23.2 C
Udupi
Thursday, December 4, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 40

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೦ ಮಹಾಭಾರತ

ಭೀಷ್ಮನ ಎದುರಿಗೆ ಬಂದು ವಿನಮ್ರಳಾಗಿ ಕೈ ಮುಗಿದು ನಿಂತಳು. ಹಾಗೆ ನಿಂತಂತಹ ಅಂಬೆಯಲ್ಲಿ ಏನೆಂದು ಕೇಳಿದಾಗ “ನನ್ನ ಅಂತರಂಗದ ವಿಚಾರವನ್ನು ನಿವೇದಿಸಿಕೊಳ್ಳಲು ಅಪ್ಪಣೆ ನೀಡಬೇಕು” ಎಂದು ಕೇಳಿದಳು. ಆಗಲಿ ಎಂದು ಅವಕಾಶ ಕೊಟ್ಟ ಭೀಷ್ಮ. ಆಕೆ ಆರಂಭಿಸಿದಳು “ನಮ್ಮ ಸ್ವಯಂವರ ನಿಶ್ಚಯವಾದಾಗ ರಾಜಕುಮಾರರು ಕಾಶೀದೇಶಕ್ಕೆ ಬರುತ್ತಿದ್ದರು. ಒಂದು ದಿನ ನಾವು ಮೂರೂ ಜನ ಸಹೋದರಿಯರು ಗಂಗಾ ನದಿಯಲ್ಲಿ ಸ್ನಾನಾದಿಗಳನ್ನು ಪೂರೈಸಿ ಬರುವಾಗ ಸಾಲ್ವ ದೇಶದ ಬ್ರಹ್ಮದತ್ತ ನಮ್ಮ ದೇಶಕ್ಕೆ ಬರುವವ ಇದಿರಾದ. ಪರಿಚಯ, ಆಕರ್ಷಣೆಯಿಂದ ಪ್ರೇಮಾನುರಾಗವಾಗಿ ಒಬ್ಬರಿಗೊಬ್ಬರು ಮನಸೋತೆವು. ವೈವಾಹಿಕ ಸಂಕಲ್ಪ ಮಾಡಿಕೊಂಡೆವು. ನನ್ನ ನಿರೀಕ್ಷೆಯೂ ವಿಕ್ರಮಿಯಾದ ಸಾಲ್ವನೇ ಪಣ ಜಯಿಸಬಲ್ಲ ಎಂಬುವುದಾಗಿತ್ತು. ಹಾಗೆಯೇ ಆಯಿತು ಕೂಡ. ಆದರೆ ಆ ಸಂದರ್ಭ ತಾವು ಬಂದು ಸಾಲ್ವನನ್ನು ಸೋಲಿಸಿ ನಮ್ಮನ್ನು ಸ್ಪರ್ಧಾ ನಿಯಮದಂತೆ ಗೆದ್ದು ಕರೆತಂದಿರುವಿರಿ. ಈಗ ನಾನು ಪಾಲಿಸಬೇಕಾದ ಧರ್ಮವೇನೆಂದು ನೀವೆ ಹೇಳಬೇಕು. ಯಾಕೆಂದರೆ ನೀವು ಧರ್ಮಾತ್ಮರಿದ್ದೀರಿ”

ಅಂಬೆಯ ಮಾತನ್ನು ಕೇಳಿ, ಆ ಕುರಿತು ಆಲೋಚಿಸಿ ಭೀಷ್ಮರು ವೃದ್ದ ಬ್ರಾಹ್ಮನೋತ್ತಮರೋರ್ವರನ್ನು ಅಂಬೆಯ ಜೊತೆಯಾಗಿಸಿ, ಉಡುಗೊರೆ, ರಕ್ಷಣೆಗೆ ಮಿತ ಸೈನ್ಯವನ್ನೂ ಸೇರಿಸಿ ಸಾಲ್ವ ದೇಶಕ್ಕೆ ಗೌರವಾದರಗಳೊಂದಿಗೆ ಕಳುಹಿಸಿಕೊಟ್ಟರು.

ಇತ್ತ ಅಂಬಿಕೆ ಅಂಬಾಲಿಕೆಯರ ಜೊತೆ ವಿಚಿತ್ರವೀರ್ಯನ ಮದುವೆಯಾಯಿತು. ಸತ್ಯವತಿಗೂ ಮಗನ ಮದುವೆ ಸಂತಸ ತಂದಿತು. ಭೀಷ್ಮರಿಗೂ ಕರ್ತವ್ಯ ಪೂರೈಕೆಯ ತೃಪ್ತಿಯಿತ್ತು.

ಸಾಲ್ವನಲ್ಲಿಗೆ ಹೋದ ಅಂಬೆ ತನ್ನ ಪ್ರಿಯ ರಾಜನನ್ನು ಕಂಡಳು. ವೃತ್ತಾಂತ ವಿವರಿಸಿ ಮದುವೆಯಾಗಲು ಕೇಳಿದಳು. ಆದರೆ ಸಾಲ್ವ ನಿರಾಕರಿಸಿದ, ಭೀಷ್ಮ ಪಣದಲ್ಲಿ ಗೆದ್ದ ಮೇಲೆ ನೀನು ಅವನ ಸೊತ್ತು. ಆತನೇ ನಿನ್ನನ್ನು ಬೇಕಿದ್ದರೆ ವರಿಸಲಿ. ಇನ್ನು ನೀನು ಹೇಳಿದಂತೆ ಆತನ ಆಜ್ಞೆ ಪಾಲಿಸಲು ನಾನು ಅವನ ತಮ್ಮನಲ್ಲ. ಎಂದು ಹೇಳಿ ತಿರಸ್ಕರಿದ.

ದಿಕ್ಕು ತೋಚದ ಅಂಬೆ ಅಲೆದಾಡುತ್ತಾ ಕೆಲದಿನ ಕಳೆದು ಋಷ್ಯಾಶ್ರಮ ಒಂದನ್ನು ಸೇರಿದಳು. ಆ ಆಶ್ರಮದಲ್ಲಿ ಅಂಬೆಯ ಅಜ್ಜ ಋಷಿವರ ಹೋತೃವಾಹನ ಇದ್ದರು. ಅಜ್ಜನೊಂದಿಗೆ ತನ್ನ ಪರಿಸ್ಥಿತಿಯನ್ನು ವಿವರಿಸಿದಾಗ, ಅವರು ಕನಿಕರ ಪಟ್ಟರು. ನಾಳೆ ನಾವೆಲ್ಲರು ಪರಶುರಾಮರ ಬಳಿಗೆ ಹೋಗುವುದಕ್ಕಿದೆ. ಭೀಷ್ಮನ ಗುರುಗಳಾದ ಅವರಲ್ಲಿ ಹೇಳಿ ನೋಡೋಣ. ನ್ಯಾಯ ಒದಗಿಸಿಯಾರು ಎಂದರು. ಹಾಗೆಯೆ ಮರುದಿನ ಪರಶುರಾಮರ ಬಳಿಸಾಗಿ, ಯಥೋಚಿತ ಪಾದಪೂಜೆ ಮುಗಿದ ಸಲ್ಲಿಸಿದರು. ಆಗ ಬಂದಂತಹ ಋಷಿಸ್ತೋಮದ ಜೊತೆಗಿರುವ ಅಂಬೆಯನ್ನು ನೋಡಿ ಮುಖ ಭಾವ ಗಮನಿಸಿ ಆಕೆ ಯಾರೆಂದು ಪರಶುರಾಮರು ಕೇಳಿದರು. ಆಕೆಯ ವೃತ್ತಾಂತಗಳನ್ನೆಲ್ಲಾ ಕೇಳಿ ತಿಳಿದರು ಗುರು ಪರಶುರಾಮ. ಭೀಷ್ಮನಿಂದ ಅನ್ಯಾಯವಾಗಲು ಸಾಧ್ಯವಿಲ್ಲ. ಆತ ನನ್ನ ಶಿಷ್ಯ. ಧರ್ಮ ತಪ್ಪಿ ನಡೆಯುವವನಲ್ಲ. ಆದರೂ ನಾನು ಆತನಲ್ಲಿ ವಿಚಾರಿಸುವೆ ಎಂದು ವಾಗ್ದಾನ ನೀಡಿದರು.

ಅಂತೆಯೇ ಋಷಿಗಳ ಸಮೇತ ಅಂಬೆಯನ್ನೂ ಹಸ್ತಿನಾವತಿಗೆ ಕರೆದೊಯ್ದು ಅನತಿದೂರದಲ್ಲಿ ವಿಶ್ರಮಿಸಿ, ಅಕೃತವಣನೆಂಬ ಓರ್ವ ಋಷಿಮುಖೇನ ಭೀಷ್ಮರಿಗೆ ಅವರ ಗುರುಗಳ ಆಗಮನದ ವಾರ್ತೆ ತಲುಪಿಸಿದರು. ವಾರ್ತೆ ತಂದ ಋಷಿವರ್ಯನನ್ನು ಸತ್ಕರಿಸಿ, ಗುರುಗಳನ್ನು ಕಾಣಲು ಸರ್ವ ಸಿದ್ಧತೆಗಳೊಂದಿಗೆ ಧಾವಿಸಿ ಬಂದರು.

ಗುರು ಪರಶುರಾಮರಿಗೆ ವಂದಿಸಿ ಕರೆದ ಕಾರಣ ಹೇಳಲು ವಿನಂತಿಸಿದರು. ಅವರು ಅಂಬಾ ಪ್ರಕರಣದ ವಿಚಾರ ಹೇಳಿ, ಈ ಪ್ರಕರಣದಲ್ಲಿ ನಿನ್ನ ಕಾರಣದಿಂದ ಅಂಬೆಗೆ ಅನ್ಯಾಯವಾಗಿದೆ. ನೀನೇ ಇದನ್ನು ಸರಿಪಡಿಸಬೇಕೆಂದರು.

ಭೀಷ್ಮರು ಆಲೋಚಿಸಿ, ಗುರುದೇವ ಈ ಪ್ರಕರಣದಲ್ಲಿ ನಾನು ಧರ್ಮಸಮ್ಮತವಾಗಿ ನಡೆದುಕೊಂಡಿದ್ದೇನೆ. ಆದರೆ ಇಲ್ಲಿ ಮೂವರು ತಪ್ಪಿತಸ್ಥರಾಗಿದ್ದಾರೆ. ಕಾಶೀರಾಜ ಪ್ರತಾಪಸೇನ, ಅವನ ಮಗಳು ಅಂಬೆ, ಮತ್ತು ಸಾಲ್ವದೇಶದ ಬ್ರಹ್ಮದತ್ತ.

ಪ್ರತಾಪಸೇನ ನಮ್ಮ ಸಾರ್ವಭೌಮ ಸಾಮ್ರಾಜ್ಯದ ಅಧಿರಾಜನಾಗಿ ಹಸ್ತಿನಾವತಿಗೆ ಆಮಂತ್ರಣ ನೀಡದೆ ಅವಮಾನಿಸಿ ತಪ್ಪು ಮಾಡಿದ. ಚಕ್ರವರ್ತಿ ಪೀಠದಿಂದ ಪ್ರಶ್ನಿಸಲೇ ಬೇಕಾದ ಅನಿವಾರ್ಯತೆ ತಂದೊದಗಿಸಿತು. ನಾವು ಪ್ರಶ್ನಿಸಿ ನಮ್ಮ ಸಾಮರ್ಥ್ಯ ಪ್ರಕಟಿಸಬೇಕಾಗಿತ್ತು. ಧರ್ಮ ಸಮ್ಮತವಾಗಿ ಹಾಗೇ ಮಾಡಿದ್ದೇವೆ.

ಇನ್ನು ಅಂಬೆಯ ವಿಚಾರ ಹೇಳುವುದಾದರೆ, ಸ್ವಯಂವರ ಪಣಕ್ಕಿಂತ ಮೊದಲೇ ಆಕೆ ಓರ್ವನಿಗೆ ಮನಸೋತು ವಿವಾಹವಾಗುವ ಮಾತುಕೊಟ್ಟ ಮೇಲೆ, ತಂದೆಗೆ ತಿಳಿಸಿ ಆತನನ್ನೇ ವರಿಸಬೇಕಾಗಿತ್ತು. ವರ ನಿಗದಿಯಾದ ಮೇಲೆ ಆಕೆಗೆ ಸ್ವಯಂವರವಾಗಲೀ, ಸ್ಪರ್ಧಾ ವಿಜೇತನಿಗೆ ಕಾಯುವ ಅನಿವಾರ್ಯತೆಯಾಗಲೀ ಏನಿತ್ತು? ಆಕೆಯೂ ತಪ್ಪು ಮಾಡಿದಳು.

ಮೊದಲೇ ಅನುರಕ್ತನಾಗಿ, ವರಿಸುವ ವಾಗ್ದಾನ ನೀಡಿದ ಸಾಲ್ವ ಆತನನ್ನೇ ಬಯಸಿ ಬಂದು ತನ್ನ ಪ್ರಾಮಾಣಿಕತೆ ತೋರಿದ ಅಂಬೆಯನ್ನು ನಿರಾಕರಿಸಿ ತಪ್ಪು ಮಾಡಿದ.

ಇನ್ನು ಅಂಬೆಗಾದ ಅನ್ಯಾಯ ಸರಿಪಡಿಸಲು ನಾನು ಮುಂದಾದರೆ ಅಧರ್ಮವಾದೀತು. ಇವರೆಲ್ಲರ ತಪ್ಪುಗಳಿಗೆ ನನ್ನಲ್ಲಿ ನ್ಯಾಯ ಮಾಡುವುದು ಸರಿಯೇ ಗುರುವರ್ಯ ಎಂದು ಭೀಷ್ಮ ಕೇಳಿದ.

ಪರಶುರಾಮರು ವಿವೇಚಿಸಿ, ಭೀಷ್ಮ ಆಗಿದ್ದು ಏನೇ ಇರಲಿ, ಅಂಬೆಗೆ ಅನ್ಯಾಯವಾಗಿದೆ. ಪಣದಲ್ಲಿ ಅಂಬೆಯನ್ನು ಗೆದ್ದವನು ನೀನು. ಆಕೆ ನನ್ನ ಶರಣಾರ್ಥಿ – ನೀನು ನನ್ನ ವಿದ್ಯಾರ್ಥಿ. ಗುರು ವಾಕ್ಯ ಪರಿಪಾಲನೆ ನಿನಗೆ ಧರ್ಮ. ನನ್ನ ಆಜ್ಞೆಯಂತೆ ನೀನು ನಿನ್ನ ಶಪಥ ಬದಿಗಿರಿಸಿ ಈಕೆಯನ್ನು ವರಿಸು. ನಿನಗೆ ವಚನಭ್ರಷ್ಟನಾಗಿ ಬರಬಹುದಾದ ದೋಷಕ್ಕೆ ನಾನು ಹೊಣೆಗಾರನಾಗುವೆ. ಕಾರಣ ನಿನ್ನ ಭೀಷಣ ಪ್ರತಿಜ್ಞೆಗಳಲ್ಲೊಂದಾದ ಅಖಂಡ ಬ್ರಹ್ಮಚರ್ಯದಿಂದ ವಿಮುಖನಾಗುವುದು ಗುರುವಾದ ನನ್ನ ಆದೇಶದಿಂದ. ಹಾಗಾಗಿ ನನ್ನ ಆಜ್ಞಾನುವರ್ತಿಯಾಗಿ ಬಾಸಿಂಗ ತೊಟ್ಟು ವರನಾಗಿ ಈಕೆಯ ಪರಿಗ್ರಹಣಕ್ಕೆ ಸಿದ್ದನಾಗಿ ಬರಬೇಕು. ನೀನು ಇದಕ್ಕೆ ಒಪ್ಪಲಾರೆ ಎಂದಾದರೆ ನಾಳೆ ಸೂರ್ಯೋದಯಕ್ಕೆ ಕುರುಕ್ಷೇತ್ರದಲ್ಲಿ ಕದನಕಲಿಯಾಗಿ ಧನುರ್ಬಾಣ ಧಾರಣೆ ಮುಖೇನ ನನ್ನೆದುರು ಪ್ರಕಟನಾಗು. ಗುರು ಶಿಷ್ಯರ ಶರ ಸಂಧಾನ ಮುಖೇನ ನ್ಯಾಯಾನ್ಯಾಯದ ತೀರ್ಮಾನವಾಗಲಿ ಎಂದರು.

ಧರ್ಮದ ಪಥದಲ್ಲೇ ಸಾಗಿದ್ದೇನೆ. ಧರ್ಮವಿಹಿತವಾದದ್ದು ಗುರು ಆಜ್ಞೆಯಾದರೂ ಭೀಷ್ಮನಿಗೆ ಅನುಸರಣೀಯವಲ್ಲ. ಹಾಗಾಗಿ ಸಮರಮುಖದಲ್ಲೇ ನಿಮ್ಮನ್ನು ಕಾಣಬೇಕಾದದ್ದು ನನ್ನ ಪಾಲಿಗೆ ಧರ್ಮ ಸಮ್ಮತ ಎಂದು ಶಿಷ್ಯ ನುಡಿಯಲಾಗಿ, ಪರಶುರಾಮರು ಸೂರ್ಯೋದಯ ಕಾಲದಿಂದ ಆರಂಭವಾಗುವ ಸತ್ವ ಪರೀಕ್ಷೆಯನ್ನು ಕಾತರದಿಂದ ಕಾಯುತ್ತಿದ್ದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page