27.2 C
Udupi
Tuesday, March 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 468

ಭರತೇಶ ಶೆಟ್ಟಿ, ಎಕ್ಕಾರ್

ಹಸ್ತಿನಾವತಿಯ ರಾಜ ಮನೆತನದವರು ರಥವೇರಿ ಕುರುಕ್ಷೇತ್ರದತ್ತ ಸಾಗುತ್ತಿರುವ ವಿಚಾರ ರಾಜ್ಯದೆಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿತು. ಇಂದಿನವರೆಗೆ ಹೋಗಲಾರದೆ ಉಳಿದಿದ್ದವರು, ರಣಕ್ಷೇತ್ರದತ್ತ ತೆರಳಿ ಮಡಿದ ತಮ್ಮವರ ಕಳೇಬರವನ್ನಾದರು ನೋಡಿ ಅಂತ್ಯ ಸಂಸ್ಕಾರವನ್ನಾದರು ಮಾಡೋಣ ಎಂಬಂತೆ ಅಳುತ್ತಾ ಬೊಬ್ಬಿರಿಯುತ್ತಾ ಧೃತರಾಷ್ಟ್ರಾದಿಗಳು ಸಾಗುತ್ತಿರುವ ರಥಗಳ ಹಿಂದೆ ಪ್ರಜಾ ಜನರು ಓಡಿ ಬರತೊಡಗಿದರು. ಮಗನನ್ನು ಕಳಕೊಂಡ ತಾಯಿ, ಪತಿಯನ್ನಗಲಿದ ಪತ್ನಿ, ಅಣ್ಣನಿಲ್ಲದೆ ಅನಾಥಳಾದ ಸೋದರಿಯರು, ಪಿತನಿಲ್ಲದೆ ಬದುಕಬೇಕಾದ ಮಕ್ಕಳು… ಹೀಗೆ ಅಬಾಲವೃದ್ಧಾದಿ ಸಮಸ್ತರು ಒಂದೇ ಉಸಿರಿನ ಓಟದಲ್ಲಿ ಎದ್ದು ಬಿದ್ದು ಧಾವಿಸಿ ಬರುತ್ತಿದ್ದಾರೆ. ಈ ತನಕ ಅಲಂಕೃತರಾಗಿ ಮನೆಯೊಳಗೆ ಇದ್ದ ಸ್ತ್ರೀಯರು, ಸೂರ್ಯ ರಶ್ಮಿ ಮೈಸೋಕುವ ಅವಕಾಶವನ್ನು ಪಡೆದಿರದವರೂ ಇಂದು ನಿರಾಭರಣರಾಗಿ ಉಟ್ಟ ಬಟ್ಟೆ, ಕೆದರಿದ ಕೂದಲು, ಬೋಳು ಹಣೆಯವರಾಗಿ, ಕೋಮಲ ಕೆನ್ನೆಗಳಲ್ಲಿ ಕಣ್ಣೀರಿಳಿಸುತ್ತಾ ಸೀರೆಯ ನೆರಿಗೆಯನ್ನೆತ್ತಿ ದಾಪುಗಾಲು ಹಾಕುತ್ತಾ, ಬರಿಗಾಲಲ್ಲಿ ಧಾವಿಸಿ ಬರುವಾಗ ಎದ್ದ ಧೂಳು ಕೆನ್ನೆಯಲ್ಲಿ ಹರಿದಿಳಿಯುತ್ತಿರುವ ಕಣ್ಣೀರಿಗೆ ಅಂಟಿ, ಮುಖ ಕೆಸರಾಗಿ ಮೃತ್ತಿಕೆ ಮೆತ್ತಿದಂತಾಗಿದೆ. ದುಃಖದಿಂದ ಬುದ್ಧಿ ಭ್ರಾಂತರಾಗಿ ಅಳುವೂ, ಆರ್ತನಾದವೂ ಸೇರಿ ಹಸ್ತಿನೆಗೆ ಹಸ್ತಿನೆಯೆ ಬಾಯ್ಬಿಟ್ಟು ಬೊಬ್ಬಿರಿಯುವಂತಹ ಯಾತನಾಮಯ ದೃಶ್ಯ ಸೃಷ್ಟಿಯಾಗಿದೆ. ನೋಡುವವ ಕಟುಕನೇ ಆಗಿದ್ದರೂ ಮನ ಕರಗಿ ನೀರಾಗುವಂತಹ, ಕರುಳು ಕಿತ್ತು ಬರುವಂತಹ ದಯನೀಯ ಸ್ಥಿತಿ ಉತ್ಪನ್ನವಾಗಿದೆ.

ಇತ್ತ ಕುರುಕ್ಷೇತ್ರದ ಬಿಡಾರದ ಬಳಿಯಲ್ಲಿ ಇದ್ದ ಪಾಂಡವರಿಗೆ ಈ ವಿದ್ಯಮಾನ ತಿಳಿಯಿತು. ಧರ್ಮರಾಯನು ಶ್ರೀ ಕೃಷ್ಣನ ಬಳಿ ಬಂದು ದೊಡ್ಡಪ್ಪ ಪರಿವಾರ ಸಹಿತನಾಗಿ ಬರುತ್ತಿದ್ದಾರಂತೆ ಎಂದು ನಿವೇದಿಸಿಕೊಂಡನು. ಧರ್ಮರಾಯನಿಗೆ ಕುರುಕ್ಷೇತ್ರದಲ್ಲಿ ಆಗಿರುವ ಮಹಾ ವಿಧ್ವಂಸದಲ್ಲಿ ನಾವೂ ಭಾಗಿಗಳು ಎಂಬ ಕಾರಣದ ದೋಷಿ ಭಾವ ಕಾಡುತ್ತಿತ್ತು. ಆದರೂ ಧರ್ಮನುಸಾರ ನಡೆದಿದ್ದೇವೆ, ಈಗಲೂ ಹಾಗೆಯೆ ಮುಂದುವರಿಯುತ್ತೇವೆ ಎಂದು ನಿರ್ಣಯಿಸಿ ಕೃಷ್ಣ ಸಹಿತನಾಗಿ ಮಹಾರಾಜ ಧೃತರಾಷ್ಟ್ರನನ್ನು ಇದಿರ್ಗೊಳ್ಳಲು ಮುಂದೊತ್ತಿ ಬಂದನು. ಪ್ರಜಾಪರಿವಾರ ಸಹಿತನಾಗಿ, ರಾಜಪರಿವಾರವೂ ಜೊತೆಗಿದ್ದು ಬರುತ್ತಿರುವ ಯಾರೊಬ್ಬರ ಬಾಯಿಯೂ ಮೌನವಾಗಿಲ್ಲ. ಮನಬಂದಂತೆ ರೋದನೆ, ನಿಂದನೆ, ಶಾಪ, ಜಿಗುಪ್ಸೆಗಳು ಪ್ರತಿಧ್ವನಿಸಿ ಕೇಳುತ್ತಿದೆ. ಮಾರ್ದನಿಸುವ ಅವರ ಮಾತುಗಳ ಚುಚ್ಚುವಿಕೆ ಧರ್ಮರಾಯನಿಗೆ ಸಂಗ್ರಾಮದಲ್ಲಾದ ಅಸ್ತ್ರಗಳ ಘಾತಕ್ಕಿಂತ ಬಹು ಸಹಸ್ರಪಾಲು ಘೋರವಾದ ನೋವನ್ನುಂಟು ಮಾಡುತ್ತಿದೆ. ಅವರೆಲ್ಲರ ವಾಗ್ಬಾಣಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ಧರ್ಮರಾಜನು ದೊಡ್ಡಪ್ಪನ ಬಳಿ ಬಂದನು. ಕಣ್ಣು ಕಾಣದ ಧೃತರಾಷ್ಟ್ರನಿಗೆ “ನಾನು ಯುಧಿಷ್ಟಿರ… ದೊಡ್ಡಪ್ಪ…” ಎಂದು ತೊದಲುತ್ತಾ ತನ್ನ ಹೆಸರು ಹೇಳಿ ಪರಿಚಯ ಮಾಡಿಕೊಂಡು, ಪಾದಸ್ಪರ್ಶಿಸಿ ನಮಿಸಿದನು. ಧೃತರಾಷ್ಟ್ರನು ವಿದುರನ ಮಾತುಗಳನ್ನು ಕೇಳಿ ಒಮ್ಮೆಗೆ ಧೃತಿ ಪಡೆದಿದ್ದನಾದರೂ, ದಾರಿಯಲ್ಲಿ ಬರುತ್ತಾ ತನ್ನ ಮಕ್ಕಳು, ಅವರ ಸಾವು, ಭೀಮನಿಂದಾಯಿತು… ಹೀಗೆಲ್ಲಾ ಸ್ಮರಿಸುತ್ತಾ ಬಂದಿದ್ದು, ಮನದಲ್ಲಿ ಭೀಮನೇ ತುಂಬಿ ಹೋಗಿದ್ದನು. ಧರ್ಮರಾಯನು ಮೈ ಸೋಕುವಷ್ಟು ಸನಿಹಕ್ಕೆ ಬಂದಾಗ ಒಮ್ಮೆಗೆ ಆಲಿಂಗಿಸಿಕೊಂಡವಂತೆ ಮಾಡಿದನಾದರೂ, “ಆ ಭೀಮನೆಲ್ಲಿ? ಹೇಗಿದ್ದಾನೆ? ಎಲ್ಲಿದ್ದಾನೆ” ಎಂದು ಅವಸರವಸರವಾಗಿ ಕೇಳತೊಡಗಿದನು.

ಭೀಮ ದೊಡ್ಡಪ್ಪ ತನ್ನನ್ನು ಕರೆಯುತ್ತಿದ್ದಾರೆಂದು ಬಳಿ ಬರಲು ಹೆಜ್ಜೆ ಎತ್ತಿದಾಗ ಶ್ರೀಕೃಷ್ಣ ಕಣ್ಸನ್ನೆಯಲ್ಲಿ “ನಿಲ್ಲು” ಎಂಬಂತೆ ಸೂಚಿಸಿದನು. ಯುದ್ಧಾರಂಭ ಸಮಯ ಬಿಡಾರದ ದ್ವಾರದಲ್ಲಿ ನಿಲ್ಲಿಸಲಾಗಿದ್ದ ಆಳೆತ್ತರದ ಉಕ್ಕಿನ ಪುರುಷಾಕೃತಿಯ ಮೂರ್ತಿಯನ್ನು ಧೃತರಾಷ್ಟ್ರನ ಬಳಿ ತಂದು “ಇದೋ ಭೀಮ ಇಲ್ಲಿದ್ದಾನೆ” ಎಂದು ನುಡಿದನು. ಕೈ ಚಾಚಿ ಗಾಳಿಯಲ್ಲಿ ಬೀಸುತ್ತಾ “ಎಲ್ಲಿ? ಎಲ್ಲಿ” ಎಂದು ಧೃತರಾಷ್ಟ್ರ ಒಂದೆರಡು ಹೆಜ್ಜೆ ಮುಂದೆ ಬಂದು ಕೈ ತಾಗಿದ ಲೋಹದ ಮೂರ್ತಿಯನ್ನು ಭೀಮನೆಂದು ಬಿಗಿದಪ್ಪಿದನು. ಧೃತರಾಷ್ಟ್ರನಿಗೆ ಕಣ್ಣು ಕಾಣಿಸುತ್ತಿರಲಿಲ್ಲ ಎಂಬ ಒಂದು ವೈಕಲ್ಯತೆ ಬಿಟ್ಟರೆ ಆತ ಸಮರ ಕಲೆ ಪಾರಂಗತನಾಗಿದ್ದನು. ಅದರಲ್ಲೂ ಮಲ್ಲಯುದ್ಧದ ಬಲುಭಟನಾಗಿದ್ದು ಸದಾ ಅರಮನೆಯ ಗರಡಿಯಲ್ಲಿ ಅಭ್ಯಾಸ ನಿರತನಾಗಿರುತ್ತಿದ್ದನು. ಇಂದು ಆತನ ಶರೀರದ ನರ ನಾಡಿಗಳಲ್ಲೂ ತನ್ನ ಪುತ್ರರನ್ನು ಹೊಡೆದು ಬಡಿದು ಹೊಸಕಿ, ಸಿಗಿದು ಕೊಂದ ಭೀಮನ ಕ್ರೌರ್ಯ ಕಥನ ಸಂಜಯನ ಮುಖೇನ ಕೇಳಿದ್ದು ಕಿವಿಯಲ್ಲಿ ಗುಣುಗುಣಿಸುತ್ತಿತ್ತು. ಆ ಭ್ರಮಾಲೋಕಕ್ಕೆ ಹೊಕ್ಕ ಧೃತರಾಷ್ಟನ ಶರೀರವೂ ಬಿಸಿಯೇರಿ ಸೆಟೆದು ಕಠಿಣವಾಯಿತು, ಮನಸ್ಸು ಕಠೋರವಾಯಿತು. ಬರಸೆಳೆದು ಅಪ್ಪಿದ್ದ ಬಿಗಿತ ಬಿಗಿಯಾಗತೊಡಗಿತು. ಅದೆಷ್ಟು ಬಲಯುತವಾಯಿತೆಂದರೆ ಬಹುಭಾರದ ಉಕ್ಕಿನ ಮೂರ್ತಿ ಬಿರುಕು ಬಿಡತೊಡಗಿತು. ಮತ್ತಷ್ಟು ಬಿಗಿಯಾಗಿ ಎದೆಗೊತ್ತಿ ಬಲಪ್ರಯೋಗಿಸಿದಾಗ ನಡು ಮುರಿದ ಮೂರ್ತಿ ತುಂಡು ತುಂಡಾಗಿ ಬಿದ್ದು ಬಿಟ್ಟಿತು. ಈ ಹೊತ್ತು ಧೃತರಾಷ್ಟ್ರ ಎಷ್ಟು ಕ್ರೋಧಾವೇಷಕ್ಕೆ ಒಳಗಾಗಿದ್ದ ಎಂದರೆ ತಾನೊಂದು ನಿರ್ಜೀವ ಲೋಹ ಮೂರ್ತಿಯನ್ನು ಅಪ್ಪಿದ್ದೇನೆ. ಜೀವವಿರುತ್ತಿದ್ದರೆ ತನ್ನ ಅಜಾನುಬಾಹುಗಳಲ್ಲಿ ಸಿಲುಕಿ ಬಿಗಿಯಲ್ಪಡುವಾಗ ಒಂದೋ ಕೊಸರಾಟ, ಇಲ್ಲ ಅರಚಾಟವಾದರೂ ಪ್ರಕಟವಾಗಬೇಕಿತ್ತು. ಅದ್ಯಾವುದರ ಪರಿವೆಯೂ ಇಲ್ಲದೆ ತನ್ನ ಎದೆಗೊತ್ತಿ ಪೂರ್ಣಬಲದಿಂದ ಅದುಮಿ ಬಿಗಿದ ಕಾರಣ ಧೃತರಾಷ್ಟ್ರನ ಎದೆಯೂ ಜರ್ಜರಿತವಾಗಿ ಬಾಯಿಯಿಂದ ರಕ್ತ ಕಾರಿತು. ಒಂದೆಡೆಗೆ ಮೂರ್ತಿ ಮುರಿದು ಬಿದ್ದರೆ, ಈಕಡೆ ಉಸಿರುಗಟ್ಟಿ ಬಿಗಿದ ಕಾರಣ, ಎದೆಗಾದ ಒತ್ತುವಿಕೆಯಿಂದ ಗಾಯವಾಗಿ ರಕ್ತವಿಳಿಸುತ್ತಾ ಆತನೂ ಬಿದ್ದು ಮೂರ್ಛಿತನಾದನು.

ಸಂಜಯನು ಓಡಿ ಬಂದು ಮಹಾರಾಜನ್ನು ಉಪಚರಿಸತೊಡಗಿದನು. ಧರ್ಮರಾಯ, ಅರ್ಜುನ, ಕುಂತಿಯರೂ ಸೇರಿ ನೀರನ್ನೆರೆದು, ಗಾಳಿ ಬೀಸಿ ಆರೈಕೆಗೆ ಸಹಕರಿಸಿದ ಪರಿಣಾಮ ಚೇತರಿಸಿಕೊಂಡನು ಮಹಾರಾಜ ಧೃತರಾಷ್ಟ್ರ.

ಶ್ರೀ ಕೃಷ್ಣನಿಗೆ ಧೃತರಾಷ್ಟ್ರನ ಕ್ರೋಧಾಗ್ನಿ ಉಪಶಮನವಾಗದಿದ್ದರೆ ಅನಾಹುತ ಆದೀತು ಎಂಬ ಪೂರ್ವಾಭಾಸವಾಗಿತ್ತೊ ಏನೋ! ಹಾಗಾಗಿ ಈ ರೀತಿ ಲೋಹ ಮೂರ್ತಿಯ ಅಪ್ಪುಗೆಯ ಪ್ರಕರಣ ನಡೆದು ಹೋಗುವಂತೆ ತಂತ್ರ ಪ್ರಯೋಗಿಸಿದ್ದಾನೆ.

ಚೈತನ್ಯ ಪಡೆದು ಎದ್ದು ಕುಳಿತ ಧೃತರಾಷ್ಟ್ರ “ಅಯ್ಯೋ ಮಗನೇ! ಭೀಮಾ… ನಾನೇನು ಮಾಡಿಬಿಟ್ಟೆ? ಹಾ ದೇವಾ! ನಾನು ಎಂತಹ ಪಾಪಿ! ದೈಹಿಕವಾಗಿ ಕಣ್ಣು ಕುರುಡಾಗಿತ್ತು. ಅದು ನನ್ನ ತಪ್ಪಲ್ಲ, ಮಾನಸಿಕವಾಗಿಯೂ ಪುತ್ರ ವ್ಯಾಮೋಹದಿಂದ ಅಂಧತ್ವ ಆವರಿಸಿದ್ದು ನನ್ನ ಸ್ವಂತ ದೋಷ. ಇದರ ಪರಿಣಾಮ ಇಂತಹ ಘೋರ ಸಂಗ್ರಾಮ ನಡೆದು ಸರ್ವ ನಾಶವಾಯಿತು. ಎಲ್ಲರನ್ನೂ ಕಳಕೊಂಡು ಅನಾಥನಾಗಬೇಕಾಯಿತು… ಮಗನೇ ಭೀಮಾ! ಕ್ಷಮಿಸು ಮಗನೇ, ಅವಿವೇಕಿಯಾಗಿ ವ್ಯವಹರಿಸಿದೆ…” ಎಂದು ಮರುಗಿ ಕೊರಗಿ ಅಳತೊಡಗಿದನು.

ಕೃಷ್ಣ ಧೃತರಾಷ್ಟ್ರನ ಭುಜಗಳನ್ನಾವರಿಸಿ ಹಿಡಿದೆತ್ತಿ “ಮಹಾರಾಜಾ! ಸಾವರಿಸಿಕೋ, ಅವಸರದಲ್ಲಿ ಭೀಮನೆಂದು ನೀನು ಲೋಹದ ಮೂರ್ತಿಯನ್ನು ಬಿಗಿದಪ್ಪಿ ನಷ್ಟಗೊಳಿಸಿದೆ. ಭೀಮ ನಿನ್ನ ಬಳಿಯಲ್ಲಿ ಇದ್ದಾನೆ, ಆತನಿಗೇನು ಆಗಿಲ್ಲ. ಇನ್ನು ಏನೂ ಆಗದು, ಏಕೆಂದರೆ ನಿನ್ನೊಳಗಿದ್ದ ಆ ಕೋಪಾಗ್ನಿ ಹೊರ ಹಾಕಿರುವೆ. ಆದದ್ದಾಯಿತು, ದೈವ ಸಂಕಲ್ಪದಂತೆ ಎಲ್ಲವೂ ಘಟಿಸಿದೆ. ಇನ್ನು ನೀನು ದುಃಖಿಸಬಾರದು, ಪಾಂಡವರು ಬೇರೆಯವರಲ್ಲ, ನಿನ್ನ ಮಕ್ಕಳಲ್ಲವೆ? ಅವರನ್ನು ಪ್ರೀತಿಯಿಂದ ಸ್ವೀಕರಿಸಿ ಸಾಮ್ರಾಜ್ಯದ ಪಾಲನೆಯ ವ್ಯವಸ್ಥೆ ನಿನ್ನಿಂದಾಗಬೇಕು” ಎಂದು ಸಂತೈಸಿ ಹೇಳಿದನು. ಧೃತರಾಷ್ಟ್ರನು ಪಾಂಡುಪುತ್ರರನ್ನು ಹರಸಿ ಆಶೀರ್ವದಿಸಿದನು.

ಧರ್ಮಜನನ್ನು ಅನುಸರಿಸಿ ಪಾಂಡವರು ರಾಜಮಾತೆ ಗಾಂಧಾರಿಯ ಬಳಿ ಬಂದಿದ್ದಾರೆ. ಧರ್ಮರಾಯನು “ಅಮ್ಮಾ! ನಮ್ಮನ್ನು ಕ್ಷಮಿಸಬೇಕು. ನಿನ್ನ ಮಕ್ಕಳು ನಮಗೂ ಸೋದರರು. ಅವರನ್ನು ನೋಯಿಸುವ ಅಥವಾ ಕೊಲ್ಲುವ ಉದ್ದೇಶ ನಮಗಿರಲಿಲ್ಲ. ಯುದ್ಧವನ್ನು ತಪ್ಪಿಸಬೇಕೆಂದು ಎಷ್ಟು ಪ್ರಯತ್ನಿಸಿದರೂ, ಒಪ್ಪದೆ ಮಾತು ಮಾತಿಗೂ ಯುದ್ಧ ಯುದ್ಧ ಅದೇ ತೀರ್ಮಾನದ ಮಾರ್ಗ ಎಂದು ಪುನುರುಚ್ಚಿಸುತ್ತಿದ್ದವನು ದುರ್ಯೋಧನ. ಕ್ಷತ್ರಿಯ ಧರ್ಮಾನುಸಾರ ಸವಾಲು ಸ್ವೀಕರಿಸ ಬೇಕಾದ ಅನಿವಾರ್ಯತೆ ಬಂದು, ನಾವೂ ಸಮರಕ್ಕೆ ಸಿದ್ಧರಾದ ಕಾರಣ ಇಷ್ಟೆಲ್ಲಾ ಆಗಿ ಹೋಯಿತು. ನಮ್ಮಿಂದ ಏನಾದರು ಅರಿಯದೆ ಅಪರಾಧವಾಗಿದ್ದರೆ ಕ್ಷಮಿಸಬೇಕು” ಎಂದು ಬೇಡಿಕೊಂಡನು.

ದುಃಖತಪ್ತಳಾಗಿದ್ದ ಗಾಂಧಾರಿ ತನ್ನ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತುಸು ಸರಿಸಿದಾಗ ಆಕೆಯ ಕಂಗಳಿಗೆ ಬಳಿ ನಿಂತಿದ್ದ ಧರ್ಮರಾಯನ ಪಾದದ ಬೆರಳುಗಳು ಕಾಣಿಸಿದವು. ಆಕೆಯ ದೃಷ್ಟಿಯಿಂದ ಹೊರ ಸೂಸಿದ ಕ್ರೋಧ ತಪೋಗ್ನಿಯಂತೆ ಕಾರಲ್ಪಟ್ಟು ಧರ್ಮಜನ ಪಾದದ ಬೆರಳುಗಳನ್ನು ಸುಟ್ಟು ಕರಟಿ ಬಿಟ್ಟಿತು. ನೋಡುತ್ತಿದ್ದ ಪಾಂಡವ ಸೋದರರು ನಾಲ್ವರೂ ಒಮ್ಮೆಗೆ ಹೌಹಾರಿ, ಹಿಂದೆ ಸರಿದು ಕೃಷ್ಣನ ಬೆಂಗಡೆಯಲ್ಲಿ ನಿಂತರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page