ಭಾಗ – 464
ಭರತೇಶ ಶೆಟ್ಟಿ,ಎಕ್ಕಾರ್

ಉಳಿದ ಮೂವರಲ್ಲಿ ಗೊಂದಲ ಉತ್ಪನ್ನವಾಯಿತು. ಪಾಂಡವರು ಸುರಕ್ಷಿತವಾಗಿ ಬದುಕುಳಿದಿದ್ದಾರೆ. ಯಾರಿಗೆ ಬೇಕಾಗಿ ಈ ತನಕದ ಹೊಯ್ದಾಟ ಕಾದಾಟ ನಡೆದಿತ್ತೋ ಅಂತಹ ದುರ್ಯೋಧನ ಹೆಣವಾಗಿ ಮಲಗಿದ್ದಾನೆ. ಇನ್ನು ನಿಂತು ಯಾರಿಗಾಗಿ ಯಾತಕ್ಕಾಗಿ ಆಯುಧ ಎತ್ತಬೇಕು ಎಂಬ ಜಿಜ್ಞಾಸೆ ಮೂಡಿತು. ಆ ಕೂಡಲೆ ಕೃತವರ್ಮನು ದ್ವಾರಕೆಗೆ ಹೊರಟು ಹೋದನು. ಕೃಪಾಚಾರ್ಯರು ನೇರವಾಗಿ ಹಸ್ತಿನಾವತಿಯತ್ತ ಮುಖ ಮಾಡಿದನು. ದ್ರೋಣರ ಆಶ್ರಮದಲ್ಲಿ ಕೃಪಾಚಾರ್ಯರ ಸೋದರಿ ದ್ರೋಣ ಸತಿ, ಮಾತೆ ಕೃಪಿ ಓರ್ವಳೆ ಇರುವಳಾದರೂ ಆತ ಜಿಗುಪ್ಸೆಗೊಳಗಾಗಿ ಯಾವುದೂ ಬೇಡ ಎಂಬಂತಹ ಭಾವೋತ್ಪನ್ನವಾಯಿತು. ಮುಂದೇನು ಮಾಡುವುದೆಂಬ ಗೊತ್ತು ಗುರಿಯೆ ಇಲ್ಲವಾಗಿ ಹೋಯಿತು. ನೇರವಾಗಿ ಗಂಗಾನದಿಯ ತೀರದತ್ತ ಹೋದನು.
ಕರಾಳ ರಕ್ತ ರಾತ್ರಿ ಕಳೆದಾಗಿದೆ. ಘೋರ ಮಾರಣ ಹೋಮ ನಡೆದಾಗಿದೆ. ಸೂರ್ಯೋದಯವಾದ ಬಳಿಕ ಶ್ರೀ ಕೃಷ್ಣನೊಡನೆ ಪಾಂಡವರು ಬಿಡಾರದತ್ತ ಬಂದರು. ಪಾಂಡವರೈವರು ಬರುತ್ತಿರುವುದನ್ನು ಖಚಿತ ಪಡಿಸಿಕೊಂಡು ಬದುಕುಳಿದಿದ್ದ ಓರ್ವ ಓಡಿಬಂದನು. ಸಾತ್ಯಕಿಯ ಸಾರಥಿಯೂ ಇಲ್ಲಿ ಜೀವಂತವಾಗಿ ಉಳಿದಿದ್ದನು. ಕಾರಣ ಬಲರಾಮನ ರಥದ ಸಾರಥಿಯಾಗಿ ಸಾತ್ಯಕಿ ಗದಾಯುದ್ಧಕ್ಕೆ ಮೊದಲು ದ್ವಾರಕೆಗೆ ಹೋಗಿದ್ದ ಕಾರಣ ಸಾರಥಿ ಇಲ್ಲಿ ಬಿಡಾರದಿಂದ ಹೊರಗೆ ಉಳಿಯುವಂತಾಗಿತ್ತು. ಅಶ್ವತ್ಥಾಮನಿಂದಾದ ಹತ್ಯಾಕಾಂಡದ ಮಧ್ಯೆ ಹೇಗೋ ತಪ್ಪಿಸಿಕೊಂಡು ವೃಷ್ಣಿಯಾದ ಈತನೋರ್ವ ಬದುಕುಳಿದಿದ್ದನು. ಪಾಂಡವ ಬಿಡಾರದಲ್ಲಿ ಹದಿನೆಂಟನೆಯ ದಿನದ ರಾತ್ರಿ ಅಶ್ವತ್ಥಾಮನಿಂದಾದ ಅಮಾನುಷ ಪೈಶಾಚಿಕ ಹತ್ಯಾಕಾಂಡದ ವಿವರವನ್ನು ಭಯದಿಂದ ವಿವರಿಸಿ ಹೇಳಿದನು. ಅದೇ ಹೊತ್ತು ಅಲ್ಲಿಗೆ ಬಂದ ದ್ರೌಪದಿಯು ಈ ವೃತ್ತಾಂತವನ್ನು ಕೇಳಿ ಕಂಗಾಲಾದಳು. ಧರ್ಮರಾಯನ ಸ್ಥಿತಿ ಹೇಳತೀರದು. ಧರ್ಮ ಧರ್ಮವೆಂದು ಪಾಲಿಸುತ್ತಾ ಬದುಕಿದ್ದರೂ, ಈ ಹೊತ್ತು ಕೇವಲ ಐವರು ಮಾತ್ರ ಉಳಿದು ಅನ್ಯರೆಲ್ಲರೂ ಮಡಿದು ಹೋದರಲ್ಲಾ ಎಂಬ ವೇದನೆ ಮಡುಗಟ್ಟಿ ಸ್ಮೃತಿ ತಪ್ಪಿ ಬಿದ್ದನು. ಆದರೆ ಭೀಮಾರ್ಜುನರು ಮಾತ್ರ ವ್ಯತಿರಿಕ್ತವಾಗಿ ದುಃಖಕ್ಕೊಳಗಾಗದೆ ಅತ್ಯುಗ್ರ ಕ್ರೋಧಾವೇಶಕ್ಕೊಳಗಾದರು. ಈ ಹೊತ್ತು ಅಶ್ವತ್ಥಾಮನೇನಾದರು ಕೈಗೆ ಸಿಕ್ಕರೆ ಆಯುಧವಿಲ್ಲದೆಯೆ ಬರಿಯ ಕೈಯ ಹೊಡೆತದಿಂದಲೆ ಗುದ್ದಿ, ಹೊಸಕಿ, ಹರಿದು ಬಿಡುವರೋ ಎಂಬಂತಹ ಸ್ಥಿತಿಗೆ ತಲುಪಿದ್ದಾರೆ. ಕೃಷ್ಣ ಮೈದಡವಿ ಉಪಚರಿಸಿದಾಗ ಯುಧಿಷ್ಠಿರ ಚೇತರಿಸಿಕೊಂಡನು.
ದ್ರೌಪದಿ ಸಹಿತ ಕೃಷ್ಣಾರ್ಜುನರು, ಧರ್ಮರಾಯ ಭೀಮ, ನಕುಲ ಸಹದೇವ ಸಹಿತ ಬಿಡಾರದೊಳಗೆ ಬಂದು ನೋಡಿದರೆ ಕಡಿದು ಕೊಚ್ಚಿ ಎಸೆದ ಹೆಣಗಳ ರಾಶಿ. ಅರೆಸುಟ್ಟು ಕರಟಿ ಹೋದ, ಗುರುತು ಹಿಡಿಯಲಾಗದ ಕಾಯಗಳು. ಕತ್ತರಿಸಲ್ಪಟ್ಟು ನೆಲದ ಮೇಲೆ ಬಿದ್ದಿರುವ ಆನೆ ಕುದುರೆಗಳು ಕುರುಕ್ಷೇತ್ರದ ರಣ ಭೂಮಿಗಿಂತಲೂ ಭೀಬತ್ಸಕರ ವಾತಾವರಣ ಕಾಣಿಸುತ್ತಿದೆ. ಮಲಗುವ ಸ್ಥಳದ ಆಧಾರದಲ್ಲಿ ಹುಡುಕಿ ತಾನು ಹೆತ್ತ ಮಕ್ಕಳಾಗಿರಬಹುದೆಂದು ಊಹಿಸಿದ ಐದು ಹೆಣಗಳ ಮಧ್ಯೆ ದ್ರೌಪದಿ ಬಿದ್ದು ಹೊರಳಾಡುತ್ತಾ ರೋದಿಸತೊಡಗಿದಳು. ಇಲ್ಲಿ ಎಲ್ಲರೂ ಅಳುವವರೇ ಆದರೆ ಸಮಾಧಾನಿಸುವವರ್ಯಾರು?
ಭೀಮಸೇನನು ಅಲ್ಲಿ ಅರೆಕ್ಷಣವೂ ನಿಲ್ಲುವ ಮನಮಾಡದೆ ನಕುಲನನ್ನು ಕರೆದು ಸಾರಥಿಯನ್ನಾಗಿಸಿ ರಥದಲ್ಲಿ ನಿಂತು ಅಶ್ವತ್ಥಾಮನನ್ನು ಅರಸಿ ಹೊರಟನು. ಆತನನ್ನು ಅನುಸರಿಸಿ ಹೊರಟ ಅರ್ಜುನನ್ನು ಕರೆದು ನಿಲ್ಲಿಸಿ ಕೃಷ್ಣನು ಸಾರಥಿಯಾಗಿ ಅರ್ಜುನನ ರಥವನ್ನು ನಡೆಸಿದನು. ನಕುಲ ಸಾರಥ್ಯದ ಭೀಮನ ರಥವನ್ನು ಬೆಂಬತ್ತಿ ಹೊರಟನು.
ಅಶ್ವತ್ಥಾಮ ಈ ಹೊತ್ತು ಸಿಕ್ಕರೂ ಕೇವಲ ಕ್ರೋಧವಶರಾದ ಭೀಮ ನಕುಲರನ್ನು ಸಂಹರಿಸಿ ಬಿಡಬಲ್ಲ ಸಾಮರ್ಥ್ಯವಂತನಾಗಿದ್ದಾನೆ. ಕಾರಣ ಆತನ ಬಳಿ ಈಗಲೂ ಮಹಾ ಮಂತ್ರಾಸ್ತ್ರಗಳಿವೆ. ಅದರಲ್ಲೂ ಬ್ರಹ್ಮಾಸ್ತ್ರವೂ ಸೇರಿದೆ. ಹೀಗಿರಲು ಅವಸರದಿಂದ ಸಾಗಿದ ಭೀಮನೇನಾದರು ಕೋಪದ ಕೈಗೆ ಬುದ್ಧಿಯನ್ನಿತ್ತು ದುಡುಕಿದರೆ ಅನಾಹುತವಾಗಿ ಹೋದೀತೆಂದು ಕೃಷ್ಣ ಬೆನ್ನಟ್ಟಿ ಹೊರಟಿರಬಹುದು.
ಅಶ್ವತ್ಥಾಮ ವಿರಾಗಿಯಾಗಿ ವೈರಾಗ್ಯದಿಂದ ವ್ಯಾಸರ ಆಶ್ರಮದತ್ತ ಹೊರಟಿದ್ದಾನೆ. ಕೃತ ಅಪರಾಧಗಳಿಂದ ನೊಂದಿದ್ಧಾನೋ, ಅಲ್ಲ ಪಾಪ ಪ್ರಜ್ಞೆ ಜಾಗೃತವಾಗಿದೆಯೋ ಅರಿಯದು. ತನ್ನ ಮನದ ದುಗುಡದ ಉಪಶಮನಕ್ಕಾಗಿ ಅಥವಾ ಪಾಪಕ್ಕೆ ಪ್ರಾಯಶ್ಚಿತ್ತ ತಿಳಿಯುವುದಕ್ಕಾಗಿಯೋ ಅತ್ತ ಸಾಗುತ್ತಿರಬಹುದು. ಭೀಮಾರ್ಜುನರು ಎಲ್ಲೆಲ್ಲಿ ಹುಡುಕಿದರೂ ಅಶ್ವತ್ಥಾಮನ ಸುಳಿವಿಲ್ಲ. ಕಂಡತ್ತ ರಥ ಓಡಿಸುತ್ತಾ ಹುಡುಕುತ್ತಿರುವ ಭೀಮಾರ್ಜುನರಿಗೆ ಅಶ್ವತ್ಥಾಮ ವ್ಯಾಸರ ಆಶ್ರಮದತ್ತ ಹೋಗಿರುವ ಸಂಗತಿ ತಿಳಿದು ಅತ್ತ ಹೊರಟರು.
ಆಶ್ರಮದ ಬಳಿ ಸಾಗಿದಾಗ ದೂರದಲ್ಲಿ ಅಶ್ವತ್ಥಾಮನನ್ನು ಕಂಡರು. ಅವನ ಕೈಯಲ್ಲಿ ಧನುಸ್ಸಾಗಲಿ, ಖಡ್ಗವಾಗಲಿ, ಅನ್ಯ ಯಾವುದೆ ಆಯುಧಗಳೂ ಇಲ್ಲ. ರಥಗಳ ಸದ್ದನ್ನಾಲಿಸಿದ ಗುರುಪುತ್ರನು ತಿರುಗಿ ನೋಡಿದರೆ ಭೀಮಾರ್ಜುನರು ರಥಿಕರಾಗಿ ಬಂದಿದ್ದಾರೆ. ಭೀಮನು ಗದಾಧಾರಿಯಾಗಿಯೂ, ಅರ್ಜುನ ಗಾಂಡಿವಧಾರಿಯಾಗಿಯೂ ಇದ್ದಾರೆ. ಇಬ್ಬರ ಮುಖದಿಂದಲೂ ಕೋಪದ ಕಿಡಿಕಾರುತ್ತಿದೆ. ಅಪಾಯದ ಮುನ್ಸೂಚನೆ ಅರಿತ ಅಶ್ವತ್ಥಾಮ ಕಾಲಬುಡದಲ್ಲಿದ್ದ ನೀಳವಾದ ಹುಲ್ಲು ಕಡ್ಡಿಯೊಂದನ್ನು ಸೆಳೆದು ಕೈಯಲ್ಲಿ ಹಿಡಿದನು. ಮಂತ್ರೋಚ್ಚಾರ ಮಾಡುತ್ತಾ ಬ್ರಹ್ಮಾಸ್ತ್ರವನ್ನು ಅವಾಹನೆ ಮಾಡಿದ್ದಾನೆ.
ಮುಂದುವರಿಯುವುದು…
















































