ಭಾಗ 453
ಭರತೇಶ್ ಶೆಟ್ಟಿ, ಎಕ್ಕಾರ್

ಮಹರ್ಷಿ ಬಕದಾಲ್ಭ್ಯರು ಸತ್ತು ಹೋಗಿದ್ದ ದನಗಳನ್ನು ಸ್ವೀಕರಿಸಿ, ಅವುಗಳ ಮಾಂಸವನ್ನು ಕತ್ತರಿಸಿ, ಆ ಮಾಂಸದ ಮೂಲಕವಾಗಿ ಧೃತರಾಷ್ಟ್ರನ ರಾಜ್ಯವನ್ನು ಮಂತ್ರಬಲದಿಂದ ಯಜ್ಞೇಶ್ವರನಲ್ಲಿ ಹೋಮ ಮಾಡತೊಡಗಿದನು. ಮಹಿಮಾನ್ವಿತ ಬಕದಾಲ್ಭ್ಯರು ಸರಸ್ವತೀ ನದಿ ತೀರದ ಅವಾಕೀರ್ಣ ತೀರ್ಥಕ್ಷೇತ್ರದಲ್ಲಿ ಈ ಯಾಗ ವಿರಚಿಸುತ್ತಿದ್ದರು.


ತತ್ಪರಿಣಾಮವಾಗಿ ಧೃತರಾಷ್ಟ್ರನ ಸಾಮ್ರಾಜ್ಯದಲ್ಲಿ ಇನ್ನಿಲ್ಲದ ಅವಘಡ, ಆತಂಕ, ಅಪಶಕುನ, ದುರಂತಗಳು ಸಂಭವಿಸತೊಡಗಿದವು. ಪರಿಹಾರ್ಥವಾಗಿ ಶಾಂತಿ ಹೋಮಗಳನ್ನು ಮಾಡಿಸಿದರೂ ಸ್ಥಿತಿ ಉಲ್ಬಣವಾಗತೊಡಗಿತು. ಏನಾಗುತ್ತಿದೆ? ಯಾಕೆ ಹೀಗಾಗುತ್ತಿದೆ ಎಂದು ಜ್ಯೋತಿಷಿ – ಪ್ರಾಶ್ನಿಕರಲ್ಲಿ ಚಿಂತನೆ ಮಾಡಿಸಿದಾಗ ಬಕದಾಲ್ಭ್ಯರ ದಕ್ಷಿಣೆ ಬೇಡಿಕೆ ಮತ್ತು ಸತ್ತ ಪಶುಗಳನ್ನು ದಾನ, ಪ್ರತಿಯಾಗಿ ಸಾಗುತ್ತಿರುವ ವಿನಾಶ ಯಾಗದ ವೃತ್ತಾಂತ ವೇದ್ಯವಾಯಿತು.
ಆ ಕೂಡಲೆ ಧೃತರಾಷ್ಟ್ರನು ಸರಸ್ವತಿ ನದೀ ತೀರಕ್ಕೆ ಆಗಮಿಸಿ ಬಕದಾಲ್ಭ್ಯರಲ್ಲಿ ಸರ್ವತಾ ಶರಣಾಗತನಾದನು. ರಾಜ್ಯವನ್ನು ರಕ್ಷಣೆ ಮಾಡಬೇಕು, ನನ್ನಿಂದ ಅಪಚಾರವಾಗಿದೆ. ಕ್ಷಮಿಸಿ ಮನ್ನಿಸಬೇಕು ಎಂದು ಪರಿಪರಿಯಾಗಿ ಬೇಡಿಕೊಂಡನು.
ಒಮ್ಮೆಗೆ ಕ್ರೋಧಾವಿಷ್ಟರಾಗಿದ್ದರೂ, ಬಕದಾಲ್ಭ್ಯರು ಮಹಾರಾಜ ಧೃತರಾಷ್ಟ್ರ ಸ್ವಯಂ ಬಂದು ಶರಣಾದ ಬಳಿಕ ಶಾಂತ ಚಿತ್ತರಾದರು. ಯಾಗವನ್ನು ಉಪಶಮನಗೊಳಿಸಿ ಪೂರ್ಣಾಹುತಿ ನೀತಿ ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿತ ಗೊಳಿಸಿದರು. ಧೃತರಾಷ್ಟ್ರನು ಹೇರಳವಾದ ಗೋ ಸಂಪತ್ತನ್ನು ಮುನಿವರನಿಗೆ ದಾನವಾಗಿತ್ತು ರಾಜ್ಯದ ಸುಭಿಕ್ಷೆ ಗಾಗಿ ಬೇಡಿಕೊಂಡನು. ಮಹರ್ಷಿಯ ಅನುಗ್ರಹ ಪಡೆದು ಧೃತರಾಷ್ಟ್ರನು ಮರಳಿದನು.
ಬಲರಾಮ ಅವಾಕೀರ್ಣ ತೀರ್ಥದಲ್ಲೂ ಸ್ನಾನಗೈದು ಮುಂದೆ ಯಾಯಾತ ತೀರ್ಥ, ಅಗ್ನಿ ತೀರ್ಥ, ಇಂದ್ರ ತೀರ್ಥ, ರಾಮತೀರ್ಥ, ಯಮುನಾ ತೀರ್ಥ, ಔಚಿತ್ಯ ತೀರ್ಥಗಳನ್ನು ಸಂದರ್ಶಿಸಿದನು.
ಮುಂದೆ ಸಾಗುತ್ತಾ ಪ್ಲಕ್ಷಪ್ರಸ್ರವಣ ತೀರ್ಥ ಕ್ಷೇತ್ರಕ್ಕೆ ಬಂದು ಅಲ್ಲೂ ತೀರ್ಥಸ್ನಾನಾದಿಗಳನ್ನು ಪೂರೈಸಿದನು. ಈ ಕ್ಷೇತ್ರದಲ್ಲಿ ಬಲರಾಮನು ಋಷಿಗಳಿಂದ, ಸಿದ್ಧರಿಂದ ಉತ್ತಮೋತ್ತಮವಾದ ಕಥೆಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದನು. ಆ ಸಮಯ ಅಲ್ಲಿಗೆ ಮಹಾ ತಪಸ್ವಿಯಾದ ನಾರದರ ಆಗಮನವಾಯಿತು.
ಬಲರಾಮನು ನಾರದ ಮಹರ್ಷಿಗೂ ನಮಿಸಿ ಯಥೋಚಿತ ಸತ್ಕಾರಗಳನ್ನು ಗೈದು ವಂದಿಸಿ ಲೋಕವಾರ್ತೆ ಆಲಿಸಲು ಕುಳಿತನು. ಕುಶಲೋಪರಿ ವಿನಿಮಯ ಗೊಳಿಸಿದ ಬಳಿಕ ನಾರದರು ಹಸ್ತಿನಾವತಿಯ ಚಂದ್ರವಂಶದ ಕುಟುಂಬ ಕಲಹದಿಂದ ಉತ್ಪನ್ನವಾಗಿ, ಕುರುಕ್ಷೇತ್ರದಲ್ಲಿ ಸಾಗುತ್ತಿರುವ ಧರ್ಮಯುದ್ಧದ ವಾರ್ತೆಯನ್ನು ಬಲರಾಮನಿಗೆ ವಿವರಿಸಿ ಹೇಳತೊಡಗಿದರು.
ಮುಂದುವರಿಯುವುದು…







