಕುತ್ತಿದೆ. ಮಹಾ ಸೇನಾನಿಯೂ, ಪರಾಕ್ರಮಿಯೂ, ಸಮರ ಚತುರನೂ ಆಗಿರುವ ಮಾದ್ರೇಶನಿಗೆ ಜಯವಾಗಲಿ” ಎಂದು ಶ್ಲಾಘಿಸಿ ಉತ್ತೇಜಿಸಿದನು.

ಈ ಹೊಗಳಿಕೆ ಜಯಕಾರಗಳನ್ನು ಕೇಳುವಾಗ ಶಲ್ಯನೂ ಆನಂದತುಂದಿಲನೂ, ಪ್ರೇರಿತನೂ ಆದನು. ಯುದ್ಧ ಮಾಡಿ ತನ್ನ ಪೌರುಷ ತೋರಿಸುತ್ತೇನೆ ಎಂಬ ಭಾವ ತಳೆದು ಆವೇಶ ಭರಿತನಾದನು.

ಆಗ ದುರ್ಯೋಧನನು ಶಲ್ಯನನ್ನು ಹುರಿದುಂಬಿಸಲು “ಶಲ್ಯ ಭೂಪತಿ! ನೀನು ಭೀಷ್ಮ ದ್ರೋಣರಿಗೆ ಸಮತುಲ್ಯ ಪರಾಕ್ರಮಿ ಆಗಿರುವೆ. ಶೂರನಾದ ನೀನು ನಮ್ಮ ಸೇನಾರಕ್ಷಣೆ ಮಾಡುತ್ತಾ ಜಯ ಒದಗಿಸುವಂತಹ ಯುದ್ದಕ್ಕೆ ಸಿದ್ಧನಾಗು. ಸೇನಾಪತಿಯಾಗಿರುವ ನಿನ್ನ ಬಗ್ಗೆ ನಾವೆಲ್ಲರೂ ಅಪಾರ ಧೈರ್ಯ ವಿಶ್ವಾಸ ಹೊಂದಿದ್ದೇವೆ. ಒಂದೊಮ್ಮೆಗೆ ನೀನು ಜಯ ಸಾಧಿಸಿದೆ ಎಂದಾದರೆ ಅಜರಾಮರ ಸತ್ಕೀರ್ತಿ ನಿನ್ನದಾಗಲಿದೆ. ನೀನೇನಾದರು ಸೆಟೆದು ನಿಂತೆ ಎಂದಾದರೆ ನಿನಗೆ ನಿಜದಲ್ಲಿ ಎದುರಾಳಿಗಳು ಇಲ್ಲ. ಈ ಪಾಂಡವರಾದರೂ ನಿನ್ನ ಎದುರು ಏನು ಸಾಧಿಸಿಯಾರು?. ನಿನ್ನಂತಹ ಮಹಾವೀರನಿಗೆ ಅವರೆಲ್ಲ ನಗಣ್ಯ. ಜಯ ಸಾಧಿಸಬಲ್ಲ ಮಹಾನ್ ಘನ ಸಾಹಸಿ ನೀನಾಗಿರುವೆ ಎಂಬ ಪೂರ್ಣ ವಿಶ್ವಾಸ ನನಗಿದೆ.” ಎಂದು ಮುಕ್ತ ಕಂಠದಿಂದ ಹೊಗಳಿದನು.

ಮಾದ್ರಾಧೀಶ ಈಗ ಉಬ್ಬಿ ಹೋಗಿದ್ದಾನೆ. “ಹೇ ದುರ್ಯೋಧನಾ! ಯಾವ ಕಾರ್ಯವನ್ನು ಮಾಡಲು ನಾನು ಸಮರ್ಥನೆಂದು ನೀನು ನಂಬಿರುವೆಯೋ, ಆ ಸಾಧನೆಗೆ ಇದೋ ಸಿದ್ಧನಾಗಿದ್ದೇನೆ. ನನ್ನ ರಾಜ್ಯ, ಸಂಪತ್ತು, ಸೇನೆ, ಸ್ವತಃ ನಾನೂ ಸೇರಿ ನಿನ್ನ ಜಯಕ್ಕಾಗಿ ಮುಡಿಪಾಗಿಸುವೆ. ನನ್ನ ಮಹೋಗ್ರ ಸಾಹಸವನ್ನು ನೀನು ಕಣ್ಣಾರೆ ನೋಡಲಿರುವೆ” ಎಂದು ಸಮರೋತ್ಸಾಹದಿಂದ ನುಡಿದನು.

ಇದೆಲ್ಲವನ್ನೂ ನೋಡುತ್ತಿದ್ದ ಶ್ರೀ ಕೃಷ್ಣ ಪರಮಾತ್ಮ ಧರ್ಮರಾಯನತ್ತ ತಿರುಗಿ ನೋಡಿದನು. ಆಗ ಧರ್ಮಜ ಕೃಷ್ಣನಲ್ಲಿ “ವಾಸುದೇವಾ! ಕುರುಸೇನೆಯ ಸೇನಾಪತಿಯಾಗಿ ಮಹಾ ಧನುಷ್ಮಂತನಾದ ಆರ್ತಾಯನಿ ಶಲ್ಯಭೂಪತಿ ಪೀಠಸ್ಥನಾಗಿದ್ದಾನೆ. ಈಗ ನಮ್ಮ ಸೇನೆಯ ರಕ್ಷಕನೂ ದಾತಾರನೂ ಆಗಿರುವ ನೀನು ಮುಂದೇನು ಮಾಡಬೇಕೆಂದು ನಿರ್ದೇಶಿಸಬೇಕು” ಎಂದು ಕೇಳಿದನು.

ಆಗ ಶ್ರೀಕೃಷ್ಣ “ಮಹಾರಾಜಾ ಧರ್ಮರಾಯಾ! ಶಲ್ಯನು ಮಹಾವೀರ್ಯವಂತನೂ, ಮಹಾತೇಜಸ್ವಿಯೂ ಆಗಿದ್ದಾನೆ. ದುರ್ಯೋಧನ – ಅಶ್ವತ್ಥಾಮರು ಸಮರ ಚತುರರು, ಶಲ್ಯನನ್ನು ಉತ್ತೇಜಿಸಿ ಪ್ರೇರೇಪಿಸಿ ಮಹತ್ತರವಾದ ಸಾಹಸಕ್ಕೆ ಅಣಿಗೊಳಿಸಿದ್ದಾರೆ. ಶಲ್ಯನು ಅಸಾಮಾನ್ಯ ಶೂರನಾಗಿದ್ದಾನೆ. ಶೀಘ್ರ – ಉಗ್ರ ಸಮರ ನಿಪುಣನೂ ಆಗಿರುವ ಆತ ಭೀಷ್ಮ, ದ್ರೋಣ, ಕರ್ಣರಂತೆಯೇ ಅತುಲವಾದ ಪರಾಕ್ರಮದಿಂದ ಯುದ್ದ ಮಾಡಬಲ್ಲ ಸಮರ್ಥ ಆಗಿದ್ದಾನೆ. ಹೀಗೆ ಯುದ್ಧ ಪಾರಾಯಣನಾದ ಮಾದ್ರೇಶನ ಎದುರು ಆತನ ವಿಚಿತ್ರ ರೀತಿಯ ಯುದ್ಧಕ್ಕೆ ಅನುರೂಪವಾಗಿ ಯುದ್ಧ ಮಾಡಬಲ್ಲ ಸಮರ್ಥರು ನಮ್ಮ ಪಕ್ಷದಲ್ಲಿ ಯಾರೂ ಕಾಣುತ್ತಿಲ್ಲ. ಭೀಮಾರ್ಜುನರು ಮಹಾಯೋಧರೂ ಮಹಾರಥಿಗಳು ಹೌದು. ಶಿಖಂಡಿ, ಸಾತ್ಯಕಿ, ದೃಷ್ಟದ್ಯುಮ್ನಾದಿಗಳಿದ್ದರೂ ಶಲ್ಯನು ಬಲದಲ್ಲಿ ಮತ್ತು ತಂತ್ರದಲ್ಲಿ ಇವರೆಲ್ಲರಿಗಿಂತ ಮಹಾಬಲನು ಆಗಿದ್ದಾನೆ.

ಇಂತಹ ಮಹಾ ವಿಕ್ರಮಿಯಾದ ಶಲ್ಯನ ಎದುರು ಹೋರಾಡಬೇಕಾದರೆ ವಿಶೇಷ ಪ್ರಭೆ ಹಾಗು ಚೈತನ್ಯದ ಅವಶ್ಯತೆ ಇದೆ. ಅಂತಹ ವಿಶೇಷ ಗುಣಗಳು ಶಾರ್ದೂಲ ಸಮವಿಕ್ರಮನಾದ ನಿನ್ನಲ್ಲಿ ಮಾತ್ರ ಇದೆ. ಶಲ್ಯನು ಸಿಂಹ ಗಜಗಳ ಪರಾಕ್ರಮಕ್ಕೆ ಸಮಾನವಾದ ಬಲವುಳ್ಳವನು. ಪ್ರಳಯಕಾಲದಲ್ಲಿ ಕ್ರುದ್ಧನಾದ ಕಾಲನಂತೆ ಯಮಸ್ವರೂಪಿಯಾಗಿ ಸಂಚರಿಸಬಲ್ಲವನು. ಭಯರಹಿತನಾಗಿ ರಣಾಂಗಣದಲ್ಲಿ ಲಯಾಧೀಶನಂತೆ ಸರ್ವನಾಶ ಮಾಡುತ್ತಾ ಮೆರೆಯಬಲ್ಲ ಸಮರ್ಥನು ಆತ. ಯುಧಿಷ್ಠಿರಾ! ಅಂತಹ ಆತನನ್ನು ತಡೆದು ಹೋರಾಡಬಲ್ಲ ಶಕ್ತಿ ನೀನೊಬ್ಬನಿಗೆ ಮಾತ್ರ ಇರುವುದು. ಅಂಜದೆ ಅಳುಕದೆ ನೀನು ಆತನಿಗೆ ಎದುರಾಗಿ ಹೋಗು. ಶಂಬರಾಸುರನನ್ನು ವಧಿಸಿದ ಇಂದ್ರನಂತೆ ಶಲ್ಯನನ್ನು ಸಂಹರಿಸುವುದು ನಿನಗೆ ಒಬ್ಬನಿಗೆ ಮಾತ್ರ ಸಾಧ್ಯ. ನನ್ನ ಸಲಹೆಯನ್ನು ಮನ್ನಿಸಿ ಈಗಲೆ ಸಿದ್ಧನಾಗು. ನಕುಲ ಸಹದೇವರು ನಿನ್ನ ಅಂಗರಕ್ಷಕರಾಗಿ ಜೊತೆಗಿರಲಿ. ಶೀಘ್ರವಾಗಿ ನಮಗೆ ಜಯ ಪ್ರಾಪ್ತವಾಗಲಿದೆ” ಎಂದು ನಿರ್ದೇಶನವಿತ್ತನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page