ಭಾಗ 455
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೫೫ ಮಹಾಭಾರತ
ಶೃಂಗವಂತ ಮತ್ತು ಋಷಿಕನ್ಯೆ ವಿವಾಹದ ಮೊದಲ ರಾತ್ರಿಯನ್ನು ಕಳೆದರು. ಕನ್ಯೆಯಾಗಿಯೆ ಉಳಿದಿದ್ದ ಋಷಿಕುವರಿ ಗ್ರಹಿಣಿಯಾಗಿದ್ದಾಳೆ. ಮರುದಿನ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸತಿಪತಿಗಳು ಎದ್ದರು. ಎದ್ದವಳು ಸತಿಧರ್ಮದಂತೆ ಪತಿಯ ಪಾದಸ್ಪರ್ಶಿಸಿ ವಂದಿಸಿದಳು.
ಬಳಿಕ ಸೂರ್ಯೋದಯವಾದ ಹೊತ್ತಿನಲ್ಲಿ ಎದ್ದು ಶೃಂಗವಂತನ ಆಶ್ರಮದಿಂದ ಹೊರಬಂದು “ತಪಸ್ವಿಗಳಲ್ಲಿ ಶ್ರೇಷ್ಟನಾದವನೆ! ಮಹಾ ಪುಣ್ಯಶಾಲಿಯೆ, ನನ್ನನ್ನು ವಿವಾಹವಾಗುವಲ್ಲಿ ನೀನು ಯಾವ ನಿಬಂಧನೆ ಹಾಕಿದ್ದೆಯೊ, ಅದಕ್ಕನುಸಾರವಾಗಿ ಒಂದು ರಾತ್ರಿ ಜೊತೆಗೆ ಕಳೆದಿದ್ದೇವೆ. ಈಗ ನಾನು ನಿನ್ನನ್ನು ತೊರೆದು ಹೋಗಬೇಕಾದುದು ಧರ್ಮ. ಅದು ನಿನಗೂ ನನಗೂ ಶ್ರೇಯಸ್ಕರವಾದುದು ಕೂಡ. ನಿನಗೆ ಮಂಗಳವಾಗಲಿ – ಕಲ್ಯಾಣವಾಗಲಿ. ನನಗೆ ಅನುಮತಿ ನೀಡಿದರೆ ಹೊರಟು ಬಿಡುತ್ತೇನೆ” ಎಂದು ಅನುಮತಿ ಕೇಳಿದಳು.
ಅಂತೆಯೆ ಅಪ್ಪಣೆ ಪಡೆದು ಹೊರಟಳು. ಹೊರಟವಳು ಒಂದೆರಡು ಹೆಜ್ಜೆ ಸಾಗಿ ನಿಂತಳು. ಪವಿತ್ರ ಸಾರಸ್ವತ ತೀರ್ಥವನ್ನು ನೋಡಿ “ಈ ತೀರ್ಥದ ಸಮೀಪದಲ್ಲಿ ಯಾರು ಏಕಾಗ್ರಚಿತ್ತರಾಗಿ ದೇವತೆಗಳ ಅರ್ಚನೆಯಲ್ಲಿ ನಿರತರಾಗಿ ಇದ್ದು ಒಂದು ರಾತ್ರಿಯನ್ನು ಕಳೆಯುತ್ತಾರೋ ಅವರಿಗೆ ಐವತ್ತೆಂಟು ವರ್ಷಗಳ ಕಾಲ ವಿಧಿಪೂರ್ವಕ ಬ್ರಹ್ಮಚರ್ಯ ಪಾಲಿಸಿದರೆ ಯಾವ ಪುಣ್ಯ ಲಭಿಸುವುದೊ ಅಂತಹ ಮಹತ್ತರ ಪುಣ್ಯ ಲಭಿಸಲಿ” ಎಂದು ವರ ನೀಡಿದಳು.
ಹೀಗೆ ಹೇಳಿದ ಸಾಧ್ವಿಯಾದ ಋಷಿಪತ್ನಿ ದೇಹವನ್ನು ಪರಿತ್ಯಾಗ ಮಾಡಿ ಸ್ವರ್ಗಕ್ಕೆ ಹೊರಟು ಹೋದಳು. ಆದರೆ ಗಾಲವ ಮಹರ್ಷಿಯ ಪುತ್ರ ಶೃಂಗವಂತ ಸರ್ವ ಕಾಮನೆಗಳನ್ನು ನಿಗ್ರಹಿಸಿದ ಋಷಿಯಾಗಿದ್ದರೂ, ತನ್ನ ಪತ್ನಿ ಮಹಾತಪಸ್ವಿನಿ ನೀಡಿದ ಆಕೆಯ ಸಮ ಅರ್ಧ ತಪಃ ಶಕ್ತಿಯನ್ನು ಧಾರಣೆ ಮಾಡಿ ಮಹಾತ್ಮನೇ ಆಗಿದ್ದರೂ, ಪತ್ನಿ ವಿಯೋಗದಿಂದ ಒದ್ದಾಡತೊಡಗಿದನು. ಆಕೆಯ ಅನನ್ಯ ರೂಪರಾಶಿ, ಕೋಮಲ ಕಾಯ, ಅಮಿತ ಸುಖವನ್ನು ಮತ್ತೆ ಮತ್ತೆ ಬೇಕೆಂದು ಬಯಸಿ ಕೊರಗತೊಡಗಿದನು. ಆಕೆಯನ್ನು ಸೇರಲೇ ಬೇಕು ಎಂಬಂತೆ ಧೃಡ ಸಂಕಲ್ಪಬದ್ಧನಾಗಿ ತಪಸ್ಸನ್ನಾಚರಿಸುತ್ತಾ ದೇಹ ತ್ಯಾಗ ಮಾಡಿ ಆತನೂ ಸ್ವರ್ಗ ಸೇರಿದನು.
ಈ ಕಥನದಲ್ಲಿ ಸಾರಸ್ವತ ತೀರ್ಥಕ್ಷೇತ್ರ ವಾಸಕ್ಕೆ ಸಾಧ್ವಿ ನೀಡಿದ ವರಬಲ ಐವತ್ತೆಂಟು ವರ್ಷ ವಿಧಿಪೂರ್ವಕ ಬ್ರಹ್ಮಚರ್ಯ ಆಚರಿಸಿದರೆ ಪ್ರಾಪ್ತವಾಗುವ ಪುಣ್ಯಫಲ. ಐವತ್ತೆಂಟು ವರ್ಷ ಬ್ರಹ್ಮಚರ್ಯ ಎಂಬ ಸಂಖ್ಯೆಯ ಒಳಗೆ ಸೂಕ್ಷ್ಮ ಲೆಕ್ಕಾಚಾರವಿದೆ. ಪ್ರಾಯಕ್ಕೆ ಬಂದ ಬಳಿಕ ಒಂದು ವೇದವನ್ನು ಅಧ್ಯಯನ ಮಾಡಲು ಹನ್ನೆರಡು ವರ್ಷ ಕಾಲ ಬೇಕಾಗುತ್ತದೆ. ನಾಲ್ಕು ವೇದಗಳನ್ನು ಪೂರ್ಣ ಅಧ್ಯಯನ ಮಾಡಿ ಆಗುವಾಗ ನಲ್ವತ್ತೆಂಟು ವರ್ಷ ಕಾಲ ಕರಗಿರುತ್ತದೆ. ಇಷ್ಟಾದ ಮೇಲೆ ಬ್ರಹ್ಮಾಚಾರಿ ಅಧ್ಯಾಪನ ಮಾಡಿದ ಆಚಾರ್ಯ ಋಣಮುಕ್ತನಾಗಲು ಸ್ನಾತಕನಾಗಿ ಎರಡು ವರ್ಷ ಗುರು ಸೇವೆ ಮಾಡಬೇಕು. ಆಗ ಐವತ್ತು ವರ್ಷವಾಗುತ್ತದೆ. ಈಗ ಎಂಟು ವರ್ಷದ ಕನ್ಯೆಯನ್ನು ಮದುವೆಯಾಗಿ ಮತ್ತೆ ಎಂಟು ವರ್ಷ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಅಂದರೆ ಆಕೆ ಷೋಡಷ ವರ್ಷ (ಹದಿನಾರು) ಪ್ರಾಯದವಳಾಗುವವರೆಗೆ. ಹೀಗೆ ಬ್ರಹ್ಮಾಚಾರಿ ನಿಯಮಬದ್ದ ಐವತ್ತೆಂಟು ವರ್ಷ ಬ್ರಹ್ಮಚರ್ಯ ವೃತ ಪಾಲಿಸಬೇಕು.
ಸಾರಸ್ವತ ಕ್ಷೇತ್ರದ ಐತಿಹ್ಯವನ್ನು ವಿವರಿಸಿದ ನಾರದ ಮಹರ್ಷಿ, ಬಲರಾಮನಿಗೆ ಕುರುಕ್ಷೇತ್ರದ ಎಲ್ಲೆ ಮತ್ತು ಮಹಿಮೆಗಳನ್ನು ವರ್ಣಿಸತೊಡಗಿದರು.
“ಬಲರಾಮಾ! ಮಹಾಭಾರತ ಧರ್ಮಸಂಗ್ರಾಮ ಸಾಗುತ್ತಿರುವುದು ಅಂತಿಂತಹ ಕ್ಷೇತ್ರದಲ್ಲಿ ಅಲ್ಲ. ಸರಸ್ವತಿಯ ಸಮಂತಪಂಚಕ ತೀರ್ಥ ಕ್ಷೇತ್ರವೂ, ಹಿಂದೆ ಪ್ರಜಾಪತಿ ಧರ್ಮಯಜ್ಞ ನಡೆಸಿದ ತಾಣ – ಉತ್ತರವೇದಿ, ದೇವತೆಗಳು ಅಗಣಿತ ಮಹಾಸತ್ರಗಳನ್ನು ಪೂರೈಸಿ ಮಹಾಮಹಾ ವರಗಳನ್ನು ನೀಡಿರುವ ಅಪೂರ್ವ ಕ್ಷೇತ್ರವಿದು. ಈ ಕ್ಷೇತ್ರಕ್ಕೆ ಪ್ರಖ್ಯಾತವಾಗಿರುವ ಕುರುಕ್ಷೇತ್ರ ಎಂಬ ಹೆಸರು ಬರುವುದಕ್ಕೆ ಕಾರಣವಿದೆ.
ಬಲರಾಮಾ! ಚಂದ್ರವಂಶೀಯನಾದ ಮಹಾರಾಜ ಕುರು ಚಕ್ರವರ್ತಿ ಶುಭಕಾರ್ಯಗಳನ್ನು ಮಾಡುವುದರಲ್ಲಿ ಜೀವನಪರ್ಯಂತ ನಿರತನಾಗಿದ್ದವನು. ಅಂತಹ ಮಹಾತ್ಮ ರಾಜ ಈ ಕ್ಷೇತ್ರವನ್ನು ಉಳುಮೆ ಮಾಡಲು ತೊಡಗಿದನು. ನಿಲ್ಲದೆ ಅವಿರತವಾಗಿ ಉಳುತ್ತಲೇ ಇದ್ದನು. ಆಗ ಕುತೂಹಲಿಗನಾದ ಇಂದ್ರ ಬಂದು ಕುರುವನ್ನು ಸಂಧಿಸಿ “ಮಹಾರಾಜಾ! ಯಾವ ಕಾರಣದಿಂದ ಈ ಪುಣ್ಯಭೂಮಿಯನ್ನು ಹೀಗೆ ಉಳುತ್ತಿರುವೆ? ನಿನ್ನ ಈ ಮಹಾಪ್ರಯತ್ನ ಯಾಕಾಗಿ ನಡೆಯುತ್ತಿದೆ? ಹೀಗೆ ಮಾಡುತ್ತಿರುವುದರ ಹಿಂದಿರುವ ಉದ್ದೇಶವಾದರು ಏನು?” ಎಂದು ಪ್ರಶ್ನಿಸಿದನು.
ಮುಂದುವರಿಯುವುದು…






