ಭಾಗ – 422
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೨೨ ಮಹಾಭಾರತ
“ಮಾದ್ರೇಶಾ! ನಾನು ಪರಮ ಪೂಜ್ಯ ಪರಶುರಾಮರ ಶಿಷ್ಯ. ಧನುರ್ವೇದ ಪಾರಂಗತ ಧನುಷ್ಮಂತನೂ ಹೌದು. ಒಂದು ಬಾಣಕ್ಕೆ ಒಂದೇ ಗುರಿ. ಎರಡನೆ ಗುರಿಗೆ ಬದಲಾಯಿಸುವುದು ಯೋಧನ ಯೋಗ್ಯತೆಗೆ ಅಪಮಾನ. ನಾನೆಂದಿಗೂ ಅಂತಹ ಅಪನಿಂದೆಗೆ ಅವಕಾಶ ನೀಡುವವನು ಅಲ್ಲ. ಏನು ನಿರ್ದೇಶನ ನೀಡಿದರೂ ನಾನು ತೊಟ್ಟಿರುವ ಗುರಿ ಬದಲಿಸಲಾರೆ” ಎಂದು ನಿಷ್ಠುರವಾಗಿ ನುಡಿದನು.
ಆಗ ಶಲ್ಯನು “ಕರ್ಣಾ! ಅಮೋಘವಾದ ಸರ್ಪಾಸ್ತ್ರ ನಿನಗೆ ವಿಜಯ ಮಾಲೆ ತೊಡಿಸುವ ಪೂರ್ಣ ಅರ್ಹತೆ ಹೊಂದಿದೆ. ಅನ್ಯ ದಿವ್ಯಾಸ್ತ್ರಗಳನ್ನಾದರೆ ಅರ್ಜುನ ಖಂಡಿಸುತ್ತಿದ್ದ ಎನ್ನುವುದು ನಿಸ್ಸಂಶಯ. ಆದರೆ ಈ ಸರ್ಪಾಸ್ತ್ರ ಯಾಕೋ ವೈಶಿಷ್ಟ್ಯಗಳನ್ನು ತೋರುತ್ತಿದೆ. ಬಹುಕಾಲದಿಂದ ನಿನ್ನಲ್ಲಿ ಇದ್ದ ಈ ಅಸ್ತ್ರ ನಿರಂತರ ಪೂಜಿಸಲ್ಪಟ್ಟಿದೆ. ಆ ಕಾರಣದಿಂದಲೋ ಏನೊ ವಿಶೇಷ ಶಕ್ತಿ ಹೊಂದಿರುವಂತೆ ಭಾಸವಾಗುತ್ತಿದೆ. ವ್ಯರ್ಥ ಪ್ರಲಾಪ ಮಾಡದಿರು. ನಿನಗೆ ವಿದ್ಯೆ ತಿಳಿದಿರಬಹುದು, ಆದರೆ ನನಗೆ ಅನುಭವ ನಿನಗಿಂತ ಹೆಚ್ಚಿದೆ. ನಾಳಿನ ದಿನ ಪರಿಣಾಮ ಏನಾಯ್ತು ಎಂಬುವುದು ಮಹತ್ವ ಪಡೆಯುತ್ತದೆ. ಬಹುಕಾಲದ ನಿನ್ನ ಆಸೆ ಅರ್ಜುನನನ್ನು ಗೆಲ್ಲಬೇಕೆಂದಲ್ಲವೆ? ಆ ಇಚ್ಚಾಪೂರ್ತಿಗೆ ಈಗ ಕಾಲ ಪಕ್ವವಾಗಿದೆ. ನಿಖರವಾದ ಗುರಿಯನ್ನು ಹೂಡಿದೆಯಾದರೆ ನಿನ್ನ ಜೀವಮಾನದಿಂದ ಕಾತರಿಸುತ್ತಾ ಬಹು ವರ್ಷದಿಂದ ಕಾಯುತ್ತಾ ಬಂದಿರುವ ಗುರಿಯೂ ಈಡೇರುತ್ತದೆ. ಅಂದರೆ ಅರ್ಜುನನ ಅಂತ್ಯವಾಗುವ ಸಾಧ್ಯತೆ ಇದೆ. ಹಾಗಾಗಿ ಹಠ ಮಾಡದೆ ನೀನು ನನ್ನ ಮಾರ್ಗದರ್ಶನ ಮತ್ತು ಅಭಿಪ್ರಾಯವನ್ನು ಸ್ವೀಕರಿಸು” ಎಂದು ಮತ್ತೆ ಒತ್ತಾಯಪೂರ್ವಕವಾಗಿ ಹೇಳಿದನು.
ಆದರೆ ಕರ್ಣ ಮಾತ್ರ ಶಲ್ಯನ ಯಾವ ಮಾತಿಗೂ ಕಿವಿಗೊಡಲಿಲ್ಲ. ಬದಲಾಗಿ ಉಚ್ಚಸ್ವರದಲ್ಲಿ “ಹೇ ಧನುರ್ಧರ ಧನಂಜಯ ನಿನ್ನ ಬಳಿ ಅಸಂಖ್ಯ ಮಹಾಸ್ತ್ರಗಳಿವೆಯೆಂದು ಪ್ರಚಾರ ಪಡೆದಿರುವೆ. ಆದರೆ ನನ್ನ ಬಳಿ ಉಪಯೋಗಕ್ಕೆ ಬರುವ ದಿವ್ಯ ಸರ್ಪಾಸ್ತ್ರವಿದೆ. ಇದನ್ನು ಖಂಡಿಸುವ ಪ್ರತ್ಯಸ್ತ್ರ ನಿನ್ನ ಬಳಿ ಇರಲಾರದು. ನೀನೀಗ ಹತನಾಗಲು ಸಿದ್ದನಾಗು” ಎಂದು ಕೂಗಿ ಹೇಳಿದನು. ಕರ್ಣನ ಮನಸ್ಸು ಆನಂದತುಂದಿಲವಾಗಿದೆ. ಕಾಯಗಳಿಗೆ ಈ ವರೆಗೆ ಆಗಿರುವ ಗಾಯಗಳು ನೀಡುತ್ತಿದ್ದ ನೋವು ಮರೆತು ಹೋಗಿದೆ. ಬಾಹುಗಳಲ್ಲಿ ಮನೋಜನ್ಯವಾದ ಉತ್ಸಾಹ ಬಲವಾಗಿ ಚೈತನ್ಯ ತುಂಬುತ್ತಿದೆ. ಧನುಸ್ಸಿನ ಶಿಂಜಿನಿಯನ್ನು ಕರ್ಣ ಅಕರ್ಣಾಂತವಾಗಿ ಸೆಳೆದನು. ಸೂರ್ಯಾಗ್ನಿ ಸದೃಶವಾದ ದಿವ್ಯಶರವನ್ನು ಪ್ರಯೋಗಿಸಿ ಬಿಟ್ಟನು. ಅಂತರಿಕ್ಷದಲ್ಲಿ ಜ್ವಲಿಸುತ್ತಾ ಪ್ರಜ್ವಲಿಸುತ್ತಿದೆ. ವೇಗಪೂರಿತವಾಗಿ ಸಾಗುತ್ತಿದೆ.
ಹೀಗೆ ಜ್ವಾಜಾಲ್ಯಮಾನವಾಗಿ ಕರ್ಣನಿತ್ತ ಗುರಿಯತ್ತ ಸರ್ಪಾಸ್ತ್ರ ರಭಸದಿಂದ ಬರುತ್ತಿದೆ. ಇದನ್ನು ಖಂಡಿಸಲು ಪಾರ್ಥ ಪ್ರತ್ಯಸ್ತ್ರ ಹೂಡಿದ್ದಾನೆ. ಅಷ್ಟರಲ್ಲಾಗಲೆ ರಥಕಲ್ಪ, ಅಶ್ವಹೃದಯ ತಜ್ಞ ಸಾರಥಿ ವಾಸುದೇವ ಲೀಲೆ ಪ್ರದರ್ಶಿಸಲು ಮುಂದಾದನು. ತನ್ನ ಬಲಕಾಲಿನಿಂದ ಕುದುರೆಗಳ ನೊಗದ ಸೆಳೆಗೋಲನ್ನು ಒತ್ತಿದನು. ರಥವನ್ನೂ ಜಗ್ಗಿದನು. ಪರಿಣಾಮವಾಗಿ ಸೂಚನೆ ಅರಿತಂತೆ ಅಷ್ಟ ದಿವ್ಯಾಶ್ವಗಳು ಕಾಲನ್ನು ಮಡಚಿ ಮಲಗಿದಂತೆ ಬಾಗಿದವು. ರಥವನ್ನೂ ಜಗ್ಗಿದ ಕಾರಣದಿಂದ ರಥ ಚಕ್ರಗಳು ನೆಲದಲ್ಲಿ ಒತ್ತಲ್ಪಟ್ಟು ಹೂತು ಹೋದವು. ಈ ಪ್ರಕ್ರಿಯೆಯಿಂದಾಗಿ ಅರ್ಜುನನ ರಥ ತಗ್ಗಿತು. ಹೀಗಾಗುತ್ತಲೆ ವೇಗವಾಗಿ ಚಿಮ್ಮಲ್ಪಟ್ಟು ಬರುತ್ತಿದ್ದ ಸರ್ಪಾಸ್ತ್ರ ಅರ್ಜುನನ ಲಲಾಟವನ್ನು ಅಲಂಕರಿಸಿದ್ದ ದೇವಲೋಕದ ಮುತ್ತಿನ ಕಿರೀಟವನ್ನು ಕಚ್ಚಿ ಚುಚ್ಚಿ ಹಾರಿಸಿತು. ತ್ರಿಲೋಕದಲ್ಲಿ ನಾಮಾಂಕಿತವಾಗಿ ಸುಪ್ರಸಿದ್ದವಾಗಿದ್ದು, ಈ ಕಿರೀಟವನ್ನು ಬ್ರಹ್ಮದೇವ ತನ್ನ ತಪಸ್ಶಕ್ತಿಯನ್ನು ಧಾರೆಯೆರೆದು ದೇವೇಂದ್ರನಿಗಾಗಿ ಸೃಜಿಸಿದ್ದನು. ಅಂತಹ ಸರ್ವೋತ್ತಮ ಕಿರೀಟಧಾರಣೆಯ ಯೋಗ್ಯತೆ ಹೊಂದಿದ್ದ ಪಾರ್ಥ, ‘ಕಿರೀಟಿ’ ಎಂದೇ ಖ್ಯಾತನಾಮನಾಗಿದ್ದನು. ನಾಗ ಅಶ್ವಸೇನ ರೋಷಭರಿತನಾಗಿ ಅರ್ಜುನನ ಶಿರವೆಂದು ಭಾವಿಸಿ ಮಹತ್ತರವಾದ ಮಣಿ ವಜ್ರ ಪೋಣಿತ ಸುವರ್ಣ ಕಿರೀಟವನ್ನು ಹಾರಿಸಿದನು. ಅರ್ಜುನನ ಬಹುಮೂಲ್ಯ ಪ್ರಾಣ ಸಮರ್ಥ ಸಾರಥಿ ಕೃಷ್ಣನ ಸಾರಥ್ಯ ಬಲುಮೆಯಿಂದ ಉಳಿಯಿತು. ಅದಕ್ಕೆ ಪ್ರತಿಯಾಗಿ ನಷ್ಟವಾದದ್ದು ಅಮೂಲ್ಯ ರತ್ನ ಖಚಿತ, ವಜ್ರ, ಮಣಿ ಮುಕುಟ. ಈ ಕಿರೀಟ ಧರಿಸಿದವನಿಗೆ ಅತ್ಯಂತ ಸುಖಾವಹವಾಗಿದ್ದಿತು. ಫಾಲ್ಗುಣನಿಗೆ ಬಹುಪ್ರೀತವಾಗಿದ್ದ ಈ ಕಿರೀಟ ಅಶ್ವಸೇನನ ಸೇಡಿನ ಕಿಚ್ಚು, ದಿವ್ಯ ಸರ್ಪಾಸ್ತ್ರದ ಬಲದಿಂದಾಗಿ ಅರ್ಜುನನ ಉತ್ತಮಾಂಗವಾದ ಶಿರದಿಂದ ಹಾರಿಸಲ್ಪಟ್ಟಿದೆ. ಅಸ್ತಾಚಲದಿಂದ ಸೂರ್ಯದೇವನು ಕೆಳಗಿಳಿದು ಬೀಳುವಂತೆ ಧರೆಗುರುಳಿತು. ಬೀಳುವಾಗ ಅತಿದೊಡ್ಡ ಶಬ್ಬದೊಂದಿಗೆ ಬಿದ್ದು ಭೂಮಿಯಲ್ಲಿ ಹೊಂಡವನ್ನು ಉಂಟುಮಾಡಿ ಧೂಳು ಗಗನಚುಂಬಿಯಾಗಿ ಹಬ್ಬಿತು. ಎಲ್ಲೆಡೆ ಹಬ್ಬಿದ ಧೂಳು, ಶಬ್ದ, ಸರ್ಪಾಸ್ತ್ರ ವಿಷ ಜ್ವಾಲೆಯ ಉರಿ ಇದೆಲ್ಲದರ ಕಾರಣದಿಂದ ಅಲ್ಲಿ ನೆರೆದಿದ್ದವರಿಗೆ ಒಮ್ಮೆಗೆ ಏನಾಗಿದೆ ಎಂದು ಅರಿವಾಗಲಿಲ್ಲ, ಜೊತೆಗೆ ಅತೀ ಭೀಕರ ಶಬ್ದದಿಂದ ಭಯಗೊಂಡು ವ್ಯಥೆಗೊಳಗಾಗಿ ನಡುಗಿ ಹೋಗಿದ್ದಾರೆ.
ಅಶ್ವಸೇನ ಘೋರ ವಿಷಸರ್ಪ. ಅರ್ಜುನನ ಶಿರಚ್ಚೇದನ ತನ್ನಿಂದಾಗಲಿಲ್ಲ ಎಂದು ತಿಳಿದ ಕೂಡಲೆ ಬಹುಮೂಲ್ಯವಾದ ಕಿರೀಟದ ಮೇಲೆ ತನ್ನ ಆಕ್ರೋಶದ ಜ್ವಾಲೆ ಪ್ರವಹಿಸಿ ಭಸ್ಮಗೊಳಿಸಿದನು. ಕೂಡಲೆ ತಿರುಗಿ ಕರ್ಣನ ಬತ್ತಳಿಕೆ ಸೇರಿ ಮರುಯತ್ನದಲ್ಲಿ ಅರ್ಜುನನ ವಧೆಗೈಯುವ ಉದ್ದೇಶದಿಂದ ಕರ್ಣನತ್ತ ಸಾಗಿತು.
ಕರ್ಣನ ಮುಂಭಾಗದಲ್ಲಿ ಗಾಳಿಯಲ್ಲಿ ಹಾರಾಡುತ್ತಾ ನಾಗ ಅಶ್ವಸೇನ “ಹೇ ಕರ್ಣಾ! ನಿನಗೆ ಅರ್ಜುನ ಶತ್ರು, ನನಗೂ ಆತ ಪರಮಶತ್ರು. ಆತನ ವಧೆ ನಮ್ಮಿಬ್ಬರ ಉದ್ದೇಶವಾಗಿತ್ತು. ಆದರೆ ನೀನು ಸರಿಯಾಗಿ ವಿಮರ್ಷಿಸದೆ ನನ್ನನ್ನು ಪ್ರಯೋಗಿಸಿದ ಕಾರಣದಿಂದಾಗಿ ನಾನು ಮೊದಲ ಪ್ರಯತ್ನದಲ್ಲಿ ವಿಫಲನಾಗಬೇಕಾಯಿತು. ಅದಕ್ಕಾಗಿ ನೀನು ಚಿಂತೆ ಪಡಬೇಕಾಗಿಲ್ಲ. ನಾನು ನಷ್ಟವಾಗಲಿಲ್ಲ, ಮರಳಿ ಬಂದಿದ್ದೇನೆ. ಈಗ ಸರಿಯಾಗಿ ವಿವೇಚಿಸಿ ನನ್ನನ್ನು ಸಂಧಾನ ಮಾಡಿ ಮತ್ತೆ ಪ್ರಯೋಗಿಸು. ಅರ್ಜುನನ ವಧೆ ಇಂದು ಶತಸಿದ್ಧವಾಗಲಿದೆ” ಎಂದನು.
ಆಗ ಶಲ್ಯನೂ “ಹೇ ಮಹಾರಥಿ, ಅವಕಾಶ ಒದಗಿ ಬಂದಾಗ ಅದನ್ನು ಬಳಸಿಕೊಳ್ಳುವುದು ಜಾಣತನ. ನಿನ್ನಿಂದ ಒಮ್ಮೆ ತಪ್ಪೆಸಗಲ್ಪಟ್ಟರೂ ದೋಷವಿಲ್ಲ. ಈಗ ಒದಗಿರುವುದು ಸುವರ್ಣಾವಕಾಶ. ಮತ್ತೆ ಪ್ರಯೋಗಿಸಿ ಅರ್ಜುನನ ನಾಭಿಯನ್ನು ಲಕ್ಷ್ಯವಾಗಿಸು” ಎಂದನು. ಕರ್ಣ ಸರ್ಪಕುಲ ಸಂಜಾತ ಅಶ್ವಸೇನನತ್ತ ತಿರುಗಿ “ಹೇ ನಾಗಶ್ರೇಷ್ಟನೇ! ನಿನಗೆ ವಂದನೆ. ಮೊದಲಾಗಿ ನಿನಗೆ ಒಂದು ವಿಚಾರ ತಿಳಿಸುವೆ, ಏನೆಂದರೆ ಈಗ ಸಾಗುತ್ತಿರುವುದು ಕರ್ಣಾರ್ಜುನರ ಸಮರ. ನಿನ್ನನ್ನು ಸಂಪ್ರಾರ್ಥಿಸದೆ, ಅಭಿಮಂತ್ರಿಸದೆ ವಂಚನೆಯಿಂದ ನನ್ನ ದಿವ್ಯ ಶರದಲ್ಲಿ ಸ್ಥಿತನಾಗಿ ಅಪರಾಧ ಎಸಗಿರುವೆ. ಒಂದು ವೇಳೆ ಅರ್ಜುನನ ಪ್ರಾಣ ಹರಣವಾಗುತ್ತಿದ್ದರೆ ಆಗ ಪ್ರಕರಣ ಭಿನ್ನವಾಗುತ್ತಿತ್ತು. ಪಾರ್ಥನನ್ನು ವಧಿಸಿರುವುದು ಅಶ್ವಸೇನ. ಪ್ರತಿಕಾರ ತೀರಿಸಿಕೊಂಡವನು ನಾಗಶ್ರೇಷ್ಠ ಎಂದು ಲೋಕ ಕೊಂಡಾಡುತ್ತಿತು. ಒಂದೊಮ್ಮೆಗೆ ಹಾಗಾಗುತ್ತಿದ್ದರೆ ಅದರ ಶ್ರೇಯಸ್ಸು ನಿನಗೆ ಸಲ್ಲುತ್ತಿತ್ತೇ ವಿನಹ ನನ್ನ ಪಾಲಿಗೆ ಏನೇನೂ ಉಳಿಯುತ್ತಿರಲಿಲ್ಲ. ಹಾಗಾಗಿ ಇಲ್ಲಿ ಆದದ್ದು , ಅರ್ಜುನ ಬದುಕುಳಿದದ್ದು ಒಳ್ಳೆಯದು ಆಯಿತು. ನಾನು ನಿನ್ನನ್ನು ಮರು ಪ್ರಯೋಗಿಸಲಾರೆ. ದಯಮಾಡಿ ನೀನಿನ್ನು ತೆರಳಬಹುದು. ನೀನು ಹೋಗುವುದಕ್ಕೆ ಅನುಮತಿ – ಅಪ್ಪಣೆ ನೀಡಲಾಗಿದೆ. ಕರ್ಣಾರ್ಜುನರ ಯುದ್ದ ಶ್ರೇಷ್ಟ ವೀರಾಗ್ರಣಿಗಳಾದ ನಮ್ಮಿಬ್ಬರ ಮಧ್ಯೆ ಸಾಗಲಿ. ಅದಕ್ಕಾಗಿ ನಿನ್ನ ಸಹಾಯ ನಾನು ಅಪೇಕ್ಷಿಸಲಾರೆ” ಎಂದನು.
ಅಶ್ವಸೇನನ ಮನದಲ್ಲಿ ಕ್ರೋಧ ಆವರಿಸಿತು. ಶರದೊಳಗೆ ಸಿದ್ದಿಬಲದಿಂದ ಅವಾಹಿತನಾಗಿದ್ದ ಅಶ್ವಸೇನ ನಿಜರೂಪ ಧಾರಣೆಮಾಡಿ ಪ್ರಕಟವಾದನು. ತನ್ನನ್ನು ಪ್ರಯೋಗಿಸಲು ಒಪ್ಪದ ಕರ್ಣನನ್ನು ನಿಂದಿಸಿ, ತಾನು ಸ್ವತಂತ್ರವಾಗಿ ಪಾರ್ಥನ ಪ್ರಾಣ ಹೀರುವೆನೆಂದು ಹೇಳಿ, ಘೋರ ನಿಜರೂಪ ತಳೆದು ಅರ್ಜುನನ ವಧೆಗಾಗಿ ಅತ್ತ ಸಾಗ ತೊಡಗಿದನು.
ಅರ್ಜುನನಿಗೆ ಈ ವಿಶೇಷ ಶಕ್ತಿಯನ್ನು ಕಂಡು “ಇದೇನು ಮಾಧವಾ? ನಿಜ ಪ್ರಾಣಸಹಿತ ಘೋರ ಸರ್ಪ ನಮ್ಮತ್ತ ಬರುತ್ತಿದೆ. ಯಾರು ಈ ಸರ್ಪ? ಯಾಕಾಗಿ ನಮ್ಮತ್ತ ಆಕ್ರಾಮಕವಾಗಿ ಬರುತ್ತಿದೆ?” ಎಂದು ಪ್ರಶ್ನಿಸಿದನು.
ಆಗ ಕೃಷ್ಣ “….
ಮುಂದುವರಿಯುವುದು..



















