23.8 C
Udupi
Friday, March 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 465

ಭರತೇಶ ಶೆಟ್ಟಿ, ಎಕ್ಕಾರ್

ತಾನೇನು ಮಾಡುತ್ತಿದ್ದೇನೆ? ಅಸ್ತ್ರ ಧರ್ಮವೇನು? ಪರಿಣಾಮ ಏನಾದೀತು? ಒಂದನ್ನೂ ವಿವೇಚಿಸದ ಗುರುಪುತ್ರ ಅಶ್ವತ್ಥಾಮ “ಪಾಂಡವ ವಂಶವನ್ನು ನಾಶ ಮಾಡು” ಎಂದು ಸಂಕಲ್ಪ ಮಾಡಿ ಅಭಿಮಂತ್ರಿಸಿ ಬ್ರಹ್ಮಾಸ್ತ್ರ ಪ್ರಯೋಗಿಸಿದನು. ಆ ಕೂಡಲೆ ಶ್ರೀ ಕೃಷ್ಣನು “ಅರ್ಜುನಾ! ಏನು ಆಲೋಚಿಸುತ್ತಿರುವೆ? ಬರುತ್ತಿರುವ ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ನೀನೂ ಬ್ರಹ್ಮಾಸ್ತ್ರವನ್ನು ಅನು ಸಂಧಾನ ಮಾಡಿ ಪ್ರಯೋಗಿಸು” ಎಂದು ನಿರ್ದೇಶನವಿತ್ತನು. ಮಂತ್ರಪೂರಿತವಾಗಿ ಪೂರ್ಣ ಶಕ್ತಿಯ ಬ್ರಹ್ಮಶೀರ್ಷಾಸ್ತ್ರ ಬೆಂಕಿಯ ಕೆನ್ನಾಲಗೆಯನ್ನು ಚಾಚುತ್ತಾ ಗಾಂಡೀವದಿಂದ ಚಿಮ್ಮಿ ಹಾರಿತು. ಲೋಕ ಲೋಕಗಳು ತಲ್ಲಣಗೊಳ್ಳತೊಡಗಿತು. ಅಭಿಮುಖವಾಗಿ ಬರುತ್ತಿರುವ ಬ್ರಹ್ಮಾಸ್ತ್ರಗಳೇನಾದರು ಘರ್ಷಿಸಲ್ಪಟ್ಟರೆ ಬ್ರಹ್ಮಾಂಡವೆ ಪ್ರಳಯವಾಗಿ ಛಿದ್ರ ವಿಛಿದ್ರವಾಗಿ ಸರ್ವನಾಶವಾಗಿ ಹೋದೀತು. ಮೇಲ್ವಾಯುವಾಗಿ ಸಾಗುತ್ತಿರುವ ಮಂತ್ರಾಸ್ತ್ರಗಳಿಂದ ಆಗಬಹುದಾದ ವಿನಾಶವನ್ನು ಅರಿತು ವ್ಯಾಸರು, ನಾರದರು ಬ್ರಹ್ಮಾಸ್ತ್ರಗಳನ್ನು ಘರ್ಷಿಸಲು ಬಿಡದೆ ಶಿರಬಾಗಿ ನಮಿಸಿ ಲೋಕರಕ್ಷಣೆಗಾಗಿ ಅಧಿದೇವತೆ ಬ್ರಹ್ಮನನ್ನು ಪ್ರಾರ್ಥಿಸಿದರು. ನಂತರ ತಿರುಗಿ ಅರ್ಜುನ ಮತ್ತು ಅಶ್ವತ್ಥಾಮ ಇಬ್ಬರಲ್ಲೂ ಪ್ರಯೋಗಿತ ಮಂತ್ರಾಸ್ತ್ರಗಳನ್ನು ಉಪಸಂಹಾರ ಮಾಡಿ ಹಿಂದೆಗೆದುಕೊಳ್ಳಲು ಆದೇಶಿಸಿದರು.

ಅರ್ಜುನ ಶ್ರೀಕೃಷ್ಣನ ಮುಖ ನೋಡಿದಾಗ “ಅರ್ಜುನಾ! ಲೋಕರಕ್ಷಣೆಗಾಗಿ ನೀನು ಪ್ರಯೋಗಿಸಿದ ಮಂತ್ರ ಶರ ಬ್ರಹ್ಮಾಸ್ತ್ರವನ್ನು ಶಾಂತಿ ಸ್ತೋತ್ರ ಮುಖೇನ ಉಪಶಮನಗೊಳಿಸು. ಅಶ್ವತ್ಥಾಮ ಗುರುಪುತ್ರನಾದರೂ ಆತನಿಗೆ ಆ ಸಾಮರ್ಥ್ಯವಿಲ್ಲ. ಕೇವಲ ಪ್ರಯೋಗವನ್ನಷ್ಟೆ ಬಲ್ಲವನಾಗಿದ್ದಾನೆ. ಆತನ ಪಿತ ಉಪಶಮನ ವಿಧಿಯನ್ನು ಬೋಧಿಸಿದ್ದಾರಾದರೂ, ಪ್ರಯೋಗ ಮಂತ್ರ ಸಿದ್ಧಿಯಾದ ಉನ್ಮತ್ತತೆಯಿಂದಲೊ ಏನೋ ಆತ ಸರಿಯಾಗಿ ಆರ್ಜಿಸಿಕೊಂಡಿರಲಿಕ್ಕಿಲ್ಲ. ಹಾಗಾಗಿ ಆತನಿಂದ ಪ್ರಯೋಗಿತವಾಗಿರುವ ಅಸ್ತ್ರವನ್ನು ಧರ್ಮವೆ ಕಾಯಲಿದೆ. ಮೊದಲು ನಿನ್ನ ಬ್ರಹ್ಮಾಸ್ತ್ರವನ್ನು ಹಿಂಪಡೆದುಕೋ” ಎಂದು ಆಜ್ಞೆ ಮಾಡಿದನು. ಅಂತೆಯೆ ಅರ್ಜುನ ವಿಧಿವತ್ತಾಗಿ ಬ್ರಹ್ಮದೇವನನ್ನು ಶಾಂತಗೊಳಿಸಿ ಉಪಶಮನ ಮಾಡಿದನು.

ಆದರೆ ಅಶ್ವತ್ಥಾಮ ಹಿಂಪಡೆಯಲು ಒಪ್ಪಲಿಲ್ಲ. ಆಗ ಶ್ರೀ ಕೃಷ್ಣನು ಮತ್ತೆ ಎಚ್ಚರಿಸಿದನು “ಆಚಾರ್ಯಪುತ್ರಾ! ನಿನ್ನ ಅಸ್ತ್ರವು ಸಂಕಲ್ಪದಂತೆ ವಂಶವನ್ನು ನಾಶ ಮಾಡಲು ಮುಂದಾದರೆ ಉತ್ತರೆಯ ಗರ್ಭದತ್ತ ತಿರುಗಬಹುದು. ಹಾಗೊಂದು ವೇಳೆ ಅತ್ತ ಹೋದರೆ ನಿನಗೆ ಭ್ರೂಣಹತ್ಯಾ ಮಹಾಪಾತಕ ತಟ್ಟಲಿದೆ. ಈಗಾಗಲೆ ನೀನು ಮಹತ್ತರವಾದ ದೋಷಗಳನ್ನು‌ ಮುಡಿಗೇರಿಸಿಕೊಂಡಿರುವೆ. ಪ್ರಾಜ್ಞನಾಗಿರುವ ನೀನು ಎಚ್ಚರಿಸಿದ ಮೇಲೂ ಉದ್ದಟತನ ತೋರುವೆಯಾದರೆ ನಿನ್ನಿಂದಾಗುವ ಅಧರ್ಮದಿಂದ ಶಿಷ್ಟರನ್ನು ಧರ್ಮ ರಕ್ಷಿಸಬಲ್ಲುದು” ಎಂದು ಕಟುವಾಗಿ ಬುದ್ದಿಮಾತನ್ನು ಹೇಳಿದನು.

ಆಗಲೂ ಅಶ್ವತ್ಥಾಮ ಕೇಳದೆ ಹಠತೋರುತ್ತಾ “ಪಾಂಡವರ ವಂಶ ನಿರ್ವಂಶವಾಗಲಿ” ಎಂದು ಬ್ರಹ್ಮಾಸ್ತ್ರವನ್ನು ತಡೆಯುವ ಪ್ರಯತ್ನವನ್ನು ಮಾಡಲಿಲ್ಲ.

ಆ ದಿವ್ಯಾಸ್ತ್ರ ಶೀಘ್ರಗತಿಯಲ್ಲಿ ಉತ್ತರೆಯ ಗರ್ಭದತ್ತ ಸಾಗಿತು. ಆದರೆ ಅದಕ್ಕೂ ಮೊದಲು ಉತ್ತರೆಯ ಗರ್ಭಕ್ಕೆ ಶ್ರೀಹರಿ ದಿವ್ಯರಕ್ಷೆಯಿತ್ತು ಬ್ರಹ್ಮಾಸ್ತ್ರದಿಂದ ಯಾವ ಹಾನಿಯೂ ಆಗದಂತೆ ಕಾಯ್ದನು. ಬ್ರಹ್ಮನನ್ನು ಪ್ರಸನ್ನೀಕರಿಸಿ ಶೀರ್ಷಾಸ್ತ್ರವನ್ನು ಸತ್ಯಲೋಕ ವಶಗೊಳಿಸಿದನು.

ಅಹಂಕಾರಿಯಾಗಿ ವಿದ್ಯೆಯನ್ನು ದುರ್ವಿನಿಯೋಗಗೊಳಿಸಿದ, ಮಹಾಪಾತಕ ಕೃತ್ಯಕ್ಕಾಗಿ ಬಳಸಿದ, ಧರ್ಮವನ್ನು ಮರೆತು ಅಧರ್ಮ ಪಥ ಹಿಡಿದ, ಅಮಾನುಷ ಕೃತ್ಯಗೈದ ಅಶ್ವತ್ಥಾಮನಿಗೆ ಶಿಕ್ಷೆಯಾಗಬೇಕೆಂದು ಭೀಮಾರ್ಜುನರು ಆತನ್ನು ಬೆನ್ನಟ್ಟಿ ಹಿಡಿದು ದಂಡಿಸಿದರು. ಭೀಮನು “ಹೇ ದುಷ್ಟನೇ! ನಿನ್ನ ಶಿರದಲ್ಲಿರುವ ದಿವ್ಯರತ್ನದಿಂದಾಗಿ ನಿನಗಿಂತಹ ಅಹಂಭಾವ ಉತ್ಪನ್ನವಾಗುತ್ತಿದೆ. ಆ ಶಿರೋರತ್ನ ಇನ್ನು ನಿನ್ನದ್ದಾಗಿರಬಾರದು.” ಎಂದು ಹೇಳಿ ಅಶ್ವತ್ಥಾಮ ಬಿದ್ದಲ್ಲಿಯೆ ಆತನ ಎದೆಯಲ್ಲಿ ಕುಳಿತು ಭೀಮನು ಚೂಪಾದ ಬಾಣದಿಂದ ಕುಕ್ಕಿ ಕೆತ್ತಿ ಆ ಮಣಿಯನ್ನು ಕಿತ್ತು ತೆಗೆದನು.

ಶ್ರೀಕೃಷ್ಣನಿಗೂ ಅಶ್ವತ್ಥಾಮ ಕೃತ ಅಪರಾಧಗಳಿಂದ ಕೋಪ ಆವರಿಸಿತ್ತು “ಹೇ ಅಶ್ವತ್ಥಾಮಾ! ನಿನ್ನ ಅಪರಾಧಗಳ ಪಾಪ ಮಹತ್ತರವಾದುದು. ಹಾಗಾಗಿ ನೀನು ಮೂರು ಸಾವಿರ ವರ್ಷಕಾಲ ನಿರ್ಜನವಾದ ಕಾಡುಮೇಡುಗಳಲ್ಲಿ ಯಾರ ಸಂಪರ್ಕವೂ ಇಲ್ಲದೆ ನಿನ್ನ ತಲೆಯಲ್ಲಾಗಿರುವ ಗಾಯದ ನೋವನ್ನು ಸಹಿಸುತ್ತಾ, ನಿರಂತರವಾಗಿ ಅದರಿಂದ ರಕ್ತ ಸುರಿಸುತ್ತಾ, ಯಾತನೆ ಅನುಭವಿಸುತ್ತಾ ಬದುಕಿರಬೇಕು” ಎಂದು ಶಾಪ ಕೊಟ್ಟನು. ಅಶ್ವತ್ಥಾಮನು ಕಡು ದುಃಖವನ್ನು ಅಸಹನೀಯ ನೋವನ್ನೂ ಅನುಭವಿಸುತ್ತಾ ಅಲ್ಲಿಂದ ಹೊರಟು ಹೋದನು.

ಭೀಮನು ಅಶ್ವತ್ಥಾಮನಿಂದ ಕಿತ್ತು ತಂದ ಶಿರೋರತ್ನವನ್ನು ಹಿಡಿದುಕೊಂಡು ಕೃಷ್ಣನತ್ತ ಬಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page