ಭಾಗ 413
ಭರತೇಶ ಶೆಟ್ಟಿ ಎಕ್ಕಾರ್

ಸಂಚಿಕೆ ೪೧೩ ಮಹಾಭಾರತ
ತನ್ನ ಜೀವನದ ಮಹತ್ತರ ಕ್ಷಣವೊಂದು ಸ್ಮರಣೆಗೆ ಬಂತು. ಮಾತೆ ಕುಂತಿ ದೇವಿ ತನ್ನ ಬಳಿ ಬಂದು, ಸೂರ್ಯೋಪಾಸನಾ ನಿರತನಾಗಿದ್ದ ಹೊತ್ತು ಭೇಟಿಯಾಗಿ ಜನ್ಮ ವೃತ್ತಾಂತವನ್ನು ಅರುಹಿ ತನ್ನ ಪುತ್ರರನ್ನು ರಕ್ಷಿಸಬೇಕೆಂದು ಕೇಳಿಕೊಂಡಿದ್ದಳು. ಆಗ ಕರ್ಣ “ಅರ್ಜುನನ್ನೋರ್ವನನ್ನು ಉಳಿದು ಅನ್ಯ ನಾಲ್ವರನ್ನು ಸಂರಕ್ಷಿಸುವೆ, ಅರ್ಥಾತ್ ವಧಿಸಲಾರೆ. ಆದರೆ ಅರ್ಜುನ ಎದುರಾದ ಸಮಯ ಒಂದೋ ತಾನು ಆತನಿಂದ, ಇಲ್ಲಾ ಅರ್ಜುನ ತನ್ನಿಂದ ವಧಿಸಲ್ಪಡುತ್ತಾನೆ. ಆಗಲೂ ನಿನ್ನ ಐವರು ಪುತ್ರರು ಬದುಕುಳಿಯುತ್ತಾರೆ. ಐವರಲ್ಲಿ ಓರ್ವ ಕರ್ಣ ಅಥವಾ ಅರ್ಜುನ ಎಂಬುವುದನ್ನು ಕಾಲ ನಿರ್ಣಯಿಸಲಿದೆ.” ಎಂದು ತಾನು ನುಡಿದಿರುವ ವಚನ ಕರ್ಣನಿಗೆ ನೆನಪಾಯಿತು. ಪರಿಣಾಮ ಈಗ ಧರ್ಮಜನಿಗೆ ಜೀವದಾನ ನೀಡಬೇಕಾದ ಅನಿವಾರ್ಯತೆ ಒದಗಿದೆ. ಜೊತೆಗೆ ಶಲ್ಯ ಭೂಪತಿ ನುಡಿದ ವಿಷಯ “ಧರ್ಮರಾಯನ ಬದುಕು ಧರ್ಮಪಾಲನೆ ಎಂಬ ತಪಸ್ಸಿನಿಂದ ಭರಿತವಾಗಿದ್ದು, ಬಂಧಿಸಲು ಮುಂದಾಗುವ ನಿನ್ನ ಮೇಲೇನಾದರು ಆತನ ಆ ತಪೋಜ್ವಾಲೆಯನ್ನು ಪ್ರಕಟಿಸಿದರೆ, ಕೇವಲ ಆ ರೋಷಾಗ್ನಿಯ ದೃಷ್ಟಿ ಮಾತ್ರದಿಂದ ನೀನು ಭಸ್ಮೀಭೂತನಾಗುವೆ” ಎಂಬ ಎಚ್ಚರಿಕೆಯೂ ಜಾಗೃತಗೊಳಿಸಿತ್ತು. ಹೀಗೆ ಪೂರ್ವಾಪರ ಘಟಿತ ಸಂಗತಿ, ವಾಸ್ತವ ವಿದ್ಯಾಮಾನಗಳನ್ನು ಯೋಚಿಸುತ್ತಿರಬೇಕಾದರೆ ಆ ಶೂನ್ಯವೇಳೆಯಲ್ಲಿ ಕರ್ಣನ ರಥ ಸಾಗಿ ಬೇರೆಡೆಗೆ ಓಡಿಯಾಗಿದೆ. ಎತ್ತ ಸಾಗಿದೆಯೊ ಅತ್ತಲಿಂದ ಕರ್ಣನ ಮೇಲೆ ಆಕ್ರಮಣವಾಗುವ ಸಿದ್ಧತೆಯಾದರೂ ಕರ್ಣನೇನೊ ಯೋಚನೆಯಲ್ಲಿ ಮುಳುಗಿದ್ದಾನೆ ಎಂದರಿತ ಶಲ್ಯ ಎಚ್ಚರಿಸಿದನು. ಆಗ ಕರ್ಣ ಧನುರ್ಧರನಾಗಿ ಶೀಘ್ರ ಪ್ರತಿ ಪ್ರಹಾರಕ್ಕೆ ತೊಡಗಿದನು. ಕರ್ಣನು ವಿಸ್ಮಯಕ್ಕೊಳಗಾಗುವಂತೆ ಸಮರ ಸಾಗುತ್ತಿದೆ. ಒಂದೆಡೆ ಭೀಮ ಸೇನ ಕುರು ಸೇನೆಯ ಗಜ ಪಡೆಯೊಳಗೆ ನುಗ್ಗಿ ಮನ ಬಂದಂತೆ ಪದಾತಿಯಾಗಿ ಲಯಕರ್ತನಂತೆ ವಿಧ್ವಂಸ ನಿರತನಾಗಿದ್ದಾನೆ. ಮತ್ತೊಂದೆಡೆ ಕೃಷ್ಣ ಸಾರಥ್ಯದ ಪಾರ್ಥನನ್ನು ಮುತ್ತುತ್ತಿರುವ ಮಹಾರಥರು ಮತ್ತು ಗುರು ಪುತ್ರ ಅಶ್ವತ್ಥಾಮರ ಮಧ್ಯೆ ರಣಭಯಂಕರ ಸಂಗ್ರಾಮ ಸಾಗುತ್ತಿದೆ. ತಿರುಗಿ ನೋಡಿದರೆ ತನ್ನ ವೀರ ಪುತ್ರ ವೃಷಸೇನನಿಗೂ ಶೈನೇಯ ಸಾತ್ಯಕಿಗೂ ಭೀಕರ ಯುದ್ದ ಸಾಗುತ್ತಿದೆ. ಹೀಗಿರಲು ತನ್ನೆದುರು ನಕುಲ, ಶತಾನಿಕ, ಯುಯುತ್ಸು ಸಹದೇವಾದಿಗಳು ಧನುಷ್ಟೇಂಕಾರಗೈದು ಆಹ್ವಾನ ನೀಡುತ್ತಿದ್ದಾರೆ. ವೀರಯೋಧನಾಗಿ ಆಯುಧ ಧರಿಸಿ ಆಹ್ವಾನವಿತ್ತವರ ಜೊತೆ ಕಾದಾಡದೆ ಮುಂದುವರಿಯುವಂತಿಲ್ಲ. ಹಾಗಾಗಿ ಕರ್ಣ ತನಗೆದುರಾಗಿರುವ ನಕುಲ ಸಹದೇವ, ಯುಯುತ್ಸು, ಶತಾನಿಕರ ಜೊತೆ ಉಗ್ರ ಸಮರ ಸಾರಲೇ ಬೇಕಾಯಿತು. ಮನಸ್ಸು ಪುತ್ರ ವ್ಯಾಮೋಹದಿಂದ ಸೆಳೆಯಲ್ಪಟ್ಟು ಸಾತ್ಯಕಿಯಿಂದ ಮಗ ವೃಷಸೇನನ ರಕ್ಷಣೆ ಮಾಡಬೇಕೆಂಬ ಜವಾಬ್ದಾರಿ ಜಾಗೃತವಾಗುತ್ತಿದೆ. ಆದರೂ ತನ್ನೆದುರಲ್ಲಿ ತಡೆಯಾಗಿ ನಿಂತ ಪಾಂಡವ ಪಕ್ಷದ ವೀರರ ಜೊತೆ ಹರಸಾಹಸಪಟ್ಟು ಅತಿವೇಗದ ಯುದ್ದ ಆರಂಭಿಸಿದನು. ಅಕರ್ಣಾದ್ಯಂತವಾಗಿ ಶಿಂಜಿನಿಯನ್ನು ಸೆಳೆದು, ಧನುಸ್ಸನ್ನು ಮಂಡಲಾಕಾರವಾಗಿ ತಿರುಗಿಸುತ್ತಾ ಧನುರ್ಮಂಡಲವನ್ನು ನಿರ್ಮಿಸಿ ತನ್ನ ಹಸ್ತಲಾಘವ, ಶರಸಂಧಾನ – ಪ್ರಯೋಗಗಳು ಗೋಚರಿಸದಷ್ಟು ವೇಗದ ಯುದ್ದ ಮಾಡತೊಡಗಿದನು. ನಕುಲ, ಸಹದೇವ, ಯುಯುತ್ಸು ಮತ್ತು ಶತಾನಿಕರು ಜಾಣ್ಮೆಯಿಂದ ಆವರ್ತನ ಕ್ರಮದಲ್ಲಿ ಒಬ್ಬರಾದ ನಂತರ ಒಬ್ಬರು ಮುನ್ನುಗ್ಗಿ ಬಂದು ಕರ್ಣನನ್ನು ವ್ಯಸ್ಥಗೊಳಿಸಿಟ್ಟರು. ಯಾರಾದರೊಬ್ಬನಿಗೆ ಹಿನ್ನಡೆಯಾಗುತ್ತಿರುವಾಗ ಮತ್ತೊಬ್ಬ ಮುಂದೊತ್ತಿ ಬಂದಾಗುತ್ತಿದೆ. ಕರ್ಣನೊಬ್ಬನು ನಾಲ್ವರನ್ನು ಎದುರಿಸಿ ಉಗ್ರ ಪ್ರತಾಪಿಯಾಗಿ ಆಯಾಸವನ್ನೂ ಲೆಕ್ಕಿಸದೆ, ಒಬ್ಬೊಬ್ಬರನ್ನೂ ವಧಿಸಿ ಪೂರೈಸುವೆ ಎಂಬಂತೆ ಕಾದಾಡುತ್ತಿದ್ದಾನೆ.
ಇತ್ತ ಸಾತ್ಯಕಿ ವೃಷಸೇನರ ಕಾಳಗವೂ ರಂಗೇರಿದೆ. ಕರ್ಣ ಪುತ್ರನು ಎಲ್ಲರು ಮೆಚ್ಚಿ ಶಹಬ್ಭಾಸ್ ಎನ್ನುತ್ತಾ ಶ್ಲಾಘನೆ ಮಾಡುವ ತೆರದಲ್ಲಿ ಸಿಂಹದ ಮರಿಯಂತೆ ಆಕ್ರಮಣ ನಿರತನಾಗಿದ್ದಾನೆ. ಪುಂಖಾನುಪುಂಖವಾಗಿ ಬಾಣ ಪ್ರಯೋಗಿಸುತ್ತಾ ಸಾತ್ವತ ಸಾತ್ಯಕಿ ಕಂಗೆಡುವಂತೆ ಸಮರ ಪ್ರದರ್ಶನ ನಿರತನಾಗಿದ್ದಾನೆ. ಮೌರ್ವೀ- ಬಾಣಹಸ್ತನಾಗಿದ್ದು ಅದ್ವಿತೀಯ ಪರಾಕ್ರಮ ಮೆರೆಯುತ್ತಿದ್ದಾನೆ. ( ಮೌರ್ವಿ ಅಂದರೆ ಧನುಸ್ಸಿನ ಶಿಂಜಿನಿ, ಅದನ್ನು ಹಿಡಿದೇ ಇದ್ದು ಬಾಣ ಪ್ರಯೋಗಿಸುತ್ತಲೇ ಇರುವಂತೆ ಕಾಣುವ ರೀತಿ. ಬತ್ತಳಿಕೆಯಿಂದ ಬಾಣ ಸೆಳೆದು ಜೋಡಿಸುವ ದೃಷ್ಟಿಗೆ ಗೋಚರಿಸದಷ್ಟು ಅತಿವೇಗ ಎಂದರ್ಥ).
ಸಾತ್ಯಕಿಗೂ ಒಂದು ಹೊಗಳಿಕೆಯ ಬಾಯಿ ಮಾತಿನ ಬಿರುದಿದೆ. ಅರ್ಜುನ ಶಿಷ್ಯನಾದ ಆತ ಕಿರಿಯ ಪಾರ್ಥನೆಂಬ ನೆಗಳ್ತೆಗೆ ಪಾತ್ರನಾದವನು. ಇಂದು ವೃಷಸೇನನೂ ಕರ್ಣನ ದ್ವಿಪಾತ್ರದಂತೆ ಪೌರುಷ ಮೆರೆಯುತ್ತಿದ್ದಾನೆ. ಒಟ್ಟಾರೆಯಾಗಿ ಕರ್ಣಾರ್ಜುನ ಕಾಳಗದ ವೈಖರಿ ಇವರೀರ್ವರ ಘನಘೋರ ಸಂಗ್ರಾಮದಲ್ಲಿ ದೃಷ್ಟವಾಗುತ್ತಿದೆ. ಸಾತ್ಯಕಿಯೇನು ಸಾಮಾನ್ಯನೆ? ವೃಷಸೇನನ ಶರವೇಗವನ್ನು ಅನುಸರಿಸಿ, ಅತಿಕ್ರಮಿಸಿ ಪ್ರತಿ ಪ್ರಹಾರಗೈಯುತ್ತಾ ಯುದ್ದ ಮುಂದುವರಿಸಿದನು. ನೋಡ ನೋಡುತ್ತಿದ್ದಂತೆಯೆ ಕರ್ಣಿಯ ಧನುಸ್ಸಿನ ಪ್ರತ್ಯಂಚ ಕತ್ತರಿಸಿದ. ಧನುರ್ಭಂಗವಾದರೂ ಅಳುಕದೆ ಮತ್ತೊಂದು ಧನುಸ್ಸನ್ನೆತ್ತಿಕೊಳ್ಳಲು ಚಾಚಿದ ಬಲಬಾಹುವನ್ನು ಗುರಿಯಾಗಿ ಚುಚ್ಚಿ ಹೊಕ್ಕು ನುಸುಳಿ ಹೊರಬರುವಂತೆ ತೀಕ್ಷ್ಣ ಶರ ಪ್ರಯೋಗಿಸಿದ. ಸಾತ್ಯಕಿಯ ಶರ ಗುರಿತಪ್ಪಲಿಲ್ಲ. ಬಲಗೈಯ ಛಾಪ ಖಂಡನವಾಯಿತು. ಕೂಡಲೆ ಪ್ರಯೋಗವಾದ ಮಹಾಸ್ತ್ರ ವಕ್ಷಸ್ಥಳದಲ್ಲಿ ಹೊಕ್ಕು ಬೆಂಗಡೆಯಲ್ಲಿ ಇಣುಕಿ ನಿಂತಿತು. ಸರಸರನೆ ಸೆಳೆದೆಸೆಯಲ್ಪಟ್ಟ ಬಾಣಗಳು ಶರೀರಾದ್ಯಂತ ಹೊಕ್ಕು ಮುಳ್ಳುಹಂದಿಯಂತಾದ ವೃಷಸೇನ, ಚಿಮ್ಮಿ ಕಾರಿದ ರಕ್ತದೋಕುಳಿಯಲ್ಲಿ ಅಭಿಷಿಕ್ತನಾಗಿ ರಥದಿಂದ ಕೆಳಬಿದ್ದನು. ಕುರು ಚಕ್ರವರ್ತಿಯಿಂದ ಪ್ರಖ್ಯಾತವಾಗಿದ್ದ ಪವಿತ್ರ ಕುರುಕ್ಷೇತ್ರದಲ್ಲಿ ಒರಗಿದವ ಮತ್ತೆ ಎದ್ದೇಳಲಿಲ್ಲ.
ಅತ್ತ ಕರ್ಣ ತನಗೆದುರಾಗಿದ್ದ ಪಾಂಡವ ವೀರರನ್ನು ಸೋಲಿಸಿ ನಾಲ್ವರನ್ನೂ ಮಾರಣಾಂತಿಕ ಗಾಯಗೊಳಿಸಿ ಮತ್ತೆ ಮುಂದೊತ್ತಿ ಬರದಷ್ಟು ಜರ್ಜರಿತರನ್ನಾಗಿಸಿ ತಿರುಗಿ ನೋಡುವಷ್ಟರಲ್ಲಿ ಪುತ್ರ ವೃಷಸೇನ ಧರೆಗುರುಳಿ ವೀರ ಮರಣ ಪ್ರಾಪ್ತಿಸಿಕೊಂಡಾಗಿದೆ. ಪ್ರಿಯ ಪುತ್ರನ ವಿಯೋಗದ ದುಃಖ ಒಮ್ಮೆಗೆ ಕರ್ಣನಿಗೆ ಇನ್ಯಾಕೆ ನನಗೆ ಬದುಕು, ಯುದ್ದ, ಜಯ? ಎಂಬಷ್ಟರ ಕಡು ದುಃಖ, ಜಿಗುಪ್ಸೆ ಒದಗಿಸಿತು. ವೀರಯೋಧನಾಗಿ ಸಹಿಸಿಕೊಂಡು, ತನಗಾವರಿಸಿದ ದುಃಖವನ್ನು ಕ್ರೋಧಾವೇಶವಾಗಿ ಪರಿವರ್ತನೆ ಗೊಳಿಸಿದ. ಶಿನಿ ಪ್ರವೀರ ಶೈನೇಯ ಸಾತ್ಯಕಿಯಿಂದ ಮಗ ಹತನಾಗಿದ್ದನ್ನು ಅರಿತು, “ಹತೋ ಶೈನೇಯಾ! – ಹೇ ಸಾತ್ಯಕೀ! ನೀನು ಮೃತನಾದೆ. ಇನ್ನು ನಿನಗೆ ಉಸಿರಾಡುವ ಭಾಗ್ಯವಿಲ್ಲ” ಎಂದು ಬೊಬ್ಬಿರಿದು ಆರ್ಭಟಿಸಿ ಶತ್ರು ನಾಶಕವಾದ ಬಾಣಗಳ ಮಳೆ ಸುರಿಸತೊಡಗಿದನು. ಸಾತ್ಯಕಿಗೂ ಕರ್ಣನಿಗೂ ಯುದ್ದ ಹತ್ತಿಕೊಂಡಿತು.
ಈ ಹದಿನೇಳನೆಯ ದಿನ ಭೀಕರ ರಕ್ತಪಾತದ ದಿನವೆಂದು ಬಿಂಬಿತವಾದ ಕೌರವರ ಪಾಲಿನ ಕರಾಳ ದಿನ. ಕರ್ಣ ಪುತ್ರ ವೃಷಸೇನನನ್ನು ಸಂರಕ್ಷಿಸಲು ರಥ ಸಮೇತನಾಗಿ ಹೊರ ಸಾಗಿದ್ದು, ಮರಳಿ ಬರುತ್ತಾ ದುಶ್ಯಾಸನ ತನಗಿದಿರಾದ ಪಾಂಡವ ವೀರರನ್ನು ನಾಶಗೊಳಿಸುತ್ತಾ ಯುದ್ದ ನಿರತನಾಗಿದ್ದ. ಕರ್ಣನ ಆಕ್ರಂದನ – ಆರ್ಭಟ ಕೇಳಿ ಅತ್ತ ರಥ ನಡೆಸಲು ಸಾರಥಿಗೆ ಆಜ್ಞೆಯಿತ್ತನು. ಬರುತ್ತಾ ಭೀಮಸೇನ ರುದ್ರ ಭಯಂಕರನಾಗಿ ತನ್ನ ಆರು ಮಂದಿ ಸೋದರರನ್ನು ಹಿಸುಕಿ ಸಿಗಿದೆಸೆದಿರುವುದನ್ನು ಕಂಡನು. ಮೃತರಾಗಿ ಚಿರನಿದ್ರೆಗೆ ಜಾರಿರುವ ಛಿದ್ರ ಶರೀರವಾಗಿರುವ ತಮ್ಮಂದಿರನ್ನು ನೋಡಿ ದುಶ್ಯಾಸನ ಆರ್ಭಟಿಸಿದನು. “ಪಾತಕಿ, ಕ್ರೂರಿ, ದುಷ್ಟ ಹೇ ಭೀಮಾ! ನಿನ್ನ ವಧೆಗೈದು ನನ್ನ ಸೋದರರಿಗೆ ಮನಶಾಂತಿ ಕರುಣಿಸುವೆ” ಎಂದು ಬೊಬ್ಬಿರಿದು ಭೀಮನಿಗೆದುರಾಗಿ ಬಂದು ಯುದ್ದಾಹ್ವಾನ ನೀಡಿದನು. ಕುರು ಸೇನೆಯ ಗಜ ಪಡೆಯನ್ನು ಬಾಳೆತೋಟಕ್ಕೆ ಹೊಕ್ಕ ಸಲಗದಂತೆ ಧರಾಶಾಯಿಯಾಗಿಸಿದ್ದನು ಭೀಮ. ಈ ಕ್ಷಣ ತನಗೆ ಪಂಥಾಹ್ವಾನ ನೀಡಿದವನತ್ತ ತಿರುಗಿ ನೋಡಿ “ದುಶ್ಯಾಸನಾ ನೀನು ಕರೆದಿರುವುದು ನಿನ್ನ ಪಾಲಿನ ಮೃತ್ಯುವನ್ನು. ಈ ತನಕದ ನಿನ್ನ ಕೃತ ದುಷ್ಕರ್ಮಗಳಿಗೆ ಪೂರ್ಣ ಶಿಕ್ಷೆ ಅನುಭವಿಸಲು ಸಿದ್ಧನಾಗು. ನಿನ್ನ ಅಕ್ಷಮ್ಯ ಅಪರಾಧಗಳೇ ನಿನ್ನ ವಧೆಗೆ ಪೂರಕ ಶಕ್ತಿಯಾಗಿ ನನ್ನ ಅಜಾನುಬಾಹುಗಳಲ್ಲಿ ಸೇರಿಕೊಂಡಿವೆ. ನಿನ್ನಿಂದಾಗಿರುವ ಪ್ರತಿಯೊಂದು ಪಾತಕಗಳಿಗೂ ದಂಡನೆಯಾಗಿ ಈಗ ಹೊರ ಬರಲಿವೆ” ಎಂದು ಘೀಳಿಡುತ್ತಾ ಧಾವಿಸಿ ಬಂದನು.
ಮುಂದುವರಿಯುವುದು…








