ಭಾಗ 429
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೨೯ ಮಹಾಭಾರತ
ಕರ್ಣನ ಮರಣದ ಸುದ್ದಿ ದುರ್ಯೋಧನನ ಜಂಘಾಬಲವನ್ನು ಉಡುಗಿಸಿ ಬಿಟ್ಟಿತ್ತು. ಎದ್ದರೆ ಕರ್ಣ, ನಿಂತರೆ ಕರ್ಣ, ಊಟಕ್ಕೆ ಕರ್ಣ, ಕೂಟಕ್ಕೆ ಕರ್ಣ, ವಿಹಾರಕ್ಕೆ ಕರ್ಣ ಸರ್ವ ವಿಚಾರಕ್ಕೆ ಕರ್ಣ… ಇಂದು ರುಂಡ ಮುಂಡಗಳೆಂಬ ಶರೀರದ ತುಂಡುಗಳಾಗಿ ನಿಶ್ಚಿಂತೆಯಿಂದ ಕುರುಧಾರುಣಿಯಲ್ಲಿ ಮಲಗಿದ್ದಾನೆ. ಮಿತ್ರ ಕೌರವ ಬಂದರೂ ಮಿಸುಕಾಡುತ್ತಿಲ್ಲ – ಮಾತನಾಡುತ್ತಿಲ್ಲ. “ಹಾ ಕರ್ಣಾ! ನನ್ನ ಒಡ ಹುಟ್ಟಿದ ಸೋದರರು ಈ ಮಣ್ಣಲ್ಲಿ ಹೆಣಗಳಾಗಿ ಬಿದ್ದರೂ ನನ್ನ ದುಃಖ ತಪ್ತ ವದನಕ್ಕೆ ಆಸರೆಯಾಗಿದ್ದದ್ದು ನಿನ್ನ ಭುಜ ಮತ್ತು ಸಾಂತ್ವಾನದ ಅಪ್ಪುಗೆ. ನನ್ನ ಬದುಕಿಗೆ ಆಶಾಗೋಪುರದ ಸ್ಥಂಭವಾಗಿದ್ದವ ನೀನು. ನನ್ನನ್ನು ತೊರೆದು ಅನಾಥನನ್ನಾಗಿಸಿ ಹೇಗೆ ಬಿಟ್ಟು ಹೋದೆ ಹೇಳು ಕರ್ಣಾ? ಹಾ! ಕರ್ಣಾ! ಮಾತಾಡು ಕರ್ಣಾ! ನಿನಗಾಗಿ ಯಮನೊಡನೆ ಕಾದಾಡಲು ಸಿದ್ಧನಾಗಿದ್ದೇನೆ. ಒಂದೋ ಗೆದ್ದು ನಿನ್ನ ಬದುಕಿಸುವೆ, ಅದಾಗದಿದ್ದರೆ ಸತ್ತಾದರೂ ನಿನ್ನ ಜೊತೆಯಾಗುವೆ. ಕರ್ಣಾ… ನಿನ್ನ ಬಿಟ್ಟಿರಲಾರೆ ಮಿತ್ರಾ! ನಿನಗೆ ಈ ಸ್ಥಿತಿ ಬರಬಹುದು ಎಂಬ ಕನಿಷ್ಟ ಕಲ್ಪನೆಯಾದರು ನನಗಿದ್ದರೆ ನಿನಗಿಂತ ಮೊದಲು ನಾನು ಸೇನಾಪತಿಯಾಗಿ ಹೋರಾಡುತ್ತಿದೆ. ಹಾಗೂ ವಧೆಯಾಗುತ್ತಿದ್ದರೆ ನಾನು ಮೊದಲು ಸಾಯುತ್ತಿದ್ದೆ, ನಿನ್ನನ್ನು ಉಳಿಸುತ್ತಿದ್ದೆ.” ಎಂದು ಹೆಣದ ಎದೆಯ ಮೇಲೆ ಬಿದ್ದು ಬೊಬ್ಬೆ ಇಡುತ್ತಾ ಅಳತೊಡಗಿದ. ಯಥಾರ್ಥದಲ್ಲಿ ಎಳೆ ಮಗುವಿನಂತೆ ಅಳುತ್ತಿರುವ ದುರ್ಯೋಧನನನ್ನು ಕಂಡರೆ ಎಂತಹ ಕ್ರೂರಿಯ ಮನಸ್ಸಾದರೂ ಕರಗ ಬೇಕು. ಜೊತೆಗಿದ್ದ ರಾಜರು, ಸೋದರರು, ವಿಧ ವಿಧವಾಗಿ ಸಂತೈಸಿದರೂ ದುರ್ಯೋಧನ ಕರ್ಣನ ಮರಣ ದುಃಖದಿಂದ ವಿಮುಖನಾಗುತ್ತಿಲ್ಲ. ಆಗ ಸಾಂತ್ವಾನದಿಂದ ಪ್ರಯೋಜನವಿಲ್ಲ ಎಂದರಿತ ಮಿತ್ರ ರಾಜರು ಭೇದೋಪಾಯ ಪ್ರಯೋಗಿಸಿ, ಶಾಸ್ತ್ರ ನಿಶ್ಚಿತವಾದ ತಂತ್ರ ವಿನಿಯೋಗಿಸಿ ಕರ್ಣನ ವಧೆಗೈದ ಪಾಂಡವರ ಬಗ್ಗೆ ಕ್ರೋಧ ಉತ್ಪನ್ನವಾಗುವಂತೆ ಮಾಡಿದರು. ಕರ್ಣನ ಹತ್ಯಾರಿಗಳಾದ ಪಾಂಡವರನ್ನು ದಂಡಿಸುವ ಸಿದ್ಧತೆ ನಿನ್ನಿಂದಾಗಬೇಕು. ಸತ್ತವರ ಬಗ್ಗೆ ಪ್ರಲಾಪಿಸುವ ಬದಲು, ಮುಂದೆ ಹೇಗೆ ಪ್ರತಿಕಾರ ತೀರಿಸುವುದೆಂದು ತರ್ಕಿಸಬೇಕಾಗಿದೆ. ಅದಕ್ಕಾಗಿ ಶಿಬಿರಕ್ಕೆ ಹೋಗೋಣ” ಎಂದು ಪ್ರೇರೇಪಿಸಿ ಎದ್ದು ನಿಲ್ಲಿಸಿ, ಭುಜಗಳ ಆಸರೆಯಿತ್ತು ನಡೆಸಿಕೊಂಡು ಹೋದರು. ಆದರೂ ದುರ್ಯೋಧನ ಕರ್ಣನ ಮೃತ್ಯುವಿನ ಸತ್ಯವನ್ನು ನಂಬಲಾಗದೆ ಪದೇ ಪದೇ ಸ್ಮರಿಸುತ್ತಾ ಮನಶಾಂತಿ ಕಳಕೊಂಡಿದ್ದನು.
ಇತ್ತ ಹಸ್ತಿನೆಯಲ್ಲಿ ಅಂಬಿಕೆಯ ಮಗನಾದ ಧೃತರಾಷ್ಟ್ರನು ರಾಧೆ ಅಧಿರಥರ ಮಗ ಕರ್ಣನ, ಮತ್ತು ಕರ್ಣ – ವೃಶಾಲಿಯ ಪುತ್ರರಾದ ಸುಸೇನ, ವೃಷಸೇನ, ಪ್ರಸೇನರ ಮರಣ ವಾರ್ತೆಯನ್ನು ಹೊತ್ತು ತಂದ ಕರ್ಣ ಪರ್ವದ ಹದಿನಾರು ಮತ್ತು ಹದಿನೇಳನೆಯ ದಿನಗಳನ್ನು ನೆನೆದು ಮಮ್ಮಲ ಮರುಗಿದನು. ಈ ದಿನಗಳಲ್ಲಿ ದುಶ್ಯಾಸನ ಸಹಿತ ತನ್ನ ಹಲವು ಪುತ್ರರೂ ಮಡಿದಳಿದು ನೆನಪಾಗಿ ಹೋಗಿರುವ ಕ್ಷಣದಲ್ಲಿ ತಾನ್ಯಾಕಾದರೂ ಉಳಿದಿದ್ದೇನೆ? ಅಪ್ರಿಯ ಸುದ್ದಿಗಳನ್ನು ಕೇಳಿ ಅಣು ಅಣುವಾಗಿ ಕೊರಗಿ ಕೊರಗಿ ಸಾಯುವುದಕ್ಕೊ? ಎಂಬಂತೆ ಸಂಜಯನನ್ನು ಪ್ರಶ್ನಿಸುತ್ತಾ ಬುಡಕಡಿದ ಮರದಂತೆ ದೊಪ್ಪನೆ ನಿಶ್ಚೇಷ್ಟನಾಗಿ ಬಿದ್ದು ಬಿಟ್ಟನು. ಇದೇ ಸಮಯ ಪತಿಯ ಆರೈಕೆಗಾಗಿ ಬಂದಿದ್ದ ಗಾಂಧಾರಿಯೂ ತನ್ನ ಮಕ್ಕಳ ಮರಣವಾರ್ತೆಯನ್ನು ಸಹಿಸಿಕೊಳ್ಳಲಾಗದೆ ವಿಮೂಢಳಾಗಿ ದುಃಖಾಲಾಪಗಳಿಂದ ರೋದಿಸುತ್ತಾ ನಿತ್ರಾಣಳಾಗಿ ಕುಸಿದು ಬಿದ್ದಳು. ಆ ಸಮಯ ಅಲ್ಲಿಯೆ ಇದ್ದ ಕೌರವ ಪತ್ನಿಯರಾದ ಕುರು ರಾಜಕುಮಾರಿಯರು ಬೊಬ್ಬಿರಿದು ಅಳುತ್ತಾ ಈಗಾಗಲೆ ವಿಧವೆಯಾದ ಹಲವರನ್ನು ವೈಧವ್ಯದ ಭಯದಲ್ಲಿರುವ ಕೆಲವರು ಸಂತೈಸುತ್ತಿದ್ದಾರೆ. ಯುವರಾಣಿಯರ ಭಾವ ಹೇಗಿತ್ತೆಂದರೆ ಇಂದು ನೀವು ಮಂಗಳಸೂತ್ರ ಕಳಕೊಂಡವರಾದರೆ, ಶೀಘ್ರವೆ ನಮ್ಮ ಸೂತ್ರವೂ ಕಳಚಲಿದೆ, ನಿಮ್ಮ ಸಾಲಿಗೆ ನಾವೂ ಸೇರುವವರು ಎಂಬಂತೆ ಪರಸ್ಪರ ಹೇಳಿಕೊಳ್ಳುವಂತೆ ಕಾಣಿಸುತ್ತಿದೆ. ತುಸು ಸಮಯದ ಮರಣರೋದನ ಕಳೆದು ಸೊಸೆಯಂದಿರು ಧರಾಶಾಯಿಗಳಾಗಿ ನಿಸ್ತೇಜರಾಗಿ ಬಿದ್ದಿರುವ ಅತ್ತೆ ಮಾವ ಅಂದರೆ ಮಹಾರಾಜ – ಮಹಾರಾಣಿಯರಾದ ಧೃತರಾಷ್ಟ್ರ ಗಾಂಧಾರಿಯರಿಗೆ ಶೈತ್ಯೋಪಚಾರ ಮಾಡಿ ಪುನಶ್ಚೇತನಗೊಳಿಸಿ ಮತ್ತೆ ವಿಯೋಗದ ಭಾವ ವಿನಿಮಯ ಮಾಡತೊಡಗಿದರು.
ಆಗ ಸಂಜಯನು “ಮಹಾರಾಜಾ! ಈಗಾಗಲ ಬಹು ದುಃಖದಿಂದ ನೀನು ಮರುಗುತ್ತಿರುವೆ. ಇನ್ನು ಬರಲಿರುವುದೂ ಅದೇ ರೀತಿಯ ಕಠೋರ ವರ್ತಮಾನಗಳಾಗಿರುತ್ತದೆ ಎಂದು ನಿರೀಕ್ಷಿಸಬಹುದು. ಹಾಗಾಗಿ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ” ಎಂದನು. ಈ ಮಾತು ಕೇಳಿ ಬುದ್ದಿಗೆಟ್ಟವನಂತೆ, ಮತಿಭ್ರಾಂತನಂತಾದವನಂತಾದ ಧೃತರಾಷ್ಟ್ರ, ” ನನಗಿನ್ನು ಯಾವ ವಾರ್ತೆಯನ್ನು ಹೇಳಬೇಡ, ನನಗೆ ಕೇಳಿ ಸಹಿಸುವ ಸಾಮರ್ಥ್ಯವೂ ಇಲ್ಲ” ಎಂದು ಅತ್ತು ಅಂಗಾಲಾಚಿ ಗೋಗರೆದನು.
ಹೀಗೆ ಹೇಳುತ್ತಾ, ಭಾರತ ಯುದ್ಧದ ಮಹಾ ಕಥಾನಕವನ್ನು ಜನಮೇಜಯನಿಗೆ ಬೋಧಿಸುತ್ತಿದ್ದ ವೈಶಾಂಪಾಯನರು “ಹೇ ಕ್ಷಿತಿಪಾಲಾ! ಯಾವ ಮಹಾತ್ಮನಾದ ಮನುಷ್ಯನು ಚಂದ್ರವಂಶಾವಳಿಯ ಕಥೆ, ಭೀಷ್ಮ, ದ್ರೋಣ, ಕರ್ಣಾರ್ಜುನರ ಯುದ್ಧ ರೂಪವಾದ ಈ ಧರ್ಮಯಜ್ಞ ಪ್ರಕರಣವನ್ನು ಶೃದ್ಧಾ ಭಕ್ತಿಯಿಂದ ಪಠಿಸುತ್ತಾರೊ, ಕಾಯಾ ವಾಚಾ ಮನಸಾ ಶ್ರವಣ ಮನನದಿಂದ ಅರ್ಥ ಮಾಡಿಕೊಳ್ಳುತ್ತಾರೊ ಅಂತಹವರಿಗೆ ವಿಧಿಸಹಿತವಾಗಿ ಮಹಾ ಯಜ್ಞಾನುಷ್ಠಾನ, ದಾನ ಧರ್ಮ ಮಾಡಿದರೆ ಪ್ರಾಪ್ತವಾಗುವ ಯಾವ ಅನನ್ಯ ಪುಣ್ಯಫಲವಿದೆಯೊ ಅಂತಹ ಸಮತುಲ್ಯವಾದ ಮಹಾಫಲವು ಲಭಿಸುತ್ತದೆ. ಧನ, ಧಾನ್ಯ ಮತ್ತು ಯಶಸ್ಸುಗಳನ್ನೂ ಹೊಂದುತ್ತಾರೆ. ಮಾತ್ರವಲ್ಲ ಜ್ಞಾನ, ಬಲ, ಐಶ್ವರ್ಯ ವಿಜಯವನ್ನೂ ಪಡೆಯುತ್ತಾರೆ. ಸುಖ ಸಂತಾನ, ಸಂತೃಪ್ತಿ, ಸಮೃದ್ಧಿ, ಆರೋಗ್ಯ, ಆಯಸ್ಸು ಸಹಿತ ಪರಮ ಸುಖಿಗಳಾಗಿ ಮನೋವಾಂಛಿತವಾದ ಸಕಲಕಾಮನೆಗಳನ್ನು ಪಡೆದುಕೊಳ್ಳುವ ದಿವ್ಯ ಶಕ್ತಿ ಮಹಾಮುನಿಗಳಾದ ವೇದವ್ಯಾಸರ ಪುಣ್ಯವಾಣಿಯಾದ ಈ ಮಹಾಕಾವ್ಯ ಶ್ರವಣ ಮಾತ್ರದಿಂದ ಒದಗುತ್ತದೆ. ಈ ಆಖ್ಯಾನವನ್ನು ಶೃದ್ಧೆಯಿಂದ ಆಸ್ವಾದಿಸುವ ನರಶ್ರೇಷ್ಟರ ವಿಚಾರದಲ್ಲಿ ಬ್ರಹ್ಮ, ವಿಷ್ಣು ಮತ್ತು ಭಗವಾನ್ ಶಂಕರನೂ ತುಷ್ಟರಾಗಿ ಸಂರಕ್ಷಿಸುತ್ತಾರೆ.” ಎಂದು ವಿವರಿಸಿ ಹೇಳಿದರು.
ಜನಮೇಜಯನು ವೈಶಂಪಾಯನರಿಗೆ ವಂದಿಸಿ “ಮುಂದೇನಾಯಿತು? ಕೌರವರು ಏನಾದರು ಸಾಧಿಸಿದರೆ? ನಿರಂತರ ಸೋಲಿನಿಂದ ತತ್ತರಿಸಿದ ಕೌರವರು ಬರಿದೆ ಸಾಯುವ ಬದಲು ಒಡಂಬಡಿಕೆಯ ಒಪ್ಪಂದಕ್ಕೇನಾದರು ಮನ ಮಾಡಿದರೆ? ಇಲ್ಲಾ ಮತ್ತೆ ನಮ್ಮ ಹಿರಿಯರಾದ ಪಾಂಡವರು ಶ್ರೀಕೃಷ್ಣನ ರಕ್ಷೆಯಲ್ಲಿ ಜಯಶಾಲಿಗಳಾದರೆ?” ಎಂದು ಪ್ರಶ್ನಿಸಿದಾಗ, ವೈಶಾಂಪಾಯನರು ಕಥೆ ಹೇಳತೊಡಗಿದರು.
ಕೌರವರ ಶಿಬಿರದಲ್ಲಿ ಪ್ರಮುಖರು ದುಃಖಿತನಾದ ದುರ್ಯೋಧನನ ಮನಸ್ಸಿಗೆ ಧೈರ್ಯ ತುಂಬಿ, ನಾಳಿನ ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ನಮ್ಮ ಸೇನೆಗೆ ಜಯ ತಂದೊಪ್ಪಿಸಬಲ್ಲ ಸೇನಾಧ್ಯಕ್ಷ ಬೇಕು. ಈಗ ನಮ್ಮಲ್ಲಿ ಮಿತ ಸೈನ್ಯವಷ್ಟೆ ಉಳಿದಿದೆ. ಗೆಲ್ಲಬಲ್ಲ ಸಾಮರ್ಥ್ಯವಿರುವ ನಾಯಕನ ಆಯ್ಕೆ ಮಾಡಬೇಕಾಗಿದೆ ಎಂದು ಹೇಳುತ್ತಾ ದುಃಖದ ಮಡುವಿನಲ್ಲಿ ಮುಳುಗಿದ್ದ ಕೌರವನನ್ನು ಜವಾಬ್ದಾರಿಯತ್ತ ಸೆಳೆದರು.
ಮುಂದುವರಿಯುವುದು…



















