ಭಾಗ – 420
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೪೨೦ ಮಹಾಭಾರತ
ಅಣ್ಣ ಭೀಮಸೇನನ ಆಕ್ರೋಶಭರಿತ ನುಡಿಗಳನ್ನು ಸಂಯಮದಿಂದ ಕೇಳಿದ ಧನುರ್ಧರ ಧನಂಜಯ ಮತ್ತಷ್ಟು ಉಗ್ರನಾದನು. ಕ್ಷಿಪ್ರಗತಿಯ ಯುದ್ದದಲ್ಲಿ ತೊಡಗಿ ಅಕ್ಷಯಾಸ್ತ್ರಗಳನ್ನು ಪ್ರಯೋಗಿಸಿದನು. ತೊಡುವಾಗ ಒಂದು, ಸೆಳೆದಾಗ ಹತ್ತು, ಚಿಮ್ಮುವಾಗ ನೂರು, ಹಾರುವಾಗ ಸಾವಿರ, ಲಕ್ಷ್ಯದತ್ತ ಸಾಗುವಾಗ ಲಕ್ಷವಾಗಿ ಗುಣಿಸಲ್ಪಡುತ್ತಾ ಶರವರ್ಷವನ್ನು ಸುರಿಸತೊಡಗಿದೆ. ಈ ವೈಶಿಷ್ಟ್ಯಾಸ್ತ್ರ ಪ್ರಯೋಗದಿಂದ ಬಾಣಂಗಳದಲ್ಲಿ ಶರ ಚಪ್ಪರ ನಿರ್ಮಾಣವಾಯಿತು. ಈತನ್ಮಧ್ಯೆ ನಭೋ ಮಂಡಲದ ಚಕ್ಷು ದಿನಕರನತ್ತ ಮಹಾಸ್ತ್ರ ಪ್ರಯೋಗಿಸಿ ಅರ್ಜುನ ಕ್ಷಣಿಕ ಅಂಧಕಾರವನ್ನು ಸೃಷ್ಟಿಸಿದನು. ಗುಡಾಕೇಶಿ ಅರ್ಜುನನಿಗೆ ಚಾಕ್ಷುಷ ವಿದ್ಯೆಯೂ ಕರಗತವಾಗಿದ್ದುದರಿಂದ ಕತ್ತಲೆ ಹಗಲಿನ ವ್ಯತ್ಯಾಸವಾಗದು, ಕತ್ತಲೆಯಲ್ಲೂ ಸಮಾನ ದೃಷ್ಟಿಯಿದ್ದು ಪ್ರತಿಘಾತಗಳು ಸುಷ್ಪಷ್ಟವಾಗಿದ್ದವು. ಕರ್ಣ ಕಾರ್ಗತ್ತಲೆಯಲ್ಲಿ ಮನ ಬಂದತ್ತ ಬಾಣ ಪ್ರಯೋಗಿಸುತ್ತಿದ್ದಾನೆ. ಸೂರ್ಯನನ್ನು ಬೆಳಕಾಗಿಸಲು ಪ್ರಾರ್ಥಿಸುತ್ತಾ ಅತಿ ಶೀಘ್ರತರವಾಗಿ ಬರುತ್ತಿರುವ ಶರವರ್ಷವನ್ನು ಗುರಿಯಾಗಿಸಿ ಕಾಣದಿದ್ದರೂ ಖಂಡಿಸುವ ಯತ್ನ ನಿರತನಾಗಿದ್ದಾನೆ. ಪಾರ್ಥ ಈ ಸಮಯವನ್ನು ಬಳಸಿಕೊಂಡು ಶಲ್ಯನನ್ನು ಗುರಿಯಾಗಿಸಿ ಹತ್ತು ತೀಕ್ಷ್ಣ ಶರಗಳನ್ನು ಸರಸರನೆ ಪ್ರಯೋಗಿಸಿದನು. ಶಲ್ಯನ ಕವಚ ಬೇಧಿಸಲ್ಪಟ್ಟು ಕಳಚಿ ಬಿದ್ದವು. ನಂತರದ ಬಾಣಗಳು ಹೊಕ್ಕು ಮಾದ್ರೇಶನನ್ನು ತೀವ್ರವಾಗಿ ಗಾಯಗೊಳಿಸಿದವು. ಇಷ್ಟಾಗುತ್ತಲೆ ದಿವ್ಯಾಸ್ತ್ರಗಳನ್ನು ಮಹಾರಥಿ ಕರ್ಣನಿಗೆ ಗುರಿಯಾಗಿಸಿ ಪಾರ್ಥ ಶರ ಪ್ರಯೋಗಿಸಿದನು. ಹೀಗಾಗುತ್ತಿದ್ದರೂ ಧೃತಿಗೆಡದ ಶಲ್ಯ ಸಾರಥ್ಯ ವಿದ್ಯಾಬಲದಿಂದ ರಥವನ್ನು ನಡೆಸಿ, ದಿವ್ಯಾಸ್ತ್ರಗಳ ಗುರಿ ತಪ್ಪಿಸಿ ಕರ್ಣನಿಗೇನು ಹೆಚ್ಚಿನ ಹಾನಿಯಾಗದಂತೆ ಪ್ರತಿಕ್ರಿಯಾತ್ಮಕ ಚಲನೆ ಮಾಡುತ್ತಾ ಸಂರಕ್ಷಿಸಿದನು. ಪಾರ್ಥನ ದಿವ್ಯಾಸ್ತ್ರಗಳು ಕರ್ಣನ ಸನಿಹದಲ್ಲಿ ಹಾದು ಹೋದವಾದರೂ ಏನೂ ತೊಂದರೆಯಾಗಲಿಲ್ಲ. ಆದರೆ ಅವುಗಳು ಕುರುಸೇನೆಯ ಮೇಲೆ ಬೀಳಲ್ಪಟ್ಟು ವ್ಯಾಪಕ ನಾಶವನ್ನು ಉಂಟುಮಾಡಿತು. ಕುರುಸೇನೆ ಭಗ್ನಗೊಂಡು ರಾಶಿ ರಾಶಿ ಹೆಣಗಳಾಗಿ, ಕಾಯ ಖಂಡಿಸಲ್ಪಟ್ಟು ಬೀಳತೊಡಗಿತು. ಈ ವಿಧ್ವಂಸ ನಡೆಯುತ್ತಿರುವಾಗ ಅಂಧಕಾಸ್ತ್ರದ ಅವಧಿ ಪೂರೈಸಿ ಉಪಶಮನಗೊಂಡಿತು. ಕುರುಸೇನೆಯ ಯೋಧರ ಸಮೂಹ ಮೃತ ಶರೀರಗಳ ಬೆಟ್ಟವಾಗಿ ಬಿದ್ದಿದೆ. ಬದುಕುಳಿದ ಸೇನೆ ಅರ್ಜುನನ ಪ್ರಹಾರಗಳಿಗೆ ಹೆದರಿ ಓಡತೊಡಗಿತು.
ಇದೆಲ್ಲವನ್ನೂ ನೋಡುತ್ತಿದ್ದ ಗುರುಪುತ್ರ ಅಶ್ವತ್ಥಾಮನಿಗೆ ಮುಂದಣ ಪರಿಣಾಮ ಏನಾಗಬಹುದು ಎಂಬ ನಿಖರ ಕಲ್ಪನೆ ಭಾಸವಾಯಿತು. ನೇರವಾಗಿ ದುರ್ಯೋಧನನ ಬಳಿ ಬಂದು “ಅಯ್ಯಾ ಕುರುಪತಿಯೇ! ನನ್ನ ಅಭಿಪ್ರಾಯ ಮತ್ತು ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಈಗಾಗಲೆ ಹದಿನೇಳು ದಿನಗಳ ಯುದ್ದ ಬಿರುಸಿನಿಂದ ಸಾಗುತ್ತಾ ಬಂದಿದೆ. ಅಗಣಿತ ಸಂಖ್ಯೆಯ ವೀರರು ಮರಣವನ್ನಪ್ಪಿದ್ದಾರೆ. ಯುದ್ದ ಅಂದ ಮೇಲೆ ಜಯಕ್ಕಾಗಿ ಕೊನೆ ಕ್ಷಣದವರೆಗೆ ಹೋರಾಡುವುದು ನ್ಯಾಯ. ಆದರೂ ಕೃಷ್ಣಾರ್ಜುನರನ್ನು ಕೆಣಕಿ ಬದುಕುಳಿಯಲು ಯಾವ ವೀರನಿಂದಲೂ ಸಾಧ್ಯವಾಗದು. ಜಯಾಪಜಯಗಳು ಸಮರದ ಪರಿಣಾಮಗಳೇ ಆಗಿವೆಯಾದರೂ ನಮ್ಮ ಭಾಗಕ್ಕೆ ಜಯದ ಸಾಧ್ಯತೆ ಕ್ಷೀಣವಾಗುತ್ತಿದೆ. ಹೀಗಿರಲು ಸೋಲು ಒಪ್ಪಿ ಶರಣಾಗುವುದು ನಮ್ಮ ಪ್ರತಿಷ್ಠೆಗೆ ಒಗ್ಗದ ವಿಚಾರ. ಆದರೆ ಪರಿಹಾರೋಪಾಯವಾಗಿ ನನ್ನದೊಂದು ಸಲಹೆಯಿದೆ. ಪ್ರಸಕ್ತ ಸ್ಥಿತಿಗಳನ್ನು ನೋಡಿದರೆ ನಾವು ಯುದ್ದ ಮುಂದುವರಿಸಿದರೆ ಧರ್ಮರಾಯ ದೀಕ್ಷಿತನಾಗಿ ಪಾರ್ಥ ಹೋತೃವಾಗಿ ಸಾಗುತ್ತಿರುವ ಈ ಧರ್ಮಯಜ್ಞ ಸದೃಶ ಸಮರದಲ್ಲಿ ನಾವೆಲ್ಲವರೂ ಆಹುತಿಗಳಾಗಲಿದ್ದೇವೆ. ಪ್ರಾಣಭಯ ನನಗಿಲ್ಲ. ಆದರೂ ಪರಿಣಾಮ ಸುಷ್ಪಷ್ಟವಾದ ಬಳಿಕ ಅಸಂಭವವಾದುದನ್ನು ಅರಿತು ಮುಂದುವರಿದರೆ ಮೂರ್ಖತನವಾದೀತು. ಕೌರವೇಶ್ವರಾ! ನೀನು ನಿನ್ನ ಪ್ರತಿಷ್ಠೆ ಹಠದಿಂದಾಗಿ ಈಗಾಗಲೆ ನಿನ್ನ ಸೋದರರು, ಪುತ್ರರು, ಮಿತ್ರ ರಾಜರ ಸಹಿತ ಹಲವು ಅಕ್ಷೋಹಿಣಿ ಸೇನೆಯನ್ನು ಬಲಿ ಕೊಟ್ಟಿರುವೆ. ಆಗಿ ಹೋಗಿರುವುದನ್ನು ಸರಿಪಡಿಸಲಾಗದು. ಆದರೆ ಅಳಿದುಳಿದಿರುವ ನಿನ್ನ ಬಂಧುಗಳು, ಸಮರ್ಪಿತರಾಗಿ ನಿನಗಾಗಿ ಕಾದಾಡುತ್ತಿರುವ ಮೈತ್ರೇಯರು, ಭೀಮನಿಂದ ಬಲಿಯಾಗಲಿರುವ ನಿನ್ನ ಸೋದರ ಸಹಿತ ನಿನ್ನ ಉಳಿವಿನ ಬಗ್ಗೆಯೂ ಯೋಚಿಸಬೇಕಾದ ಸಮಯ ಒದಗಿ ಬಂದಿದೆ. ಸೋಲೊಪ್ಪಿ ಶರಣಾಗತನಾಗು ಎನ್ನಲಾರೆ. ಆದರೆ ಧರ್ಮಜನನ್ನು ಕರೆದು ಯುದ್ದ ವಿರಾಮ ಘೋಷಿಸು. ಸಂಧಾನ ಮಾಡಿ ಈ ಮಾರಣಹೋಮ ಸಮವಾದ ಯುದ್ದವನ್ನು ಕೊನೆಗೊಳಿಸು. ಧರ್ಮರಾಯ ಖಂಡಿತಾ ನಿನ್ನ ಮಾತನ್ನು ಮನ್ನಿಸಿ ಸಂಧಾನಕ್ಕೆ ಒಡಂಬಡುತ್ತಾನೆ ಎಂಬ ವಿಶ್ವಾಸವಿದೆ” ಎಂದನು.
ಕೌರವನು ಅಶ್ವತ್ಥಾಮನ ಮಾತು ಕೇಳಿ ವ್ಯಗ್ರನಾಗಿ “ಹೇ ಗುರುಪುತ್ರಾ! ಏನಿದು ನಿನ್ನ ಪ್ರಲಾಪ. ಸಂಧಾನ ಬಯಸುವವನಾಗಿದ್ದರೆ ಈ ವರೆಗೆ ಇಷ್ಟು ಘೋರ ಯುದ್ದವನ್ನು ಮಾಡಿಸುತ್ತಿರಲಿಲ್ಲ. ನಮಗಾಗಿ ಈ ತನಕ ಹೋರಾಡಿ ಮಡಿದ ವೀರಬಂಧುಗಳ ಪ್ರಾಣಕ್ಕೆ ಬೆಲೆಯಿಲ್ಲವೆ? ಒಂದೋ ನಾನು ಗೆಲ್ಲುತ್ತೇನೆ ನಂತರ ಯುದ್ದ ನಿಲ್ಲಲಿ. ಅದಾಗದಿದ್ದರೆ ನನ್ನ ವಧೆಯಾಗಲಿ, ಆಗ ಸಮರ ಮುಕ್ತಾಯವಾಗಲಿ. ಆ ತನಕ ಯುದ್ದ ನಿಲ್ಲದು. ನೀನು ಭಯಗ್ರಸ್ಥನಾಗಿರುವೆಯಾದರೆ, ರಣಕ್ಷೇತ್ರ ತೊರೆದು ಅರಮನೆಯ ಅಂತಃಪುರ ಸ್ತ್ರೀಯರ ಜೊತೆ ವಿರಮಿಸು. ಈ ರೀತಿ ನಿನ್ನ ಯೋಗ್ಯತೆಗೆ ಚ್ಯುತಿ ಬರುವಂತಹ ಅಸಂಭದ್ದ ಮಾತುಗಳನ್ನಾಡಬೇಡ” ಎಂದು ಅಬ್ಬರಿಸಿ ನುಡಿದು ಅಶ್ವತ್ಥಾಮನ ಅಭಿಮತವನ್ನು ಧಿಕ್ಕರಿಸಿದನು. ಆಗ ಗುರುಪುತ್ರ ದ್ರೌಣಿ ಸುಮ್ಮನಾಗಬೇಕಾಯಿತು.
ಇತ್ತ ಕರ್ಣ ಗಗನಮುಖಿಯಾಗಿ ಚಿಮ್ಮಿದ್ದ ಅರ್ಜುನನ ಅಕ್ಷಯಾಸ್ತ್ರಗಳನ್ನು ಅತಿವೇಗದಿಂದ ಖಂಡಿಸುತ್ತಿದ್ದಾನಾದರೂ, ನುಸುಳಿದ ಅನೇಕ ಶರಗಳು ಚುಚ್ಚಿ ಗಾಯಾಳಾದನು. ರಥದ ಧ್ವಜದಂಡ, ಛತ್ರಗಳು ಕತ್ತರಿಸಲ್ಪಟ್ಟವು. ಸಾವರಿಸಿಕೊಳ್ಳಲು ಕರ್ಣನಿಗೆ ಅವಕಾಶ ಸಿಗುತ್ತಿಲ್ಲ. ಶಲ್ಯನೂ ಈ ಕ್ಷಣ ಅರ್ಧ ವೃತ್ತಾಕಾರದಲ್ಲಿ ಹಿಂದೆ ಮುಂದೆ ರಥ ಓಡಿಸುತ್ತಾ ಅರ್ಜುನನ ಶರಹತಿಯಿಂದ ತಪ್ಪಿಸಿಕೊಳ್ಳಲು ಅನುಕೂಲ್ಯ ಪ್ರಯತ್ನ ನಿರತನಾಗಿದ್ದಾನೆ. ಇಂತಹ ಭೀಕರ ಸಮಯ ಶಲ್ಯ ಇಲ್ಲದೆ ಹೋಗಿದ್ದರೆ ಕರ್ಣ ಅರ್ಜುನನ ಬಾಣಗಳಿಗೆ ಸುಲಭದ ತುತ್ತಾಗುತ್ತಿದ್ದನು. ಅದ್ಬುತ ಸಾರಥ್ಯ ಕೌಶಲ ಮೆರೆದು ದುಸ್ಥಿತಿಗೆ ಜಾರಲಿದ್ದ ರಾಧೇಯನನ್ನು ಶಲ್ಯ ತನ್ನ ಸಾರಥ್ಯದಿಂದ ಉಳಿಸಿಕೊಂಡನೆಂದು ಹೇಳಬಹುದು.
ಆ ಬಳಿಕ ಚೇತರಿಸಿಕೊಂಡ ಕರ್ಣನೂ ಪೂರ್ಣಬಲ ಪ್ರದರ್ಶಿಸುತ್ತಾ ಅರ್ಜುನನಿಗೆ ಸಮದಂಡಿಯಾಗಿ ಹೋರಾಡತೊಡಗಿದನು. ಇಬ್ಬರ ಬಾಣ ಪ್ರಹರಣ ವೈಖರಿ, ಯುದ್ದ ಮಾಡುವ ವೀರ್ಯ, ಅಸ್ತ್ರ ಪ್ರಯೋಗ, ಮಾಯಾ ವಿದ್ಯೆ, ಪೌರುಷಗಳಲ್ಲಿ ಒಮ್ಮೆ ಅರ್ಜುನ ಮೇಳೈಸಿದರೆ, ಮತ್ತೊಮ್ಮೆ ಕರ್ಣನೂ ಅತಿಶಯಿಸುತ್ತಿದ್ದಾನೆ. ಆಘಾತ ಪ್ರತ್ಯಾಘಾತಗಳಲ್ಲಿ ಒಬ್ಬರು ಇನ್ನಬ್ಬರಿಗಿಂತ ಮಿಗಿಲಾಗಿ ಭರದಲ್ಲಿ ಸಮರ ಸಾಗುತ್ತಿದೆ. ಅಂತರಿಕ್ಷದಲ್ಲಿದ್ದು
ಯುದ್ದ ವೀಕ್ಷಣೆ ಮಾಡುತ್ತಿದ್ದ ದೇವಾನುದೇವತೆಗಳು ಅರ್ಜುನ ಅದ್ವಿತೀಯನೇ ಹೌದು. ಆದರೆ ಕರ್ಣನೂ ಸಮಬಲನಾಗಿ ನಿಂತು ಹೋರಾಡುತ್ತಿರುವುದು ಅಚ್ಚರಿಯ ಸಂಗತಿ. “ಭಲೇ ಕರ್ಣಾ!” ಎಂದು ಉದ್ಘಾರ ಮಾಡತೊಡಗಿದರು.
ಈ ಸಮಯದಲ್ಲಿ ಒಂದು ವಿಚಿತ್ರ ಸಂಭವಿಸಿತು. ಅದೇನೆಂದರೆ ಹಿಂದೆ ಖಾಂಡವ ದಹನ ಸಮಯದಲ್ಲಿ ತಪ್ಪಿಸಿಕೊಂಡಿದ್ದ ಸರ್ಪ ಅಶ್ವಸೇನನು ಅಡಗಿ ಪಾತಾಳ ಲೋಕದಲ್ಲಿದ್ದನು. ಕರ್ಣಾರ್ಜುನರ ಹೋರಾಟದ ಉರಿ ಏರಿ, ಅಲ್ಲಿಯೂ ಬೇಗೆ ಉಂಟಾಗತೊಡಗಿತು. ಏನಿದು ವೈಪರೀತ್ಯ ಎಂದು ವಿಚಾರ ಮಾಡುತ್ತಾ ಕೇಳಿದಾಗ ಅದು ಕರ್ಣಾರ್ಜುನರ ಉಗ್ರ ಸಮರದ ಪರಿಣಾಮ ಎಂಬ ವಿಚಾರ ತಿಳಿದುಕೊಂಡನು. ಅರ್ಜುನನ ಮೇಲೆ ಪ್ರತಿಕಾರ ತಿರಿಸಲು ಬದ್ದವೈರಿಯಾಗಿ ಹವಣಿಸುತ್ತಿದ್ದ ಅಶ್ವಸೇನ ಮಹಾಕೋಪ ಯುಕ್ತನಾಗಿ ವಸುಧಾತಲವನ್ನು ಹೊಕ್ಕು ಪ್ರವೇಶಿಸಿದನು. ಊರ್ಧ್ವಗತಿಯಾಗಿ ಏರಿಬಂದು, ಗಗನ ಮಾರ್ಗದಲ್ಲಿ ಹಾರುತ್ತಾ ಬಹಳ ವೇಗವಾಗಿ ನಾಗಾಲೋಟದಲ್ಲಿ ಅಶ್ವಸೇನ ಗಮಿಸತೊಡಗಿದನು. ಕುರುಕ್ಷೇತ್ರ ರಣಭೂಮಿಯತ್ತ ಸಾಗಿ ಬಂದ ಅಶ್ವಸೇನ ಯೋಚಿಸತೊಡಗಿದ್ದಾನೆ. ಕರ್ಣ ಸರ್ವ ಸಮರ್ಥನು ಹೌದು. ನನಗೂ ಕರ್ಣನಿಗೂ ಯಾವ ಬಂಧವೂ ಇಲ್ಲ. ಆದರೆ ಶತ್ರುವಿನ ಶತ್ರು = ಮಿತ್ರ, ಮಿತ್ರನ ಶತ್ರು = ಶತ್ರು ಎಂಬ ವ್ಯಾವಹಾರಿಕ ಸೂತ್ರದ ಸಮೀಕರಣದಲ್ಲಿ ತರ್ಕಿಸುವುದಾದರೆ ನನ್ನ ಶತ್ರು ಅರ್ಜುನ. ಅರ್ಜುನ ಶತ್ರು ಕರ್ಣ. ನನ್ನ ಶತ್ರುವಿನ ಶತ್ರುವಾದ ಕರ್ಣ ನನಗೆ ಮಿತ್ರನಾಗುತ್ತಾನೆ. ಹಾಗಾಗಿ ಆತನಿಗೇನಾದರು ಉಪಕಾರ್ಯ ಮಾಡಿ ಅವನ ಜಯಕ್ಕಾಗಿ ಸಹಕಾರ್ಯದ ಸಹಯೋಗ ನೀಡಬೇಕು. ಹೀಗೆಂದು ಇಚ್ಚಾರೂಪಿ ಅಶ್ವಸೇನ ಕುರುಕ್ಷೇತ್ರದ ರಣಾಂಗಣದ ಸಂದಿನಲ್ಲಿ ಸ್ಥಿತನಾಗಿ ಯೋಜನೆ ರೂಪಿಸುತ್ತಿದ್ದಾನೆ…
ಮುಂದುವರಿಯುವುದು…



















